

ಎಂಥದ್ದೇ ಸನ್ನಿವೇಶ, ಗಂಭೀರ ಸಮಸ್ಯೆಗಳು ಇದ್ದರೂ ರಾಜಕೀಯ ಪಕ್ಷಗಳು ಪ್ರತಿಷ್ಠೆ, ಸ್ವಹಿತಾಸಕ್ತಿ, ಜಿದ್ದಾಜಿದ್ದಿ, ಆರೋಪಗಳ ಸರಮಾಲೆಯಲ್ಲೇ ಮುಳುಗಿ ಜನಸಾಮಾನ್ಯರ ದನಿಯಾಗುವುದನ್ನು ಮರೆತು ಬಿಡುತ್ತವೆ ಮತ್ತು ‘ಇದೆಲ್ಲ ಮಾಡುತ್ತಿರುವುದು ಜನರಿಗಾಗಿ’ ಎಂದು ಸಮರ್ಥಿಸಿಕೊಳ್ಳುತ್ತವೆ. ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನ ಮಂಡಲ ಅಧಿವೇಶನವನ್ನು ನೋಡಿದರೆ ಈ ಸಂಗತಿಗಳು ಮತ್ತಷ್ಟು ಸ್ಪಷ್ಟವಾಗುತ್ತಿವೆ. 2018ರ ಬಳಿಕ ಇದೇ ಮೊದಲ ಬಾರಿಗೆ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಅಧಿವೇಶನ ನಡೆಯುತ್ತಿದೆಯಾದರೂ, ರಾಜಕೀಯ ಆಟಾಟೋಪಗಳೇ ಮೇಲುಗೈ ಸಾಧಿಸಿರುವುದು ದುರದೃಷ್ಟಕರ. ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳು ಚರ್ಚೆಯಾಗಬೇಕು, ಅವುಗಳ ಪರಿಹಾರದ ದಾರಿಯೂ ಪ್ರಶಸ್ತಗೊಳ್ಳಬೇಕು ಎಂಬ ಉದ್ದೇಶ ಬೆಳಗಾವಿಯಲ್ಲಿ ನಡೆಯುವ ಅಧಿವೇಶನದ್ದು. ಇದಕ್ಕಾಗಿ ಇಡೀ ಸರ್ಕಾರ ಮತ್ತು ಅದಕ್ಕೆ ಸಂಬಂಧಿಸಿದ ವ್ಯವಸ್ಥೆಗಳು ಕೆಲದಿನದ ಮಟ್ಟಿಗಾದರೂ ಬೆಳಗಾವಿಗೆ ವರ್ಗವಾಗುತ್ತವೆ. ಉತ್ತರ ಕರ್ನಾಟಕದ ಬೇಡಿಕೆಗಳು ಈಡೇರಬೇಕು, ಸುಧಾರಣೆಯ ಸ್ಪರ್ಶ ಈ ಭಾಗಕ್ಕೂ ತಲುಪಬೇಕು ಎಂಬ ಆಶಯವನ್ನೇ ಜನಪ್ರತಿನಿಧಿಗಳು ಮರೆತಂತಿದೆ.
ಅಧಿವೇಶನ ಆರಂಭವಾದಾಗ ಈ ಭಾಗದ ಸಮಸ್ಯೆಗಳ ಚರ್ಚೆಗೇ ಸಮಯ ಮೀಸಲಿಡುವುದಾಗಿ ಹೇಳಲಾಗಿತ್ತು. ಆದರೆ ಈಗ, ಮತ್ತದೇ ಗದ್ದಲ, ಗಲಾಟೆ, ಗೊಂದಲ ಗಳಲ್ಲೇ ಸಮಯ ವ್ಯರ್ಥವಾಗುತ್ತಿದೆ. ಕಲಾಪಕ್ಕೆ ಅಡ್ಡಿಪಡಿಸುವ ಜತೆಗೆ ನಿಯಮಗಳ ವಿರುದ್ಧ ನಡವಳಿಕೆ ತೋರಿದ ಆರೋಪದಡಿ ವಿರೋಧ ಪಕ್ಷದ ನಾಯಕರೂ ಸೇರಿದಂತೆ 12 ಕಾಂಗ್ರೆಸ್ ಸದಸ್ಯರನ್ನು ಸಭಾಪತಿ ದಿನದ ಮಟ್ಟಿಗೆ ಕಲಾಪದಿಂದ ಅಮಾನತು ಮಾಡಿದ ವಿದ್ಯಮಾನಕ್ಕೆ ಬುಧವಾರ ವಿಧಾನಪರಿಷತ್ ಸಾಕ್ಷಿಯಾಯಿತು. ಪರಿಷತ್ ಇತಿಹಾಸದಲ್ಲಿ 12 ಸದಸ್ಯರನ್ನು ಅಮಾನತು ಮಾಡಿದ ಪ್ರಸಂಗ ಅಪರೂಪ. ಪ್ರಮುಖ ವಿಚಾರಗಳ ಚರ್ಚೆಗೆಂದೇ ಅಧಿವೇಶನ ಕರೆದಿರುವಾಗ ಆ ಸಮಯವನ್ನು ಸದುಪಯೋಗ ಪಡಿಸಿಕೊಳ್ಳುವುದನ್ನು ಬಿಟ್ಟು ಆರೋಪ-ಪ್ರತ್ಯಾರೋಪ, ಪ್ರತಿಭಟನೆಯಲ್ಲೇ ಕಾಲಹರಣ ಮಾಡಿದರೆ ಹೇಗೆ? ಇದರಿಂದ ಪ್ರಮುಖ ಮಸೂದೆಗಳ ಮಂಡನೆ ಮತ್ತು ಅದರ ಮೇಲಿನ ಚರ್ಚೆಯೂ ನನೆಗುದಿಗೆ ಬಿದ್ದಿದೆ. ಚರ್ಚೆ ನಡೆಯದೆ ಮಸೂದೆಗಳು ಅಂಗೀಕಾರಗೊಳ್ಳುವಂಥ ಬೆಳವಣಿಗೆ ಸರಿಯಾದುದಲ್ಲ. ಎಲ್ಲ ಪಕ್ಷಗಳ ಜನಪ್ರತಿನಿಧಿಗಳು ಒಮ್ಮೆ ಉತ್ತರ ಕರ್ನಾಟಕ ಭಾಗದ ದಯನೀಯ ಸ್ಥಿತಿಯನ್ನು ಗಮನಿಸಬೇಕು. ಅಕಾಲಿಕ ಮಳೆ, ಪ್ರವಾಹ ರೈತರ ಬೆಳೆಗಳನ್ನು ಆಪೋಶನ ತೆಗೆದುಕೊಂಡಿದೆ. ಅವರಿಗೆ ಶೀಘ್ರ ಪರಿಹಾರ ತಲುಪಿಸುವ, ಆತ್ಮಸ್ಥೈರ್ಯ ತುಂಬುವ ಕೆಲಸ ನಡೆಯಬೇಕಿದೆ. 2019ರ ನೆರೆಯಿಂದ ಮನೆ ಕಳೆದುಕೊಂಡವರಿಗೆ ಇನ್ನೂ ಪೂರ್ಣಪ್ರಮಾಣದಲ್ಲಿ ಸೂರು ಕಲ್ಪಿಸಲಾಗಿಲ್ಲ. ಅಲ್ಲದೆ, ಕರೊನಾ ಹೊಡೆತದಿಂದ ಹಲವು ರಂಗಗಳ ಬೆಳವಣಿಗೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಈ ಭಾಗದ ಅದೆಷ್ಟೋ ಹಳ್ಳಿಗಳು ಮೂಲಸೌಕರ್ಯದಿಂದ ವಂಚಿತವಾಗಿವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉತ್ತರ ಕರ್ನಾಟಕದವರೇ ಆಗಿರುವುದರಿಂದ ಸಹಜವಾಗಿಯೇ ಜನರ ನಿರೀಕ್ಷೆಗಳು ಹೆಚ್ಚಿವೆ. ಕಲಾಪದಲ್ಲಿ ಪರಿಣಾಮಕಾರಿ ಚರ್ಚೆ, ಪರಿಹಾರದ ಹೊಳಹುಗಳನ್ನು ಸೂಚಿಸಿ ಜನಪ್ರತಿನಿಧಿಗಳು ಕಾಳಜಿ ಮೆರೆಯಬೇಕೆ ಹೊರತು ವಿವೇಚನೆಯನ್ನು ಬದಿಗಿರಿಸಿ ಕಲಾಪಕ್ಕೆ ಅಡ್ಡಿ ಮಾಡುವುದು ಸಲ್ಲ. ರಾಜಕೀಯ ಪಕ್ಷಗಳು ತಮ್ಮ ವರ್ತನೆ ತಿದ್ದಿಕೊಳ್ಳದಿದ್ದರೆ ಜನರು ಕ್ಷಮಿಸುವುದಿಲ್ಲ.