

ಇಡೀ ದೇಶವನ್ನು ಬೆಚ್ಚಿಬೀಳಿಸಿದ್ದ ಅಹಮದಾಬಾದ್ ಸರಣಿ ಬಾಂಬ್ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿ, ಶುಕ್ರವಾರ ಅಪರಾಧಿಗಳಿಗೆ ಶಿಕ್ಷೆ ಘೋಷಣೆಯಾಗಿದೆ. 49 ಅಪರಾಧಿಗಳ ಪೈಕಿ 38 ಮಂದಿಗೆ ಮರಣದಂಡನೆ ಮತ್ತು 11 ಜನರಿಗೆ ಜೀವಿತಾವಧಿ ಶಿಕ್ಷೆ ಘೋಷಿಸುವ ಮೂಲಕ ವಿಶೇಷ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಒಂದೇ ಪ್ರಕರಣದಲ್ಲಿ ಇಷ್ಟು ಜನರಿಗೆ ಮರಣದಂಡನೆ ಶಿಕ್ಷೆ ವಿಧಿಸಿರುವುದು ದೇಶದಲ್ಲಿ ಇದೇ ಮೊದಲು. ಭಯೋತ್ಪಾದನೆ ಕೃತ್ಯಗಳಲ್ಲಿ ತೊಡಗುವವರಿಗೆ, ಅದರ ಬೆಂಬಲಕ್ಕೆ ನಿಲ್ಲುವವರಿಗೆ ಈ ಮೂಲಕ ಕಠಿಣ ಸಂದೇಶ ರವಾನೆಯಾಗಿದೆ.
ಅಹಮದಾಬಾದ್ನ ವಿವಿಧ ಪ್ರದೇಶಗಳಲ್ಲಿ 2008ರ ಜುಲೈ 26ರಂದು ಒಟ್ಟು 22 ಬಾಂಬ್ಗಳನ್ನು ಸ್ಪೋಟಿಸಲಾಗಿತ್ತು. ಇದರಿಂದಾಗಿ 56 ಜನ ಮೃತಪಟ್ಟು, 200 ಜನ ಗಾಯಗೊಂಡಿದ್ದರು. ಉಗ್ರ ಸಂಘಟನೆ ಇಂಡಿಯನ್ ಮುಜಾಹಿದ್ದೀನ್ ಈ ದುಷ್ಕೃತ್ಯದ ಹೊಣೆ ಹೊತ್ತಿಕೊಂಡಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯ 1100ಕ್ಕೂ ಹೆಚ್ಚು ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಿತ್ತು ಎಂಬುದು ಗಮನಾರ್ಹ.
ಭಯೋತ್ಪಾದನೆ ವಿರುದ್ಧ ಭಾರತ ಹಲವು ದಶಕಗಳಿಂದ ಹೋರಾಡುತ್ತಿದ್ದು, ಇತ್ತೀಚಿನ ವರ್ಷಗಳಲ್ಲಿ ಉಗ್ರರ ಹಾವಳಿಗೆ ಸಾಕಷ್ಟು ಕಡಿವಾಣ ಬಿದ್ದಿದೆ. ಸರ್ಕಾರದ ಕ್ರಮಗಳು, ಸೇನೆ, ಭದ್ರತಾ ಪಡೆಯ ದಿಟ್ಟ ಕಾರ್ಯಾಚರಣೆಗಳು ಉಗ್ರರ ಹೆಡೆಮುರಿ ಕಟ್ಟುವಲ್ಲಿ ನೆರವಾಗಿವೆ. ಹಾಗಂತ, ಉಗ್ರವಾದದ ಪಿಡುಗು ಕೊನೆಗೊಂಡಿದೆ ಎಂದು ಹೇಳುವಂತಿಲ್ಲ. ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಉಪಟಳ ಇದ್ದೇ ಇದೆ. 40 ಸಿಆರ್ಪಿಎಫ್ ಯೋಧರನ್ನು ಬಲಿ ಪಡೆದ 2019ರ ಪುಲ್ವಾಮಾ ದಾಳಿಯನ್ನಂತೂ ಮರೆಯಲು ಸಾಧ್ಯವಿಲ್ಲ. ಪಾಕಿಸ್ತಾನದಿಂದ ಭಾರತದ ಗಡಿಯೊಳಗೆ ಭಯೋತ್ಪಾದಕರು ನುಸುಳಿ ಬರುತ್ತಲೇ ಇದ್ದಾರೆ. ದುರದೃಷ್ಟಕರ ಸಂಗತಿ ಎಂದರೆ ಭಯೋತ್ಪಾದಕ ಸಂಘಟನೆಗಳಿಗೆ, ಭಯೋತ್ಪಾದಕರ ಕೃತ್ಯಗಳಿಗೆ ಬೆಂಬಲ ನೀಡುವ ರಾಷ್ಟ್ರದ್ರೋಹಿ ಕೆಲಸವನ್ನು ಕೆಲವರು ದೇಶದೊಳಗೇ ಇದ್ದುಕೊಂಡು ಮಾಡುತ್ತಿದ್ದಾರೆ. ಆಂತರಿಕ-ಬಾಹ್ಯ ಶತ್ರುಗಳನ್ನು ಏಕಕಾಲಕ್ಕೆ ಮಣಿಸುವ ತಂತ್ರಗಾರಿಕೆ ಈ ನಿಟ್ಟಿನಲ್ಲಿ ಅಗತ್ಯ.
ಭಯೋತ್ಪಾದನೆಯ ವಿರುದ್ಧದ ಹೋರಾಟವೆಂದರೆ ಅದು ಕೆಡುಕಿನ ವಿರುದ್ಧ, ಹಿಂಸೆಯ ವಿರುದ್ಧದ ಹೋರಾಟ. ಇಂಥ ಗಂಭೀರ ವಿಷಯವನ್ನು ಪ್ರತಿಪಕ್ಷಗಳು ರಾಜಕೀಯ ದೃಷ್ಟಿಕೋನದಿಂದ ನೋಡಬಾರದು. ಈಗಾಗಲೇ ಭಯೋತ್ಪಾದನೆಯ ಅಟ್ಟಹಾಸಕ್ಕೆ ದೇಶ ಸಾಕಷ್ಟು ಹಾನಿ ಅನುಭವಿಸಿದೆ. ಹಾಗಾಗಿ, ಇನ್ನು ಉಗ್ರವಾದವನ್ನು ಬೇರುಸಮೇತ ಕಿತ್ತೊಗೆಯುವ ಸಂಕಲ್ಪ ಹೊಮ್ಮಬೇಕು.