ಎಚ್ಚರಿಕೆಯ ಗಂಟೆ: ಪರಿಸರ ಕಾಳಜಿ ಹೆಚ್ಚಬೇಕು

Pollution
Published on

ವಾಯುಮಾಲಿನ್ಯ ಹೆಚ್ಚಳದಿಂದ ರಾಜಧಾನಿ ದೆಹಲಿಯ ಪರಿಸ್ಥಿತಿ ಎಷ್ಟು ಬಿಗಡಾಯಿಸಿದೆ ಎಂಬುದನ್ನು ನೋಡಿದ್ದೇವೆ. ಪರಿಸರಸ್ನೇಹಿ ಜೀವನಶೈಲಿಯನ್ನು ಬದಿಗಿರಿಸಿ, ಪ್ರಕೃತಿಯನ್ನು ಶೋಷಿಸುವ ಪ್ರವೃತ್ತಿ ಹೆಚ್ಚಿರುವುದರಿಂದ ಹಲವು ಗಂಭೀರ ಸಮಸ್ಯೆಗಳು ಎದುರಾಗಿವೆ. ಆದರೆ, ಅದೆಷ್ಟೋ ಜನರು ಇದು ದೆಹಲಿಗೆ ಅಥವಾ ದೊಡ್ಡ ಮಹಾನಗರಗಳಿಗೆ ಸೀಮಿತವಾದ ಸಮಸ್ಯೆ, ನಮಗೇನೂ ತೊಂದರೆ ಆಗಲ್ಲ ಎಂಬ ಉದಾಸೀನ ಭಾವ ಹೊಂದಿದ್ದರು. ಈ ದೀಪಾವಳಿಯ ವೇಳೆ ಕರ್ನಾಟಕದಲ್ಲೂ ಎಚ್ಚರಿಕೆಯ ಗಂಟೆ ಮೊಳಗಿದೆ. ದೆಹಲಿಯ ಸ್ಥಿತಿ ನೋಡಿ ನಾವು ಯಾವುದೇ ಪಾಠ ಕಲಿತಿಲ್ಲ ಎಂಬುದು ಸ್ಪಷ್ಟವಾಗಿದೆ.

ದೀಪಾವಳಿ ಅವಧಿಯ ಮೂರು ದಿನಗಳ ಕಾಲ ರಾಜ್ಯದ ಹಲವು ನಗರಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) ಹೆಚ್ಚಳಗೊಂಡಿದೆ. ನವೆಂಬರ್ 12ರಿಂದ 14ರ ಅವಧಿಯಲ್ಲಿ ರಾಜ್ಯದ ಬೇರೆ ಕಡೆಗಳಿಗಿಂತ ಬೆಂಗಳೂರಿನ ಜಯನಗರದಲ್ಲಿ ಎಕ್ಯೂಐ ಹೆಚ್ಚಳಗೊಂಡಿದೆ (234). ನಂತರದ ಸ್ಥಾನದಲ್ಲಿ ಮಂಗಳೂರು (180), ಬೀದರ್ (177), ತುಮಕೂರು (168) ಇವೆ. ಇದೇ ಅವಧಿಯಲ್ಲಿ ಶಬ್ದಮಾಲಿನ್ಯದ ಪ್ರಮಾಣವೂ ಹೆಚ್ಚಳವಾಗಿದೆ. ಪಟಾಕಿ ಹೊಡೆಯಲು ಹಲವು ನಿರ್ಬಂಧ ಹೇರಿ, ಸಮಯ ನಿಗದಿ ಮಾಡಿದ್ದರೂ ಮಾಲಿನ್ಯದ ಪ್ರಮಾಣ ಏರಿಕೆ ಆಗಿದೆ.

ಕೆಲವು ವರ್ಷಗಳ ಮುಂಚೆ ಬೆಂಗಳೂರು ಉದ್ಯಾನನಗರಿ ಎಂಬ ಹೆಗ್ಗಳಿಕೆಯನ್ನು ಹೊಂದಿತ್ತು. ಮರಗಳ ಸಂಖ್ಯೆಯೂ ಗಣನೀಯವಾಗಿತ್ತು. ಆದರೆ, ಈಗ ವಾಹನಗಳ ಸಂಖ್ಯೆಯೇ 1 ಕೋಟಿಯ ಗಡಿ ದಾಟಿದ್ದು. ಸಂಚಾರದಟ್ಟಣೆ, ಮಾಲಿನ್ಯದ ಪ್ರಮಾಣ ಕಂಗೆಡಿಸಿದೆ. ರಸ್ತೆಗಳ ಅಗಲೀಕರಣ, ಹೊಸ ಬಡಾವಣೆಗಳು, ನಿರ್ಮಾಣ ಕಾಮಗಾರಿಗಳು, ಅಭಿವೃದ್ಧಿ ಯೋಜನೆಗಳು ಹೀಗೆ ವಿವಿಧ ಕಾರಣಗಳಿಗಾಗಿ ಮರಗಳ ಬಲಿ ನಡೆಯುತ್ತಲೇ ಇದೆ. ಒಂದೆಡೆ ಹಸಿರು ಕಡಿಮೆಯಾಗುತ್ತಿದ್ದರೆ, ಮತ್ತೊಂದೆಡೆ ಹೆಚ್ಚುತ್ತಿರುವ ವಾಹನಗಳ ಮೂಲಕ ವಾಯುಮಾಲಿನ್ಯ, ಶಬ್ದಮಾಲಿನ್ಯ ಏರಿಕೆ ಆಗುತ್ತಿದೆ. ಇದು ಹೀಗೆ ಮುಂದುವರಿದರೆ ಬೆಂಗಳೂರು ದೆಹಲಿಯ ಸ್ಥಿತಿಯನ್ನೇ ತಂದುಕೊಳ್ಳಬಹುದು ಎಂಬ ಆತಂಕ ಕಾಡುತ್ತಿದೆ. ಪರಿಸ್ಥಿತಿ ತೀವ್ರವಾಗಿ ಹದಗೆಡುವ ಮುನ್ನ ಎಚ್ಚೆತ್ತುಕೊಳ್ಳಬೇಕಿದೆ. ಮಾಲಿನ್ಯ ನಿಯಂತ್ರಣ ಮತ್ತು ಪರಿಸರ ಸಂರಕ್ಷಣೆಯ ಕ್ರಮಗಳು ಸಮರ್ಪಕವಾಗಿ ಅನುಷ್ಠಾನಕ್ಕೆ ಬರಬೇಕಿದೆ. ಗಿಡ-ಮರಗಳನ್ನು ಬೆಳೆಸುವ ಸರ್ಕಾರದ ಯೋಜನೆಗಳು ಕಾಗದದಲ್ಲೇ ಉಳಿಯದೆ, ಪರಿಣಾಮಕಾರಿಯಾಗಿ ಜಾರಿಗೆ ಬರಬೇಕು.

ಎಲ್ಲ ಜವಾಬ್ದಾರಿಯನ್ನು ಸರ್ಕಾರದ ಮೇಲೆ ವರ್ಗಾಯಿಸಿ, ಜನಸಾಮಾನ್ಯರು ನಾಗರಿಕಪ್ರಜ್ಞೆ ಮರೆಯುವ ಹಾಗಿಲ್ಲ . ಮಾಲಿನ್ಯ ತಗ್ಗಿಸುವಿಕೆ ಸೇರಿದಂತೆ ಪರಿಸರ ರಕ್ಷಣೆಯ ಹೊಣೆ ಜನರ ಮೇಲೂ ಇದೆ. ಬರಲಿರುವ ನಾಳೆಗಳು ನೆಮ್ಮದಿಯಿಂದ ಕೂಡಿರಬೇಕಾದರೆ ಅಭಿವೃದ್ಧಿ ಮತ್ತು ಪರಿಸರ ವಿಷಯದಲ್ಲಿ ಸಮತೋಲನ ಸಾಧಿಸುವುದು ಅವಶ್ಯ ಎಂಬುದನ್ನು ಮರೆಯುವಂತಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net