

ವೈದ್ಯಕೀಯ ಕ್ಷೇತ್ರದಲ್ಲಿ ಜಗತ್ತೇ ಬೆರಗಾಗುವಂತಹ ಐತಿಹಾಸಿಕ ಸಾಧನೆಯೊಂದನ್ನು ಭಾರತ ಭಾನುವಾರ ದಾಖಲಿಸಿದೆ. ವಿಶ್ವವನ್ನೇ ಸಂಕಷ್ಟಕ್ಕೆ ದೂಡಿ ಲಕ್ಷಾಂತರ ಜನರನ್ನು ಬಲಿ ತೆಗೆದುಕೊಂಡ ಕೋವಿಡ್ ಸೋಂಕು ನಿಯಂತ್ರಿಸುವ ಸಲುವಾಗಿ ಭಾರತದಲ್ಲಿ ಆರಂಭಿಸಲಾದ ಲಸಿಕೆ ಅಭಿಯಾನದಲ್ಲಿ 200 ಕೋಟಿ ಡೋಸ್ ಲಸಿಕೆ ಹಾಕುವ ಮೂಲಕ ಮಹತ್ವದ ಮೈಲುಗಲ್ಲು ಸ್ಥಾಪಿತವಾಗಿದೆ. 2021ರ ಜನವರಿಯಲ್ಲಿ ಈ ಲಸಿಕೆ ಅಭಿಯಾನ ದೇಶದಲ್ಲಿ ಆರಂಭಗೊಂಡಿತು. 2021ರ ಅಕ್ಟೋಬರ್ 21ರಂದು 100 ಕೋಟಿ ಡೋಸ್ ಲಸಿಕೆಯ ಮೈಲುಗಲ್ಲು ತಲುಪಲಾಗಿತ್ತು. ಅಭಿಯಾನ ಆರಂಭವಾದ 9 ತಿಂಗಳ ನಂತರ ಮೊದಲ 100 ಕೋಟಿ ಡೋಸ್ ಹಾಕಲಾಗಿದ್ದರೆ, ತದನಂತರ 9 ತಿಂಗಳಲ್ಲಿ ಮತ್ತೆ 100 ಕೋಟಿ ಡೋಸ್ ಲಸಿಕೆ ನೀಡಲಾಗಿದೆ. 140 ಕೋಟಿಗೂ ಅಧಿಕ ಜನಸಂಖ್ಯೆಇರುವ ಭಾರತದಂತಹ ರಾಷ್ಟ್ರದಲ್ಲಿ ಉಚಿತವಾಗಿ ಲಸಿಕೆಯನ್ನು ಹಾಕುವುದು ಸವಾಲಿನ ಸಂಗತಿಯೇ ಆಗಿತ್ತು. ಇದಕ್ಕಾಗಿ ಹಣಕಾಸು ಸಂಪನ್ಮೂಲ ಹೊಂದಿಸುವುದು, ಅಗತ್ಯ ಪ್ರಮಾಣದ ಲಸಿಕೆ ಪೂರೈಸುವುದು ಸುಲಭದ ವಿಷಯವಾಗಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ದೃಢ ನಿರ್ಧಾರದೊಂದಿಗೆ ಈ ಅಭಿಯಾನವನ್ನು ಆರಂಭಿಸಿದಾಗ ಯಶಸ್ಸಿನ ಸಾಧ್ಯತೆಗಳ ಬಗೆಗೆ ಪ್ರಶ್ನೆಗಳು ಮೂಡಿದ್ದವು. ಆದರೆ, ಈಗ ಜಗತ್ತೇ ಅಚ್ಚರಿಪಡುವಂತೆ ಈ ಅಭಿಯಾನ ಯಶಸ್ವಿಯಾಗಿ ಮುನ್ನಡೆದಿರುವುದಕ್ಕೆ 200 ಕೋಟಿ ಡೋಸ್ ಸಂಖ್ಯೆಯೇ ಸಾಕ್ಷಿಯಾಗಿದೆ.
2020ರ ಫೆಬ್ರುವರಿಯಲ್ಲಿ ಕೋವಿಡ್ ಮೊದಲನೇ ಅಲೆ ಭಾರತಕ್ಕೆ ಅಪ್ಪಳಿಸಿ, ನಂತರದ ದಿನಗಳಲ್ಲಿ ಲಾಕ್ಡೌನ್ ಘೋಷಿಸುವ ಪರಿಸ್ಥಿತಿಯನ್ನು ಸೃಷ್ಟಿಸಿತು. ಮೊದಲ ಹಾಗೂ ಎರಡನೇ ಕೋವಿಡ್ ಅಲೆಯು ಭಾರತದಲ್ಲಿ ಅಪಾರ ನಷ್ಟವನ್ನುಂಟು ಮಾಡಿತು. ಈ ಸಾಂಕ್ರಾಮಿಕ ರೋಗದಿಂದ ಇದುವರೆಗೆ ದೇಶದಲ್ಲಿ 5 ಲಕ್ಷ 25 ಸಾವಿರಕ್ಕೂ ಹೆಚ್ಚು ಜನರ ಸಾವನ್ನಪ್ಪಿದ್ದಾರೆ. 4 ಕೋಟಿ 30 ಲಕ್ಷಕ್ಕೂ ಅಧಿಕ ಜನರು ಈ ಕಾಯಿಲೆಯಿಂದ ಚೇತರಿಸಿಕೊಂಡಿದ್ದಾರೆ. ಆದರೆ, 3 ಮತ್ತು 4ನೇ ಅಲೆಗಳು ಭಾರತದಲ್ಲಿ ಗೋಚರಿಸಿದಂತೆ ಮಾಯವಾಗಿ ಹೋದವು. ಕೇಂದ್ರ ಸರ್ಕಾರವು ಉಚಿತವಾಗಿ ಲಸಿಕೆ ಅಭಿಯಾನ ಕೈಗೊಂಡು ಮುನ್ನೆಚ್ಚರಿಕೆ ವಹಿಸಿದ್ದೇ ಇದಕ್ಕೆ ಪ್ರಮುಖ ಕಾರಣ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಅಭಿಯಾನದ ಆರಂಭದಲ್ಲಿ ಲಸಿಕೆ ಕೊರತೆಯನ್ನು ಅನುಭವಿಸಬೇಕಾಯಿತು. ಲಸಿಕೆ ಸಾಮರ್ಥ್ಯದ ಬಗೆಗೆ ಅಪನಂಬಿಕೆಗಳೂ ವ್ಯಕ್ತವಾದವು. ಆದರೆ, ದೇಶಿಯವಾಗಿ ಉತ್ಪಾದನೆಗೆ ಪ್ರೋತ್ಸಾಹಿಸುವ ಮೂಲಕ ಸರ್ಕಾರ ಈ ಕೊರತೆಯನ್ನು ಸಮರ್ಥವಾಗಿ ನಿಭಾಯಿಸಿತಲ್ಲದೆ, ಭಾರತದ ಲಸಿಕೆಗಳಿಗೆ ವಿಶ್ವದ ಮಾನ್ಯತೆ ದೊರೆಯುವಂತೆಯೂ ಮಾಡಿತು. ಹಲವಾರು ದೇಶಗಳಲ್ಲಿ ಲಸಿಕೆ ಪೂರೈಸಿ ಸಹಾಯಹಸ್ತ ಚಾಚುವ ಮೂಲಕ ಪ್ರಶಂಸೆಗೂ ಪಾತ್ರವಾಯಿತು. ಲಸಿಕೆಯ ಮೊದಲೆರಡು ಡೋಸ್ಗಳನ್ನು ಉಚಿತವಾಗಿ ಒದಗಿಸಲಾಗಿತ್ತು. ಈಗ ಮೂರನೇ ಬೂಸ್ಟರ್ ಡೋಸನ್ನು ಕೂಡ ಉಚಿತವಾಗಿ ಒದಗಿಸುವ ಮಹತ್ವದ ನಿರ್ಧಾರವನ್ನೂ ಈಗ ಸರ್ಕಾರ ಕೈಗೊಂಡಿದೆ.
ಆಜಾದಿ ಕಾ ಅಮೃತ್ ಮಹೋತ್ಸವ ಸಂದರ್ಭದಲ್ಲಿಯೇ ಜಾಗತಿಕ ಮಾನ್ಯತೆಯುಳ್ಳ ಈ ಹೆಮ್ಮೆಯ ಸಾಧನೆ ನೆರವೇರಿರುವುದು ಬರುವ 75ನೇ ಸ್ವಾತಂತ್ರ್ಯೋತ್ಸವ ಸಂಭ್ರಮವನ್ನು ಇನ್ನಷ್ಟು ಕಳೆಗಟ್ಟಿಸಲಿದೆ. ‘ಲಸಿಕೆಯ ಬಿಡುಗಡೆಯ ಉದ್ದಕ್ಕೂ, ಭಾರತದ ಜನರು ವಿಜ್ಞಾನದಲ್ಲಿ ಗಮನಾರ್ಹ ನಂಬಿಕೆಯನ್ನು ತೋರಿಸಿದ್ದಾರೆ. ನಮ್ಮ ವೈದ್ಯರು, ದಾದಿಯರು, ಮುಂಚೂಣಿ ಕೆಲಸಗಾರರು, ವಿಜ್ಞಾನಿಗಳು, ಉದ್ಯಮಿಗಳು ಭೂಮಿಯನ್ನು ಸುರಕ್ಷಿತ ಗ್ರಹವಾಗಿ ಖಾತ್ರಿಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ’ ಎಂದು ಈ ಮಹಾ ಅಭಿಯಾನದ ನೇತೃತ್ವ ವಹಿಸಿರುವ ಪ್ರಧಾನಿ ಮೋದಿ ಅವರು ಶ್ರೇಯಸ್ಸನ್ನು ಹಂಚಿಕೊಂಡಿದ್ದಾರೆ.