

ಅಂತರ್ಜಲವನ್ನು ಹಿಡಿದಿಟ್ಟುಕೊಂಡು ಅದನ್ನು ವೃದ್ಧಿಸುವಲ್ಲಿ ಮತ್ತು ಪರಿಸರ ಸಮತೋಲನ ಕಾಪಾಡುವಲ್ಲಿ ಕೆರೆಗಳ ಪಾತ್ರ ಮಹತ್ವದ್ದು ಎಂಬುದು ಗೊತ್ತಿರುವಂಥದೇ. ಹಿಂದೆ ರಾಜಾಡಳಿತದ ಕಾಲದಲ್ಲಿ ಸಹ ಕೆರೆಗಳ ನಿರ್ಮಾಣ ಮತ್ತು ಸಂರಕ್ಷಣೆಗೆ ಒತ್ತು ನೀಡಲಾಗಿತ್ತು. ಆಯಾ ಭಾಗದ ನೀರಾವರಿ ವಿಚಾರದಲ್ಲಿಯೂ ಕೆರೆಗಳು ತಮ್ಮದೇ ಆದ ಪಾತ್ರ ನಿರ್ವಹಿಸುತ್ತವೆ. ಆದರೆ ಕಾಲಕ್ರಮೇಣ ಬೇರೆಬೇರೆ ಕಾರಣಗಳಿಂದಾಗಿ ಕೆರೆಗಳ ಒತ್ತುವರಿ ನಡೆದ ಪರಿಣಾಮ ಹಾಗೂ ನಿರ್ಲಕ್ಷ್ಯದ ಕಾರಣ ಎಷ್ಟೋ ಕೆರೆಗಳು ಮೂಲಸ್ವರೂಪವನ್ನೇ ಕಳೆದುಕೊಂಡು ನಿರುಪಯುಕ್ತವಾಗಿವೆ. ಇದರಿಂದ ಮಾನವ ಮತ್ತು ನಿಸರ್ಗ ಇಬ್ಬರಿಗೂ ಅಪಾರ ಹಾನಿಯಾಗಿದೆ. ಈ ಹಿನ್ನೆಲೆಯಲ್ಲಿ, ಕೆರೆಗಳ ರಕ್ಷಣೆ ವಿಚಾರದಲ್ಲಿ ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶಗಳನ್ನು ಹೊರಡಿಸುತ್ತಿರುವುದು ಗಮನಾರ್ಹ. ಕೆರೆ ಮತ್ತು ಕೆರೆ ಅಂಗಳದ ಮರಗಳನ್ನು ಕಡಿಯಲು ಸರ್ಕಾರದ ಅನುಮತಿ ಕಡ್ಡಾಯ ಎಂದು ಉಚ್ಚ ನ್ಯಾಯಾಲಯ ಸೋಮವಾರ ಸ್ಪಷ್ಟಪಡಿಸಿದೆ.
ಕೆರೆಗಳ ನಿರ್ವಹಣೆಯನ್ನು ಆಯಾ ಗ್ರಾಮ ಪಂಚಾಯಿತಿಗಳಿಗೆ ವಹಿಸಿದ್ದರೂ ಮಾಲೀಕತ್ವ ಸರ್ಕಾರದ ಬಳಿಯೇ ಇರುತ್ತದೆ. ಹೀಗಾಗಿ ಮರಗಳನ್ನು ಕಡಿಯುವ ಅಧಿಕಾರ ಗ್ರಾಪಂಗಳಿಗೆ ಇರುವುದಿಲ್ಲ. ಈ ಕುರಿತು ಸರ್ಕಾರ ಸುತ್ತೋಲೆ ಹೊರಡಿಸಬೇಕು ಎಂದು ನ್ಯಾಯಾಲಯ ಸೂಚಿಸಿದೆ. ಇದರಿಂದ, ಯಾವುದೋ ನೆಪದಲ್ಲಿ ಮರ ಕಡಿಯುವ ಉದ್ದೇಶಕ್ಕೆ ಲಗಾಮು ಹಾಕಲು ಅನುವಾಗುತ್ತದೆ. ರಾಜ್ಯದ ಎಲ್ಲ ಸರ್ಕಾರಿ ಕೆರೆಗಳ ಸಮೀಕ್ಷಾ ಕಾರ್ಯವನ್ನು ಪುನರಾರಂಭಿಸುವಂತೆ ಉಚ್ಚ ನ್ಯಾಯಾಲಯ ಕೆಲ ದಿನಗಳ ಹಿಂದೆ ಸೂಚನೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು. ಕೆರೆ ಜತೆಗೆ ಸುತ್ತಲಿನ 30 ಮೀಟರ್ ಬಫರ್ ವಲಯದ ಸಮೀಕ್ಷೆಯನ್ನೂ ನಡೆಸಬೇಕು ಎಂದು ಸರ್ಕಾರ, ಕರ್ನಾಟಕ ಕೆರೆ ಸಂರಕ್ಷಣಾ ಪ್ರಾಧಿಕಾರ ಮತ್ತು ಎಲ್ಲ ಜಿಲ್ಲಾಧಿಕಾರಿಗಳಿಗೆ ನ್ಯಾಯಾಲಯ ನಿರ್ದೇಶಿಸಿದೆ. ಕೆರೆ ಒತ್ತುವರಿಯಾಗಿದ್ದರೆ ಅದನ್ನು ತೆರವುಗೊಳಿಸುವಂತೆಯೂ ಕೋರ್ಟ್ ಸೂಚಿಸಿದೆ. ರಾಜ್ಯದಲ್ಲಿ ಸರ್ಕಾರದ ವ್ಯಾಪ್ತಿಯಲ್ಲಿ ಸುಮಾರು 39 ಸಾವಿರ ಕೆರೆಗಳಿವೆ ಎಂದು ಅಂದಾಜಿಸಲಾಗಿದೆ. ಈ ಪೈಕಿ 5 ಸಾವಿರ ಕೆರೆಗಳು ಕಣ್ಮರೆಯಾಗಿವೆ ಎನ್ನಲಾಗಿದೆ. ಉಳಿದ ಕೆರೆಗಳಲ್ಲಿ ಸಹ ಅನೇಕ ಕಡೆ ಅತಿಕ್ರಮಣಗಳಾಗಿವೆ. ಹೀಗಾಗಿ, ಈಗ ಉಳಿದಿರುವ ಕೆರೆಗಳೆಷ್ಟು, ಅವುಗಳ ವ್ಯಾಪ್ತಿ ಎಷ್ಟು ಎಂಬ ಸರಿಯಾದ ಮಾಹಿತಿ ಲಭ್ಯವಿಲ್ಲ.
‘ಈವರೆಗೆ 17 ಸಾವಿರ ಕೆರೆಗಳ ಸಮೀಕ್ಷೆ ನಡೆಸಲಾಗಿದೆ. ಕರೊನಾ ಕಾರಣಕ್ಕೆ ಉಳಿದವುಗಳ ಸರ್ವೆ ಕಾರ್ಯ ಸ್ಥಗಿತಗೊಂಡಿತ್ತು. ಈಗ ಸಮೀಕ್ಷೆ ಪುನರಾರಂಭಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ’ಎಂದು ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿದೆ. ಸರ್ಕಾರವು ನ್ಯಾಯಾಲಯದ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ, ಕೆರೆಗಳ ಸಂರಕ್ಷಣೆಯಲ್ಲಿ ದೊಡ್ಡ ಹೆಜ್ಜೆ ಇಡಬೇಕು. ಅನೇಕ ಕೆರೆಗಳಲ್ಲಿ ಹೂಳು ತುಂಬಿರುವುದು ಮತ್ತೊಂದು ಮುಖ್ಯ ಸಮಸ್ಯೆ. ಇದರಿಂದಾಗಿ, ಕೆರೆಪಾತ್ರ ದೊಡ್ಡದಿದ್ದರೂ ತನ್ನ ಸಾಮರ್ಥ್ಯದಷ್ಟು ನೀರನ್ನು ಹಿಡಿದಿಟ್ಟುಕೊಳ್ಳಲು ಆಗುತ್ತಿಲ್ಲ. ಹೀಗಾಗಿ, ಕೆರೆಗಳ ಹೂಳೆತ್ತುವ ಕಡೆಗೂ ಗಮನ ನೀಡಬೇಕಾಗುತ್ತದೆ. ಇದಲ್ಲದೆ, ಅನೇಕ ಕೆರೆಗಳು ಮಲಿನಗೊಂಡಿವೆ. ನಮ್ಮಲ್ಲಿ ಈಗ ಇರುವ ಕೆರೆಗಳನ್ನು ಸರಿಯಾಗಿ ಬಳಸಿಕೊಂಡಲ್ಲಿ, ಜಲಸಂಬಂಧಿ ಅನೇಕ ಸಮಸ್ಯೆಗಳು ಬಗೆಹರಿಯುತ್ತವೆ. ಇಂಥದೊಂದು ಇಚ್ಛಾಶಕ್ತಿಯನ್ನು ಸರ್ಕಾರಗಳು ಪ್ರದರ್ಶಿಸಬೇಕಷ್ಟೆ.