ತೆರಿಗೆ ಹೊರೆ ತಗ್ಗಿಸಿ; ಜನರ ಆರ್ಥಿಕ ಸ್ಥಿತಿಗತಿ ಗಮನಿಸಲಿ..

Editorial
Published on

ಕೆಲವು ಹೊಸ ವಸ್ತುಗಳನ್ನು ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ವ್ಯಾಪ್ತಿಗೆ ತಂದು ತೆರಿಗೆ ವಿಧಿಸಿರುವುದಕ್ಕೆ ಲೋಕಸಭೆಯಲ್ಲಿ ವಿರೋಧ ಪಕ್ಷಗಳು ಮಂಗಳವಾರ ಪ್ರತಿಭಟನೆ ನಡೆಸಿದ್ದರಿಂದ ಸದನ ಕಲಾಪಗಳನ್ನು ಮುಂದೂಡುವಂತಾಯಿತು. ಧಾನ್ಯ, ಅಕ್ಕಿ, ಹಿಟ್ಟು, ಮೊಸರು ಮುಂತಾದ ಪ್ಯಾಕ್ ಮಾಡಿದ ಆಹಾರ ಪದಾರ್ಥಗಳಿಗೆ ಮಾತ್ರ ಶೇ. 5ರಷ್ಟು ಜಿಎಸ್​ಟಿ ವಿಧಿಸಲಾಗುತ್ತಿದೆ; ಬಿಜೆಪಿಯೇತರ ರಾಜ್ಯ ಸರ್ಕಾರಗಳೂ ಪಾಲ್ಗೊಂಡಿದ್ದ ಕಳೆದ ತಿಂಗಳ ಜಿಎಸ್​ಟಿ ಮಂಡಳಿ ಸಭೆಯಲ್ಲಿ ಕೈಗೊಂಡ ಅವಿರೋಧ ನಿರ್ಣಯದ ಅನುಸಾರ ತೆರಿಗೆ ವಿಧಿಸಲಾಗುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಮರ್ಥನೆ ಮಾಡಿಕೊಂಡಿದ್ದಾರಾದರೂ ಜನರು ಅದನ್ನು ಒಪು್ಪವ ಸ್ಥಿತಿಯಲ್ಲಿಲ್ಲ. ಕಳೆದ ತಿಂಗಳಾಂತ್ಯದಲ್ಲಿ ಚಂಡೀಗಢದಲ್ಲಿ ಜರುಗಿದ ಜಿಎಸ್​ಟಿ ಮಂಡಳಿಯ 47ನೇ ಸಭೆಯಲ್ಲಿ ಹಲವು ಸರಕುಗಳ ತೆರಿಗೆ ದರ ಹೆಚ್ಚಿಸಲು ಹಾಗೂ ಒಂದಿಷ್ಟು ವಸ್ತುಗಳಿಗೆ ತೆರಿಗೆ ಕಡಿತಗೊಳಿಸಲು ಅನುಮೋದನೆ ನೀಡಲಾಗಿತ್ತು. ಪರಿಷ್ಕೃತ ಜಿಎಸ್​ಟಿ ದರವನ್ನು ಜುಲೈ 18ರಿಂದ ಜಾರಿಗೆ ತಂದಿರುವುದರಿಂದ ಈಗ ಈ ಹೊರೆಯನ್ನು ಸಾರ್ವಜನಿಕರು ಅನುಭವಿಸುವಂತಾಗಿದೆ. ಈ ಏರಿಕೆಗೆ ವ್ಯಾಪಕ ವಿರೋಧ ಮತ್ತು ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ, ಪ್ಯಾಕ್ ಮಾಡಿದ ಆಹಾರ ಧಾನ್ಯಗಳು, 25 ಕೆಜಿಗಿಂತ ಅಧಿಕ ತೂಕದ, ಬ್ರಾ್ಯಂಡೆಡ್ ಅಲ್ಲದ ಪ್ಯಾಕ್ ಮಾಡಿದ ಆಹಾರ ಪದಾರ್ಥಗಳಿಗೆ ಶೇ. 5ರ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಆದರೆ, ಇದು ಕಣ್ಣೊರೆಸುವ ತಂತ್ರ ಎಂಬಂತೆ ಗೋಚರಿಸುತ್ತದೆ.

ಮುದ್ರಣ- ಬರೆಯುವ ಶಾಯಿ, ಚಾಕು, ಚಮಚ, ನೀರೆತ್ತುವ ಪಂಪ್ ಮುಂತಾದವುಗಳ ತೆರಿಗೆ ದರವನ್ನು ಶೇ. 12 ರಿಂದ 18ಕ್ಕೆ ಹೆಚ್ಚಿಸಲಾಗಿದೆ. ಆಹಾರ ಧಾನ್ಯಗಳನ್ನು ಶುಚಿಗೊಳಿಸುವ ಯಂತ್ರಗಳು, ಧಾನ್ಯಗಳನ್ನು ಸಂಸ್ಕರಿಸುವ ಗಿರಣಿಗಳ ಯಂತ್ರಗಳು, ವೆಟ್ ಗ್ರೖೆಂಡರ್ ತೆರಿಗೆಗಳನ್ನು ಶೇ. 5ರಿಂದ 18ಕ್ಕೆ ಏರಿಸಲಾಗಿದೆ. ಕೃಷಿ ಉತ್ಪನ್ನ, ಮೊಟ್ಟೆ, ಹಣ್ಣು ಶುಚಿಗೊಳಿಸುವ ಯಂತ್ರಗಳು, ಡೈರಿ ಯಂತ್ರಗಳು ಮುಂತಾದವುಗಳ ದರವನ್ನು ಶೇ. 12 ರಿಂದ 18ಕ್ಕೆ ಹೆಚ್ಚಳ ಮಾಡಲಾಗಿದೆ. ಈ ಸಾಮಗ್ರಿಗಳ ತೆರಿಗೆ ಹೆಚ್ಚಳವು ಅಗತ್ಯ ಆಹಾರ ಧಾನ್ಯಗಳ ಬೆಲೆ ಹೆಚ್ಚಳಕ್ಕೆ ಕಾರಣಗಬಹುದಾಗಿದೆ. ರಸ್ತೆ, ಸೇತುವೆ, ರೈಲ್ವೆ, ಮೆಟ್ರೊ ಮುಂತಾದ ಸೇವೆಗಳ ದರವನ್ನು ಶೇ. 12ರಿಂದ 18ಕ್ಕೆ ಹೆಚ್ಚಿಸಿರುವುದು ಮೂಲಸೌಕರ್ಯ ಕ್ಷೇತ್ರಕ್ಕೆ ಹೊರೆಯಾಗಲಿದೆ. ಸಗಟು ಬೆಲೆ ಸೂಚಿಸುವ ಹಣದುಬ್ಬರ ದರವು 2021-22ನೇ ಹಣಕಾಸು ವರ್ಷದಲ್ಲಿ ಶೇ. 12.69 ಏರಿಕೆ ಕಂಡಿದ್ದು, ಕಳೆದ 30 ವರ್ಷಗಳಲ್ಲಿ ಹೆಚ್ಚಿನ ಪ್ರಮಾಣದ್ದಾಗಿದೆ. ಉತ್ಪಾದನೆ, ಪೂರೈಕೆ ಹಾಗೂ ತೆರಿಗೆ ದರ ಬದಲಾವಣೆಯಿಂದ ಹಣದುಬ್ಬರವು ಏರಿಳಿತ ಕಾಣುತ್ತದೆ. ಈಗ ತೆರಿಗೆ ದರವನ್ನು ಹೆಚ್ಚಿಸುವುದರ ಅರ್ಥ ಮತ್ತಷ್ಟು ಹಣದುಬ್ಬರ ಹೆಚ್ಚಳ ಎಂದೇ ಆಗಿದೆ. ಎರಡು ವರ್ಷಗಳಿಗೂ ಅಧಿಕ ಕಾಲ ಕಾಡಿದ ಕೋವಿಡ್ ಮಹಾಮಾರಿ ಹಾಗೂ ರಷ್ಯಾ-ಯೂಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳ ಬೆಲೆ ಈಗಾಗಲೇ ಹೆಚ್ಚಳವಾಗಿರುವುದು ಸಾರ್ವಜನಿಕರನ್ನು ಸಂಕಷ್ಟಕ್ಕೆ ನೂಕಿದೆ.

ಕೋವಿಡ್ ಸಾಂಕ್ರಾಮಿಕದಿಂದಾಗಿ ಉದ್ಯೋಗ ನಷ್ಟ, ಸಂಬಳ ಕಡಿತ, ವ್ಯಾಪಾರ ಕುಂಠಿತದಂತಹ ಆರ್ಥಿಕ ತೊಂದರೆಯನ್ನು ಅನುಭವಿಸಿರುವ ಜನರು ಈಗಷ್ಟೇ ಸ್ವಲ್ಪ ಉಸಿರಾಡತೊಡಗಿದ್ದಾರೆ. ಆದರೆ, ಇದೇ ವೇಳೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಆರ್ಥಿಕ ಸ್ಥಿತಿಗತಿ ಸುಧಾರಿಸಿದೆ ಎಂಬುದನ್ನು ಜಿಎಸ್​ಟಿ ಸಂಗ್ರಹವೇ ಸೂಚಿಸುತ್ತದೆ. ಕಳೆದ ಏಪ್ರಿಲ್ ತಿಂಗಳಲ್ಲಿ ಅತಿಹೆಚ್ಚು ಜಿಎಸ್​ಟಿ 1,67,540 ಕೋಟಿ ರೂಪಾಯಿ ಸಂಗ್ರಹವಾಗಿ ದಾಖಲೆ ನಿರ್ವಿುಸಿತ್ತು. ಅಲ್ಲದೆ, ಕಳೆದ ಜೂನ್ ತಿಂಗಳಲ್ಲಿ ಎರಡನೇ ಅತಿಹೆಚ್ಚು ಪ್ರಮಾಣ 1,56,000 ಕೋಟಿ ರೂಪಾಯಿ ಸಂಗ್ರಹವಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಇದು ಶೇ. 56ರಷ್ಟು ಹೆಚ್ಚಳವಾಗಿದೆ. ಪರಿಸ್ಥಿತಿ ಹೀಗಿರುವಾಗ ಮತ್ತಷ್ಟು ಬೆಲೆ ಏರಿಕೆಗೆ ಕಾರಣವಾಗುವ ಜಿಎಸ್​ಟಿ ಹೊರೆಯನ್ನು ಭರಿಸಲು ಜನರು ತಯಾರಾಗಿಲ್ಲ ಎಂಬುದು ಸ್ಪಷ್ಟ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net