

ದೇಶದಲ್ಲಿ ಹೆಚ್ಚು ಉದ್ಯೋಗ ಸೃಷ್ಟಿಸುವ ವಲಯಗಳಲ್ಲಿ ಆಟೊಮೊಬೈಲ್ ಉದ್ಯಮ ಸಹ ಒಂದು. ಲಕ್ಷಾಂತರ ಜನರಿಗೆ ನೇರ ಉದ್ಯೋಗದ ಜತೆಗೆ ದೊಡ್ಡ ಪ್ರಮಾಣದಲ್ಲಿ ಪರೋಕ್ಷ ಉದ್ಯೋಗಗಳನ್ನೂ ಇದು ಸೃಜಿಸುತ್ತದೆ. ಅದರಲ್ಲೂ ಈಚಿನ ವರ್ಷಗಳಲ್ಲಿ ಈ ವಲಯ ಅಗಾಧವಾಗಿ ಬೆಳೆದಿದೆ. ಜನರ ಆದಾಯ ಹೆಚ್ಚಿದಂತೆಲ್ಲ ಇಂಥದು ಸಹಜ ಬೆಳವಣಿಗೆ. ಕರೊನಾ ಅವಧಿಯಲ್ಲಿ ಸ್ವಲ್ಪ ಕಳೆಗುಂದಿದ ವಾಹನೋದ್ಯಮ ಈಗ ಮತ್ತೆ ಹಳಿಗೆ ಮರಳುತ್ತಿದೆ. ಹೊಸ ವಾಹನಗಳ ಮಾರಾಟದಂತೆಯೇ ಹಳೇ ವಾಹನಗಳ ಕೊಡುಕೊಳ್ಳುವಿಕೆ ಸಹ ನಡೆಯುತ್ತದೆ. ಇದು ಒಂದು ಉದ್ಯಮದ ರೀತಿಯಲ್ಲಿಯೇ ಬೆಳೆದಿದೆ. ಪ್ರತಿವರ್ಷ ಲಕ್ಷಾಂತರ ವಾಹನಗಳು ಹೀಗೆ ಕೈಬದಲಾಗುತ್ತವೆ. 2022ರ ಆರ್ಥಿಕ ವರ್ಷದಲ್ಲಿ 35 ಲಕ್ಷ ಹಳೇ ಕಾರುಗಳ ಮಾರಾಟವಾಗಿದೆ ಎಂದರೆ ಇದರ ವ್ಯಾಪ್ತಿ ಊಹಿಸಬಹುದು. ಈ ಪ್ರಮಾಣ ಹೆಚ್ಚುತ್ತಲೇ ಹೋಗುವುದರಲ್ಲಿ ಸಂದೇಹವಿಲ್ಲ.
ಇದೀಗ ಕೇಂದ್ರ ಸರ್ಕಾರವು ಹಳೆಯ ಕಾರುಗಳ ಮಾರಾಟಕ್ಕೆ ಹೊಸ ನಿಯಮಗಳನ್ನು ಜಾರಿಗೆ ತರಲಿದೆ. ವಾಹನ ಮರುಮಾರಾಟ ನಿಯಂತ್ರಣ ಹಾಗೂ ಗ್ರಾಹಕರ ಹಿತರಕ್ಷಣೆ ಇದರ ಉದ್ದೇಶ ಎಂದು ಸರ್ಕಾರ ಹೇಳಿದ್ದು, ಇಂಥದೊಂದು ನಿಯಂತ್ರಣ ಕ್ರಮ ಅಗತ್ಯವಾಗಿತ್ತೆನ್ನಬಹುದು. ಅದರಲ್ಲೂ ಈಗ ಆನ್ಲೈನ್ ಮಾರಾಟ ಹೆಚ್ಚಿರುವ ಹಿನ್ನೆಲೆಯಲ್ಲಿ ಗ್ರಾಹಕ ಸುರಕ್ಷತಾ ಕ್ರಮಗಳು ಅನಿವಾರ್ಯ. ನೂತನ ನಿಯಮ ಜಾರಿಯಾದ ನಂತರದಲ್ಲಿ, ಆನ್ಲೈನ್ ಮತ್ತು ಆಫ್ಲೈನ್ ಮಧ್ಯವರ್ತಿಗಳು ತಾವು ಮಾರಾಟ ಮಾಡಲು ಉದ್ದೇಶಿಸಿರುವ ಯಾವುದೇ ವಾಹನಗಳ ಬಗ್ಗೆ ಅಧಿಕಾರಿಗಳಿಗೆ ತಿಳಿಸಬೇಕಾಗುತ್ತದೆ ಮತ್ತು ಸಂಸ್ಥೆಯ ಹೆಸರನ್ನು ರಾಜ್ಯ ಸಾರಿಗೆ ಇಲಾಖೆಯಲ್ಲಿ ನೋಂದಾಯಿಸಿಕೊಳ್ಳಬೇಕಾಗುತ್ತದೆ. ನಂತರವೇ ಮರು ಮಾರಾಟಗಾರನಿಗೆ ಅಗತ್ಯ ಲೈಸೆನ್ಸ್ ನೀಡಲಾಗುತ್ತದೆ. ವಾಹನ ಮಾರಾಟದ ನಂತರದಲ್ಲಿ ಯಾವುದೇ ಅನಪೇಕ್ಷಿತ ಘಟನೆ ನಡೆದಲ್ಲಿ ಅದಕ್ಕೆ ಡೀಲರ್ನನ್ನು ಮಾತ್ರವೇ ಹೊಣೆಯಾಗಿಸುವ ಅಂಶವೂ ಹೊಸ ನಿಯಮದಲ್ಲಿದೆ. ಹಳೆಯ ವಾಹನ ಮಾರಾಟ ವ್ಯಾಪಕವಾಗಿ ವಿಸ್ತರಿಸಿದ್ದರೂ, ಅನೇಕ ತೊಡಕುಗಳು ಸಹ ಇವೆ. ಮಾರಾಟದ ನಂತರದಲ್ಲಿ ಹೊಸ ಮಾಲೀಕನ ಹೆಸರಿಗೆ ದಾಖಲೆ ವರ್ಗಾವಣೆಯಾಗದಿರುವುದು, ನಕಲಿ ದಾಖಲೆ ಸೃಷ್ಟಿಸಿ ಗ್ರಾಹಕರನ್ನು ವಂಚಿಸುವುದು ಮುಂತಾದ ರಗಳೆಗಳಿವೆ.
ಹೊಸ ನಿಯಮ ಬಂದ ತರುವಾಯ, ವಾಹನಗಳನ್ನು ಮರು ಮಾರಾಟ ಮಾಡುವಾಗ ಹೊಸ ಮಾಲೀಕತ್ವದ ವಿವರಗಳನ್ನು ನವೀಕರಿಸಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಡೀಲರ್ ಜವಾಬ್ದಾರಿಯಾಗಿರುತ್ತದೆ. ಇದರಿಂದ ಪಾರದರ್ಶಕ ವ್ಯವಸ್ಥೆಗೆ ಅನುವಾಗುತ್ತದೆ; ವಾಹನ ಮಾರಾಟಗಾರ ಹಾಗೂ ಗ್ರಾಹಕ ಇಬ್ಬರಿಗೂ ನಿರಾಳತೆ ಸಿಗುತ್ತದೆ. ಹಾಗಿಲ್ಲವಾದಲ್ಲಿ ಮುಂದೆಂದಾದರೂ ಕಾನೂನು ತೊಡಕಿನಲ್ಲಿ ಸಿಕ್ಕಿಬಿದ್ದರೆ ಇಬ್ಬರಿಗೂ ಸಮಸ್ಯೆಯಾಗುತ್ತದೆ. ಕೆಲ ಸಾರಿಗೆ ಅಧಿಕಾರಿಗಳು ಹಾಗೂ ವಂಚಕ ಜಾಲದ ಕೈಮಿಲಾಯಿಸುವಿಕೆಯಿಂದಾಗಿ ಐಷಾರಾಮಿ ವಾಹನಗಳ ತೆರಿಗೆ ವಂಚನೆ ಇತ್ಯಾದಿ ಅಪಸವ್ಯಗಳು ನಡೆಯುತ್ತಿರುವುದು ಈಗಾಗಲೇ ಬಯಲಾಗಿದೆ. ಇದಲ್ಲದೆ, ಸಮರ್ಪಕ ದಾಖಲೆಗಳಿಲ್ಲದ ವಾಹನಗಳನ್ನು ಸಮಾಜವಿರೋಧಿ ಕೃತ್ಯಗಳಿಗೆ ಬಳಸಿದ ಪ್ರಕರಣಗಳೂ ನಡೆದಿದ್ದಿದೆ. ಹೀಗಾಗಿ ಈ ವ್ಯವಹಾರಕ್ಕೆ ಪಾರದರ್ಶಕತೆ ತರುವ ನಿಟ್ಟಿನಲ್ಲಿ ನಿಯಮಗಳು ನೆರವಾಗಬಲ್ಲದು. ಆದರೆ ಈ ಪ್ರಕ್ರಿಯೆಯಲ್ಲಿ ನಿಯಮಗಳ ಹೆಸರಿನಲ್ಲಿ ಅಧಿಕಾರಿಗಳಿಂದ ಅನಗತ್ಯವಾಗಿ ಕಿರಿಕಿರಿ ಆಗದಂತೆ ನೋಡಿಕೊಳ್ಳಬೇಕಾದ ಅಗತ್ಯವೂ ಇದೆ.