

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರ ಸಂಘಟನೆ ಹಿಡಿತ ಸಾಧಿಸಿದ್ದು, ದಿನೇದಿನೇ ಅಲ್ಲಿನ ಬೆಳವಣಿಗೆಗಳು ಹೆಚ್ಚೆಚ್ಚು ಕಳವಳ ಮೂಡಿಸುತ್ತಿವೆ. ಈ ಹಿಂದೆ 1996-2001ರ ಅವಧಿಯಲ್ಲಿ ಸಹ ಆ ದೇಶ ತಾಲಿಬಾನ್ ಆಡಳಿತವನ್ನು ಕಂಡಿದ್ದು, ಆಗ ದೌರ್ಜನ್ಯ ಮಿತಿಮೀರಿತ್ತು. ಮಹಿಳೆಯರಿಗೆ ಶಿಕ್ಷಣ ಹಾಗೂ ನೌಕರಿ ಅವಕಾಶಗಳನ್ನು ನಿರಾಕರಿಸಲಾಗಿತ್ತು. ಈ ಸಲ ಹಿಂದಿನ ವಿದ್ಯಮಾನ ಮರುಕಳಿಸಲಾಗದು ಎಂಬ ಭಾವನೆ ಬರುವಂತೆ ತಾಲಿಬಾನಿಗಳು ಆರಂಭದಲ್ಲಿ ವರ್ತಿಸಿದ್ದರು. ಮಹಿಳೆಯರು ಕೂಡ ಆಡಳಿತದಲ್ಲಿ ಭಾಗವಹಿಸಬಹುದು; ಯಾರ ಮೇಲೂ ಸೇಡು ತೀರಿಸಿಕೊಳ್ಳುವುದಿಲ್ಲ; ಶಿಕ್ಷಣಕ್ಕೆ ಅವಕಾಶ ನೀಡಲಾಗುವುದು ಎಂದೆಲ್ಲ ಭರವಸೆ ನೀಡಿದ್ದರು. ಆದರೆ ಈಗ ಬೇರೆಯದೇ ಚಿತ್ರಣ ಕಂಡುಬರುತ್ತಿದೆ.
ಅಮೆರಿಕ ಸೇನೆಗೆ ಸಹಕರಿಸಿದವರನ್ನು ಕಂಡುಹಿಡಿಯುವ ಸಲುವಾಗಿ ತಾಲಿಬಾನಿಗಳು ಮನೆಮನೆಗೆ ಹೋಗಿ ಶೋಧ ನಡೆಸುತ್ತಿದ್ದಾರೆ ಎಂದು ವರದಿಗಳು ತಿಳಿಸುತ್ತವೆ. ಅವರ ಈ ನಡೆಯ ಉದ್ದೇಶ ಸೇಡು ತೀರಿಸಿಕೊಳ್ಳುವುದು ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ಆದರೆ ಅವರ ಸೇಡು ಯಾವ ಬಗೆಯಲ್ಲಿರುತ್ತದೆ ಎಂಬುದು ಮಾತ್ರ ಆತಂಕದ ಸಂಗತಿ. ಜತೆಗೆ, ಕಂದಹಾರ್ ಮತ್ತು ಹೀರತ್ನಲ್ಲಿರುವ ಭಾರತೀಯ ದೂತಾವಾಸ ಕಚೇರಿಗಳಲ್ಲಿ ಸಹ ತಾಲಿಬಾನಿಗಳು ಹುಡುಕಾಟ ನಡೆಸಿದ್ದು, ಅಲ್ಲಿ ನಿಲ್ಲಿಸಲಾಗಿದ್ದ ವಾಹನಗಳನ್ನು ಒಯ್ದಿದ್ದಾರೆ. ಅಲ್ಲಿನ ಅಧಿಕಾರಿ-ಸಿಬ್ಬಂದಿಯನ್ನು ಭಾರತ ಸರ್ಕಾರ ಮುಂಚಿತವಾಗಿಯೇ ಕರೆಸಿ ಕೊಂಡಿದ್ದರಿಂದ, ಸಂಭಾವ್ಯ ಅನಾಹುತ ತಪ್ಪಿದೆ ಎಂದು ಹೇಳಬಹುದು. ಅಲ್ಲದೆ, ಪತ್ರಕರ್ತರನ್ನು ಸಹ ತಾಲಿಬಾನಿಗಳು ಗುರಿಮಾಡುತ್ತಿದ್ದಾರೆ. ತಮಗೆ ವಿರುದ್ಧವಾದ ಸುದ್ದಿಗಳು ಹೊರಜಗತ್ತಿನಲ್ಲಿ ಪ್ರಸಾರವಾಗಬಾರದು; ಅಫ್ಘನ್ನ ಸರಿಯಾದ ಚಿತ್ರಣ ಸಿಗಬಾರದು ಎಂಬುದು ಅವರ ಉದ್ದೇಶ ಇರಬಹುದು. ಅಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಕಂಡು ಬೇರೆ ಬೇರೆ ದೇಶಗಳು ತಮ್ಮ ಮೇಲೆ ಏನೆಲ್ಲ ಪರಿಣಾಮ ಆಗಬಹುದು ಎಂದು ಲೆಕ್ಕಾಚಾರ ಹಾಕುತ್ತಿವೆ. ಅಮೆರಿಕ ಸೇನೆ ಅಫ್ಘಾನಿಸ್ತಾನದಿಂದ ವಾಪಸಾದ ನಂತರದಲ್ಲಿ, ಅಲ್ಲಿ ಬೇರೆ ದೇಶಗಳ ನಿಯಂತ್ರಣ ತಪ್ಪಿದಂತಾಗಿದೆ. ನಿಕಟಪೂರ್ವ ಅಧ್ಯಕ್ಷ ಅಶ್ರಫ್ ಘನಿ ಅವರಂತೂ ತಾಲಿಬಾನಿಗಳ ಅಬ್ಬರ ಶುರುವಾಗುವುದರೊಳಗೇ ದೇಶ ಬಿಟ್ಟು ತೆರಳಿಬಿಟ್ಟಿದ್ದಾರೆ. ಅಲ್ಲಿನ ಸೇನೆ ಸಮರಕ್ಕೆ ಮೊದಲೇ ಸೋಲೊಪ್ಪಿದೆ. ಹೀಗಾಗಿ ತಾಲಿಬಾನಿಗಳನ್ನು ಹಿಡಿಯುವವರಿಲ್ಲವಾಗಿದೆ.
ವಿವಿಧ ದೇಶಗಳು ಅಲ್ಲಿರುವ ತಮ್ಮವರನ್ನು ಸ್ವದೇಶಕ್ಕೆ ವಾಪಸ್ ಕರೆಸಿಕೊಳ್ಳುತ್ತಿವೆ ಎಂಬುದು ನಿಜ. ಆದರೆ ಇನ್ನೂ ಸಾವಿರಾರು ಜನರು ಅಲ್ಲಿದ್ದಾರೆ. ಹೀಗಾಗಿ, ತುರ್ತಾಗಿ ಏನಾದರೊಂದು ಪರಿಹಾರೋಪಾಯ ಹುಡುಕುವತ್ತ ಅಂತಾರಾಷ್ಟ್ರೀಯ ಸಮುದಾಯ ಹೆಜ್ಜೆಯಿಡಬೇಕಿದೆ. ಆದರೆ ಇದು ಸಾಧ್ಯವೇ ಎಂಬ ಅನುಮಾನವೂ ಇದೆ. ಏಕೆಂದರೆ, ಅಮೆರಿಕ ಅಲ್ ಕೈದಾವನ್ನು ಬಗ್ಗುಬಡಿಯುವ ತನ್ನ ಉದ್ದೇಶ ಈಡೇರಿದ್ದರಿಂದಾಗಿ, ಇನ್ನು ಮತ್ತೆ ಇತ್ತ ಕಡೆ ತಲೆಹಾಕುವುದೋ ಇಲ್ಲವೋ ಎಂಬ ಸಂದೇಹವಿದೆ. ಹೀಗಾಗಿ ವಿಶ್ವಸಂಸ್ಥೆ ಮಧ್ಯಪ್ರವೇಶಿಸಿ ಏನಾದರೂ ಪ್ರಯತ್ನ ಮಾಡಬೇಕು ಎಂಬ ಅಭಿಪ್ರಾಯ ದಟ್ಟವಾಗುತ್ತಿದೆ. ಆದರೆ ವಿಶ್ವಸಂಸ್ಥೆಯ ಇಂದಿನ ಸ್ಥಿತಿ ಕಂಡಾಗ ಇದು ಸಾಧ್ಯವೇ ಎಂಬ ಅನುಮಾನವೂ ಮೂಡುತ್ತದೆ. ಹೀಗಾಗಿ ಮುಂದಿನ ಕೆಲ ದಿನಗಳ ಬೆಳವಣಿಗೆ ನಿರ್ಣಾಯಕವಾಗಲಿದೆ.