

ವಿಶ್ವದ ಬಲಾಢ್ಯ ಶಕ್ತಿಯಾಗಲು ಇನ್ನಿಲ್ಲದಂತೆ ಹವಣಿಸುತ್ತಿರುವ ಚೀನಾ, ಇದಕ್ಕಾಗಿ ಅವಿವೇಕದ ಅಷ್ಟೇ ಅಲ್ಲ ಅಪಾಯಕಾರಿ ಹೆಜ್ಜೆಗಳನ್ನು ಅನುಸರಿಸುತ್ತಿದೆ. ಜಾಗತಿಕ ಶಾಂತಿಗೆ ಕಂಟಕವಾಗಿ ಪರಿಣಮಿಸಿರುವ ಭಯೋತ್ಪಾದಕ ಶಕ್ತಿಗಳನ್ನು ಬಹಿರಂಗವಾಗಿ ಬೆಂಬಲಿಸುತ್ತಿದೆ. ಯಾವುದೇ ರಾಷ್ಟ್ರಕ್ಕೆ ಅಥವಾ ಅಂತಾರಾಷ್ಟ್ರೀಯ ವಲಯಕ್ಕೆ ಅಹಿತವಾದರೂ ಚಿಂತೆಯಿಲ್ಲ, ತನ್ನ ಉದ್ದೇಶ ಈಡೇರಿದರಾಯಿತು ಎಂಬ ಹಠಮಾರಿ, ಅಷ್ಟೇ ಸ್ವಾರ್ಥಧೋರಣೆ ಡ್ರಾ್ಯಗನ್ ರಾಷ್ಟ್ರದ್ದು. ಭಯೋತ್ಪಾದನೆಯನ್ನು ರಫ್ತು ಮಾಡುತ್ತಿರುವ ಪಾಕಿಸ್ತಾನಕ್ಕೆ ಅದು ಎಲ್ಲ ಬಗೆಯ ಬೆಂಬಲ, ನೆರವು ನೀಡುತ್ತಿರುವುದು ಹೊಸದೇನಲ್ಲ. ಈ ಎರಡೂ ರಾಷ್ಟ್ರಗಳ ‘ಸ್ನೇಹ’ ವರ್ಧಿಸಿದಷ್ಟು ಅದರಿಂದ ಜಾಗತಿಕ ವಲಯಕ್ಕೆ ಆತಂಕ. ಈ ಕಳವಳವನ್ನು ಹೆಚ್ಚಿಸುವ ಮತ್ತೊಂದು ವಿದ್ಯಮಾನ ಇತ್ತೀಚೆಗೆ ಘಟಿಸಿದೆ. ಉಭಯ ರಾಷ್ಟ್ರಗಳ ನಡುವೆ ಹೊಸದಾಗಿ ಪರಮಾಣು ಒಪ್ಪಂದ ಏರ್ಪಟ್ಟಿದೆ. ‘ಇದು ಹೊಸ ಅಣ್ವಸ್ತ್ರ ಸ್ಪರ್ಧೆಗೆ ಮುನ್ನಡಿ ಬರೆಯಲಿದೆ. ಬಿಕ್ಕಟ್ಟು ಸೃಷ್ಟಿಸುವ ಲಕ್ಷಣವೂ ಇದೆ’ ಎಂದು ಇಸ್ರೇಲ್ ಮಾಧ್ಯಮ ವರದಿ ಪ್ರಕಟಿಸಿರುವುದು, ಚರ್ಚೆಗೆ ಗ್ರಾಸವಾಗಿದೆ.
‘ಫ್ರೇಮ್ ವರ್ಕ್ ಅಗ್ರಿಮೆಂಟ್ ಆನ್ ಡೀಪನಿಂಗ್ ನ್ಯೂಕ್ಲಿಯರ್ ಎನರ್ಜಿ ಕೋಆಪರೇಷನ್’ಗೆ ಪಾಕಿಸ್ತಾನದ ಆಟಾಮಿಕ್ ಎನರ್ಜಿ ಕಮಿಷನ್(ಪಿಎಇಸಿ) ಮತ್ತು ಚೀನಾದ ಝೊನ್ಗ್ಯುವಾನ್ ಇಂಜಿನಿಯರಿಂಗ್ ಕೋಆಪರೇಷನ್ ಸೆಪ್ಟೆಂಬರ್ 8ರಂದು ಸಹಿ ಹಾಕಿವೆ. ಈ ಒಪ್ಪಂದದ ಒಟ್ಟಾರೆ ಉದ್ದೇಶ ಪಾಕಿಸ್ತಾನದಲ್ಲಿ ಸ್ಥಾಪಿಸಲಾಗುವ ಭವಿಷ್ಯದ ಎಲ್ಲ ಪರಮಾಣು ಯೋಜನೆಗಳ ನಿರ್ಮಾಣ ಮತ್ತು ನಿರ್ವಹಣೆ ಚೀನಾ ಕಡೆಯಿಂದಲೇ ಆಗಲಿದೆ. ಆದರೆ, ಇದು ಬರೀ ಅಣು ವಿದ್ಯುತ್ ಉತ್ಪಾದನೆಗೆ ಸೀಮಿತವಾಗಿರುವುದು ಅನುಮಾನವೇ. ಈ ಎರಡೂ ರಾಷ್ಟ್ರಗಳು ಭಾರತದ ಭದ್ರತೆಗೆ ಆತಂಕಕಾರಿಯಾಗಿ ಪರಿಣಮಿಸಿರುವುದಂತೂ ಹೌದು. ಚೀನಾದ ಅಪಾಯಕಾರಿ ತಂತ್ರಗಳು ಮತ್ತು ಪಾಕಿಸ್ತಾನದ ಈ ಹಿಂದಿನ ಅನಾಹುತಕಾರಿ ನಡೆಗಳನ್ನು ಗಮನಿಸಿದರೆ, ಈ ಬೆಳವಣಿಗೆ ಸಹಜವಾಗಿಯೇ ಆತಂಕ ಮೂಡಿಸುತ್ತದೆ. ಪರಮಾಣು ತಂತ್ರಜ್ಞಾನವನ್ನು ಉತ್ತರ ಕೊರಿಯಾಕ್ಕೆ ನೀಡಿದ ಪಾಕಿಸ್ತಾನ, ತನ್ನ ಆಂತರಿಕ ಪರಿಸ್ಥಿತಿ ಚಿಂತಾಜನಕವಾಗಿದ್ದರೂ, ಅಣ್ವಸ್ತ್ರಗಳನ್ನು ಮಾತ್ರ ಸಂಗ್ರಹಿಸುತ್ತಲೇ ಇದೆ. ಅಷ್ಟು ಮಾತ್ರವಲ್ಲ, ಅಪ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಬಂದು, ಮತ್ತೆ ಕ್ರೌರ್ಯ ಮರುಕಳಿಸುತ್ತಿದೆ. ಅಚ್ಚರಿ ಹಾಗೂ ಆಘಾತಕಾರಿ ಸಂಗತಿ ಎಂದರೆ ಈ ತಾಲಿಬಾನ್ ಉಗ್ರರಿಗೆ ಪಾಕಿಸ್ತಾನ ಮತ್ತು ಚೀನಾ ಬೆಂಬಲ ನೀಡುತ್ತಿರುವುದು. ಪಾಕ್ ಪ್ರಧಾನಿ ಇಮ್ರಾನ್ ಖಾನ್ ತಾಲಿಬಾನ್ ಬಗ್ಗೆ ಮೃದುಧೋರಣೆ ಅನುಸರಿಸುತ್ತಿದ್ದಾರೆ. ಭವಿಷ್ಯದಲ್ಲಿ ತಾಲಿಬಾನ್ ಉಗ್ರರ ದೃಷ್ಟಿ ಅಣ್ವಸ್ತ್ರಗಳ ಮೇಲೆ ಬಿದ್ದರೆ ಗತಿ ಏನು? ಭಯೋತ್ಪಾದನೆ ವಿರುದ್ಧ ಸಮರವನ್ನೂ ಮತ್ತೆ ಒಗ್ಗಟ್ಟಿನಿಂದ ಸಂಘಟಿಸಬೇಕಾದ ಅನಿವಾರ್ಯತೆ ಇದೆ. ಹೀಗಿರುವಾಗ ಈ ಹೊಸ ಅಣು ಒಪ್ಪಂದವನ್ನು ಮತ್ತು ಅಪ್ಘಾನಿಸ್ತಾನದಲ್ಲಿನ ತಾಲಿಬಾನ್ ಬೆಳವಣಿಗೆಗಳನ್ನು ಲಘುವಾಗಿ ಪರಿಗಣಿಸುವಂತಿಲ್ಲ. ಅಂತಾರಾಷ್ಟ್ರೀಯ ವಲಯ ಈ ಹೊಸ ಸವಾಲು ಮತ್ತು ಬಿಕ್ಕಟ್ಟನ್ನು ಸಮರ್ಪಕವಾಗಿ ನಿರ್ವಹಿಸುವ ದೃಷ್ಟಿಯಿಂದ ಕಾರ್ಯತಂತ್ರ ರೂಪಿಸುವುದು ಅಗತ್ಯ.