

ಕೃಷಿ ಕ್ಷೇತ್ರದಲ್ಲಿ ಹಲವು ಸುಧಾರಣೆಗಳ ಆಶಯದಿಂದ ಕೇಂದ್ರ ಸರ್ಕಾರ ಕೃಷಿಗೆ ಸಂಬಂಧಿಸಿದ ಮೂರು ಕಾಯ್ದೆಗಳಿಗೆ ತಿದ್ದುಪಡಿ ತಂದದ್ದು, ಭಾರೀ ವಿವಾದ, ಪ್ರತಿಭಟನೆಗೆ ಕಾರಣವಾಯಿತು. ಈ ವರ್ಷದ ಗಣರಾಜ್ಯೋತ್ಸವದ ವೇಳೆ ದೆಹಲಿಯ ಕೆಂಪುಕೋಟೆ ಬಳಿ ನಡೆದ ಘಟನೆಯನ್ನಂತೂ ಮರೆಯಲು ಸಾಧ್ಯವೇ ಇಲ್ಲ. ಪಂಜಾಬ್, ಹರಿಯಾಣ ಸೇರಿದಂತೆ ಹಲವು ರಾಜ್ಯಗಳ ರೈತರು ಕಳೆದ ಒಂದು ವರ್ಷದಿಂದ ಈ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರ ಹೋರಾಟದ ಮುಂಚೂಣಿ ಮುಖಂಡರೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿದರೂ ಯಾವುದೇ ಪ್ರಯೋಜನ ಆಗಲಿಲ್ಲ. ಮೂರೂ ಕಾಯ್ದೆಗಳನ್ನು ವಾಪಸ್ ಪಡೆಯುವವರೆಗೆ ಹೋರಾಟ ನಿಲ್ಲುವುದಿಲ್ಲ ಎಂದು ರೈತಮುಖಂಡರು ಘೋಷಿಸಿದರೆ, ಕಾಯ್ದೆ ವಾಪಸ್ ಪಡೆಯುವುದಿಲ್ಲ ಎಂಬ ಪಟ್ಟು ಸರ್ಕಾರದ್ದಾಗಿತ್ತು. ಆದರೆ, ಶುಕ್ರವಾರ ಬೆಳಗ್ಗೆ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ‘ರೈತರಿಗೆ ಅನುಕೂಲವಾಗುವ ದೃಷ್ಟಿಯಿಂದ ಈ ಮೂರು ಕೃಷಿ ಕಾಯ್ದೆಗಳನ್ನು ಜಾರಿಗೆ ತರಲಾಗಿತ್ತು. ಆದರೆ, ಒಂದು ವರ್ಗದ ರೈತರ ಮನವೊಲಿಸಲು ಸಾಧ್ಯವಾಗಲಿಲ್ಲ. ಹೀಗಾಗಿ, ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ನಿರ್ಧಾರ ಕೈಗೊಳ್ಳಲಾಯಿತು’ ಎಂದು ಘೋಷಿಸಿದರು. ಇದಾದ ಬಳಿಕ ಇದಕ್ಕೆ ಹಲವು ಬಗೆಯ ವ್ಯಾಖ್ಯಾನ ನೀಡಲಾಗುತ್ತಿದ್ದು, ರಾಜಕೀಯ ಆಯಾಮದಲ್ಲೂ ಚರ್ಚೆ ಗರಿಗೆದರಿದೆ.
ಅದೇನಿದ್ದರೂ, ರೈತದನಿಗೆ ಸರ್ಕಾರ ಮನ್ನಣೆ ನೀಡಿದೆ ಎಂಬುದು ಸಮಾಧಾನದ ವಿಷಯ. ಆದರೆ, ಕೃಷಿರಂಗದಲ್ಲಿನ ಕೊರತೆಗಳನ್ನು ನಿವಾರಿಸಿ, ಸುಧಾರಣೆಗಳನ್ನು ತರುವ ಕ್ರಮಕ್ಕೆ ಪ್ರಸಕ್ತ ನಿರ್ಣಯ ಅಡ್ಡಿಯಾಗಬಾರದು. 2022ರ ಹೊತ್ತಿಗೆ ದೇಶದ ಎಲ್ಲ ರೈತರ ಆದಾಯವನ್ನು ದ್ವಿಗುಣಗೊಳಿಸುವ ಉದ್ದೇಶ ಕೇಂದ್ರದ್ದು. ಈ ನಿಟ್ಟಿನಲ್ಲಿ ಅದು ಹಲವು ಕ್ರಮಗಳನ್ನೂ ಕೈಗೊಂಡಿದೆ. ಆದರೆ, ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳ ಸಹಕಾರ ಇಲ್ಲದಿದ್ದರೆ ಅನುಷ್ಠಾನ ಕಷ್ಟಸಾಧ್ಯ. ತೀವ್ರ ಆಕ್ಷೇಪಕ್ಕೆ ಗುರಿಯಾಗಿದ್ದ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವ ಪ್ರಕ್ರಿಯೆ ಸಂಸತ್ತಿನ ಚಳಿಗಾಲ ಅಧಿವೇಶನದಲ್ಲಿ ಪೂರ್ಣಗೊಳ್ಳಲಿದೆ. ಕರ್ನಾಟಕ ಸರ್ಕಾರವು ಕಾಯ್ದೆ ಹಿಂಪಡೆಯಲು ಕೇಂದ್ರದ ಸೂಚನೆಗೆ ಕಾಯುತ್ತಿದೆ. ರೈತಮುಖಂಡರ ಪ್ರಮುಖ ಬೇಡಿಕೆ ಈಡೇರಿದ್ದು, ಅವರ ಹೋರಾಟ ಫಲ ನೀಡಿದೆ ಎನ್ನಬಹುದು. ಕನಿಷ್ಠ ಬೆಂಬಲ ಬೆಲೆ ಖಾತ್ರಿಗೊಳಿಸುವಂತೆ ಆಗ್ರಹಿಸಿ ಹೋರಾಟ ಮುಂದುವರಿಸಲು ರೈತ ಸಂಘಟನೆಗಳು ನಿರ್ಧರಿಸಿವೆ. ಈ ಎಲ್ಲ ಸ್ಥಿತ್ಯಂತರಗಳಲ್ಲಿ ರೈತರ ಹಿತ ಮತ್ತು ಕೃಷಿರಂಗದ ಸಮಗ್ರ ಸುಧಾರಣೆ ಗೌಣವಾಗಬಾರದು ಎಂಬ ವಾಸ್ತವವನ್ನು ಎಲ್ಲ ರಾಜಕೀಯ ಪಕ್ಷಗಳು, ಹೋರಾಟಗಾರರು ಮನಗಾಣಬೇಕು.