ಚರ್ಚೆಯ ಸರಕಲ್ಲ: ಚೀನಾ ಗಡಿ ಸ್ಥಿತಿಗತಿ ಸೂಕ್ಷ್ಮ ವಿವೇಚನೆ ಅಗತ್ಯ

Editorial
Published on

ಭಾರತ- ಚೀನಾ ಗಡಿಯಲ್ಲಿನ ಸ್ಥಿತಿಗತಿ ಕುರಿತು ಚರ್ಚೆಗೆ ಆಗ್ರಹಿಸಿ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಸಿಪಿಎಂ, ಎನ್​ಸಿಪಿ, ಡಿಎಂಕೆ ಮುಂತಾದ ವಿರೋಧ ಪಕ್ಷಗಳು ಸಂಸತ್ತಿನ ಕಲಾಪಗಳಿಂದ ಸಭಾತ್ಯಾಗ ನಡೆಸುತ್ತಿರುವುದು ಹಾಗೂ ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಉನ್ನತ ನಾಯಕ ರಾಹುಲ್ ಗಾಂಧಿ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ಸಾರ್ವಜನಿಕವಾಗಿ ಸರ್ಕಾರವನ್ನು ಟೀಕಿಸುವ ರೀತಿಯು ಭಾರತದ ಸಾರ್ವಭೌಮತೆ ಹಾಗೂ ಜೀವವನ್ನೇ ಪಣಕ್ಕಿಟ್ಟು ಗಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸೈನಿಕರ ಮನೋಬಲ ಕಾಪಾಡುವ ದೃಷ್ಟಿಯಿಂದ ಸೂಕ್ತ ವರ್ತನೆಯಲ್ಲ ಎಂದೇ ಹೇಳಬೇಕಾಗುತ್ತದೆ.

ಕಾಂಗ್ರೆಸ್ ಅಧಿಕಾರದಲ್ಲಿದ್ದಾಗಲೇ ಹಾಗೂ ಜವಾಹರಲಾಲ್ ನೆಹರೂ ಅವರು ಪ್ರಧಾನಿಯಾಗಿದ್ದಾಗಲೇ 1962ರಲ್ಲಿ ಭಾರತದ ವಿರುದ್ಧ ಚೀನಾ ಯುದ್ಧ ನಡೆಸಿತ್ತು ಎಂಬುದನ್ನು ಭಾರತೀಯರು, ಅದರಲ್ಲೂ ಕಾಂಗ್ರೆಸ್ಸಿಗರು ಹೇಗೆ ಮರೆಯಲು ಸಾಧ್ಯ? ಮೆಕ್ ಮಹೊನ್ ಗಡಿ ರೇಖೆಯನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಆಕ್ಷೇಪಿಸಿಯೇ ಅಂದು ಭಾರತದ ಮೇಲೆ ಚೀನಾ ದಾಳಿ ನಡೆಸಿತ್ತು. ಈ ಕುರಿತಂತೆ ಈಗಲೂ ಅದರ ನಿಲುವಿನಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ಈ ಹಿಂದೆ ರಕ್ಷಣಾ ಸಚಿವರಾಗಿದ್ದ ಜಾರ್ಜ್ ಫರ್ನಾಂಡಿಸ್ ಅವರು ಭಾರತಕ್ಕೆ ನಂಬರ್ ಒನ್ ವಿರೋಧಿ ದೇಶವೆಂದರೆ ಚೀನಾ ಎಂದು ಬಹಿರಂಗವಾಗಿಯೇ ಪ್ರತಿಪಾದಿಸಿಕೊಂಡು ಬಂದಿದ್ದರು. 2017ರ ಜೂನ್​ನಲ್ಲಿ ಡೋಕ್ಲಾಮ್ ಗಡಿ ಪ್ರದೇಶದಲ್ಲಿ ಚೀನಾ ಸೈನಿಕರು ರಸ್ತೆ ನಿರ್ಮಾಣ ಸಾಮಗ್ರಿಗಳೊಂದಿಗೆ ರಸ್ತೆ ನಿರ್ವಿುಸಲು ಮುಂದಾದಾಗ ಭಾರತೀಯ ಸೈನಿಕರು ತಡೆದರು. 2020ರ ಜೂನ್ 15ರಂದು ಲಡಾಖ್​ನ ಗ್ಯಾಲ್ವಾನ್ ಕಣಿವೆಯಲ್ಲಿ ಚೀನಾ ಸೈನಿಕರು ಹಲ್ಲೆ ನಡೆಸಿದ್ದರಿಂದಾಗಿ ಭಾರತದ 20 ಸೈನಿಕರು ಸಾವನ್ನಪ್ಪಿದರು. ಭಾರತೀಯ ಸೈನಿಕರು ಪ್ರತಿ ದಾಳಿ ನಡೆಸಿದ್ದರಿಂದ ತನ್ನ 6 ಸೈನಿಕರು ಅಸು ನೀಗಿದ್ದಾರೆ ಎಂದು ಚೀನಾ ತಡವಾಗಿ ಒಪ್ಪಿಕೊಂಡಿತು. ಇದೇ ತಿಂಗಳ 9ರಂದು ತವಾಂಗ್​ನಲ್ಲಿ ಎಲ್​ಎಸಿ ದಾಟಿ ನುಗ್ಗಲು ಚೀನಾ ಸೈನಿಕರು ಪ್ರಯತ್ನಿಸಿದ್ದನ್ನು ಭಾರತೀಯ ಸೈನಿಕರು ತಡೆದರು. ಚೀನಾ ಹೇಗೆ ವರ್ತಿಸುತ್ತಿದೆ ಎಂಬುದಕ್ಕೆ ಹಲವಾರು ದಶಕಗಳ ಇತಿಹಾಸ ಹಾಗೂ ಇತ್ತೀಚಿನ ಇಂತಹ ಘಟನೆಗಳೇ ಕಣ್ಮುಂದೆ ಇದೆ.

ಹೀಗಿರುವಾಗ, ಚೀನಾ ಯುದ್ಧಕ್ಕೆ ತಯಾರಿ ನಡೆಸುತ್ತಿದೆ ಎಂಬ ಸಂಗತಿಯನ್ನು ವಿರೋಧ ಪಕ್ಷಗಳಿಂದ ತಿಳಿದುಕೊಳ್ಳಬೇಕೆ? ಗಡಿಯಲ್ಲಿ ಕಣ್ಗಾವಲು ಇರುವ ನಮ್ಮ ರಕ್ಷಣಾ ಪಡೆಗಳಿಗೆ ಇದರ ಬಗ್ಗೆ ಗೊತ್ತೇ ಇಲ್ಲವೇ? ಚೀನಾ ಯುಧ್ಧ ತಯಾರಿ ನಡೆಸುತ್ತಿದ್ದರೆ ಭಾರತ ಸರ್ಕಾರ ನಿದ್ರಿಸುತ್ತಿದೆ ಎಂದು ರಾಹುಲ್ ಗಾಂಧಿ ಹೇಳಿದ್ದು, ಅದು ನಮ್ಮ ರಕ್ಷಣಾ ಪಡೆಗಳೇ ನಿದ್ರಿಸುತ್ತಿವೆ ಎಂಬರ್ಥವನ್ನೇ ಸೂಚಿಸುತ್ತವೆಯಲ್ಲವೇ? ಚೀನಾ ಸೈನಿಕರು ನಮ್ಮ ಸೈನಿಕರನ್ನು ಹಿಡಿದು ಹೊಡೆದಿದ್ದಾರೆ ಎಂದೂ ಅವರು ಹೇಳಿರುವುದು ತಮ್ಮ ಜೀವವನ್ನೇ ಪಣಕ್ಕಿಟ್ಟು ಗಡಿ ಕಾಯುವ ಯೋಧರ ಮನೋಸ್ಥೈರ್ಯ ಕುಂದಿಸಲು ಕಾರಣವಾಗಬಹುದಲ್ಲವೇ? ವಿರೋಧ ಪಕ್ಷಗಳ ವರ್ತನೆ ಕುರಿತಂತೆ ಇಂತಹ ಪ್ರಶ್ನೆಗಳು ಹಾಗೂ ತಕರಾರುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ. ರಹಸ್ಯವಾಗಿ ಇರಬೇಕಾದ ಮಿಲಿಟರಿ ಕಾರ್ಯಾಚರಣೆಗಳ ಬಗ್ಗೆ ಸಾರ್ವಜನಿಕವಾಗಿ ರ್ಚಚಿಸಬೇಕೇ ಎಂಬ ಪ್ರಶ್ನೆಗೆ ವಿರೋಧ ಪಕ್ಷಗಳೇ ಉತ್ತರಿಸಬೇಕು. ರಾಷ್ಟ್ರದ ಹಿತಾಸಕ್ತಿ ಕಾಪಾಡುವ ಸೂಕ್ಷ್ಮ ವಿಷಯದಲ್ಲಿ ಜವಾಬ್ದಾರಿಯಿಂದ ವರ್ತಿಸುವ ಹೊಣೆಗಾರಿಕೆಯು ಆಡಳಿತ ಹಾಗೂ ವಿರೋಧ ಪಕ್ಷಗಳೆರಡಕ್ಕೂ ಇದೆ. ಆಡಳಿತಾರೂಢ ಬಿಜೆಪಿ ಕೂಡ ಈ ವಿಷಯದಲ್ಲಿ ವಿರೋಧ ಪಕ್ಷಗಳ ಪ್ರಮುಖ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯುವ ಅಗತ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net