ಸಂಪಾದಕೀಯ | ಶೀಘ್ರ ಸ್ಪಂದನೆ ಅವಶ್ಯ; ಅಕಾಲಿಕ ಮಳೆಯಿಂದ ವ್ಯಾಪಕ ಹಾನಿ

Editorial
Published on

ಮುಂಗಾರು ಆಗಮನದ ಮುನ್ನವೇ ರಾಜ್ಯದಲ್ಲಿ ಮಳೆಯ ಆರ್ಭಟ ಜೋರಾಗಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಸುರಿಯುತ್ತಿರುವ ಮಳೆ ಇನ್ನೂ ನಾಲ್ಕು ದಿನಗಳ ಕಾಲ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಮೇ 19ರಂದು ರೆಡ್ ಅಲರ್ಟ್ ಕೂಡ ಘೋಷಿಸಿದೆ. ಸಮುದ್ರದಲ್ಲಿ ಗಾಳಿ ಇರುವುದರಿಂದ ಮೀನುಗಾರಿಕೆಗೆ ತೆರಳದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ. ಈ ಅಕಾಲಿಕ ಮಳೆಯಿಂದ ರೈತರು ಸಂಕಷ್ಟಕ್ಕೆ ಈಡಾಗಿದ್ದು, ಬೆಳೆದುನಿಂತಿದ್ದ ಫಸಲುಗಳು ನೀರುಪಾಲಾಗಿವೆ. ಚಿಕ್ಕಬಳ್ಳಾಪುರ, ದಾವಣಗೆರೆ, ಚಿತ್ರದುರ್ಗ, ಹಾವೇರಿ, ಗದಗ. ಧಾರವಾಡ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಬೆಳೆಹಾನಿಯ ಪ್ರಮಾಣ ತೀವ್ರವಾಗಿದೆ. ತಂಗಭದ್ರಾ ತೀರದ ಊರುಗಳಲ್ಲಿ ಬೆಳೆದಿದ್ದ ಭತ್ತದ ಫಸಲು ನೆಲಕ್ಕೊರಗಿದೆ. ಹಲವೆಡೆ ಮಾವಿನ ಫಸಲಿಗೂ ವ್ಯಾಪಕ ಹಾನಿಯಾಗಿದೆ. ಸಾಂಪ್ರದಾಯಿಕ ಬೆಳೆಗಳು, ವಾಣಿಜ್ಯ ಬೆಳೆಗಳು, ತೋಟಗಾರಿಕೆ ಬೆಳೆಗಳು ಹೀಗೆ ಎಲ್ಲವೂ ಮಳೆಯ ಅವಾಂತರಕ್ಕೆ ಬಲಿಯಾಗುತ್ತಿವೆ. ಲಕ್ಷಾಂತರ ರೂಪಾಯಿ ಸಾಲ ಮಾಡಿ ಕೃಷಿಯನ್ನೇ ನೆಚ್ಚಿಕೊಂಡವರ ಬದುಕು ಅಕಾಲಿಕ ಮಳೆಯಿಂದ ಅತಂತ್ರವಾಗಿದೆ. ಪ್ರಕೃತಿಯ ಮುನಿಸಿಗೂ, ಮಾರುಕಟ್ಟೆಯ ಏರಿಳಿತಗಳಿಗೂ ರೈತನೇ ಮೊದಲ ಬಲಿಪಶು. ಈಗಂತೂ, ಕೈಗೆ ಬಂದ ತುತ್ತು ಬಾಯಿಗೆ ಬರದಂಥ ಸ್ಥಿತಿ. ಅಲ್ಲದೆ, ಮುಂಗಾರು ಪ್ರವೇಶಿಸಿದ ಮೇಲೆ ಮತ್ತಷ್ಟು ಭೀಕರ ಮಳೆ ಸುರಿದರೆ ಗತಿ ಏನು ಎಂಬ ಆತಂಕವೂ ರೈತರಿಗೆ ಕಾಡುತ್ತಿದೆ.

ರೈತರು ಸಂಕಷ್ಟದಲ್ಲಿರುವಾಗ ನಮ್ಮ ಜನಪ್ರತಿನಿಧಿಗಳು ಮಾತ್ರ ರಾಜಕೀಯ ವಿಷಯಗಳನ್ನು ಇರಿಸಿಕೊಂಡೇ ಪರಸ್ಪರ ಕೆಸರೆರಚಾಟದಲ್ಲಿ ಕಾಲಹರಣ ಮಾಡುತ್ತಿದ್ದಾರೆ. ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆ ನಿಮಿತ್ತ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ರೈತರ ಸ್ಥಿತಿ ಯಾರಿಗೂ ಅರ್ಥವಾಗುತ್ತಿಲ್ಲ. ಮಳೆಹಾನಿ ತಡೆಯುವ ಸಂಬಂಧ ಸರ್ಕಾರ ಕೆಲವು ಸಭೆಗಳನ್ನು ನಡೆಸಿರುವುದು ಹೌದಾದರೂ, ಕೃಷಿರಂಗದ ನಷ್ಟದತ್ತ ಮೊದಲು ಗಮನ ಹರಿಸಬೇಕಿದೆ. ರೈತರಿಗೆ ಬೆಳೆವಿಮೆ ಸಕಾಲದಲ್ಲಿ ದೊರಕುವಂತೆ ಮಾಡಲು ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಶ್ರಮಿಸಬೇಕು. ಅಲ್ಲದೆ, ಬೆಳೆಹಾನಿಯ ಕುರಿತಂತೆ ವಿಳಂಬವಿಲ್ಲದೆ ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಿ, ತಾತ್ಕಾಲಿಕ ಪರಿಹಾರ ಕೂಡಲೇ ದೊರೆಯುವಂತೆ ಮಾಡಬೇಕು. ರಾಜಕೀಯ ಜಂಜಾಟಗಳನ್ನು ಬದಿಗಿಟ್ಟು ಮಳೆಹಾನಿಗೆ, ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಸಮಯ ಇದಾಗಿದೆ. ಎಲ್ಲ ಸಚಿವರು, ಶಾಸಕರು ಈ ವಿಷಯದಲ್ಲಿ ಹೆಚ್ಚು ಕಾಳಜಿ ವಹಿಸಬೇಕು. ಪ್ರತಿಪಕ್ಷಗಳು ಕೂಡ ಇಂಥ ಹೊತ್ತಲ್ಲಿ ಜನರೊಂದಿಗೆ ನಿಲ್ಲಬೇಕೆ ಹೊರತು ರಾಜಕೀಯ ವಾಗ್ವಾದಗಳಲ್ಲಿ ತೊಡಗಬಾರದು. ನಷ್ಟದ ನಿಖರ ಪ್ರಮಾಣವನ್ನು ಅಂದಾಜಿಸಿ, ರೈತರಿಗೆ ಬೆಂಬಲವಾಗಿ ನಿಲ್ಲುವ ಮತ್ತು ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಪ್ರಯತ್ನಗಳು ವೇಗವಾಗಿ ನಡೆಯಬೇಕು. ಪರಿಹಾರ ಕಾರ್ಯಗಳು ಅವ್ಯವಹಾರಕ್ಕೆ ಆಸ್ಪದವಿಲ್ಲದಂತೆ, ಮಧ್ಯವರ್ತಿಗಳನ್ನು ಸೃಷ್ಟಿಸದೆ ಪಾರದರ್ಶಕವಾಗಿ ನೈಜ ಫಲಾನುಭವಿಗಳಿಗೆ ತಲುಪಬೇಕು. ಕೃಷಿಕರಿಗಾಗಿಯೇ ಬಜೆಟ್​ನಲ್ಲಿ ಘೋಷಿಸಿರುವ ಯೋಜನೆಗಳೂ ಸಮರ್ಪಕವಾಗಿ ತಲುಪುವುದು ಅಗತ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net