ಸಂಪಾದಕೀಯ | ಕಟ್ಟೆಚ್ಚರ ಇರಲಿ; ಶಾಂತಿ-ಸಹಬಾಳ್ವೆ ಅಗತ್ಯ..

Editorial
Published on

ಕಳೆದ ಕೆಲವು ದಿನಗಳಲ್ಲೇ ಕರ್ನಾಟಕ, ದೆಹಲಿ, ಆಂಧ್ರಪ್ರದೇಶ, ಕೇರಳ, ಮಹಾರಾಷ್ಟ್ರ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಅಹಿತಕರ ಘಟನೆಗಳು ನಡೆದಿರುವುದು ಕಳವಳದ ವಿಷಯ. ಅದರಲ್ಲೂ, ಹಬ್ಬ, ಉತ್ಸವಗಳ ಸಂದರ್ಭಗಳನ್ನೇ ಗುರಿಯಾಗಿಸಿಕೊಂಡು, ಶಾಂತಿ ಮತ್ತು ಸಾಮರಸ್ಯವನ್ನು ಕದಡುವ ಯತ್ನಗಳು ನಡೆದಿರುವುದು ವಿಪರ್ಯಾಸಕರ. ವಿವಿಧತೆಯಲ್ಲಿ ಏಕತೆಯ ತತ್ತ್ವವನ್ನು ನಂಬಿಕೊಂಡು, ಸಮೃದ್ಧ ಸಂಸ್ಕೃತಿಯ ಬಲದ ಮೇಲೆ ರೂಪಗೊಂಡಿರುವ ಜೀವನಧರ್ಮ ಇಲ್ಲಿಯದು. ಈ ಶಾಂತಿ ಮತ್ತು ಸಹಬಾಳ್ವೆಯನ್ನು ಹಾಳುಗೆಡವಲು ಯತ್ನಿಸುವ ಯಾವುದೇ ಶಕ್ತಿಗಳನ್ನು ಸಹಿಸಿಕೊಳ್ಳಬಾರದು. ಆಯಾ ರಾಜ್ಯ ಸರ್ಕಾರಗಳು ಇಂಥ ವಿಷಯದಲ್ಲಿ ರಾಜಕಾರಣ, ಮತಬ್ಯಾಂಕಿನ ಚಿಂತೆಯನ್ನು ಬದಿಗಿಟ್ಟು ನಿಷ್ಪಕ್ಷಪಾತ ಕ್ರಮ ಜರುಗಿಸಬೇಕು. ಅಲ್ಲದೆ, ಇಂಥ ಕೃತ್ಯಗಳಿಗೆ ಹಿಂದಿನಿಂದ ಬೆಂಬಲ, ಕುಮ್ಮಕ್ಕು ನೀಡುತ್ತಿರುವವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು. ಕೋಮು ಸೌಹಾರ್ದವೇ ನೆಮ್ಮದಿಯ ನಾಗರಿಕ ಜೀವನಕ್ಕೆ ಮೂಲಮಂತ್ರ. ಇಂಥ ವಿಷಯದಲ್ಲಿ ರಾಜಕೀಯ ಪಕ್ಷಗಳು ಮತ್ತು ವಿವಿಧ ಸಂಘಟನೆಗಳು ತುಂಬ ವಿವೇಕದಿಂದ, ಅಷ್ಟೇ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಪ್ರಚೋದನೆ ನೀಡುವಂಥ, ಶಾಂತಿಗೆ ಭಂಗ ತರುವಂಥ ಹೇಳಿಕೆಗಳನ್ನು ನೀಡಿ ವೈಮನಸ್ಸು, ದ್ವೇಷ ಹರಡಲು ಬಿಡಬಾರದು. ಕೋಮು ಸಂಘರ್ಷದ ಪರಿಣಾಮ ತುಂಬ ಭಯಾನಕವಾದದ್ದು. ಅದರಿಂದ ಇಡೀ ಸಮಾಜ ತಲ್ಲಣ ಅನುಭವಿಸಬೇಕಾಗುತ್ತದೆ. ಹೀಗಿರುವಾಗ ಇಂಥ ಘಟನೆಗಳನ್ನು ಆರಂಭಿಕ ಹಂತದಲ್ಲೇ ನಿಯಂತ್ರಣಕ್ಕೆ ತಂದು, ಮುಂದಿನ ದಿನಗಳಲ್ಲಿ ಇಂಥ ತಪು್ಪಗಳು ಮರುಕಳಿಸದಂತೆ ಎಲ್ಲ ಬಗೆಯ ಕಟ್ಟೆಚ್ಚರ ವಹಿಸಬೇಕು.

ಈ ಹಿನ್ನೆಲೆಯಲ್ಲಿ ಉತ್ತರಪ್ರದೇಶ ಸರ್ಕಾರ ಮಂಗಳವಾರ ಮಹತ್ವದ ಕೆಲ ನಿರ್ಣಯಗಳನ್ನು ಕೈಗೊಂಡಿದೆ. ಯಾವುದೇ ಶೋಭಾಯಾತ್ರೆ ಅಥವಾ ಧಾರ್ವಿುಕ ಮೆರವಣಿಗೆಯನ್ನು ಸರ್ಕಾರದ ಅನುಮತಿ ಇಲ್ಲದೆ ನಡೆಸುವಂತಿಲ್ಲ. ಶಾಂತಿ, ಸೌಹಾರ್ದ, ಕಾನೂನು ಸುವ್ಯವಸ್ಥೆಗೆ ಭಂಗ ತರುವುದಿಲ್ಲವೆಂದು ಇಂಥ ಮೆರವಣಿಗೆ/ಕಾರ್ಯಕ್ರಮದ ಆಯೋಜಕರು ಪ್ರಮಾಣಪತ್ರ ಸಲ್ಲಿಸುವುದು ಕಡ್ಡಾಯ. ಅಲ್ಲದೆ, ಪಾರಂಪರಿಕವಾಗಿ ನಡೆದುಕೊಂಡು ಬಂದಿರುವ ಮೆರವಣಿಗೆ ಅಥವಾ ಆಚರಣೆಗಳಿಗೆ ಅಷ್ಟೇ ಅನುಮತಿ ನೀಡಬೇಕೆ ಹೊರತು ಹೊಸದಾಗಿ ಪ್ರಾರಂಭಿಸುವ ಶೋಭಾಯಾತ್ರೆ, ಮೆರವಣಿಗೆಗಳಿಗೆ ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. ಇಂಥ ಕ್ರಮ ಮತ್ತು ನಿರ್ಧಾರಗಳು ಇತರೆಡೆಗಳಲ್ಲೂ ಅವಶ್ಯ. ಏಕೆಂದರೆ, ಇದು ಸಾಲು-ಸಾಲು ಹಬ್ಬಗಳ ಸಮಯ. ಜನರು ಸಂಭ್ರಮಿಸಿ, ಸದ್ವಿಚಾರಗಳನ್ನು ಅಳವಡಿಸಿಕೊಳ್ಳಬೇಕಾದ ಹೊತ್ತಲ್ಲೇ ಕೆಲ ಪಟ್ಟಭದ್ರ ಶಕ್ತಿಗಳು ಅಲ್ಲಲ್ಲಿ ಶಾಂತಿಗೆ ಭಂಗ ತರಲು ಯತ್ನಿಸುತ್ತಿದ್ದಾರೆ. ಅಂಥ ಸಂಚುಗಳು ವಿಫಲಗೊಳಿಸಬೇಕಾದರೆ ಆಯಾ ರಾಜ್ಯ ಸರ್ಕಾರಗಳು ಕಠಿಣ ಮತ್ತು ಕಟ್ಟುನಿಟ್ಟಿನ ನಿರ್ಧಾರಗಳನ್ನು ಕೈಗೊಳ್ಳಬೇಕು. ಸರ್ಕಾರದ ಅನುಮತಿ ಇಲ್ಲದೆಯೇ ಅನವಶ್ಯಕವಾಗಿ ಯಾವುದೇ ಧಾರ್ವಿುಕ ಆಚರಣೆಗಳು ನಡೆಸಲು ಆಸ್ಪದ ಕೊಡಬಾರದು.

ರಂಜಾನ್ ತಿಂಗಳು ನಡೆಯುತ್ತಿದೆ. ಕೆಲವೇ ದಿನಗಳಲ್ಲಿ ಅಕ್ಷಯ ತೃತೀಯಾ ಬರಲಿದೆ. ಗ್ರಾಮೀಣ ಕರ್ನಾಟಕದ ಬಗ್ಗೆ ಹೇಳುವುದಾದರೆ ದೊಡ್ಡ ಜಾತ್ರೋತ್ಸವಗಳು ನಡೆಯುತ್ತಿವೆ. ಇಲ್ಲೆಲ್ಲೂ ಸಮಾಜಘಾತಕ ಶಕ್ತಿಗಳು ನುಸುಳದಂತೆ ಎಚ್ಚರಿಕೆ ವಹಿಸಬೇಕು. ಸೌಹಾರ್ದ ಮತ್ತು ಸಾಮರಸ್ಯ ಕಾಯ್ದುಕೊಳ್ಳುವುದೇ ಆದ್ಯತೆಯಾಗಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net