ಖಾಸಗಿತನ ರಕ್ಷಣೆಯಾಗಲಿ; ವೈಯಕ್ತಿಕ ದತ್ತಾಂಶ ರಕ್ಷಣೆ ಮಸೂದೆ ಅಂಗೀಕಾರ ಅಗತ್ಯ

Editorial
Published on

ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಬಹು ನಿರೀಕ್ಷಿತ ‘ಡಿಜಿಟಲ್ ವೈಯಕ್ತಿಕ ದತ್ತಾಂಶ ರಕ್ಷಣೆ (ಡಿಜಿಟಲ್ ಪರ್ಸನಲ್ ಡೇಟಾ ಪೊ›ಟೆಕ್ಷನ್ - ಡಿಪಿಡಿಪಿ) ಮಸೂದೆ 2022’ರ ಕರಡನ್ನು ಬಿಡುಗಡೆ ಮಾಡಿದ್ದು, ಇದು ಭಾರತದ ಕರಡು ಡೇಟಾ ಸಂರಕ್ಷಣಾ ಕಾನೂನಿನ ನಾಲ್ಕನೇ ಪುನರಾವೃತ್ತಿಯಾಗಿದೆ. ಭಾರತದಲ್ಲಿ ಡಿಜಿಟಲ್ ಬಳಕೆ ವ್ಯಾಪಕ ಪ್ರಮಾಣದಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವೈಯಕ್ತಿಕ ದತ್ತಾಂತ ದುರ್ಬಳಕೆ ತಡೆಗಟ್ಟಲು ಕಟ್ಟುನಿಟ್ಟಿನ ಕಾನೂನು ಜಾರಿಗೊಳಿಸುವ ತುರ್ತು ಅಗತ್ಯತೆಯನ್ನು ಮನಗಂಡಿರುವ ಕೇಂದ್ರ ಸರ್ಕಾರ, ಅಗತ್ಯ ಬದಲಾವಣೆಗಳೊಂದಿಗೆ ಮಸೂದೆಯನ್ನು ಅಂಗೀಕರಿಸಲು ಮುಂದಾಗಿದೆ.

ಖಾಸಗಿತನವು ಭಾರತೀಯ ನಾಗರಿಕರ ಮೂಲಭೂತ ಹಕ್ಕು ಎಂದು ಪುಟ್ಟಸ್ವಾಮಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದಾಗಿನಿಂದಲೂ ಈ ಹಕ್ಕನ್ನು ರಕ್ಷಿಸಲು ಕಾನೂನನ್ನು ಅಂಗೀಕರಿಸುವ ಬಾಧ್ಯತೆಯನ್ನು ಕೇಂದ್ರ ಸರ್ಕಾರ ಹೊರುವಂತಾಗಿದೆ. ಹೀಗಾಗಿ, 2017ರಿಂದಲೂ ದತ್ತಾಂಶ ಸಂರಕ್ಷಣಾ ಕಾನೂನು ಜಾರಿಗೊಳಿಸುವ ನಿಟ್ಟಿನಲ್ಲಿ ಅನೇಕ ಪ್ರಕ್ರಿಯೆಗಳು ನಡೆಯುತ್ತಲೇ ಇವೆ. 2019ರಲ್ಲಿ ಹೊರಡಿಸಲಾದ ಕರಡು ಮಸೂದೆಯಲ್ಲಿ 15 ಕೋಟಿ ರೂಪಾಯಿ ಅಥವಾ ಸಂಬಂಧಿತ ಸಂಸ್ಥೆಯ ವಹಿವಾಟಿನ ಶೇ. 4ರಷ್ಟು ದಂಡವನ್ನು ವಿಧಿಸಲು ಉದ್ದೇಶಿಸಲಾಗಿತ್ತು. 2021ರಲ್ಲಿ ಪ್ರಸ್ತಾಪಿಸಿದ ಕರಡು ಮಸೂದೆಗೆ ಸಾಕಷ್ಟು ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಇದೇ ವರ್ಷದ ಆಗಸ್ಟ್ ತಿಂಗಳಲ್ಲಿ ಕೇಂದ್ರ ಸರ್ಕಾರ ಅದನ್ನು ಹಿಂತೆಗೆದುಕೊಂಡಿತ್ತು. 2021ರ ದತ್ತಾಂಶ ಸಂರಕ್ಷಣಾ ಮಸೂದೆಯು ಸರ್ಕಾರಿ ಇಲಾಖೆಗಳಿಗೆ ಸಾಕಷ್ಟು ವಿನಾಯಿತಿಗಳನ್ನು ನೀಡುತ್ತದೆ. ದೊಡ್ಡ ಸಂಸ್ಥೆಗಳ ಹಿತಾಸಕ್ತಿಗಳಿಗೆ ಆದ್ಯತೆ ನೀಡುತ್ತದೆ ಮತ್ತು ಜನರ ಖಾಸಗಿತನದ ಮೂಲಭೂತ ಹಕ್ಕನ್ನು ಸಮರ್ಪಕವಾಗಿ ಗೌರವಿಸುವುದಿಲ್ಲ ಎಂಬ ಆಕ್ಷೇಪ ಹಾಗೂ ಟೀಕೆಗಳು ವ್ಯಾಪಕ ಪ್ರಮಾಣದಲ್ಲಿ ವ್ಯಕ್ತವಾಗಿದ್ದವು.

ಈಗ ಮಂಡಿಸಲಾಗಿರುವ ಕರಡು ಮಸೂದೆಯಲ್ಲಿ, ನಿಬಂಧನೆಗಳನ್ನು ಉಲ್ಲಂಘಿಸಿದರೆ 500 ಕೋಟಿ ರೂಪಾಯಿಯವರೆಗೆ ದಂಡ ವಿಧಿಸುವ ಪ್ರಸ್ತಾವನೆ ಇದೆ. ಈ ಮಸೂದೆಗೆ ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಸಲ್ಲಿಸಲು ಒಂದು ತಿಂಗಳ ಕಾಲಾವಕಾಶವನ್ನು ನೀಡಲಾಗಿದೆ. ಇದಲ್ಲದೆ, ಭಾರತದ ದತ್ತಾಂಶ ರಕ್ಷಣಾ ಮಂಡಳಿಯನ್ನು ಕೂಡ ಸ್ಥಾಪಿಸುವ ಪ್ರಸ್ತಾವನೆಯನ್ನು ಕರಡು ಮಸೂದೆ ಒಳಗೊಂಡಿದ್ದು, ಈ ಮಂಡಳಿಯು ಅಸ್ತಿತ್ವಕ್ಕೆ ಬಂದರೆ ಮಸೂದೆಯ ನಿಬಂಧನೆಗಳ ಅನುಸಾರವೇ ಕಾರ್ಯನಿರ್ವಹಿಸಬೇಕಾಗುತ್ತದೆ.

ಲೋಕೇಶನ್ ಟ್ರಾ್ಯಕಿಂಗ್ ಸಿಸ್ಟಂ (ಸ್ಥಳ ಪತ್ತೆ ವ್ಯವಸ್ಥೆ) ಸ್ಥಗಿತಗೊಳಿಸಿದ ನಂತರವೂ ಗ್ರಾಹಕರನ್ನು ಹಾದಿತಪ್ಪಿಸಿ, ಅವರ ಸ್ಥಳ ಪತ್ತೆ ಕಾರ್ಯವನ್ನು ಮುಂದುವರಿಸಿದ್ದಕ್ಕಾಗಿ ಇಂಟರ್​ನೆಟ್ ದೈತ್ಯ ಗೂಗಲ್ ಕಂಪನಿಗೆ ಈಚೆಗೆ ಅಮೆರಿಕದಲ್ಲಿ 392 ಮಿಲಿಯನ್ ಡಾಲರ್ (3202 ಕೋಟಿ ರೂಪಾಯಿ) ದಂಡ ವಿಧಿಸಲಾಗಿತ್ತು. ಟೆಕ್ ಕಂಪನಿಗಳು ಭಾರತದಲ್ಲಿ ಕೂಡ ಗ್ರಾಹಕರ ವೈಯಕ್ತಿಕ ದತ್ತಾಂಶಗಳನ್ನು ಸಾಕಷ್ಟು ಪ್ರಮಾಣದಲ್ಲಿ ದುರ್ಬಳಕೆ ಮಾಡಿಕೊಳ್ಳುತ್ತಿವೆ. ಗ್ರಾಹಕರ ಅನುಮತಿ ಇಲ್ಲದೆಯೇ ವ್ಯಾಪಾರೋದ್ದೇಶಗಳಿಗೆ ವೈಯಕ್ತಿಕ ದತ್ತಾಂಶಗಳನ್ನು ಮಾರಿಕೊಳ್ಳುತ್ತಿವೆ ಎಂಬ ಆಕ್ಷೇಪಗಳು ಮೊದಲಿನಿಂದಲೂ ವ್ಯಕ್ತವಾಗುತ್ತಿವೆ. ರಾಜಕೀಯ ಉದ್ದೇಶಗಳಿಗಾಗಿಯೂ ಈ ದತ್ತಾಂಶಗಳ ದುರ್ಬಳಕೆಯಾಗುತ್ತಿವೆ ಎಂಬ ಆಪಾದನೆಗಳೂ ಈ ಹಿಂದೆ ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಅನೇಕ ರಾಷ್ಟ್ರಗಳಲ್ಲಿ ಈಗಾಗಲೇ ಇರುವಂತೆಯೇ ಕಟ್ಟುನಿಟ್ಟಾದ ವೈಯಕ್ತಿಕ ದತ್ತಾಂಶ ರಕ್ಷಣೆ ಕಾನೂನು ಜಾರಿಗೊಳ್ಳಬೇಕಾಗಿದೆ. ಗ್ರಾಹಕರ ಮೂಲಭೂತ ಹಕ್ಕಾದ ಖಾಸಗಿತನ ರಕ್ಷಿಸಲು ಉದ್ದೇಶಿತ ಮಸೂದೆಯನ್ನು ಸಂಸತ್ತು ಅಂಗೀಕರಿಸಿ ಕಾನೂನು ಜಾರಿಗೊಳಿಸುವುದು ಇಂದಿನ ಅಗತ್ಯವಾಗಿದೆ. ಸಾರ್ವಜನಿಕರು ಕೂಡ ಕರಡು ಮಸೂದೆ ಕುರಿತು ಅಧ್ಯಯನ ಕೈಗೊಂಡು, ಅಗತ್ಯವಿದ್ದಲ್ಲಿ ಆಕ್ಷೇಪಣೆ ಸಲ್ಲಿಸುವ ಮೂಲಕ ತಮಗೆ ಒದಗಿಸಿರುವ ಅವಕಾಶವನ್ನು ಸೂಕ್ತವಾಗಿ ಬಳಸಿಕೊಳ್ಳುವ ಜಾಣ್ಮೆ ತೋರಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net