ರೈತರ ಹಿತ ಮುಖ್ಯ: ಕಾವೇರಿ ಬಿಕ್ಕಟ್ಟು ಚರ್ಚೆ, ಸರ್ವ ಪಕ್ಷಗಳ ಸಭೆ

Dam
Published on

ದಕ್ಷಿಣದ ಗಂಗೆ ಎಂದೇ ಜನಜನಿತವಾಗಿರುವ ಕಾವೇರಿ ನದಿ ನೀರು ಹಂಚಿಕೆ ವಿವಾದವು ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ನಡುವೆ ಇತ್ಯರ್ಥವಾಗದ ಸಮಸ್ಯೆಯಾಗಿಯೇ ಮುಂದುವರಿದಿದೆ. ಅಲ್ಪವೃಷ್ಟಿಯಾದ ಸಂದರ್ಭದಲ್ಲಿ ನೀರಿನ ಕೊರತೆಯುಂಟಾಗಿ ಈ ವಿವಾದ ತಾರಕಕ್ಕೆ ಏರುತ್ತದೆ. ಪ್ರಸ್ತುತ ಇಂತಹ ಪರಿಸ್ಥಿತಿ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಆಗಸ್ಟ್ 23ರಂದು ಸರ್ವ ಪಕ್ಷಗಳ ಸಭೆಯನ್ನು ಕರೆದು ಸಮಾಲೋಚನೆಗೆ ಮುಂದಾಗಿರುವುದು ಸೂಕ್ತ ಕ್ರಮವೇ ಆಗಿದೆ.

ಕಾವೇರಿ ನೀರು ಹರಿಸುವಂತೆ ಕರ್ನಾಟಕಕ್ಕೆ ಆದೇಶ ನೀಡಲು ಕೋರಿ ತಮಿಳುನಾಡು ರಾಜ್ಯ ಸರ್ಕಾರವು ಆಗಸ್ಟ್ 14ರಂದು ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದು, ಅಂತಾರಾಜ್ಯ ಗಡಿಯಲ್ಲಿರುವ ಬಿಳಿಗುಂಡ್ಲುವಿನಲ್ಲಿ ನಿಗದಿತ ಪ್ರಮಾಣದ ನೀರಿನ ಲಭ್ಯತೆ ಖಚಿತಪಡಿಸಿಕೊಳ್ಳಲು ಕರ್ನಾಟಕವು ತಕ್ಷಣವೇ ತನ್ನ ಜಲಾಶಯಗಳಿಂದ 24,000 ಕ್ಯೂಸೆಕ್ ನೀರನ್ನು ಈ ತಿಂಗಳ ಬಾಕಿ ಅವಧಿಗೆ ಬಿಡುಗಡೆ ಮಾಡಬೇಕು ಎಂದು ಕೋರಿದೆ. 2007ರಲ್ಲಿ ಕಾವೇರಿ ಜಲ ವಿವಾದಗಳ ನ್ಯಾಯಮಂಡಳಿಯ (ಸಿಡಬ್ಲು್ಯಡಿಟಿ) ಅಂತಿಮ ತೀರ್ಪಿನ ಪ್ರಕಾರ (2018ರಲ್ಲಿ ಸುಪ್ರೀಂ ಕೋರ್ಟ್ ಇದನ್ನು ಮಾರ್ಪಡಿಸಿದೆ) ಸೆಪ್ಟೆಂಬರ್ ತಿಂಗಳಿಗೆ ನಿಗದಿಪಡಿಸಿದ 36.76 ಟಿಎಂಸಿ (ಸಾವಿರ ದಶಲಕ್ಷ ಘನ ಅಡಿ) ನೀರು ಬಿಡುಗಡೆಗೆ ಕರ್ನಾಟಕಕ್ಕೆ ನಿರ್ದೇಶನ ನೀಡುವಂತೆ ಕೂಡ ನ್ಯಾಯಾಲಯವನ್ನು ಒತ್ತಾಯಿಸಿದೆ. ಆದರೆ, ವಾಡಿಕೆಯಷ್ಟು ಮಳೆಯಾಗದ ಕಾರಣ ಸ್ವಲ್ಪ ನೀರನ್ನು ಈಗಾಗಲೇ ತಮಿಳುನಾಡಿಗೆ ಹರಿಸಲಾಗಿದೆ ಎಂಬ ವಾದ ಮುಂದಿಟ್ಟಿರುವ ಕರ್ನಾಟಕ ಸರ್ಕಾರ ಕೂಡ ಸುಪ್ರೀಂ ಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಲು ಮುಂದಾಗಿದೆ.

ಆದರೆ, ಸುಪ್ರೀಂ ಯಾವುದೇ ರೀತಿಯ ಆದೇಶ ನೀಡುವ ಮೊದಲೇ ತಮಿಳುನಾಡಿಗೆ ನೀರು ಹರಿಸಿರುವುದಕ್ಕೆ ವಿರೋಧಗಳು ವ್ಯಕ್ತವಾಗುತ್ತಿದ್ದು, ಪ್ರತಿಭಟನೆಗಳೂ ಶುರುವಾಗಿವೆ. ‘ಇದು ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಹೊಂದಾಣಿಕೆಯಾ? ಮಂಡ್ಯ ಕಾಂಗ್ರೆಸ್ ಶಾಸಕರೇ ವಿರೋಧ ಮಾಡಿದ್ದರೂ ಈ ಭಂಡತನದ ನಿರ್ಧಾರಕ್ಕೆ ಕಾರಣ ಏನು?’ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಸರ್ಕಾರದ ಮೇಲೆ ಹರಿಹಾಯ್ದಿದ್ದಾರೆ. ಉಭಯ ರಾಜ್ಯಗಳ ರೈತರ ಹಿತ ಕಾಯುವ ಉದ್ದೇಶದಿಂದ ಸ್ವಲ್ಪ ಪ್ರಮಾಣದ ನೀರನ್ನು ತಮಿಳುನಾಡಿಗೆ ಹರಿಸಲಾಗಿದೆ ಎಂದು ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಸರ್ವ ಪಕ್ಷಗಳ ಸಭೆಯನ್ನು ಕರೆದಿದೆ. ಕಾವೇರಿ ಪ್ರದೇಶದಲ್ಲಿನ ರಾಜ್ಯದ ರೈತರ ಹಿತಾಸಕ್ತಿಯನ್ನು ಕಾಪಾಡಲು ಹಾಗೂ ಕುಡಿಯುವ ನೀರಿನ ಕೊರತೆ ಉಂಟಾಗದಂತೆ ಪರಿಸ್ಥಿತಿಯನ್ನು ನಿಭಾಯಿಸಲು ಏನೇನು ಕ್ರಮ ಕೈಗೊಳ್ಳಬೇಕು, ಸುಪ್ರೀಂ ಕೋರ್ಟ್​ನಲ್ಲಿ ಪ್ರಕರಣವನ್ನು ಹೇಗೆ ನಿಭಾಯಿಸಬೇಕು ಎಂಬ ಬಗೆಗೆ ಆಡಳಿತ ಹಾಗೂ ವಿರೋಧ ಪಕ್ಷಗಳ ನಾಯಕರು ಪಕ್ಷಾತೀತವಾಗಿ ಸಭೆಯಲ್ಲಿ ಸಮಾಲೋಚಿಸುವ ಅಗತ್ಯತೆ ಇದೆ. ಕಾವೇರಿ ಕಣಿವೆ ಮಾತ್ರವಲ್ಲದೆ, ರಾಜ್ಯದ ಎಲ್ಲ ಭಾಗಗಳ ರೈತರು ಮಳೆ ಕೊರತೆಯಿಂದ ಸಂಕಷ್ಟಕ್ಕೆ ಸಿಲುಕಿದ್ದು, ಅವರಿಗೆ ಹೇಗೆ ನೆರವಾಗಲು ಸಾಧ್ಯ ಎಂಬ ಬಗೆಗೂ ಸಭೆಯಲ್ಲಿ ಚಿಂತನೆ ನಡೆಸುವ ಅಗತ್ಯವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net