ಸಂಪಾದಕೀಯ: ಆರ್ಥಿಕತೆಗೆ ಉತ್ತೇಜನ

sampadakiya
Published on

ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಮಾತನಾಡಿ ಕರೊನಾ ಸಂಕಷ್ಟದಿಂದ ಉಂಟಾಗಿರುವ ಆರ್ಥಿಕ ಹಿನ್ನಡೆ ವಿರುದ್ಧ ಹೋರಾಡಲು 20 ಲಕ್ಷ ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ಘೋಷಿಸಿದಾಗ, ಇದರಲ್ಲಿ ಏನೇನಿರುತ್ತೆ, ಯಾವೆಲ್ಲ ವಲಯಗಳಿಗೆ ಅನುಕೂಲ ಆಗಲಿದೆ ಎಂಬ ಕುತೂಹಲ ಗರಿಗೆದರಿತ್ತು. ಬುಧವಾರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿವರಗಳನ್ನು ಬಹಿರಂಗಗೊಳಿಸಿದ್ದು, ದೇಶದ ಆರ್ಥಿಕತೆಗೆ ಉತ್ತೇಜನ ನೀಡುವಲ್ಲಿ ಕೇಂದ್ರ ಮಹತ್ವದ ಕ್ರಮ ಕೈಗೊಂಡಿದೆ ಎನ್ನಬಹುದು. ಅಲ್ಲದೆ, ಪ್ರಧಾನಿ ಉಲ್ಲೇಖಿಸಿರುವ ‘ಆತ್ಮನಿರ್ಭರ ಭಾರತಕ್ಕೆ’ ಅಡಿಪಾಯವಾಗಿ ಇದು ಕೆಲಸ ಮಾಡಬಹುದು. ಮುಖ್ಯವಾಗಿ, ಹಣದ ಹರಿವು ಹೆಚ್ಚಿಸಲು ಮತ್ತು ಜನಸಾಮಾನ್ಯರ ಕೈಯಲ್ಲಿ ಹಣದ ಚಲಾವಣೆ ಇರುವಂತೆ ಮಾಡಲು ಹಲವು ವಿನಾಯ್ತಿ, ರಿಯಾಯಿತಿಗಳನ್ನು ನೀಡಲಾಗಿದೆ.

ಲಾಕ್​ಡೌನ್​ನಿಂದ ಅತೀವ ಸಂಕಷ್ಟಕ್ಕೆ ಒಳಗಾಗಿದ್ದು ಉದ್ಯಮಗಳು. ಹಾಗಾಗಿ, ಕಿರು, ಸಣ್ಣ, ಮಧ್ಯಮ ಕೈಗಾರಿಕೆ(ಎಂಎಸ್​ಎಂಇ)ಗಳಿಗೆ 3 ಲಕ್ಷ ಕೋಟಿ ರೂ. ಸಾಲಸೌಲಭ್ಯ ಸಿಗಲಿದೆ. ಇದರಿಂದ 45 ಲಕ್ಷ ಎಂಎಸ್​ಎಂಇಗಳಿಗೆ ಲಾಭವಾಗಲಿದೆ. ನಾಲ್ಕು ವರ್ಷ ಅವಧಿಯ ಈ ಸಾಲಕ್ಕೆ ಮೊದಲ ವರ್ಷ ಬಡ್ಡಿ ಕಟ್ಟಿದರೆ ಸಾಕು. ಅಲ್ಲದೆ, 50 ಸಾವಿರ ಕೋಟಿ ರೂ.ಗಳನ್ನು ಈಕ್ವಿಟಿ ರೂಪದಲ್ಲಿ ಹೂಡಿಕೆ ಮಾಡಲಾಗುತ್ತಿದೆ. ಎಂಎಸ್​ಎಂಇ ವ್ಯಾಖ್ಯೆಯನ್ನು ಬದಲಿಸಲಾಗಿದ್ದು, ಹೆಚ್ಚು ಸಂಸ್ಥೆಗಳು ಇದರಡಿ ಬರಲಿವೆ. ಜತೆಗೆ, ಸಾಲಸೌಲಭ್ಯವೂ ಸಿಗಲಿದೆ. 15 ಸಾವಿರ ರೂ.ಗಿಂತ ಕಡಿಮೆ ಸಂಬಳ ಇರುವ ಉದ್ಯೋಗಿಗಳ ಪಿಎಫ್ ಮೊತ್ತವನ್ನು ಸರ್ಕಾರವೇ ಮೂರು ತಿಂಗಳ ಅವಧಿಗೆ ಭರಿಸಲಿದೆ. ಒಟ್ಟು ಹದಿನೈದು ಪ್ರಮುಖ ಘೋಷಣೆಗಳನ್ನು ಮಾಡಿರುವ ಸರ್ಕಾರ, ಎನ್​ಬಿಎಫ್​ಸಿ, ಎಂಎಫ್​ಐ, ರಿಯಲ್ ಎಸ್ಟೇಟ್, ಕಟ್ಟಡ ನಿರ್ಮಾಣ ಕ್ಷೇತ್ರ ಸೇರಿ ಹಲವು ರಂಗಗಳಿಗೆ ವಿನಾಯ್ತಿ ನೀಡಿದೆ. ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳಿಗೆ (ಎನ್​ಬಿಎಫ್​ಸಿ) 30 ಸಾವಿರ ಕೋಟಿ ರೂ.ಗಳ ನೆರವು ಸಿಕ್ಕಿದೆ. ಸ್ಥಳೀಯ ಉದ್ಯಮಕ್ಕೆ ಉತ್ತೇಜನ ನೀಡಲು ಗ್ಲೋಬಲ್ ಟೆಂಡರ್ ನಿಯಮದಲ್ಲಿ ಬದಲಾವಣೆ ತರಲಾಗಿದೆ. ಟಿಡಿಎಸ್ ದರಗಳನ್ನು ಶೇಕಡ 25ರಷ್ಟು ಕಡಿಮೆ ಮಾಡಲಾಗಿದೆ. ಕಾಮಗಾರಿಗಳ ಗುತ್ತಿಗೆ ಹಿಡಿದಿರುವ ಸರ್ಕಾರಿ ಏಜೆನ್ಸಿಗಳ ಅವಧಿಯನ್ನು ಯಾವುದೇ ಷರತ್ತಿಲ್ಲದೆ ಆರು ತಿಂಗಳು ವಿಸ್ತರಿಸಲಾಗಿದೆ.

ಸ್ವಾವಲಂಬಿ ಭಾರತಕ್ಕೆ ಮೋದಿಯವರು ಪಂಚ ಸ್ತಂಭದ ಆಧಾರವನ್ನು ಪ್ರಸ್ತಾಪಿಸಿದ್ದಾರೆ. ಆರ್ಥಿಕತೆ, ಮೂಲಸೌಕರ್ಯ, ತಂತ್ರಜ್ಞಾನ ಆಧಾರಿತ ವ್ಯವಸ್ಥೆ, ಜನಸಂಖ್ಯೆ, ಬೇಡಿಕೆ-ಪೂರೈಕೆ- ಇವುಗಳ ಬಲದ ಮೇಲೆ ಆತ್ಮನಿರ್ಭರ ಭಾರತ ನಿರ್ವಿುಸುವ ಸದಾಶಯ ವ್ಯಕ್ತಪಡಿಸಿದ್ದಾರೆ. ಈ ಪಯಣ ದೀರ್ಘವಾಗಿ ಇರುವುದು ಹೌದಾದರೂ, ಆರ್ಥಿಕ ಉತ್ತೇಜನದ ಕ್ರಮಗಳ ಮೂಲಕ ಆರಂಭವಂತೂ ಪರಿಣಾಮಕಾರಿಯಾಗಿ ಆಗಿದೆ. ಈ ಸೌಲಭ್ಯ, ವಿನಾಯ್ತಿಗಳ ಸದುಪಯೋಗ ಪಡೆದುಕೊಂಡು ಉದ್ಯಮ ಸೇರಿ ಆಯಾ ಕ್ಷೇತ್ರಗಳನ್ನು ಮತ್ತಷ್ಟು ಶಕ್ತಿಶಾಲಿಯಾಗಿ ಕಟ್ಟುವ ಸಂಕಲ್ಪ ಸಾಮೂಹಿಕವಾಗಿ ಹೊರಹೊಮ್ಮಬೇಕಿದೆ. ಆಗಲೇ, ಆರ್ಥಿಕ ಸಂಕಷ್ಟದ ಕರಿನೆರಳಿನಿಂದ ಹೊರಬಂದು, ಶಕ್ತಿಶಾಲಿ ರಾಷ್ಟ್ರವಾಗುವತ್ತ ಹೆಜ್ಜೆ ಹಾಕಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net