

ಸರ್ಕಾರ ನಡೆಸುವವರ ವಿರುದ್ಧ ಆರೋಪಗಳು ಬರುವುದು ಸಾಮಾನ್ಯ. ಪ್ರಜಾಪ್ರಭುತ್ವ ಆರಂಭವಾದಾಗಿನಿಂದಲೂ ಇಂತಹ ಬೆಳವಣಿಗೆಗಳು ನಡೆಯುತ್ತಲೇ ಬಂದಿವೆ. ಕೆಲವೊಮ್ಮೆ ರಾಜಕೀಯ ಲಾಭಕ್ಕೋ, ಜನರ ಗಮನ ಸೆಳೆಯುವುದಕ್ಕಾಗಿಯೋ ಅಥವಾ ಯಾವುದಾದರೊಂದು ವಿಷಯವನ್ನು ಜನರ ಮನಸ್ಸಿನಿಂದ ದೂರ ಮಾಡುವ ಉದ್ದೇಶದಿಂದಲೋ, ರಾಜಕೀಯ ನಾಯಕರು ಆರೋಪ ಮಾಡುತ್ತಾರೆ. ಇದು ಕೆಲವೊಮ್ಮೆ ಗಂಭೀರವೂ ಮತ್ತು ತೂಕದ ವಿಚಾರವೂ ಆಗಿರುತ್ತದೆ.
ಈಗ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪುತ್ರ ಡಾ. ಯತೀಂದ್ರ ಅವರ ವಿರುದ್ಧ ಪ್ರತಿಪಕ್ಷದ ಕಡೆಯಿಂದ ಬಂದಿರುವ ಗುರುತರ ಆರೋಪ ಜನರಿಗೆ ಸಣ್ಣ ವಿಷಯವಾಗಿಯೂ ಕಾಣಿಸುತ್ತಿಲ್ಲ. ಏಕೆಂದರೆ, ಸರ್ಕಾರ ಆರಂಭವಾದಾಗಿನಿಂದಲೂ ಆಡಳಿತದಲ್ಲಿ, ಅದರಲ್ಲೂ ಅಧಿಕಾರಿಗಳ ವರ್ಗಾವಣೆಗಳಲ್ಲಿ ಹಸ್ತಕ್ಷೇಪದ ಬಗ್ಗೆ ಗುಸುಗುಸು ಕೇಳಿಬರುತ್ತಲೇ ಇದೆ. ಆದರೆ ಯಾರೂ ನಿಖರ ದಾಖಲೆ ಇಟ್ಟು ನಿಷ್ಠ್ಠುರವಾಗಿ ಮಾತನಾಡುವ ಪ್ರಯತ್ನ ಮಾಡಿರಲಿಲ್ಲ. ಈಗ ಅನುಮಾನಕ್ಕೆ ಎಡೆಯಾಗುವಂತೆ ಒಂದು ವಿಡಿಯೋ ನಾಡಿನ ಜನರನ್ನು ತಲುಪಿದೆ. ಅದರ ಸತ್ಯಾಸತ್ಯತೆ ಏನಿದೆ ಎಂಬುದು ತನಿಖೆ ನಡೆದಾಗಲಷ್ಟೇ ಸ್ಪಷ್ಟವಾಗುವುದು.
ಹಳೆಯ ಘಟನೆಗಳನ್ನೊಮ್ಮೆ ನೋಡುವುದಾದರೆ ಮುಖ್ಯಮಂತ್ರಿ, ಸಚಿವರ ಕುಟುಂಬದವರು ಆಡಳಿತದಲ್ಲಿ ಹಸ್ತಕ್ಷೇಪ ನಡೆಸಿರುವುದಕ್ಕೆ ನೂರೆಂಟು ಉದಾಹರಣೆಗಳು ಸಿಗಬಹುದು. ಅಧಿಕಾರದಲ್ಲಿ ಇರುವವರನ್ನು ಮುತ್ತಿಕೊಂಡು, ಅವರ ಸುತ್ತ ಹಿಂಡು ಕಟ್ಟುವುದು, ಲಾಭ ಮಾಡಿಕೊಳ್ಳುವ ಪರಂಪರೆ ಅನೂಚಾನವಾಗಿ ನಡೆದುಕೊಂಡು ಬಂದಿದೆ. ಹಾಲಿ ಆಡಳಿತದಲ್ಲಿರುವವರು ಹಿಂದಿನ ಸರ್ಕಾರದ ಅವಧಿಯಲ್ಲಿ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಅಡಿಗಡಿಗೆ ಆರೋಪಿಸುತ್ತಲೇ ಬಂದಿದ್ದರು. ದಾಖಲೆ ಬಿಡುಗಡೆ ಮಾಡಿ ಜನರ ಗಮನ ಸೆಳೆದಿದ್ದರು, ಚುನಾವಣಾ ವಿಷಯವನ್ನಾಗಿಯೂ ಮಾಡಿಕೊಂಡಿದ್ದರು. ಇದೀಗ ಚಕ್ರ ಒಂದು ಸುತ್ತು ಪೂರ್ಣಗೊಂಡಿದೆ, ಆರೋಪ ಮಾಡಿದವರ ಬುಡಕ್ಕೆ ಅದೇ ರೀತಿಯ ಆರೋಪ ಬಂದು ನಿಂತಿದೆ.
ಅಂದಹಾಗೆ, ಯತೀಂದ್ರ ಅವರಿಗೆ ಕರೆ ಮಾಡಿದ್ದು ಯಾರು? ಅವರ ಮಾತಿನಲ್ಲಿ ಪ್ರಸ್ತಾಪ ಆಗಿರುವ ವ್ಯಕ್ತಿಗಳು ಯಾರು? ಎಂಬಿತ್ಯಾದಿ ಪ್ರಶ್ನೆಗಳನ್ನು ಪ್ರತಿಪಕ್ಷಗಳು ಎತ್ತಿವೆ. ಇದಕ್ಕೆ ಸರ್ಕಾರದ ಕಡೆಯಿಂದ ಸ್ಪಷ್ಟೀಕರಣವೂ ಬಂದಿದೆ. ಇದು ಸಿಎಸ್ಆರ್ ಕಾರ್ಯಕ್ರಮಕ್ಕೆ ಸಂಬಂಧಿಸಿದ್ದು ಎಂದು ಮುಖ್ಯಮಂತ್ರಿಗಳು ಸ್ಪಷ್ಟನೆ ನೀಡಿದ್ದಾರೆ. ಆದರೆ ಇಂತಹ ಗುರುತರ ಆರೋಪ ಬಂದಾಕ್ಷಣ ವಿಷಯವನ್ನು ಅಲ್ಲಿಗೇ ಮೊಟಕುಗೊಳಿಸಿ ಜನರ ನಡುವೆ ಹೆಚ್ಚು ಚರ್ಚೆಯಾಗದಂತೆ ಮಾಡುವುದು ವ್ಯಾವಹಾರಿಕ ಜಾಣ್ಮೆ ಎನ್ನಿಸಿಕೊಳ್ಳಬಹುದು. ಆದರೆ ಜನರ ಮನಸ್ಸಿನಲ್ಲಿ ಅನ್ಯಥಾ ಭಾವನೆಯೊಂದು ತಳ ಊರದಂತೆ ಮಾಡಲು ಮತ್ತು ಸದ್ಭಾವನೆ ಉಳಿಯಲು ಯತೀಂದ್ರ ವಿಡಿಯೋ ಪ್ರಕರಣದ ನಿಷ್ಪಕ್ಷಪಾತ ತನಿಖೆ ಆಗಬೇಕು. ಸತ್ಯ ಹೊರಬರಬೇಕು. ದಾಖಲೆ ಬಿಡುಗಡೆ ಮಾಡಿದ್ದೇ ಸತ್ಯವೆಂದಾದ ಮೇಲೆ ಪ್ರತಿಪಕ್ಷದ ಖೆಡ್ಡಾ ಎಂದು ಭಾವಿಸದೇ ನಿಷ್ಠುರವಾಗಿ ತನಿಖೆಗೆ ಒಪ್ಪಿಸುವಲ್ಲಿ ದಾಕ್ಷಿಣ್ಯ ತೋರಬಾರದು.