

ಕರೊನಾ ಮೂರನೇ ಅಲೆ ಬರಬಹುದೇ? ಮಕ್ಕಳನ್ನು ಇದು ಹೆಚ್ಚು ಬಾಧಿಸಬಹುದೇ? ಎಂಬೆಲ್ಲ ಆತಂಕಗಳು ಜನರನ್ನು ಕಾಡುತ್ತಿರುವುದು ಸುಳ್ಳಲ್ಲ. ಕರೊನಾ ಮೊದಲ ಮತ್ತು ಎರಡನೆಯ ಅಲೆಗಳಿಂದ ಆಗಿರುವ ಅನಾಹುತದಿಂದ ಚೇತರಿಸಿಕೊಳ್ಳಲಿಕ್ಕೇ ಇನ್ನು ಎಷ್ಟು ದಿನಗಳು ಬೇಕೋ? ಇನ್ನು ಮೂರನೆಯ ಅಲೆ ಅಪ್ಪಳಿಸಿದರೆ ಹೇಗಪ್ಪಾ ಎಂಬ ಚಿಂತೆ ಜನರಲ್ಲಿ ಇದ್ದರೆ ಅದು ಸಹಜವೇ. ಏಕೆಂದರೆ ಜನಜೀವನದ ಮೇಲೆ ಅಷ್ಟು ದುಷ್ಪರಿಣಾಮ ಆಗಿದೆ. ಹೀಗಿರುವಾಗ ಸ್ವಲ್ಪ ಸಮಾಧಾನದ ಸುದ್ದಿಯೊಂದು ಬಂದಿದೆ. ಇತ್ತೀಚಿನ ದಿನಗಳಲ್ಲಿ ಕರೊನಾದ ಹೊಸ ರೂಪಾಂತರಿಗಳು ಪತ್ತೆಯಾಗಿಲ್ಲ. ಹೀಗಾಗಿ ಮೂರನೆಯ ಅಲೆಯ ಸಂಭವ ಕಡಿಮೆ. ಒಂದೊಮ್ಮೆ ಬಂದರೂ ಪ್ರಮಾಣ ಮೊದಲಿನಷ್ಟು ತೀವ್ರವಾಗಿರುವುದಿಲ್ಲ ಎಂದು ತಜ್ಞರು ಹೇಳಿದ್ದಾರೆ. ಕರೊನಾ ರೂಪಾಂತರಿಗಳ ಮೇಲೆ ತಜ್ಞರು ಸತತ ನಿಗಾ ಇರಿಸಿದ್ದು, ಹೊಸ ರೂಪಾಂತರಿಗಳು ಗೋಚರಿಸಿಲ್ಲ. ಇನ್ನೊಂದೆಡೆ, ಸೋಂಕು ಪ್ರಕರಣಗಳಲ್ಲಿ ತೀವ್ರ ಏರಿಕೆ ಕಂಡುಬಂದಿಲ್ಲ. ಒಂದು ಹಂತದಲ್ಲಿ ದೈನಂದಿನ ಸೋಂಕು ಪ್ರಮಾಣ ಏರಿಕೆಯಲ್ಲಿತ್ತು. ಈಗ ದೇಶಮಟ್ಟದಲ್ಲಿ ತೆಗೆದುಕೊಂಡರು ಸಹ ಆತಂಕಕಾರಿ ಎನ್ನುವ ಪ್ರಮಾಣದಲ್ಲಿ ಇಲ್ಲ. ನಿತ್ಯ ವರದಿಯಾಗುತ್ತಿರುವ ಪ್ರಕರಣ 20 ಸಾವಿರದ ಒಳಗೆ ಇದೆ. ಹೊಸ ಪ್ರಕರಣಗಳು ಇಳಿಕೆಯಾಗಿದ್ದರಿಂದಾಗಿ ಸರ್ಕಾರಿ ವ್ಯವಸ್ಥೆ ಮೇಲಿನ ಭಾರ ಕಡಿಮೆಯಾಗಿದ್ದು, ಸೋಂಕು ಪೀಡಿತರಿಗೆ ಚಿಕಿತ್ಸೆ ನೀಡಲು ಒತ್ತಡ ಆಗುತ್ತಿಲ್ಲ. ಎರಡನೆಯ ಆಲೆ ಅರಂಭದಲ್ಲಿ ಆರೋಗ್ಯ ವ್ಯವಸ್ಥೆ ಹೈರಾಣಾಗಿತ್ತು; ಅನೇಕ ಕಡೆಗಳಲ್ಲಿ ಆಕ್ಸಿಜನ್ ವ್ಯವಸ್ಥೆ ಇರದೆ ಹಲವರು ಪ್ರಾಣಕಳೆದುಕೊಳ್ಳಬೇಕಾಗಿ ಬಂದಿತ್ತು; ಆಸ್ಪತ್ರೆಗಳಲ್ಲಿ ಐಸಿಯು, ವೆಂಟಿಲೇಟರ್ ಕೊರತೆ ಸಹ ಆಗಿತ್ತು. ಈಗ ಆ ಸಮಸ್ಯೆ ಇಲ್ಲ. ಅದೇ ರೀತಿ, ಕರೊನಾ ಲಸಿಕೆ ಅಭಿಯಾನ ಕೂಡ ದೇಶದಲ್ಲಿ ವೇಗವಾಗಿ ನಡೆಯುತ್ತಿದ್ದು, ವೈರಸ್ ಪ್ರಸರಣದ ತೀವ್ರತೆ ತಗ್ಗುವಲ್ಲಿ ಇದು ಸಹ ಪಾತ್ರವಹಿಸಿದೆ. ಜಾಗತಿಕವಾಗಿ ದೊಡ್ಡ ಲಸಿಕಾ ಅಭಿಯಾನವನ್ನು ನಡೆಸಿದ ಹೆಗ್ಗಳಿಕೆ ಭಾರತದ್ದು.
ಕರೊನಾ ಲಾಕ್ ಡೌನ್ ಕಾರಣದಿಂದಾಗಿ ಆಘಾತ ಅನುಭವಿಸಿದ್ದ ಕೈಗಾರಿಕೆ ಮತ್ತಿತರ ರಂಗಗಳು ಈಗಷ್ಟೆ ಚೇತರಿಕೆಯ ಹಾದಿ ಹಿಡಿದಿವೆ.ನಜೀವನ ಸಹ ಸರಿಸುಮಾರು ಕೋವಿಡ್ಪೂರ್ವ ಹಂತಕ್ಕೆ ಹಿಂತಿರುಗಿದೆ. ಬಹುತೇಕ ಎಲ್ಲ ಚಟುವಟಿಕೆಗಳು ಎಂದಿನಂತೆ ನಡೆಯುತ್ತಿವೆ. ಇದಲ್ಲದೆ, ಮುಚ್ಚಿದ್ದ ಶಾಲಾಕಾಲೇಜುಗಳು ಕೂಡ ಬಹುತೇಕ ಪೂರ್ತಿಯಾಗಿ ಪುನರಾರಂಭವಾಗುವ ಹಂತದಲ್ಲಿವೆ. ಒಂದರಿಂದ ಐದನೇ ತರಗತಿವರೆಗಿನ ಶಾಲೆ ಆರಂಭಕ್ಕೆ ಕೂಡ ಕರ್ನಾಟಕ ಸರ್ಕಾರ ಸಮ್ಮತಿ ನೀಡಿದೆ. ಹೀಗಾಗಿ ಮಕ್ಕಳ ಓಡಾಟ ಇನ್ನಷ್ಟು ಹೆಚ್ಚಲಿದೆ. ಶಾಲಾಕಾಲೇಜುಗಳಲ್ಲಿ ಕರೊನಾ ನಿಯಮಪಾಲನೆಗೆ ಸಂಬಂಧಪಟ್ಟವರು ಹೆಚ್ಚು ಗಮನ ನೀಡಬೇಕಾಗುತ್ತದೆ. ಕೋವಿಡ್ ಮೂರನೇ ಅಲೆಯ ಸಾಧ್ಯತೆ ಕಡಿಮೆ ಎಂದಾದರೂ, ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯಬಾರದು ಎಂದೂ ತಜ್ಞರು ಎಚ್ಚರಿಸಿರುವುದನ್ನು ಮರೆಯಬಾರದು. ಕನಿಷ್ಠ ಇನ್ನು ಒಂದು ವರ್ಷ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಇತ್ಯಾದಿ ನಿಯಮ ಪಾಲನೆ ಅಗತ್ಯ; ಅಂದಾಗ ಕರೊನಾವನ್ನು ಪೂರ್ತಿಯಾಗಿ ನಿಯಂತ್ರಣಕ್ಕೆ ತರಲು ಅನುಕೂಲವಾಗುತ್ತದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಸರ್ಕಾರದ ಜತೆಗೆ ಸಾರ್ವಜನಿಕರು ಸಕ್ರಿಯವಾಗಿ ಕೈಜೋಡಿಸಿದಾಗಲಷ್ಟೇ ಈ ಮಹಾಮಾರಿಯನ್ನು ಕಟ್ಟಿಹಾಕಬಹುದು.