ಲಸಿಕೆ ಗೊಂದಲ ನಿವಾರಿಸಿ; ಕೇಂದ್ರ-ರಾಜ್ಯಗಳ ನಡುವೆ ಸಮನ್ವಯ ಅಗತ್ಯ..

Editorial
Published on

ಹಲವು ರಾಷ್ಟ್ರಗಳಲ್ಲಿ ಕರೊನಾದ ಮೂರನೇ ಅಲೆ ನಿಧಾನವಾಗಿ ವ್ಯಾಪಿಸಿಕೊಳ್ಳುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಧಿಕೃತ ಹೇಳಿಕೆ ನೀಡಿದೆ. ಇದಕ್ಕೆ ಸಾಕ್ಷಿ ಎಂಬಂತೆ ಇಂಡೋನೇಷ್ಯಾ, ಬ್ರಿಟನ್, ಅಮೆರಿಕದಲ್ಲಿ ದೈನಂದಿನ ಸೋಂಕು ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ಏಷ್ಯಾದ ಹಲವು ರಾಷ್ಟ್ರಗಳಲ್ಲಿ ಡೆಲ್ಟಾ ಪ್ರಕರಣ ಏರಿಕೆ ಕಂಡಿವೆ. ಭಾರತದಲ್ಲಿ ಸದ್ಯಕ್ಕೆ ಪರಿಸ್ಥಿತಿ ನಿಯಂತ್ರಣದಲ್ಲಿದೆಯಾದರೂ, ಮೂರನೇ ಅಲೆ ಅಪ್ಪಳಿಸುವ ಅಪಾಯ ಇದ್ದೇಇದೆ. ಲಸಿಕೆ ಅಭಿಯಾನವನ್ನು ತೀವ್ರಗೊಳಿಸುವುದೇ ಕೋವಿಡ್ ಮೂರನೇ ಅಲೆಯನ್ನು ಎದುರಿಸಲು ಸಮರ್ಥವಾದ ಮಾರ್ಗ ಎಂದು ತಜ್ಞರು ಹೇಳಿದ್ದಾರೆ. ಭಾರತದಲ್ಲಿ ಲಸಿಕೆ ಅಭಿಯಾನ ಆರಂಭವಾಗಿ ಈಗಾಗಲೇ ಆರು ತಿಂಗಳು ಕಳೆದಿದ್ದು, ಈವರೆಗೆ 39 ಕೋಟಿಗೂ ಅಧಿಕ ಜನರು ಲಸಿಕೆಯ ಮೊದಲ ಡೋಸ್ ಪಡೆದಿದ್ದಾರೆ. ಇದೇ ವೇಗದಲ್ಲಿ ಸಾಗಿದರೆ ಈ ವರ್ಷಾಂತ್ಯದ ಹೊತ್ತಲ್ಲೂ ಎಲ್ಲರೂ ಲಸಿಕೆ ಪಡೆಯಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರವೇ 18 ವರ್ಷ ಮೇಲ್ಪಟ್ಟವರಿಗೂ ಜೂನ್ 21ರಿಂದ ಉಚಿತ ಲಸಿಕೆ ಪೂರೈಸುತ್ತಿದೆ. 18 ವರ್ಷದೊಳಗಿನವರಿಗೆ ಲಸಿಕೆ ನೀಡುವ ಸಂಬಂಧ ಸಿದ್ಧತೆ ಮತ್ತು ವೈದ್ಯಕೀಯ ಪರೀಕ್ಷೆಗಳು ಅಂತಿಮ ಹಂತದಲ್ಲಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ಆದರೆ, ಲಸಿಕೆ ವಿಷಯದಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವಿನ ಗೊಂದಲ ಬಗೆಹರಿಯುತ್ತಿಲ್ಲ.

ಎಲ್ಲ ರಾಜ್ಯಗಳಿಗೂ ಸಮರ್ಪಕ ಪ್ರಮಾಣದಲ್ಲಿ ಲಸಿಕೆ ವಿತರಿಸಲಾಗುತ್ತಿದೆ ಎಂಬುದು ಕೇಂದ್ರದ ಸ್ಪಷ್ಟನೆಯಾದರೆ, ಲಸಿಕೆ ಕೊರತೆಯಿಂದ ಅಭಿಯಾನಕ್ಕೆ ವೇಗ ನೀಡಲು ಸಾಧ್ಯವಾಗುತ್ತಿಲ್ಲ ಎಂಬ ವಾದ ರಾಜ್ಯ ಸರ್ಕಾರಗಳದ್ದು. ಈ ಗೊಂದಲ ಮೊದಲು ಬಗೆಹರಿಯಬೇಕು. ಕೇಂದ್ರ ಸರ್ಕಾರ 66 ಕೋಟಿ ಲಸಿಕೆ ಖರೀದಿಗೆ ಶುಕ್ರವಾರ ಆದೇಶ ನೀಡಿದ್ದು, ಸೇರಂ, ಭಾರತ್ ಬಯೋಟೆಕ್ ಕಂಪನಿಯಿಂದ ಖರೀದಿಸಲಾಗುತ್ತದೆ. ಆದರೂ, ಲಸಿಕೆಯ ಲಭ್ಯತೆ, ಪೂರೈಕೆ ಬಗ್ಗೆ ಹಲವು ಗೊಂದಲಗಳಿರುವುದು ಹೌದು. ಪ್ರಧಾನಿ ನರೇಂದ್ರ ಮೋದಿ ಕರ್ನಾಟಕ ಸೇರಿ ಆರು ರಾಜ್ಯಗಳ ಮುಖ್ಯಮಂತ್ರಿಗಳೊಡನೆ ಶುಕ್ರವಾರ ಸಭೆ ನಡೆಸಿದ್ದು, ‘ಸಾಂಕ್ರಾಮಿಕ ಪಿಡುಗು ತೊಲಗಿಸುವ ನಿಟ್ಟಿನಲ್ಲಿ ಕೇಂದ್ರ ಮತ್ತು ಎಲ್ಲ ರಾಜ್ಯ ಸರ್ಕಾರಗಳು ಒಂದಾಗಿ ಕೆಲಸ ಮಾಡಬೇಕಾದ ಅಗತ್ಯವಿದೆ’ ಎಂದು ಪ್ರತಿಪಾದಿಸಿದ್ದಾರೆ. ‘ರಾಜ್ಯದಲ್ಲಿ ಪ್ರತಿದಿನ ಐದು ಲಕ್ಷ ಡೋಸ್ ಲಸಿಕೆ ವಿತರಣೆ ಗುರಿ ಮುಟ್ಟುವುದಕ್ಕೆ ಮಾಸಿಕ 1.50 ಕೋಟಿ ಡೋಸ್ ಲಸಿಕೆ ಪೂರೈಸಬೇಕು’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಧಾನಿಗೆ ವಿನಂತಿಸಿದ್ದಾರೆ. ಜತೆಗೆ, ಮೂರನೇ ಅಲೆಯನ್ನು ತಡೆಯಲು ರಾಜ್ಯ ಸರ್ಕಾರ ಕೈಗೊಂಡಿರುವ ಸಿದ್ಧತೆಗಳ ವಿವರಣೆಯನ್ನೂ ನೀಡಿದ್ದಾರೆ. ಜೂನ್-ಜುಲೈ ತಿಂಗಳ ಹೊತ್ತಿಗೆ ಲಸಿಕೆ ಕೊರತೆ ನೀಗಲಿದೆ ಎಂದು ಕೇಂದ್ರ ಹೇಳಿತ್ತು. ಈಗಲೂ ಪರಿಸ್ಥಿತಿ ಬದಲಾಗಿಲ್ಲ. ರಾಜ್ಯಗಳು ಕೂಡ ಈ ವಿಷಯವನ್ನು ರಾಜಕೀಯ ಕನ್ನಡಕದಿಂದ ನೋಡದೆ ಕರೊನಾ ಎದುರಿಸಲು ಸೂಕ್ತ ಸಹಕಾರ ನೀಡಬೇಕು. ಒಕ್ಕೂಟ ವ್ಯವಸ್ಥೆಯಲ್ಲಿ ಗೆಲ್ಲುವುದು ಒಗ್ಗಟ್ಟು, ಸಾಮರಸ್ಯದ ಮಂತ್ರ ಎಂಬುದನ್ನು ಅರ್ಥ ಮಾಡಿಕೊಂಡು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net