ಮುನ್ನೆಚ್ಚರಿಕೆ ಕ್ರಮ ಮರೆಯುವಂತಿಲ್ಲ; ಲಾಕ್​ಡೌನ್ ಸ್ಥಿತಿ ಮತ್ತೆ ಬಾರದಿರಲಿ

Editorial
Published on

ಕರೊನಾ ಸೋಂಕಿನ ಮೂರನೇ ಅಲೆ ತೀವ್ರ ಪ್ರಮಾಣದಲ್ಲಿ ಹರಡುತ್ತಿದ್ದು, ದಿನದಿಂದ ದಿನಕ್ಕೆ ಪ್ರಕರಣಗಳ ಸಂಖ್ಯೆ ಏರಿಕೆ ಕಾಣುತ್ತಿದೆ. ಈ ಬಾರಿ ಸಾವುನೋವಿನ ಪ್ರಮಾಣ ಮತ್ತು ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕಡಿಮೆ ಇದೆ ಎಂಬುದು ಸಮಾಧಾನದ ಸಂಗತಿ. ಆದರೂ, ಸೋಂಕು ಪ್ರಸರಣ ವೇಗ ಪಡೆದುಕೊಂಡಿರುವುದರಿಂದ ಮೈಮರೆಯುವಂತಿಲ್ಲ. ರಾಜ್ಯದಲ್ಲಿ ಕಳೆದ 19 ದಿನಗಳಲ್ಲೇ 1 ರಿಂದ 18 ವರ್ಷ ವಯಸ್ಸಿನ 43 ಸಾವಿರ ಮಕ್ಕಳಿಗೆ ಕರೊನಾ ಸೋಂಕು ದೃಢಪಟ್ಟಿರುವುದು ಪರಿಸ್ಥಿತಿಯ ತೀವ್ರತೆಗೆ ಸಾಕ್ಷಿ. ಮಕ್ಕಳಲ್ಲಿ ಸೋಂಕು ಪ್ರಮಾಣ ಶೇಕಡ 5.69 ಇದೆ. 19 ವರ್ಷ ಮೇಲ್ಪಟ್ಟ 2.80 ಲಕ್ಷ ಜನರಲ್ಲಿ ಸೋಂಕು ದೃಢಗೊಂಡಿದ್ದು, ಪ್ರಮಾಣ ಶೇ.13ರಷ್ಟಿದೆ. ಕರ್ನಾಟಕದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 2.50 ಲಕ್ಷ ಮೀರಿದ್ದರೆ, ದೇಶದಲ್ಲಿ ಈ ಸಂಖ್ಯೆ 18 ಲಕ್ಷದ ಗಡಿ ದಾಟಿದೆ. ಈ ಬಾರಿಯ ಸೋಂಕು ಲಕ್ಷಣಗಳು ಎರಡನೇ ಅಲೆಗಿಂತ ಸ್ವಲ್ಪ ಭಿನ್ನವಾಗಿದ್ದು, ಜನರು ಕರೊನಾ ಪರೀಕ್ಷೆ ಮಾಡಿಸಿಕೊಳ್ಳದೆ ಸ್ವಯಂಚಿಕಿತ್ಸೆಗೆ ಮುಂದಾಗುತ್ತಿರುವುದು ಕಳವಳದ ಸಂಗತಿಯೇ.

ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಪರಿಣಾಮ ರಾಜ್ಯದಲ್ಲಿ ಸರ್ಕಾರ ರಾತ್ರಿ ಕರ್ಫ್ಯೂ ಮತ್ತು ವಾರಾಂತ್ಯ ಕರ್ಫ್ಯೂ ವಿಧಿಸಿದೆಯಾದರೂ, ಇದಕ್ಕೆ ವಿರೋಧವೂ ತೀವ್ರವಾಗುತ್ತಿದೆ. ಸಂಪುಟದಲ್ಲಿನ ಕೆಲ ಸಚಿವರು, ಆಡಳಿತಾರೂಢ ಪಕ್ಷದ ಸಂಸದರು, ಶಾಸಕರು ಬಹಿರಂಗವಾಗಿಯೇ ವಾರಾಂತ್ಯ ಕರ್ಫ್ಯೂವನ್ನು ವಿರೋಧಿಸಿದ್ದಾರೆ. ಆರ್ಥಿಕ ಚಟುವಟಿಕೆಗಳಿಗೆ ಪೆಟ್ಟು ಬೀಳುತ್ತಿರುವುದರಿಂದ ಉದ್ಯಮ ವಲಯ ಮತ್ತು ಜನಸಾಮಾನ್ಯರು ಕೂಡ ಕಠಿಣ ನಿರ್ಬಂಧಗಳನ್ನು ಹಿಂಪಡೆಯುವಂತೆ ಆಗ್ರಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ‘ಸೋಂಕು ನಿಯಂತ್ರಣಕ್ಕಾಗಿ ಜಾರಿಗೊಳಿಸಿರುವ ನಿರ್ಬಂಧಗಳನ್ನು ಶುಕ್ರವಾರ ಮರು ಪರಿಶೀಲಿಸಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಫೆಬ್ರವರಿ ಮೊದಲ ವಾರದಲ್ಲಿ ಸೋಂಕು ಪ್ರಕರಣಗಳು ಏರುಗತಿ ಕಾಣಬಹುದು ಎಂದು ತಜ್ಞರು ಅಂದಾಜಿಸಿರುವುದರಿಂದ ಸರ್ಕಾರ ಇಕ್ಕಟ್ಟಿನಲ್ಲಿ ಸಿಲುಕಿದೆ. ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ನಡೆಸಿದ ಸಭೆಯಲ್ಲಿ, ‘ಕರೊನಾ ನಿಯಂತ್ರಿಸಲು ಕೈಗೊಳ್ಳುವ ಕಠಿಣ ಕ್ರಮಗಳು ಜನರ ಜೀವನ ಮತ್ತು ಆರ್ಥಿಕತೆಗೆ ಬಾಧಿತವಾಗಬಾರದು’ ಎಂದು ಹೇಳಿದ್ದಾರೆ. ಅಂದರೆ, ಜೀವವೂ ಉಳಿಯಬೇಕು, ಜೀವನವೂ ಸಾಗಬೇಕು ಎಂಬ ನೀತಿ ಅನಿವಾರ್ಯವಾಗಿದೆ.

ಪ್ರಕರಣಗಳ ಸಂಖ್ಯೆ ತಗ್ಗಿದ್ದರೆ ನಿರ್ಬಂಧಗಳನ್ನು ಸಡಿಲಿಸಲು ಚಿಂತನೆ ನಡೆಸಬಹುದಿತ್ತು. ಆದರೆ, ಕರ್ನಾಟಕದಲ್ಲಿ ದೈನಂದಿನ ಪ್ರಕರಣಗಳ ಸಂಖ್ಯೆ 40 ಸಾವಿರ ಮೀರಿದೆ. ಹೀಗಿರುವಾಗ ಮುನ್ನೆಚ್ಚರಿಕೆಯ ಕ್ರಮಗಳನ್ನು ಚಾಚೂ ತಪ್ಪದೆ ಪಾಲಿಸಬೇಕಿದೆ. ಒಂದು ವೇಳೆ ಈ ಹಂತದಲ್ಲಿ ನಿರ್ಲಕ್ಷ್ಯ ವಹಿಸಿ, ಮುಂದೆ ಪ್ರಕರಣಗಳ ಸಂಖ್ಯೆ ಮತ್ತಷ್ಟು ಹೆಚ್ಚಿ ಲಾಕ್​ಡೌನ್​ನಂಥ ಸ್ಥಿತಿ ಸೃಷ್ಟಿಯಾದರೆ ಅದಕ್ಕೆ ಯಾರು ಹೊಣೆ? ಮತ್ತೊಂದು ಲಾಕ್​ಡೌನ್​ನ್ನು ಸಹಿಸಿಕೊಳ್ಳುವ ಶಕ್ತಿ ಈಗ ಯಾವ ರಂಗಕ್ಕೂ ಇಲ್ಲ ಎಂಬ ವಾಸ್ತವ ಅರ್ಥಮಾಡಿಕೊಳ್ಳಬೇಕಿದೆ. ಹಾಗಾಗಿ, ಆ ಸ್ಥಿತಿ ಸೃಷ್ಟಿಯಾಗುವ ಮುನ್ನವೇ ಎಚ್ಚೆತ್ತುಕೊಂಡು ಸುರಕ್ಷತಾ ಕ್ರಮಗಳನ್ನು ಪರಿಣಾಮಕಾರಿಯಾಗಿ ಪಾಲಿಸಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net