

ಪ್ರಧಾನಮಂತ್ರಿ ಗತಿಶಕ್ತಿ ಯೋಜನೆಯನ್ನು ಜಾರಿಗೆ ತರುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು 2021ರ ಸ್ವಾತಂತ್ರೊ್ಯೕತ್ಸವ ಸಂದರ್ಭದಲ್ಲಿ ದೇಶವನ್ನುದ್ದೇಶಿಸಿ ಮಾತನಾಡುತ್ತ ಪ್ರಕಟಿಸಿದ್ದರು. ಸಮಗ್ರ ಮೂಲಸೌಕರ್ಯ ನಿರ್ವಣಕ್ಕಾಗಿ 100 ಲಕ್ಷ ಕೋಟಿ ರೂ.ಗಳ ಬೃಹತ್ ಯೋಜನೆ ರೂಪಿಸಲಾಗುವುದೆಂದು ಅವರು ಹೇಳಿದ್ದರು. ಸರಳವಾಗಿ ಹೇಳಬೇಕೆಂದರೆ, ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಇರುವ ಅಡೆತಡೆಗಳನ್ನು ನಿವಾರಿಸಿ, ಕಾರ್ಯಕ್ಕೆ ವೇಗ ನೀಡಲು ಬೇರೆ ಬೇರೆ ಇಲಾಖೆಗಳ ನಡುವೆ ಸಮನ್ವಯ ತರುವುದು ಸಹ ಇದರ ಉದ್ದೇಶದಲ್ಲಿ ಸೇರಿದೆ.
ಈ ವಿಷಯದಲ್ಲಿ ರಾಜ್ಯ ಸರ್ಕಾರಗಳ ಸಹಭಾಗಿತ್ವ ಮತ್ತು ಸಕ್ರಿಯ ಭಾಗವಹಿಸುವಿಕೆ ಕೂಡ ಮುುಖ್ಯವಾದುದು. ಏಕೆಂದರೆ ಅನೇಕ ಕೇಂದ್ರ ಪ್ರಾಯೋಜಿತ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ರಾಜ್ಯಗಳ ಜವಾಬ್ದಾರಿಯೂ ಇದೆ. ಇದಲ್ಲದೆ, ರಕ್ಷಣೆ, ರೈಲ್ವೆ ಮುಂತಾದ ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದ ಇಲಾಖೆಗಳ ಕೆಲಸಕಾರ್ಯಗಳಲ್ಲಿ ರಾಜ್ಯಗಳ ಸಹಕಾರ ಹಾಗೂ ಸಹಭಾಗಿತ್ವ ಬೇಕಾಗುತ್ತದೆ. ನಮ್ಮದು ಒಕ್ಕೂಟ ವ್ಯವಸ್ಥೆಯಾದ್ದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರಥದ ಎರಡು ಚಕ್ರಗಳಂತೆ ಸಮನ್ವಯದಿಂದ ಕೆಲಸಮಾಡಬೇಕಾಗುತ್ತದೆ. ಅಂದಾಗಮಾತ್ರ ದೇಶ ಪ್ರಗತಿಪಥದಲ್ಲಿ ಸಾಗಲು ಸಾಧ್ಯವಾಗುತ್ತದೆ. ಪ್ರಜಾಪ್ರಭುತ್ವ ದೇಶದಲ್ಲಿ ಬೇರೆ ಬೇರೆ ವಿಷಯಗಳಲ್ಲಿ ಭಿನ್ನಾಭಿಪ್ರಾಯಗಳು, ವಾದ-ಪ್ರತಿವಾದಗಳು ಸಹಜ. ಒಂದು ಹಂತದವರೆಗೆ ಇದು ಸಹ್ಯ ಕೂಡ. ಆದರೆ ಮಿತಿಮೀರಿದರೆ ಅಭಿವೃದ್ಧಿ ಕಾರ್ಯಗಳ ಮೇಲೆ ದುಷ್ಪರಿಣಾಮ ಆಗುತ್ತದೆ. ಇಂತಹ ಅನೇಕ ಉದಾಹರಣೆಗಳು ನಮ್ಮ ಮುಂದಿವೆ. ಇದರಿಂದ ಸರ್ಕಾರಗಳಿಗೆ ಮಾತ್ರವಲ್ಲದೆ, ಆಯಾ ಪ್ರದೇಶದ ಜನರಿಗೂ ಅಪಾರ ನಷ್ಟವುಂಟಾಗುತ್ತದೆ. ಈ ನಿಟ್ಟಿನಲ್ಲಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಧಾನಮಂತ್ರಿ ಗತಿಶಕ್ತಿ ಯೋಜನೆಯ ದಕ್ಷಿಣ ವಲಯ ಸಮ್ಮೇಳನದಲ್ಲಿ ಸೋಮವಾರ ವರ್ಚುವಲ್ ಆಗಿ ಭಾಗವಹಿಸಿ ವ್ಯಕ್ತಪಡಿಸಿದ ಅನಿಸಿಕೆಗಳು ಗಮನಾರ್ಹ.
ನೀರಾವರಿ, ಮೂಲಸೌಕರ್ಯ ಇತ್ಯಾದಿ ಪ್ರಮುಖ ಯೋಜನೆಗಳಿಗೆ ಕೇಂದ್ರ ಮಟ್ಟದಲ್ಲಿ ಅನುಮತಿ ನೀಡುವಲ್ಲಿನ ವಿಳಂಬ ದುಬಾರಿಯಾಗಿ ಪರಿಣಮಿಸುತ್ತಿದೆ ಎಂದು ಅವರು ಹೇಳಿದ್ದಾರೆ. ಅರಣ್ಯ, ಪರಿಸರ ಸಚಿವಾಲಯದ ತೀರುವಳಿಗೆ ಸಂಬಂಧಿಸಿ ಕೆಲ ಕಾನೂನುಗಳನ್ನು ಸರಳೀಕರಿಸಬೇಕಾದ ಅಗತ್ಯವನ್ನೂ ಅವರು ಪ್ರತಿಪಾದಿಸಿದ್ದಾರೆ. ಅಂತಾರಾಜ್ಯ ಜಲವಿವಾದ ಕಾಯ್ದೆಯಲ್ಲಿ ತೊಡಕುಗಳಿದ್ದು, ಆ ಬಗ್ಗೆಯೂ ಪರಿಶೀಲಿಸಬೇಕಾದ ಅಗತ್ಯವಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಪ್ರಸ್ತುತ ಅನೇಕ ರಾಜ್ಯಗಳ ನಡುವೆ ಜಲವಿವಾದ ನಡೆಯುತ್ತಿದ್ದು, ಕೆಲವಂತೂ ದಶಕಗಳಿಂದ ಇವೆ. ಇದರಿಂದ ಆ ಎರಡೂ ರಾಜ್ಯಗಳಿಗೆ ಅಗಾಧ ನಷ್ಟವುಂಟಾಗುತ್ತದೆ. ಯೋಜನೆ ವಿಳಂಬದಿಂದ ವೆಚ್ಚ ಮತ್ತಷ್ಟು ಹೆಚ್ಚುವುದಲ್ಲದೆ, ಆಯಾ ಭಾಗದ ಜನರಿಗೆ ಅದರ ಲಾಭ ದೊರೆಯವುದು ತಡವಾಗುತ್ತದೆ. ಈಗ ಅಪ್ರಸ್ತುತವಾದ, ಹಳೆಯ ಕೆಲ ಕಾನೂನುಗಳನ್ನು ಮೋದಿ ಸರ್ಕಾರ ರದ್ದುಪಡಿಸಿದೆ. ಅದೇ ರೀತಿ, ಅನಗತ್ಯವಾದ ವಿಳಂಬಕ್ಕೆ ಕಾರಣವಾಗುವ ಕಾನೂನು-ನಿಯಮಗಳನ್ನು ಬದಲಿಸಿ ಅಥವಾ ಪರಿಷ್ಕರಿಸಿ ಸುಗಮ ಆಡಳಿತಕ್ಕೆ ಅನುವು ಮಾಡಬೇಕಾದ ಕೆಲಸ ಸಹ ಆಗಬೇಕಿದೆ. ನೀತಿನಿಯಮಗಳು ಸರಳ ವ್ಯವಹಾರಕ್ಕೆ ಅನುಕೂಲವಾಗುವಂತಿರಬೇಕೆ ಹೊರತು ಮತ್ತಷ್ಟು ಸಂಕೀರ್ಣತೆಗಳನ್ನು ಉಂಟುಮಾಡುವಂತಿರಬಾರದು. ಇದರಿಂದ ಒಕ್ಕೂಟ ವ್ಯವಸ್ಥೆಯಲ್ಲಿ ಅಸಮಾಧಾನ ಬೆಳೆಯಲು ಆಸ್ಪದವಾಗುತ್ತದೆ. ಈ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರ್ಚಚಿಸಿ ಸಹಮತಕ್ಕೆ ಬರುವ ಅಗತ್ಯವಿದೆ. ಪಕ್ಷರಾಜಕಾರಣ ಮೀರಿ ಅಭಿವೃದ್ಧಿದೃಷ್ಟಿಯಿಂದ ಮಾತ್ರ ಅವಲೋಕಿಸಿದಲ್ಲಿ ಇದು ಸಾಧ್ಯ.