ವಸುಧೈವ ಕುಟುಂಬಕಂ; ಜಿ-20 ಅಧ್ಯಕ್ಷತೆ, ಆತಿಥ್ಯ ವಹಿಸಲು ಭಾರತ ಸಜ್ಜು

Editorial
Published on

‘ಒಟ್ಟಿಗೆ ಚೇತರಿಸಿಕೊಳ್ಳಿ, ಬಲಶಾಲಿಯಾಗಿ ಚೇತರಿಸಿಕೊಳ್ಳಿ’ ಎಂಬ ಧ್ಯೇಯಘೋಷದೊಂದಿಗೆ ಇಂಡೋನೇಷ್ಯಾದ ಬಾಲಿಯಲ್ಲಿ ಜರುಗಿದ ಎರಡು ದಿನಗಳ ಜಿ-20 ಶೃಂಗಸಭೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಜಗತ್ತಿಗೆ ನೀಡಿದ ಕರೆ ವಾಸ್ತವದ ಪ್ರತೀಕವಾಗಿ ಗೋಚರಿಸುವಂತಿವೆ. ಇಂದಿನ ರಸಗೊಬ್ಬರ ಕೊರತೆಯೇ ನಾಳಿನ ಆಹಾರ ಬಿಕ್ಕಟ್ಟಿಗೆ ದಾರಿ. ರಸಗೊಬ್ಬರ ಮತ್ತು ಆಹಾರ ಧಾನ್ಯಗಳ ಪೂರೈಕೆಗೆ ಅಡ್ಡಿಯಾಗದಂತೆ ನೋಡಿಕೊಳ್ಳಲು ನಾವೆಲ್ಲರೂ ಕಾರ್ಯನಿರ್ವಹಿಸಬೇಕಿದೆ ಎಂದು ಮೋದಿ ಹೇಳಿರುವುದು ರಷ್ಯಾ- ಯೂಕ್ರೇನ್ ಯುದ್ಧದ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಮಹತ್ವಪೂರ್ಣವಾಗಿದೆ. ಅಲ್ಲದೆ, ಜಾಗತಿಕ ಜನಸಂಖ್ಯೆ 800 ಕೋಟಿಗೆ ಏರಿರುವುದರಿಂದ ಹೆಚ್ಚಿನ ಆಹಾರದ ಅಗತ್ಯವನ್ನು ಮನಗಾಣಿಸುವಂತಿದೆ. ಜಿ-20 ಸಂಘಟನೆಯು ಅಂತಾರಾಷ್ಟ್ರೀಯ ಆರ್ಥಿಕ ಸಹಕಾರಕ್ಕಾಗಿ 1999ರಲ್ಲಿ ರೂಪುಗೊಂಡ 19 ದೇಶಗಳು ಹಾಗೂ ಐರೋಪ್ಯ ರಾಷ್ಟ್ರಗಳ ಪ್ರಮುಖ ಒಕ್ಕೂಟವಾಗಿದೆ. ಈ ಸದಸ್ಯ ರಾಷ್ಟ್ರಗಳ ಜಿಡಿಪಿ (ಒಟ್ಟಾರೆ ಆಂತರಿಕ ಉತ್ಪಾದನೆ) ಜಗತ್ತಿನ ಜಿಡಿಪಿಯ ಶೇ. 80ರಷ್ಟಿದೆ. ಜಗತ್ತಿನ ಒಟ್ಟು ವ್ಯಾಪಾರ ವಹಿವಾಟಿನ ಶೇ. 75ರಷ್ಟು ಈ ದೇಶಗಳಲ್ಲಿಯೇ ನಡೆಯುತ್ತಿದ್ದು, ಒಟ್ಟಾರೆ ವಿಶ್ವದ ಶೇ. 60ರಷ್ಟು ಜನಸಂಖ್ಯೆಯನ್ನು ಈ ದೇಶಗಳು ಪ್ರತಿನಿಧಿಸುತ್ತವೆ ಎಂಬುದು ಈ ಸಂಘಟನೆಯ ಮಹತ್ವವನ್ನು ಸೂಚಿಸುತ್ತದೆ.

ರಷ್ಯಾ ಹಾಗೂ ಯೂಕ್ರೇನ್ ನಡುವೆ ಕದನ ವಿರಾಮ ಘೊಷಿಸುವಂತೆ ಮಾಡಬೇಕಿದ್ದು, ಇದಕ್ಕಾಗಿ ರಾಜತಾಂತ್ರಿಕ ಮಾರ್ಗದ ಮೂಲಕ ದಾರಿ ಕಂಡುಕೊಳ್ಳಬೇಕಿದೆ ಎಂದು ಕರೆ ನೀಡಿರುವ ಮೋದಿ, ಇಂಧನ ವಿಚಾರದಲ್ಲಿ ಭಾರತ ಯಾವುದೇ ನಿರ್ಬಂಧವನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಪುನರುಚ್ಚರಿಸುವ ಮೂಲಕ ದೇಶದ ಹಿತಾಸಕ್ತಿಯೇ ಮೊದಲು ಎಂಬ ನೀತಿಯನ್ನು ಮತ್ತೆ ಪ್ರದರ್ಶಿಸಿದ್ದಾರೆ. ಇನ್ನು ಈ ಶೃಂಗಸಭೆಯಲ್ಲಿ ಮೋದಿ ದಕ್ಷಿಣ ಕರ್ನಾಟಕದ ಪ್ರಮುಖ ಆಹಾರ ಬೆಳೆಯಾದ ರಾಗಿಯ ಬಗೆಗೂ ಪ್ರಸ್ತಾಪ ಮಾಡಿರುವುದು ವಿಶೇಷವಾಗಿದೆ. ಭಾರತದಲ್ಲಿ ಆಹಾರ ಭದ್ರತೆಗಾಗಿ ನಾವು ನೈಸರ್ಗಿಕ ಕೃಷಿ, ಪೌಷ್ಟಿಕಾಂಶಯುಕ್ತ ಆಹಾರ ಬೆಳೆಗಳು, ರಾಗಿಯಂಥ ಸಾಂಪ್ರದಾಯಿಕ ಬೆಳೆಗಳಿಗೆ ಪೋ›ತ್ಸಾಹ ನೀಡುತ್ತಿದ್ದೇವೆ. ರಾಗಿಯಿಂದ ಜಾಗತಿಕ ಮಟ್ಟದಲ್ಲಿ ಅಪೌಷ್ಟಿಕತೆ ಹಾಗೂ ಹಸಿವನ್ನು ಹೋಗಲಾಡಿಸಲು ಸಾಧ್ಯವಿದೆ ಎಂಬ ವಿಶಿಷ್ಟ ವಿಚಾರವನ್ನು ಜಗತ್ತಿನ ಮುಂದಿಟ್ಟಿದ್ದಾರೆ. ಭಾರತವು 2022ರ ಡಿಸೆಂಬರ್ 1ರಿಂದ ಒಂದು ವರ್ಷದ ಅವಧಿಗೆ ಜಿ-20 ಅಧ್ಯಕ್ಷ ಸ್ಥಾನವನ್ನು ಅಲಂಕರಿಸಲಿದೆ.

‘ವಸುಧೈವ ಕುಟುಂಬಕಂ (ಒಂದು ಭೂಮಿ ಒಂದು ಕುಟುಂಬ ಒಂದು ಭವಿಷ್ಯ) ಎಂಬ ಧ್ಯೇಯಘೋಷದೊಂದಿಗೆ ಭಾರತ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳುತ್ತಿರುವುದು ವಿಶೇಷವಾಗಿದೆ. ಭಾರತದಲ್ಲಿ ನಡೆಯಲಿರುವ ಮುಂದಿನ ಶೃಂಗಸಭೆಯ ಕಾರ್ಯಸೂಚಿಯನ್ನು ಮೋದಿ ಈಗಾಗಲೇ ಪ್ರಕಟಿಸಿದ್ದಾರೆ. ಜಗತ್ತಿನ 50 ದೇಶಗಳು ಮಾತ್ರ ಡಿಜಿಟಲ್ ಪಾವತಿ ವ್ಯವಸ್ಥೆ ಹೊಂದಿವೆ ಎಂಬ ವಾಸ್ತವವನ್ನು ತೆರೆದಿಟ್ಟಿರುವ ಮೋದಿ, ಭಾರತದಲ್ಲಿ ಜರುಗುವ ಜಿ-20 ಶೃಂಗಸಭೆ ಡಿಜಿಟಲ್ ವಿಭಜನೆಯನ್ನು ಕಡಿಮೆ ಮಾಡಲು ಗಮನ ಕೇಂದ್ರೀಕರಿಸುತ್ತದೆ ಎಂದು ಹೇಳಿದ್ದಾರೆ. ಮುಂದಿನ 10 ವರ್ಷಗಳಲ್ಲಿ ನಾವು ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ಡಿಜಿಟಲ್ ರೂಪಾಂತರವನ್ನು ತರಬೇಕಿದೆ. 2023ರಲ್ಲಿ ಜಿ20 ಶೃಂಗದ ಅಧ್ಯಕ್ಷತೆ ವಹಿಸುವಾಗ ಈ ಗುರಿ ಸಾಧಿಸಲು ಭಾರತವು ವಿಶ್ವದ 20 ಬಲಿಷ್ಠ ಆರ್ಥಿಕತೆಗಳ ಪಾಲುದಾರರೊಂದಿಗೆ ಜಂಟಿಯಾಗಿ ಕೆಲಸ ಮಾಡುತ್ತದೆ ಎಂದು ಸಾರುವ ಮೂಲಕ ದೂರದರ್ಶಿತ್ವ ಪ್ರದರ್ಶಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net