ಸಂಪಾದಕೀಯ | ಸೂಕ್ಷ್ಮವಾಗಿ ನಿರ್ವಹಿಸಿ: ಧ್ವನಿವರ್ಧಕ ಪ್ರಕರಣ, ಹೈಕೋರ್ಟ್ ಸೂಚನೆ

Editorial
Published on

ಮಸೀದಿ, ಮಂದಿರ, ಚರ್ಚ್​ಗಳು ಸೇರಿ ರಾಜ್ಯದ ಎಲ್ಲ ಧಾರ್ವಿುಕ ಸ್ಥಳಗಳು ಹಾಗೂ ಪಬ್-ರೆಸ್ಟೋರೆಂಟ್​ಗಳಲ್ಲಿ ಧ್ವನಿವರ್ಧಕಗಳ ದುರ್ಬಳಕೆ ತಡೆಯಲು ವಿಶೇಷ ಅಭಿಯಾನ ನಡೆಸಿ, ಕೈಗೊಂಡ ಕ್ರಮಗಳ ಕುರಿತು ಮೂರು ವಾರಗಳಲ್ಲಿ ವರದಿ ಸಲ್ಲಿಸಬೇಕೆಂದು ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಸಂದರ್ಭದಲ್ಲಿ, ಧ್ವನಿವರ್ಧಕ ಅಥವಾ ಶಬ್ದ ಉಂಟುಮಾಡುವ ಇತರ ಉಪಕರಣಗಳನ್ನು ದುರ್ಬಳಕೆ ಮಾಡಿಕೊಳ್ಳದಂತೆ ತಡೆಯಲು ವಿಶೇಷ ಅಭಿಯಾನ ಕೈಗೊಳ್ಳಬೇಕು. ಅದಕ್ಕಾಗಿ ಧಾರ್ವಿುಕ ಸ್ಥಳಗಳ ಸರ್ವೆ ನಡೆಸಬೇಕು ಎಂದು ನ್ಯಾಯಾಲಯ ಸೂಚನೆ ನೀಡಿದೆ.

ಧ್ವನಿವರ್ಧಕ ವಿಚಾರ ಕೆಲ ದಿನಗಳಿಂದ ಚರ್ಚೆಯಲ್ಲಿದ್ದು, ಹೈಕೋರ್ಟ್ ಸೂಚನೆಯಿಂದಾಗಿ ಈ ವಿಷಯ ಒಂದು ತಾರ್ಕಿಕ ಅಂತ್ಯ ಕಾಣಬಹುದೆಂದು ನಿರೀಕ್ಷಿಸಬಹುದಾಗಿದೆ. ಹೀಗಾಗಿ ಸರ್ಕಾರ ಮತ್ತು ಪ್ರಾಧಿಕಾರಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಸೂಕ್ಷ್ಮವಾಗಿ ನಿರ್ವಹಿಸಿ, ನಿಯಮಾನುಸಾರ ಧ್ವನಿವರ್ಧಕಗಳನ್ನು ಹಾಕುವುದನ್ನು ಖಚಿತಪಡಿಸಬೇಕಿದೆ. ರಾಜ್ಯದಲ್ಲಿ ಧ್ವನಿವರ್ಧಕಗಳ ಬಳಕೆಗೆ ಅನುಮತಿ ವಿಧಾನ, ಪರವಾನಗಿ ನವೀಕರಣ, ಇದಕ್ಕೆ ಸಂಬಂಧಪಟ್ಟ ಸಮಿತಿ ಇತ್ಯಾದಿ ಬಗ್ಗೆ ಸರ್ಕಾರದ ಪರ ವಕೀಲರು ನ್ಯಾಯಾಲಯಕ್ಕೆ ವಿವರ ನೀಡಿದ್ದಾರೆ. ರಾತ್ರಿ 10ರಿಂದ ಬೆಳಗ್ಗೆ 6 ಗಂಟೆವರೆಗೆ ಧ್ವನಿವರ್ಧಕ ಬಳಕೆಗೆ ಸಂಪೂರ್ಣ ನಿಷೇಧವಿದೆ. ಆದರೆ, ಸಾಂಸ್ಕೃತಿಕ ಅಥವಾ ಧಾರ್ವಿುಕ ಉತ್ಸವ, ಹಬ್ಬದಂಥ ವಿಶೇಷ ಸಂದರ್ಭಗಳಲ್ಲಿ ರಾತ್ರಿ 10ರಿಂದ ಮಧ್ಯರಾತ್ರಿ 12ರವರೆಗೆ ಮೈಕ್ ಬಳಕೆಗೆ ವಿಶೇಷ ಅನುಮತಿ ನೀಡಲಾಗುತ್ತದೆ. ಅದೂ ಸಹ ಇಡೀ ವರ್ಷದಲ್ಲಿ 15 ದಿನಗಳ ಮಟ್ಟಿಗೆ ಮಾತ್ರ ಎಂದು ಸರ್ಕಾರದ ಪರ ವಕೀಲರು ತಿಳಿಸಿದ್ದಾರೆ. ಇದರಿಂದಾಗಿ ಧ್ವನಿವರ್ಧಕ ಅನುಮತಿ ಹಾಗೂ ಸಮಯದ ಬಗ್ಗೆ ಜನರಿಗೆ ಸ್ಪಷ್ಟತೆ ಸಿಗುವಂತಾಗಿದೆ. ನಮ್ಮಲ್ಲಿ ಶ್ರದ್ಧಾತಾಣಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಸಹಜವಾಗಿ ಇಂಥ ವಿಷಯಗಳು ಜನರ ಗಮನ ಸೆಳೆಯುತ್ತವೆ. ಅಲ್ಲದೆ ನಮ್ಮಲ್ಲಿ ಧಾರ್ವಿುಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಸಹ ಹೆಚ್ಚಿನ ಸಂಖ್ಯೆಯಲ್ಲಿ ನಡೆಯುತ್ತಿರುತ್ತವೆ. ಹೀಗಾಗಿ ಈ ವಿಚಾರದಲ್ಲಿ ಒಂದು ಸ್ಪಷ್ಟತೆ ಸಿಕ್ಕರೆ ಮುಂದೆ ವಿವಾದ ಉದ್ಭವಿಸುವ ಪ್ರಮೇಯ ಇರುವುದಿಲ್ಲ. ಆದ್ದರಿಂದ ಹೈಕೋರ್ಟ್ ಸೂಚನೆ ಸೂಕ್ತವಾಗಿದೆ.

ಈಚಿನ ದಿನಗಳಲ್ಲಿ ಇಂಥ ವಿಷಯ-ವಿವಾದಗಳು ಬೇರೆ ಬೇರೆ ಸ್ವರೂಪ ಪಡೆಯುವುದನ್ನು ನಾವು ನೋಡುತ್ತಿದ್ದೇವೆ. ಕೆಲ ಸಂದರ್ಭಗಳಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗಿ, ಹಿಂಸಾಚಾರಕ್ಕೂ ತಿರುಗಿ, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಉಂಟಾದ ನಿದರ್ಶನಗಳೂ ಇವೆ. ಕೇಂದ್ರ ಸರ್ಕಾರ ಈಚೆಗೆ ಪ್ರಕಟಿಸಿರುವ ‘ಅಗ್ನಿಪಥ’ ಯೋಜನೆ ವಿರೋಧಿಸಿ ಹಲವು ರಾಜ್ಯಗಳಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾರೂಪ ತಾಳಿರುವುದು ಇದಕ್ಕೆ ಮತ್ತೊಂದು ಉದಾಹರಣೆ. ಹೀಗಾಗಿ ಆಳುಗರು ಇಂಥ ಸೂಕ್ಷ್ಮ ವಿಷಯಗಳು ಮುನ್ನೆಲೆಗೆ ಬಂದಾಗ ಅದರ ಆಳಅಗಲಗಳನ್ನು ಸರಿಯಾಗಿ ಗ್ರಹಿಸಿ, ಆರಂಭದಲ್ಲಿಯೇ ಪರಿಹಾರೋಪಾಯಗಳನ್ನು ತೆಗೆದುಕೊಳ್ಳುವ ಚತುರತೆ ಪ್ರದರ್ಶಿಸಿದಲ್ಲಿ ಅನೇಕ ವಿಷಯಗಳು ದೊಡ್ಡದಾಗಿ ಬೆಳೆಯಲು ಆಸ್ಪದವೇ ಇರುವುದಿಲ್ಲ. ಅದರಲ್ಲೂ ಕೋಮು ವಿಚಾರಗಳು ಬಂದಾಗ ಸರ್ಕಾರಗಳು ಹಾಗೂ ರಾಜಕೀಯ ಪಕ್ಷಗಳು ಇನ್ನಷ್ಟು ಹೆಚ್ಚು ವಿವೇಚನೆ ಹಾಗೂ ಸೂಕ್ಷ್ಮತೆಯನ್ನು ತೋರಬೇಕಾಗುತ್ತದೆ. ಇಂಥ ವಿಷಯದಲ್ಲಿ ರಾಜಕೀಯಕ್ಕೆ ಆಸ್ಪದ ಇರಬಾರದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net