ಕಠಿಣಾಸ್ತ್ರ ಪ್ರಯೋಗಿಸಿ, ಸಮಗ್ರ ತನಿಖೆ ಅಗತ್ಯ..

Editorial
Published on

ರಾಜ್ಯದ ವಿವಿಧ ಇಲಾಖೆಗಳ ಕಾಮಗಾರಿಗಳಲ್ಲಿ ಭಾರಿ ಭ್ರಷ್ಟಾಚಾರದ, ಕಮಿಷನ್ ದಂಧೆಯ ಗಂಭೀರ ಆರೋಪ ಕೇಳಿಬಂದಿರುವುದು, ಆಡಳಿತ ವ್ಯವಸ್ಥೆಯ ಶುದ್ಧೀಕರಣದ ಅಗತ್ಯವನ್ನು ಮತ್ತೊಮ್ಮೆ ಪ್ರತಿಪಾದಿಸಿದೆ. ಕಾಮಗಾರಿಗಳಲ್ಲಿನ ಭ್ರಷ್ಟಾಚಾರ ಹೊಸತೇನೂ ಅಲ್ಲ. ಇದಕ್ಕೆ ಲಗಾಮು ಹಾಕಲು ಕಾಲಕಾಲದಲ್ಲಿ ಪ್ರಯತ್ನಗಳು ನಡೆಯುತ್ತಲೇ ಬಂದಿವೆ. ಆದರೆ, ಕೆಲವೇ ಭ್ರಷ್ಟ ವ್ಯಕ್ತಿಗಳಿಂದ ಆಡಳಿತ ವ್ಯವಸ್ಥೆಗೆ ಕಪು್ಪಚುಕ್ಕೆ. ಕಾಮಗಾರಿಯ ಟೆಂಡರ್, ಕಾರ್ಯಾದೇಶ ಪಡೆದುಕೊಳ್ಳುವ ಗುತ್ತಿಗೆದಾರರು ಕಮಿಷನ್ ಹಾವಳಿಯನ್ನು ವಿರೋಧಿಸಿ ಹೋರಾಟವನ್ನೂ ನಡೆಸಿದ್ದಾರೆ. ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ನಂತರ, ಈ ವಿಷಯ ಮತ್ತಷ್ಟು ಮುನ್ನೆಲೆಗೆ ಬಂದಿದೆ. ರಾಜ್ಯದಲ್ಲಿ ಗುತ್ತಿಗೆ ವ್ಯವಹಾರಗಳಲ್ಲಿ ಶೇಕಡ 40ರಷ್ಟು ಕಮಿಷನ್ ಪಡೆಯಲಾಗುತ್ತಿದೆ; ಭ್ರಷ್ಟಾಚಾರದ ಈ ತೀವ್ರಸ್ವರೂಪಕ್ಕೆ ಕೂಡಲೇ ಕಡಿವಾಣ ಹಾಕಬೇಕು ಎಂದು ಕರ್ನಾಟಕ ಗುತ್ತಿಗೆದಾರರ ಸಂಘವು ಈ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿತ್ತು. ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳಿಗೆ ಮನವಿ ನೀಡಿ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವಂತೆ ಆಗ್ರಹಿಸಿತ್ತು. ಆದರೂ, ವಿವಿಧ ಇಲಾಖೆಗಳಲ್ಲಿ ಕಮಿಷನ್ ದಂಧೆಗೆ ಕಡಿವಾಣ ಬಿದ್ದಿಲ್ಲ ಎಂದು ಗುತ್ತಿಗೆದಾರರು ಅಳಲು ತೋಡಿಕೊಂಡಿದ್ದಾರೆ. ಈಗ ಕೆಲ ಮಠಾಧೀಶರು ಕಮಿಷನ್ ದಂಧೆ ಬಗ್ಗೆ ಮಾತನಾಡಿರುವುದು, ಚರ್ಚೆಯ ಬಿಸಿ ಹೆಚ್ಚಿಸಿದೆ.

ಚುನಾವಣೆಯ ಹೊತ್ತಲ್ಲಿ ಎಲ್ಲ ರಾಜಕೀಯ ಪಕ್ಷಗಳು ಭ್ರಷ್ಟಾಚಾರರಹಿತ ಸ್ವಚ್ಛ, ಪಾರದರ್ಶಕ ಆಡಳಿತದ ವಾಗ್ದಾನ ಮಾಡುತ್ತವೆಯಾದರೂ, ಅಧಿಕಾರಕ್ಕೆ ಬಂದ ಮೇಲೆ ಅದೇ ಸ್ಥಿತಿ ಎಂಬಂತಾಗಿದೆ. ಭ್ರಷ್ಟಾಚಾರ ಆಡಳಿತ ವ್ಯವಸ್ಥೆಯನ್ನು ಹಾಳು ಮಾಡುವ ಜತೆಗೆ, ಅಭಿವೃದ್ಧಿಯ ಆಶಯಕ್ಕೆ ದೊಡ್ಡಪೆಟ್ಟು ನೀಡುತ್ತದೆ ಎಂಬುದನ್ನು ಮರೆಯುವಂತಿಲ್ಲ. ಅದೇನಿದ್ದರೂ, ರಾಜ್ಯದಲ್ಲಿನ ಈ ಕಮಿಷನ್ ಆರೋಪ-ಪ್ರತ್ಯಾರೋಪಗಳ ನಡುವೆಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಹತ್ವದ ನಿರ್ಧಾರವನ್ನು ಪ್ರಕಟಿಸಿದ್ದಾರೆ. ‘ಕಾಮಗಾರಿಗಳ ಪರ್ಸೆಂಟೇಜ್​ಗೆ ಕಡಿವಾಣ ಹಾಕಲು ಉನ್ನತ ಮಟ್ಟದ ಸಮಿತಿ ರಚನೆೆ ಮಾಡಿದ್ದು ಹೈಕೋರ್ಟ್ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಇನ್ನೊಂದು ವಾರದಲ್ಲಿ ಅಸ್ತಿತ್ವಕ್ಕೆ ಬರಲಿದೆ. ಎಲ್ಲ ಇಲಾಖೆಗಳ ವ್ಯಾಪ್ತಿಯಲ್ಲಿ 50 ಕೋಟಿ ರೂ. ಮೇಲ್ಪಟ್ಟ ಕಾಮಗಾರಿಗಳ ಟೆಂಡರ್ ಈ ಸಮಿತಿ ಮುಂದೆ ಬರಲಿದೆ. 15 ದಿನದೊಳಗೆ ಟೆಂಡರ್ ಕಡತ ವಿಲೇವಾರಿ ಮಾಡುವಂತೆಯೂ ಆದೇಶಿಸಲಾಗಿದೆ. ಈ ಸಮಿತಿಯ ಕಾರ್ಯವೈಖರಿ ನೋಡಿಕೊಂಡು ಸಾಧ್ಯವಾದರೆ ಜಿಲ್ಲಾಮಟ್ಟಕ್ಕೂ ವಿಸ್ತರಣೆ ಮಾಡುವ ಬಗ್ಗೆಯೂ ಚಿಂತಿಸಲಾಗುವುದು’ ಎಂದು ತಿಳಿಸಿದ್ದಾರೆ.

ಸಮಿತಿ ರಚನೆ ಒಳ್ಳೆಯ ನಿರ್ಧಾರವೇ. ಆದರೆ, ಇದು ಬರೀ ಕಣ್ಣೊರೆಸುವ ತಂತ್ರವಾಗಬಾರದು. ಸಮಸ್ಯೆಯ ರ್ತಾಕ ಅಂತ್ಯಕ್ಕೆ ಅದು ಪೂರಕವಾಗಬೇಕು. ಈ ಹಿಂದೆಯೂ ಮಹತ್ವದ ಸುಧಾರಣೆಗಳ ವಿಷಯದಲ್ಲಿ ತಜ್ಞರ ಸಮಿತಿ ನೀಡಿದ ವರದಿಗಳು ಧೂಳು ತಿನ್ನುತ್ತಿವೆ. ಈಗ ಟೆಂಡರ್ ಪರಿಶೀಲನೆ ಸಮಿತಿಯ ಪ್ರಕ್ರಿಯೆಯೂ ಹಾಗಾಗಬಾರದು. ಭ್ರಷ್ಟಾಚಾರದಂಥ ಗಂಭೀರ ಪಿಡುಗಿನ ವಿರುದ್ಧ ಸರ್ಕಾರ ಕಠಿಣಾಸ್ತ್ರವನ್ನು ಪ್ರಯೋಗಿಸಬೇಕು. ಈ ನಿಟ್ಟಿನಲ್ಲಿ ಕೈಗೊಂಡಿರುವ ನಿರ್ಧಾರಗಳನ್ನು ಸಮರ್ಪಕವಾಗಿ ಜಾರಿಗೆ ತರಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net