

ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದಂಥದು. ಇಲ್ಲಿ ಅನೇಕ ಪ್ರತಿಭಾವಂತರು ತಯಾರಾಗಿ, ಸರ್ಕಾರದಲ್ಲಿ ಮತ್ತು ಬೇರೆ ಬೇರೆ ರಂಗಗಳಲ್ಲಿ ಉನ್ನತ ಸ್ಥಾನಗಳೀಗೇರಿದ್ದಾರೆ.
ಅದೂ ಅಲ್ಲದೆ, ಜಾಗತಿಕ ಮಟ್ಟದಲ್ಲಿ ಹೆಸರುಗಳಿಸಿರುವ ಶಿಕ್ಷಣ ಸಂಸ್ಥೆ ಇದು. ಎರಡು ಪರಸ್ಪರ ವಿರುದ್ಧ ಸೈದ್ಧಾಂತಿಕ ವಿದ್ಯಾರ್ಥಿ ಸಂಘಟನೆಗಳ ಕಾರಣದಿಂದಾಗಿ ಇಲ್ಲಿ ಆಗೀಗ ಅಹಿತಕರ ಘಟನೆಗಳು ಕೂಡ ನಡೆಯುವುದು ದುರದೃಷ್ಟಕರವೆಂದೇ ಹೇಳಬೇಕು.
ಅದರಲ್ಲೂ ಭಾನುವಾರ ಮಾರಕಾಸ್ತ್ರಗಳೊಂದಿಗೆ ಬಂದ ಗೂಂಡಾಗಳು ವಿವಿ ಆವರಣದಲ್ಲಿ ನಡೆಸಿದ ಹಲ್ಲೆ ಅಲ್ಲಿನ ಸೈದ್ಧಾಂತಿಕ, ರಾಜಕೀಯ ವೈಷಮ್ಯದ ಎಲ್ಲ ಹಂತವನ್ನೂ ಮೀರಿಹೋಗಿದೆ ಎಂದೇ ಹೇಳಬೇಕು. ಈ ಘಟನೆ ಆತಂಕಕಾರಿ ಮತ್ತು ಆಘಾತಕಾರಿ. ಒಂದು ಶಿಕ್ಷಣ ಸಂಸ್ಥೇ ಆವರಣಕ್ಕೆ ಯಾರೋ ಹೊರಗಿನವರು ಬಂದು ರಾಜಾರೋಷವಾಗಿ ದಾಳೀ ನಡೆಸುತ್ತಾರೆಂದರೆ, ಅಲ್ಲಿ ಸುರಕ್ಷತಾ ವ್ಯವಸ್ಥೆ ಇರಲಿಲ್ಲವೆ? ಎಂಬ ಪ್ರಶ್ನೆ ಮೂಡುತ್ತದೆ.
ಅಲ್ಲಿಂದ ಮೂಗಳತೆ ದೂರದಲ್ಲೇ ಡಿಸಿಪಿ ಕಚೇರಿಯಿದೆ. ಹಾಗಿದ್ದೂ ಇಂಥ ಘಟನೆ ತಡೆಯಲಾಗಲಿಲ್ಲವೆಂದರೆ ಏನರ್ಥ? ಈ ಬಗ್ಗೆ ತ್ವರಿತವಾಗಿ ತನಿಖೆಯಾಗಿ ಹಲ್ಲೆಗೈದವರು ಮತ್ತು ಕರ್ತವ್ಯಪಾಲನೆಯಲ್ಲಿ ವಿಫಲರಾದವರ ವಿರುದ್ಧ ಕ್ರಮವಾಗಬೇಕು;ಮುಂದೆ ಇಂಥ ಘಟನೆಗಳು ಮರುಕಳಿಸದಂತೆ ಮುನ್ನೆಚ್ಚರಿಕೆ ವಹಿಸಬೇಕು.
ಎಡಚಿಂತನೆಯ ವಿದ್ಯಾರ್ಥಿ ಒಕ್ಕೂಟ ಮತ್ತು ಬಲಪಂಥೀಯ ವಿಚಾರಧಾರೆಯ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಜೆನ್ಯುುನಲ್ಲಿ ಸಕ್ರಿಯವಾಗಿದ್ದು, ಭಾನುವಾರದ ಘಟನೆ ಬಗ್ಗೆ ಪರಸ್ಪರ ದೋಷಾರೋಪ ಮಾಡುತ್ತಿವೆ. ವಾಸ್ತವ ಏನೆಂಬುದನ್ನು ಪೊಲೀಸರು ಬಯಲಿಗೆಳೆಯಬೇಕಿದೆ. ಜೆಎನ್ಯುು ಗದ್ದಲ, ವಿವಾದಕ್ಕೆ ವೇದಿಕೆಯಾಗುತ್ತಿರುವುದು ಇದೇ ಮೊದಲೇನಲ್ಲ. ಸಂಸತ್ ಭವನದ ದಾಳಿ ಸಂಚುಕೋರ ಅಫ್ಜಲ್ನನ್ನು ಗಲ್ಲಿಗೇರಿಸಿದಾಗ, ಅದನ್ನು ವಿರೋಧಿಸಿ ಇಲ್ಲಿ ಪ್ರತಿಭಟನೆಗಳು ನಡೆದು, ದೇಶವಿರೋಧಿ ಘೋಷಣೆಗಳು ಕೂಡ ಕೇಳಿಬಂದಿದ್ದವು.
ಇತ್ತೀಚೆಗೆ ಜೆಎನ್ಯುುನಲ್ಲಿ ಮತ್ತೆ ಗಲಾಟೆ ಆರಂಭವಾಗಿದ್ದು ಶುಲ್ಕ ಏರಿಕೆ ನೆಪದಿಂದ. ಈ ಪ್ರಕರಣವನ್ನು ಎಲ್ಲೆಲ್ಲಿಗೋ ಕೊಂಡೊಯ್ದು ಅದಕ್ಕೂ ‘ಸೈದ್ಧಾಂತಿಕ ತಿಕ್ಕಾಟ’ದ ಸ್ವರೂಪ ನೀಡಲಾಯ್ತು. ಹಾಗಾಗಿ, ಜೆಎನ್ಯುು ಅಂದರೆ ಈಗ ಬರೀ ಅಶಾಂತಿ, ಪ್ರತಿಭಟನೆ, ಗದ್ದಲ ಎಂಬ ಚಿತ್ರಣ ಶೈಕ್ಷಣಿಕ ವಲಯದಲ್ಲಿ ಮೂಡಿದೆ. ಮಾತ್ರವಲ್ಲ, ಯುವಕರಲ್ಲಿ ರಾಷ್ಟ್ರವಿರೋಧಿ ಭಾವನೆಗಳನ್ನು ಬಿತ್ತುವ, ದ್ವೇಷದ ವಿಚಾರಗಳನ್ನು ಹರಡುವ ಕೆಲಸ ಇಲ್ಲಿ ಕೆಲ ಶಕ್ತಿಗಳಿಂದ ನಡೆಯುತ್ತಿದೆ ಮತ್ತು ಅದುವೇ ‘ಪ್ರತಿಭಟನೆ’ ಹೊತ್ತಲ್ಲಿ ಸಮಾಜದ್ರೋಹಿ ಚಟುವಟಿಕೆಗಳಿಗೆ ಕಾರಣವಾಗುತ್ತಿದೆ ಎಂಬುದು ಬಹಿರಂಗ ರಹಸ್ಯ.
ಆದರೆ, ಇಂಥ ಬೆಳವಣಿಗೆಗಳು, ಘಟನೆಗಳು ಸಾಮಾಜಿಕ ಸ್ವಾಸ್ಥ್ಯದ ದೃಷ್ಟಿಯಿಂದಲೂ, ಶೈಕ್ಷಣಿಕ ವ್ಯವಸ್ಥೆ ದೃಷ್ಟಿಯಿಂದಲೂ ಮಾರಕ ಎಂಬುದನ್ನು ವಿದ್ಯಾರ್ಥಿಗಳು ಮತ್ತು ಅವರ ಹಿಂದೆ ನಿಂತುಕೊಂಡಿರುವ ಸಂಘಟನೆಗಳು ಅರ್ಥ ಮಾಡಿಕೊಳ್ಳಬೇಕು. ಮುಖ್ಯವಾಗಿ, ಸೈದ್ಧಾಂತಿಕ ವಿರೋಧಗಳೇನೇ ಇರಲಿ, ಅದು ರಾಷ್ಟ್ರವಿರೋಧಿ ಭಾವನೆಗಳ ಸ್ವರೂಪ ತಳೆಯುವುದು ಅಕ್ಷಮ್ಯ.
ಇದರಿಂದ ಆಗುವ ಹಾನಿಯನ್ನು ಅಂದಾಜಿಸಲೂ ಸಾಧ್ಯವಿಲ್ಲ. ಅಲ್ಲದೆ, ವಿಶ್ವವಿದ್ಯಾಲಯದಲ್ಲಿ ಶೈಕ್ಷಣಿಕವಾಗಿ ಮನಸ್ಸುಗಳು ಅರಳಬೇಕೆ ಹೊರತು ಇಂಥ ರಾಜಕೀಯದ ಕಾರಣದಿಂದ ಮುದುಡಿ ಹೋಗಬಾರದು. ಹಾಗಾಗಿ, ಜೆಎನ್ಯುುವಿನಿಂದ ರಾಜಕೀಯ ಹೊರಗಿಡಬೇಕಾದ ಕೆಲಸ ಮೊದಲು ಆಗಬೇಕಿದೆ.