ಐಎಸ್​ಐ ಸಂಚು ಬಹಿರಂಗ; ಕಾಶ್ಮೀರದಲ್ಲಿ ಶಾಂತಿ ಕದಡುವ ಯತ್ನ ವಿಫಲಗೊಳಿಸಬೇಕು..

Editorial
Published on

ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದನೆಯ ಸ್ವರೂಪ ಬದಲಾಗಿದೆ. ಭಯೋತ್ಪಾದಕರಿಗೆ ಗಡಿ ನುಸುಳುವಿಕೆ ಅಪಾಯಕಾರಿಯಾಗಿ ಪರಿಣಮಿಸಿರುವುದ ರಿಂದ ಕಾಶ್ಮೀರ ವಿರೋಧಿ ಮನಸ್ಥಿತಿಯ ಸ್ಥಳೀಯರನ್ನು ಬಳಸಿಕೊಂಡು, ಯುವಕರನ್ನು ಪ್ರಚೋದಿಸಿ ಹಿಂಸೆ ಹರಡಲಾಗುತ್ತಿದೆ.

ಕಳೆದ 14 ದಿನಗಳಲ್ಲೇ 11 ನಾಗರಿಕರನ್ನು ಉಗ್ರರು ಕೊಂದು ಹಾಕಿರುವುದರ ಹಿಂದೆ ಪಾಕ್​ನ ಪರೋಕ್ಷ ಪಾತ್ರ ಇದೆ ಎಂಬುದು ಸ್ಪಷ್ಟಗೊಂಡಿದೆ. ವಲಸೆ ಕಾರ್ವಿುಕರ ಮೇಲೆ ನಡೆಯುತ್ತಿರುವ ದಾಳಿಯ ಹಿಂದೆ ಪಾಕ್ ಗುಪ್ತಚರ ಸಂಸ್ಥೆ ಐಎಸ್​ಐ ಪಾತ್ರವಿದೆ ಎಂಬುದು 22 ಅಂಶಗಳ ಟೂಲ್ಕಿಟ್​ನಿಂದ ಬಹಿರಂಗಗೊಂಡಿದೆ. ಕೇಂದ್ರ ಸರ್ಕಾರ ವಿಶೇಷ ಸ್ಥಾನಮಾನ ಹಿಂಪಡೆದ ಬಳಿಕ ಕಾಶ್ಮೀರದಲ್ಲಿನ ಬದಲಾವಣೆಯಿಂದ ಐಎಸ್​ಐ ಮತ್ತು ಪಾಕ್​ನ ಭಯೋತ್ಪಾದಕ ಸಂಘಟನೆಗಳು ಹತಾಶಗೊಂಡು, ‘ಹೊಸಮಾರ್ಗ’ ಶೋಧಿಸುತ್ತಿದ್ದವು. ಕಾಶ್ಮೀರದಲ್ಲಿ ನೆಲೆಸಿರುವ ಹೊರರಾಜ್ಯದವರನ್ನು, ಅಧಿಕಾರಿಗಳನ್ನು, ಪೊಲೀಸರನ್ನು ಗುರಿ ಮಾಡುವಂತೆ ಐಎಸ್​ಐ ಉಗ್ರ ಸಂಘಟನೆಗಳಿಗೆ ಸೂಚಿಸಿರುವುದು, ಅದರ ಕ್ರೌರ್ಯ ಮನಸ್ಥಿತಿಗೆ ಹಿಡಿದ ಕನ್ನಡಿ. ಅಷ್ಟೇ ಅಲ್ಲ, 1990ರ ದಶಕದಲ್ಲಿ ಕಾಶ್ಮೀರವನ್ನು ತೊರೆದ ಕಾಶ್ಮೀರಿ ಪಂಡಿತರು ಈಗ ವಾಪಸು ಬರಲು ಮುಂದಾಗುತ್ತಿದ್ದಾರೆ. ‘ಅವರನ್ನು ಸ್ವಾಗತಿಸಬೇಡಿ, ಅವರು ಗುರಿ ಎಂಬುದನ್ನು ಮರೆಯಬೇಡಿ’ ಎಂದು ಹೇಳುವ ಮೂಲಕ ದಶಕಗಳ ಹಿಂದಿನ ಹಿಂಸೆ, ಆತಂಕವನ್ನು ಮರುಸ್ಥಾಪಿಸುವ ಹುನ್ನಾರದಲ್ಲಿದೆ ಐಎಸ್​ಐ.

ಪಾಕ್​ನಲ್ಲಿ ನೆಲೆಸಿರುವ ಲಷ್ಕರ್-ಎ-ತೊಯ್ಬಾ , ಹಿಜ್ಬುಲ್ ಮುಜಾಹಿದ್ದೀನ್, ಜೈಷ್-ಎ-ಮೊಹಮ್ಮದ್ ಸಂಘಟನೆಗಳ ಛಾಯಾ ಸಂಘಟನೆಗಳನ್ನು ಹಿಂಸೆ ಹರಡಲು ಬಳಸುತ್ತಿದ್ದು, ಅದಕ್ಕೆ ಪಾಕ್ ಸರ್ಕಾರ ತೆರೆಮರೆಯಲ್ಲಿದ್ದುಕೊಂಡೇ ಸಹಕಾರ ನೀಡುತ್ತಿದೆ ಎಂಬ ಸಂಗತಿಯನ್ನು ಬೇಹುಗಾರಿಕಾ ದಳದ ಅಧಿಕಾರಿಗಳು ಬಹಿರಂಗ ಪಡಿಸಿದ್ದಾರೆ. ಐಎಸ್​ಐನ ಟೂಲ್ಕಿಟ್​ನ್ನು ಗಮನಿಸಿದರೆ, ಅದರ ವಿಧ್ವಂಸಕ, ಕರಾಳ ಉದ್ದೇಶಗಳು, ಉಗ್ರ ಸಂಘಟನೆಗಳನ್ನು ಬೆಂಬಲಿಸುವ ನೀತಿಗಳು ಸ್ಪಷ್ಟಗೊಳ್ಳುತ್ತವೆ. ವಲಸೆ ಕಾರ್ವಿುಕರನ್ನು ಗುರಿಯಾಗಿಸುವ ಮೂಲಕ ಉಗ್ರರು ‘ಅಶಾಂತ ಕಾಶ್ಮೀರ’ ಸೃಷ್ಟಿಸಲು ಹವಣಿಸುತ್ತಿರುವುದು ಸ್ಪಷ್ಟ. ಭಾರತ ಈ ಎಲ್ಲ ಬೆಳವಣಿಗೆಗಳನ್ನು ಗಂಭೀರವಾಗಿಯೇ ಪರಿಗಣಿಸಿದೆ. ಭಯೋತ್ಪಾದಕರ ಹಲವು ಬಗೆಯ ಷಡ್ಯಂತ್ರಗಳನ್ನು ವಿಫಲಗೊಳಿಸಿರುವ ನಮ್ಮ ಭದ್ರತಾ ಪಡೆಗಳು ಈ ಹೊಸ ಸವಾಲನ್ನೂ ಅಷ್ಟೇ ದಿಟ್ಟತನದಿಂದ ಎದುರಿಸಲಿವೆ ಎಂಬುದರಲ್ಲಿ ಅನುಮಾನವಿಲ್ಲ. ಭೂಸೇನೆಯ ಮುಖ್ಯಸ್ಥ ಜನರಲ್ ಎಂ.ಎಂ.ನರಾವಣೆ ಮಂಗಳವಾರ ಜಮ್ಮು- ಕಾಶ್ಮೀರದ ಗಡಿ ನಿಯಂತ್ರಣ ರೇಖೆಯ (ಎಲ್​ಒಸಿ) ಹಲವು ಮುಂಚೂಣಿ ನೆಲೆಗಳಿಗೆ ಭೇಟಿ ನೀಡಿ, ಸ್ಥಳೀಯ ಪರಿಸ್ಥಿತಿ, ಒಳನುಸುಳುವಿಕೆ ತಡೆಯಲು ಕೈಗೊಂಡಿರುವ ಕ್ರಮಗಳನ್ನು ಪರಿಶೀಲಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಷಾ ಅ.23 ಮತ್ತು 24ರಂದು ಕಾಶ್ಮೀರಕ್ಕೆ ಭೇಟಿ ನೀಡಿ, ಪರಿಸ್ಥಿತಿ ಅವಲೋಕಿಸಲಿದ್ದಾರೆ. ಗಡಿಯಲ್ಲಿ ಉಗ್ರರ ಒಳನುಸುಳುವಿಕೆಯನ್ನು ಗಣನೀಯವಾಗಿ ತಡೆದಿದ್ದ ಭದ್ರತಾ ಪಡೆಗಳು ಎನ್​ಕೌಂಟರ್​ನಲ್ಲಿ ಹಲವು ಉಗ್ರರನ್ನು ಇಲ್ಲವಾಗಿಸಿದರು. ಈ ಹೊಸ ಸವಾಲನ್ನು ಎದುರಿಸಲು ಮತ್ತಷ್ಟು ಶಕ್ತಿಶಾಲಿಯಾದ ಕಾರ್ಯತಂತ್ರ ಹೆಣೆಯಬೇಕಿದೆ. ರಾಜತಾಂತ್ರಿಕ ಮಟ್ಟದಲ್ಲಿ ಪಾಕಿಸ್ತಾನದ ಮುಖವಾಡವನ್ನು ಕಿತ್ತೊಗೆಯಲು ಇದು ಸಕಾಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net