

ಭಾರತ ಮುಂಚಿನಂತಿಲ್ಲ. ತನ್ನ ಶಕ್ತಿ, ಸಾಮರ್ಥ್ಯ ಬೆಳೆಸಿಕೊಂಡಿರುವ ಜತೆಗೆ, ಅಂತಾರಾಷ್ಟ್ರೀಯ ವಲಯವೇ ಕಣ್ಣು ಕೋರೈಸುವಂತೆ ಹಲವು ರಂಗಗಳಲ್ಲಿ ಸಾಧನೆ ಮೆರೆದಿದೆ. ವಿದೇಶಾಂಗ ನೀತಿಯಲ್ಲಿ ಮಹತ್ವದ ಬದಲಾವಣೆ, ಸುಧಾರಣೆಗಳನ್ನು ಮಾಡಿಕೊಂಡಿದೆ. ಪರಿಣಾಮ, ಜಗತ್ತಿನ ಪ್ರಮುಖ ರಾಷ್ಟ್ರಗಳು ಭಾರತದೊಂದಿಗೆ ಸ್ನೇಹ, ಉತ್ತಮ ಸಂಬಂಧ ಹೊಂದಲು ಯತ್ನಿಸುತ್ತಿವೆ. ಮತ್ತು ಸ್ಥಾಪಿತವಾದ ಬಾಂಧವ್ಯವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲು ಶ್ರಮಿಸುತ್ತಿವೆ. ಭಾರತ ಮತ್ತು ಅಮೆರಿಕಗಳ ಮೈತ್ರಿಯಂತೂ ತುಂಬ ಗಟ್ಟಿಯಾಗಿರುವಂಥದ್ದು. ಅಮೆರಿಕದ ಅಧ್ಯಕ್ಷರು ಭಾರತವನ್ನು ‘ಆಪ್ತಮಿತ್ರ’ ಎಂದೇ ಸಂಬೋಧಿಸುತ್ತಾರೆ. ರಷ್ಯಾ-ಯೂಕ್ರೇನ್ ಯುದ್ಧದ ಸಂದರ್ಭದಲ್ಲಿ ಭಾರತ ತಟಸ್ಥ ನಿಲುವು ತಳೆದಿದ್ದರಿಂದ ಅಮೆರಿಕ ಕೋಪಗೊಂಡಿತ್ತಾದರೂ, ಆ ಬಳಿಕ ಭಾರತದ ವಾಸ್ತವ ಪರಿಸ್ಥಿತಿಯನ್ನು ಅದು ಅರ್ಥಮಾಡಿಕೊಂಡಿದೆ. ಈಗ ಒಂದು ಹೆಜ್ಜೆ ಮುಂದೆ ಹೋಗಿ, ಭಾರತಕ್ಕೆ 500 ದಶಲಕ್ಷ ಡಾಲರ್ ಮೌಲ್ಯದ ಸೇನಾ ನೆರವನ್ನು ನೀಡಲು ಅದು ಮುಂದಾಗಿದೆ. ಆದರೆ, ರಷ್ಯಾ ಜತೆ ಭಾರತ ಆಪ್ತವಾಗಿದ್ದು, ಆ ಬಂಧವನ್ನು ಕಡಿಮೆಗೊಳಿಸುವ ತಂತ್ರಗಾರಿಕೆ ಅಮೆರಿಕದ ಈ ನಡೆಯ ಹಿಂದಿದೆ ಎಂಬುದು ರಹಸ್ಯವೇನಲ್ಲ. ಅಲ್ಲದೆ, ವಿಶ್ವದಲ್ಲೇ ಅಮೆರಿಕ ಶಸ್ತ್ರಾಸ್ತ್ರ ಮಾರಾಟ ಮಾಡುವ ದೊಡ್ಡ ರಾಷ್ಟ್ರವಾಗಿ ಗುರುತಿಸಿಕೊಂಡಿದೆ. ಅದರಲ್ಲೂ, ರಷ್ಯಾ-ಭಾರತ ದ್ವಿಪಕ್ಷೀಯ ಸಂಬಂಧ, ಮುಖ್ಯವಾಗಿ ರಕ್ಷಣಾ ವಲಯದ ಸಹಕಾರ ಹೆಚ್ಚುತ್ತಿರುವುದನ್ನು ಅದು ಗಂಭೀರವಾಗಿ ಪರಿಗಣಿಸಿದೆ.
ಜಗತ್ತಿನಲ್ಲಿ ರಷ್ಯಾದ ಶಸ್ತ್ರಾಸ್ತ್ರಗಳನ್ನು ಅತಿ ಹೆಚ್ಚು ಖರೀದಿಸುವ ರಾಷ್ಟ್ರ ಭಾರತ. ಕಳೆದ ಒಂದು ದಶಕದ ಅವಧಿಯಲ್ಲಿ ಭಾರತವು ಅಮೆರಿಕದಿಂದ 400 ಕೋಟಿ ಡಾಲರ್ ಶಸ್ತ್ರಾಸ್ತ್ರ ಖರೀದಿಸಿದೆ. ಇದೇ ಅವಧಿಯಲ್ಲಿ ರಷ್ಯಾದಿಂದ 2500 ಕೋಟಿ ಡಾಲರ್ಗೂ ಅಧಿಕ ಮೌಲ್ಯದ ಶಸ್ತ್ರಾಸ್ತ್ರಗಳನ್ನು ಭಾರತ ಖರೀದಿ ಮಾಡಿದೆ ಎಂಬುದು ಗಮನಾರ್ಹ. ಭಾರತವನ್ನು ಎಲ್ಲ ಕ್ಷೇತ್ರದಲ್ಲೂ ವಿಶ್ವಾಸಾರ್ಹ ಪಾಲುದಾರ ರಾಷ್ಟ್ರವನ್ನಾಗಿ ಸೇರಿಸುವುದಕ್ಕೆ ಅಮೆರಿಕ ಬಯಸಿದೆ. ಇದಕ್ಕಾಗಿ ಫ್ರಾನ್ಸ್ ಸೇರಿ ಪ್ರಮುಖ ರಾಷ್ಟ್ರಗಳೊಂದಿಗೆ ಬೈಡೆನ್ ಆಡಳಿತ ಮಾತುಕತೆ ನಡೆಸಿ ಯೋಜನೆ ರೂಪಿಸುತ್ತಿದೆ. ಈ ಎಲ್ಲ ಬೆಳವಣಿಗೆಗಳ ನಡುವೆ ಭಾರತ ಎಚ್ಚರಿಕೆಯ ಹೆಜ್ಜೆ ಇರಿಸಬೇಕಿದೆ. ಭಾರತದ ಹಿತದ ವಿಷಯ ಬಂದಾಗ ರಷ್ಯಾ ನೆರವಿಗೆ ಬಂದಿದೆ. ಹಾಗಾಗಿ, ರಷ್ಯಾದೊಂದಿಗೆ ಸಂಬಂಧ ಹಾಳು ಮಾಡಿಕೊಂಡು ಅಮೆರಿಕದತ್ತ ಪೂರ್ತಿಯಾಗಿ ವಾಲುವುದು ಜಾಣನಡೆಯಾಗಲಾರದು. ಅದಕ್ಕಾಗಿಯೇ, ತನ್ನ ರಕ್ಷಣಾ ವಿಚಾರದಲ್ಲಿ ವಿಕೇಂದ್ರೀಕೃತ ಯೋಜನೆಗಳನ್ನು ಹಮ್ಮಿಕೊಂಡು ಮುನ್ನಡೆಯುತ್ತಿರುವ ಭಾರತ, ವಿವಿಧ ದೇಶಗಳೊಂದಿಗೆ ಅಗತ್ಯ ರಕ್ಷಣಾ ಒಪ್ಪಂದಗಳನ್ನು ಮಾಡಿಕೊಳ್ಳುತ್ತಿದೆ. ಅಲ್ಲದೆ, ಪಾಕಿಸ್ತಾನ ಮತ್ತು ಚೀನಾಗಳಿಂದ ತೀವ್ರ ಬೆದರಿಕೆ ಎದುರಿಸುತ್ತಿರುವ ಭಾರತ ರಕ್ಷಣಾ ವಿಚಾರದಲ್ಲಿವಿವೇಚನೆಯ ನಿರ್ಧಾರ ತೆಗೆದುಕೊಳ್ಳುವುದು ಅಗತ್ಯ. ಸೇನಾ ನೆರವು ನೀಡುವ ಅಮೆರಿಕದ ಹಿಂದಿನ ಉದ್ದೇಶವನ್ನು ಅರಿತು ತನ್ನ ಹಿತಕ್ಕೆ ಧಕ್ಕೆ ಆಗದಂತೆ ಒಪ್ಪಂದ ಮಾಡಿಕೊಳ್ಳುವತ್ತ ಭಾರತ ಗಮನ ವಹಿಸಬೇಕು.
ಈ ಬೆಳವಣಿಗೆಯಿಂದ ರಷ್ಯಾದ ಜತೆಗಿನ ಸ್ನೇಹವೂ ಕಡಿಮೆಯಾಗದಂತೆ ಎಚ್ಚರಿಕೆ ವಹಿಸಬೇಕು. ಒಟ್ಟಾರೆ, ಪ್ರಮುಖ ಶಕ್ತಿಗಳ ಆಪ್ತಮಿತ್ರವಾಗುತ್ತಿರುವ ಭಾರತ ಮುಂದಿನ ದಿನಗಳಲ್ಲಿ ರಕ್ಷಣಾ ವಿಷಯದಲ್ಲೂ ಪೂರ್ತಿ ಸ್ವಾವಲಂಬಿಯಾಗಿ ಹೊಮ್ಮುವುದು ಸೂಕ್ತ.