

ಹಣಕಾಸು ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಶುಕ್ರವಾರ 2023-24ನೇ ಸಾಲಿನ ರಾಜ್ಯ ಮುಂಗಡಪತ್ರವನ್ನು ಮಂಡಿಸಿದರು. ಚುನಾವಣಾಪೂರ್ವ ಬಜೆಟ್ ಆಗಿದ್ದರಿಂದ ಎಲ್ಲರಿಗೂ ಇದರ ರೂಪುರೇಷೆ ಹಾಗೂ ಘೋಷಣೆಗಳ ಬಗ್ಗೆ ಸಹಜವಾದ ಕುತೂಹಲವಿತ್ತು. ಆ ಲೆಕ್ಕದಲ್ಲಿ, ಸರ್ವರ್ಸ³ ಮುಂಗಡಪತ್ರವನ್ನು ಬೊಮ್ಮಾಯಿ ಮಂಡಿಸಿದ್ದಾರೆ ಎಂದು ವ್ಯಾಖ್ಯಾನಿಸಬಹುದು. ರೈತರಿಗಾಗಿ ‘ಭೂ ಸಿರಿ’ ಎಂಬ ಯೋಜನೆ ಘೋಷಿಸಲಾಗಿದ್ದು, 10 ಸಾವಿರ ರೂ. ಹೆಚ್ಚುವರಿ ಸಹಾಯಧನ ನೀಡಲಾಗುತ್ತದೆ. ಬಡ್ಡಿರಹಿತವಾಗಿ ನೀಡುವ ಸಾಲದ ಮೊತ್ತವನ್ನು 3 ಲಕ್ಷದಿಂದ 5 ಲಕ್ಷ ರೂ.ಗೆ ಏರಿಸಿರುವುದು ಗಮನಾರ್ಹ. ಮಹಿಳೆಯರು ಮತ್ತು ಹೆಣ್ಣುಮಕ್ಕಳನ್ನು ಕೇಂದ್ರೀಕರಿಸಿ ಅನೇಕ ಯೋಜನೆಗಳನ್ನು ಘೋಷಿಸುವ ಮೂಲಕ, ಆ ವರ್ಗದ ಮನಗೆಲ್ಲಲು ಸಿಎಂ ಮುಂದಾಗಿದ್ದಾರೆ. ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಪದವಿವರೆಗೆ ಉಚಿತ ಶಿಕ್ಷಣ ಹಾಗೂ ವಿದ್ಯಾರ್ಥಿನಿಯರಿಗೆ ಉಚಿತ ಬಸ್ಪಾಸ್ ವ್ಯವಸ್ಥೆ ಶಿಕ್ಷಣದ ಕನಸಿನವರಿಗೆ ರೆಕ್ಕೆ ಹಚ್ಚುವಂಥದು. ಅಸಂಘಟಿತ ವಲಯದ ಕಾರ್ವಿುಕರಿಗೆ 2 ಲಕ್ಷ ರೂ. ವಿಮಾ ಸೌಲಭ್ಯ ಘೋಷಿಸಿರುವುದು ಈ ರಂಗದವರಿಗೆ ಅನುಕೂಲಕರವಾದ ಹೆಜ್ಜೆ. ಹಂಪಿಯ ಅಂಜನಾದ್ರಿ ಅಭಿವೃದ್ಧಿ, ಕಲಬುರಗಿ ಜಿಲ್ಲೆಯ ಸನ್ನತಿ-ಚಂದ್ರಲಾಂಬಾ ದೇವಾಲಯ, ಗಾಣಗಾಪುರದ ದತ್ತಾತ್ರೇಯ ದೇಗುಲ ಮತ್ತು ಬನವಾಸಿ ಮಧುಕೇಶ್ವರ ದೇಗುಲ ಸಂಕೀರ್ಣ ಅಭಿವೃದ್ಧಿಗೆ ಅನುದಾನ ಒದಗಿಸುವುದಾಗಿ ಹೇಳಿರುವುದರಿಂದ, ಆಯಾ ಭಾಗದಲ್ಲಿ ಆಧ್ಯಾತ್ಮಿಕ-ಪ್ರವಾಸೋದ್ಯಮಕ್ಕೆ ಇನ್ನಷ್ಟು ಉತ್ತೇಜನ ಸಿಗಬಲ್ಲದು.
ಕಳೆದ ಬಜೆಟ್ಗೆ ಹೋಲಿಸಿದರೆ ಈ ಸಲ ಬಂಡವಾಳ ವೆಚ್ಚವನ್ನು ಶೇ.30ರಷ್ಟು ಹೆಚ್ಚಿಗೆ ಮಾಡಿರುವುದು ಅಭಿವೃದ್ಧಿಗೆ ಇಂಬು ನೀಡುವ ಕ್ರಮವಾಗಬಲ್ಲದು. ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಜಾರಿಯಾದ ನಂತರದಲ್ಲಿ ಬಹುತೇಕ ತೆರಿಗೆಗಳು ಆ ವ್ಯಾಪ್ತಿಗೆ ಸೇರಿರುವುದರಿಂದಾಗಿ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಹೊಸದಾಗಿ ತೆರಿಗೆ ವಿಧಿಸುವ ಅವಕಾಶಗಳು ಕಡಿಮೆಯಾಗಿವೆ. ಅಬಕಾರಿ, ಇಂಧನ ಮತ್ತಿತರ ಕೆಲ ಬಾಬತ್ತುಗಳ ಮೇಲಷ್ಟೆ ತೆರಿಗೆ ಹಾಕಬಹುದಾಗಿದೆ. ಆದರೆ 2022-23ನೇ ಸಾಲಿನಲ್ಲಿ ಜಿಎಸ್ಟಿ ಸಂಗ್ರಹ ಉತ್ತಮವಾಗಿರುವುದು ಹಾಗೂ ಕರೊನೋತ್ತರ ದಿನಗಳಲ್ಲಿ ಆರ್ಥಿಕತೆ ಚೇತರಿಕೆಯಿಂದಾಗಿ, ರಾಜ್ಯಕ್ಕೆ ತೆರಿಗೆ ನಿರೀಕ್ಷೆಗಿಂತ ತುಸು ಹೆಚ್ಚೇ ಜಮೆಯಾಗಿರುವುದರಿಂದಾಗಿ, ಮುಖ್ಯಮಂತ್ರಿಗಳು ಹೊಸ ಸೆಸ್ ಅಥವಾ ತೆರಿಗೆ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಅನಿಸುತ್ತದೆ. ಬೆಂಗಳೂರು ಜಾಗತಿಕ ನಗರವಾಗಿ ಬೆಳವಣಿಗೆ ಹೊಂದಿರುವುದರಿಂದ, ಇಲ್ಲಿನ ಆಗುಹೋಗುಗಳು ವಿಶ್ವಮಟ್ಟದಲ್ಲಿ ಗಮನಸೆಳೆಯುತ್ತವೆ. ಜೋರು ಮಳೆಯಾದಾಗ ಕೆಲ ಬಡಾವಣೆಗಳಲ್ಲಿ ಆಗುವ ಅವಾಂತರಗಳು, ರಸ್ತೆಗುಂಡಿಗಳಿಂದಾಗಿ ಅಪಘಾತಗಳಾದಾಗ, ಟ್ರಾಫಿಕ್ ಸಮಸ್ಯೆ- ಇತ್ಯಾದಿ ಸಂಗತಿಗಳು ದೊಡ್ಡ ಸುದ್ದಿಯಾಗುತ್ತವೆ. ಮುಖ್ಯಮಂತ್ರಿಗಳಿಗೆ ಇದು ಚೆನ್ನಾಗಿ ಗೊತ್ತಿದೆ. ಹೀಗಾಗಿ ಬೆಂಗಳೂರು ಅಭಿವೃದ್ಧಿಗೆ 9 ಸಾವಿರ ಕೋಟಿ ರೂ.ಗಳನ್ನು ಮುಂಗಡಪತ್ರದಲ್ಲಿ ಒದಗಿಸಿದ್ದಾರೆ. ಇನ್ನೇನು ಎರಡೂವರೆ ತಿಂಗಳಲ್ಲಿ ವಿಧಾನಸಭಾ ಚುನಾವಣೆ ಬರಲಿಕ್ಕಿದೆ. ಯಾವ ಪಕ್ಷ ಆಡಳಿತ ನಡೆಸುತ್ತಿದ್ದರೂ, ಇಂಥ ಹೊತ್ತಲ್ಲಿ ಚುನಾವಣೆ ಮೇಲೆ ಕಣ್ಣಿಟ್ಟು ಬಜೆಟ್ ರೂಪಿಸುವುದು ಸಹಜ ರೂಢಿ. ಆ ಲೆಕ್ಕದಲ್ಲಿಯೂ ಬೊಮ್ಮಾಯಿಯವರು ಭರ್ಜರಿ ಬ್ಯಾಟಿಂಗ್ ನಡೆಸಿದ್ದಾರೆ ಎನ್ನಬಹುದು.