

ಆರೋಗ್ಯ ಕ್ಷೇತ್ರವನ್ನು ಬಲಗೊಳಿಸದಿದ್ದರೆ ಎಷ್ಟೆಲ್ಲ ಸಮಸ್ಯೆ ಎದುರಿಸಬೇಕಾಗುತ್ತದೆ ಹಾಗೂ ಅದು ವ್ಯವಸ್ಥೆಯ ವೈಫಲ್ಯಕ್ಕೂ ಹೇಗೆ ಕಾರಣವಾಗುತ್ತದೆ ಎಂಬುದನ್ನು ಕರೊನಾ ಸೋಂಕಿನ ಎರಡನೇ ಅಲೆಯ ಹಾವಳಿ ಪಾಠ ಕಲಿಸಿತು. ಅದರಲ್ಲೂ, ಗ್ರಾಮೀಣ ಭಾಗದಲ್ಲಿ ಇತ್ತೀಚಿನ ದಿನಗಳಲ್ಲಿ ಚಿಕಿತ್ಸೆಯ ಕೆಲ ಸವಲತ್ತುಗಳು ದೊರೆಯುತ್ತಿದ್ದರೂ, ಸುಧಾರಣೆಯ ಹಾದಿಯಲ್ಲಿ ತುಂಬ ದೂರ ಕ್ರಮಿಸಬೇಕಿದೆ. ಸರಿಯಾದ ಮೂಲಸೌಕರ್ಯ, ಚಿಕಿತ್ಸಾ ಉಪಕರಣ ಮತ್ತು ಸಂಬಂಧಿತ ಸಿಬ್ಬಂದಿಯನ್ನು ಒದಗಿಸದೆ ಆರೋಗ್ಯ ರಂಗದ ಸವಾಲುಗಳನ್ನು ಗೆಲ್ಲಲು ಸಾಧ್ಯವಿಲ್ಲ. ಕರೊನಾ ಕಾಲದ ವೈದ್ಯಕೀಯ ಅಗತ್ಯತೆಗಳು ಕೂಡ ಭಿನ್ನವಾಗಿವೆ. ಸೋಂಕಿನ ಮೊದಲನೇ ಅಲೆ ಕಾಣಿಸಿಕೊಂಡಾಗ ಪಿಪಿಇ ಕಿಟ್, ಮುಖಗವಸುಗಳ ಬೇಡಿಕೆ ಹೆಚ್ಚಿತ್ತು ಮತ್ತು ಭಾರತ ಅತ್ಯಲ್ಪ ಅವಧಿಯಲ್ಲೇ ಈ ವಿಷಯದಲ್ಲಿ ಸ್ವಾವಲಂಬನೆ ಸಾಧಿಸಿತು. ಎರಡನೇ ಅಲೆಯ ಹೊತ್ತಲ್ಲಿ ವೈದ್ಯಕೀಯ ಆಮ್ಲಜನಕದ ಬೇಡಿಕೆ ಹೆಚ್ಚಾಗಿ, ರೋಗಿಗಳು ಪರದಾಡುವಂತಾಯಿತು. ಕರೊನಾ ಸೋಂಕು ಹಳ್ಳಿಗಳನ್ನು ಪ್ರವೇಶಿಸಿದಾಗಲಂತೂ ಪರಿಸ್ಥಿತಿ ಮತ್ತಷ್ಟು ಶೋಚನೀಯವಾಯಿತು. ಸಮೀಪದಲ್ಲೆಲ್ಲೂ ಚಿಕಿತ್ಸೆ ಸಿಗದೆ ಗ್ರಾಮೀಣ ನಿವಾಸಿಗಳು ಪರದಾಡಿದರು. ಕರೊನಾ ಮಾತ್ರವಲ್ಲದೆ ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಬಗೆಯ ಸವಾಲುಗಳನ್ನು ಎದುರಿಸಲು ಗ್ರಾಮೀಣ ಭಾಗವೂ ಸನ್ನದ್ಧವಾಗಬೇಕಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೆಲ ಮಹತ್ವದ ನಿರ್ಣಯಗಳನ್ನು ತಳೆದಿದೆ.
ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಲು ಈ ಹಿಂದೆಯೇ ತೀರ್ಮಾನ ಕೈಗೊಳ್ಳಲಾಗಿದ್ದು, ಅದು ಅನುಷ್ಠಾನದ ರೂಪಕ್ಕೆ ಬರಬೇಕಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ, ರಾಜ್ಯದ 2859 ಆರೋಗ್ಯ ಉಪಕೇಂದ್ರಗಳನ್ನು ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನಾಗಿ ಮೇಲ್ದರ್ಜೆಗೇರಿಸಲು ನಿರ್ಧರಿಸಲಾಗಿದೆ. ಈ ಯೋಜನೆಗಾಗಿ 478.91 ಕೋಟಿ ರೂಪಾಯಿ ವೆಚ್ಚವಾಗಲಿದೆ. ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳು ರೋಗಿಗಳ ಪ್ರಾಥಮಿಕ ಆರೈಕೆ, ಚಿಕಿತ್ಸೆಯ ಸೌಲಭ್ಯವನ್ನು ಒಳಗೊಳ್ಳಲಿವೆ. ತುರ್ತು ಸಂದರ್ಭಗಳನ್ನು ಎದುರಿಸಲು ಮತ್ತು ಪ್ರಮುಖ ಚಿಕಿತ್ಸೆಗಳನ್ನು ಹಳ್ಳಿಗಳಲ್ಲೇ ನೀಡುವಂತಾಗಲು ಆಧುನಿಕ ಆರೋಗ್ಯ ಉಪಕರಣಗಳನ್ನು ಈ ಕೇಂದ್ರಗಳು ಹೊಂದಿರಲಿವೆ. ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಉಪಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸುವುದರಿಂದ ಖಂಡಿತವಾಗಿಯೂ ಗ್ರಾಮೀಣ ಭಾಗದ ನಾಗರಿಕರಿಗೆ ಪ್ರಯೋಜನವಾಗಲಿದೆ. ಸಣ್ಣಪುಟ್ಟ ಆರೋಗ್ಯ ಸಮಸ್ಯೆಗೂ ತಾಲೂಕು, ಜಿಲ್ಲಾ ಕೇಂದ್ರಕ್ಕೆ ಪ್ರಯಾಣಿಸುವ, ಅದಕ್ಕಾಗಿ ಹೆಚ್ಚು ಸಮಯ ಮತ್ತು ಹಣವನ್ನು ವ್ಯಯಿಸುವ ಸಮಸ್ಯೆಯಿಂದಲೂ ಮುಕ್ತಿ ಸಿಗಲಿದೆ. ಆದರೆ, ಇಂಥ ಮಹತ್ವದ ಯೋಜನೆಗಳು ಪರಿಣಾಮಕಾರಿಯಾಗಿ ಜಾರಿಗೆ ಬರಬೇಕು. ಸದ್ಯದ ಸ್ಥಿತಿಯನ್ನು ಮಾತ್ರ ಗಮನದಲ್ಲಿ ಇರಿಸಿಕೊಳ್ಳದೆ ದೂರದೃಷ್ಟಿಯಿಂದ ಸೌಲಭ್ಯಗಳನ್ನು ಸ್ಥಾಪಿಸಬೇಕು. ಮುಖ್ಯವಾಗಿ, ಭ್ರಷ್ಟಾಚಾರ, ವಿಳಂಬನೀತಿ, ಸ್ವಜನಪಕ್ಷಪಾತದಂಥ ಅಪಸವ್ಯಗಳು ಯೋಜನೆಯ ಮೂಲೋದ್ದೇಶವನ್ನೇ ಹಾಳು ಮಾಡುವ ಅಪಾಯವಿರುತ್ತವೆ. ಹಾಗಾಗಿ, ಪಾರದರ್ಶಕತೆ, ಪ್ರಬಲ ಇಚ್ಛಾಶಕ್ತಿಯ ಬಲದಿಂದ ಇಂಥ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದಲ್ಲಿ ಆರೋಗ್ಯ ಕ್ಷೇತ್ರ ಬಲವಾಗುವುದರ ಜತೆಗೆ, ಗ್ರಾಮೀಣ ಭಾಗಕ್ಕೆ ಆರೋಗ್ಯ ಭಾಗ್ಯ ಲಭಿಸಿದಂತಾಗುತ್ತದೆ.