

ಕಾರು ಸೇರಿದಂತೆ ಪ್ರಯಾಣಿಕರ ಸಂಖ್ಯೆ 8 ಮೀರದ ವಾಹನಗಳಲ್ಲಿ ಸೀಟ್ ಬೆಲ್ಟ್ ರಹಿತ ಚಾಲನೆಗೆ ವಿಧಿಸಲಾಗುವ ದಂಡವನ್ನು ಈಗ ದುಪ್ಪಟ್ಟು ಮಾಡಲಾಗಿದ್ದು, 500ರಿಂದ 1000 ರೂಪಾಯಿಗೆ ಏರಿಸಲಾಗಿದೆ. ಚಾಲಕನ ಹಿಂಬದಿ ಕುಳಿತು ಪ್ರಯಾಣಿಸುವವರು ಕೂಡ ಸೀಟ್ ಬೆಲ್ಟ್ ಹಾಕಿಕೊಳ್ಳುವುದು ಕಡ್ಡಾಯವಾಗಿದ್ದು, ಈ ನಿಯಮ ಮೀರಿದರೆ ಪೊಲೀಸ್ ಇಲಾಖೆಯವರು ದಂಡ ವಿಧಿಸುತ್ತಾರೆ. ರಸ್ತೆ ಅಪಘಾತಗಳಲ್ಲಿ ಸಾವು-ನೋವು ಪ್ರಮಾಣ ತಗ್ಗಿಸುವ ಉದ್ದೇಶದಿಂದ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಸೂಚನೆ ಮೇರೆಗೆ ಪೊಲೀಸ್ ಇಲಾಖೆ ಪರಿಷ್ಕೃತ ನಿಯಮ ಜಾರಿಗೊಳಿಸಿದೆ.
ಸೀಟ್ ಬೆಲ್ಟ್ ಕಡ್ಡಾಯ ನಿಯಮ ಹಲವಾರು ವರ್ಷಗಳಿಂದ ಅಸ್ತಿತ್ವದಲ್ಲಿದ್ದರೂ ಪ್ರಯಾಣಿಕರು ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂಬ ಹಿನ್ನೆಲೆಯಲ್ಲಿ ಈಗ ದಂಡದ ಪ್ರಮಾಣವನ್ನು ದುಪ್ಪಟ್ಟು ಮಾಡಲಾಗಿದೆ. ಕೇಂದ್ರೀಯ ಮೋಟಾರ್ ವಾಹನ ಕಾಯ್ದೆ 2004ರ ಪ್ರಕಾರ ಎಲ್ಲ ರೀತಿಯ ಕಾರುಗಳಲ್ಲಿ ಪ್ರಯಾಣಿಕರು ಸೀಟ್ ಬೆಲ್ಟ್ ಧರಿಸಬೇಕೆಂಬ ನಿಯಮವನ್ನು ಕೇಂದ್ರ ಸರ್ಕಾರ 2005ರಲ್ಲಿಯೇ ಜಾರಿಗೆ ತಂದಿದೆ. ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಮೃತಪಟ್ಟ ಟಾಟಾ ಸನ್ಸ್ ಕಂಪನಿಯ ಮಾಜಿ ಚೇರ್ಮನ್ ಸೈರಸ್ ಮಿಸ್ತ್ರಿ ಅಪಘಾತಕ್ಕೀಡಾದ ಕಾರಿನಲ್ಲಿ ಹಿಂಬದಿ ಸವಾರರಾಗಿದ್ದು, ಸೀಟ್ ಬೆಲ್ಟ್ ಧರಿಸಿದ್ದರೆ ಬದುಕುಳಿಯುತ್ತಿದ್ದರು ಎಂಬ ಚರ್ಚೆ ಹಿನ್ನೆಲೆಯಲ್ಲಿ ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಎಲ್ಲ ರೀತಿಯ ಕಾರುಗಳಲ್ಲಿ ಸೀಟ್ ಬೆಲ್ಟ್ ಧರಿಸದಿದ್ದರೆ ಎಚ್ಚರಿಕೆಯ ಅಲಾಮ್ರ್ ವ್ಯವಸ್ಥೆ ಅಳವಡಿಸುವುದನ್ನು ಕಡ್ಡಾಯಗೊಳಿಸುವ ನಿಯಮ ಜಾರಿಗೊಳಿಸಲು ಮುಂದಾಗಿದ್ದು, ಶೀಘ್ರ ಅದು ಕಾರ್ಯರೂಪಕ್ಕೆ ಬರಲಿದೆ.
ರಸ್ತೆ ಅಪಘಾತಗಳ ಸಂಖ್ಯೆಯಲ್ಲಿ ಭಾರತ ಜಗತ್ತಿನಲ್ಲಿಯೇ ಮುಂಚೂಣಿ ಸ್ಥಾನದಲ್ಲಿದೆ. ಭಾರತದಲ್ಲಿ ಒಂದು ವರ್ಷದಲ್ಲಿ ಸಂಭವಿಸುವ ರಸ್ತೆ ಅಪಘಾತಗಳ ಸಂಖ್ಯೆ ಸರಿಸುಮಾರು 4.5 ಲಕ್ಷ. ಇದರಿಂದ ಸಾವನ್ನಪು್ಪವವರು ಅಂದಾಜು 1.5 ಲಕ್ಷ ಜನ. ಜಗತ್ತಿನ ಒಟ್ಟಾರೆ ವಾಹನಗಳ ಪೈಕಿ ಭಾರತದಲ್ಲಿ ಇರುವುದು ಶೇ. 1 ಮಾತ್ರ. ಆದರೆ, ವಿಶ್ವದಲ್ಲಿ ಸಂಭವಿಸುವ ಅಪಘಾತಗಳಲ್ಲಿ ಸಾವನ್ನಪು್ಪವವರಲ್ಲಿ ಶೇ. 11ರಷ್ಟು ಭಾರತೀಯರೇ ಆಗಿರುತ್ತಾರೆ ಎಂದು ವಿಶ್ವಬ್ಯಾಂಕ್ ವರದಿ ಹೇಳುತ್ತದೆ. ರಸ್ತೆ ಸುರಕ್ಷತೆಯಲ್ಲಿ ಭಾರತ ಹಿಂದುಳಿದಿದೆ ಮತ್ತು ಅಪಘಾತಕ್ಕೆ ಈಡಾಗುವ ಪ್ರಮಾಣ ಜಾಸ್ತಿ ಇದೆ ಎಂಬುದನ್ನು ಈ ಅಂಕಿ-ಅಂಶಗಳು ಸೂಚಿಸುತ್ತವೆ. ವಾಹನ ಚಲಾಯಿಸುವವರ ನಿರ್ಲಕ್ಷ್ಯದ ಜತೆಗೆ ರಸ್ತೆ ನಿರ್ವಹಣೆಯಲ್ಲಿ ಸರ್ಕಾರದ ಅಸಡ್ಡೆ ಕೂಡ ಅಪಘಾತಗಳ ಹೆಚ್ಚಳಕ್ಕೆ ಕಾರಣ ಎಂಬುದು ನಿರ್ವಿವಾದ.
ಬೆಂಗಳೂರಿನಲ್ಲಿ ರಸ್ತೆಗುಂಡಿ ಕಾರಣದಿಂದಾಗಿ ಮಹಿಳೆಯೊಬ್ಬರು ಅಪಘಾತದಲ್ಲಿ ಸಾವನ್ನಪ್ಪಿದ್ದು ಇದಕ್ಕೊಂದು ತಾಜಾ ಉದಾಹರಣೆ. ವಾಹನ ನಿಯಮಗಳನ್ನು ಉಲ್ಲಂಘಿಸಿದರೆ ವಿಧಿಸಲಾಗುವ ದಂಡದ ಪ್ರಮಾಣವನ್ನು 2019ರ ಸೆಪ್ಟೆಂಬರ್ನಲ್ಲಿ ಹೆಚ್ಚಿಸಲಾಗಿದೆ. ಸಂಚಾರ ನಿಯಮಗಳ ಕಟ್ಟುನಿಟ್ಟು ಪಾಲನೆಗೆ ಇದು ಅನಿವಾರ್ಯ ಎಂದು ಸರ್ಕಾರಗಳು ಸಮರ್ಥಿಸಿಕೊಳ್ಳಬಹುದಾದರೂ, ದಂಡ ಹೆಚ್ಚಿಸಿದರಷ್ಟೇ ಸಾಲದು. ತಗ್ಗು-ಗುಂಡಿಗಳಿಲ್ಲದ ರೀತಿಯಲ್ಲಿ ರಸ್ತೆಗಳನ್ನು ಉತ್ತಮವಾಗಿ ನಿರ್ವಹಣೆ ಮಾಡುವಲ್ಲಿ ಸರ್ಕಾರ ತನ್ನ ಜವಾಬ್ದಾರಿ, ಕರ್ತವ್ಯವನ್ನು ಸೂಕ್ತವಾಗಿ ನಿಭಾಯಿಸಿದರೆ ಮಾತ್ರ ರಸ್ತೆ ಅಪಘಾತಕ್ಕೆ ಕಡಿವಾಣ ಹಾಕಬಹುದು.