ಗದ್ದಲ ಸಾಕು, ಕಲಾಪ ಬೇಕು; ರಾಹುಲ್ ಹೇಳಿಕೆ ಹಿನ್ನೆಲೆಯಲ್ಲಿ ಜಟಾಪಟಿ

Session
Published on

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಲಂಡನ್​ನಲ್ಲಿ ನೀಡಿದ ಹೇಳಿಕೆಗಳ ವಿಚಾರವಾಗಿ ಸಂಸತ್ ಅಧಿವೇಶನದಲ್ಲಿ ಭಾರಿ ಗದ್ದಲ ನಡೆಯುತ್ತಿದೆ. ಇದರಿಂದಾಗಿ ಮೂರು ದಿನಗಳಿಂದ ಕಲಾಪ ಸರಿಯಾಗಿ ನಡೆಯದೆ, ವಾದಪ್ರತಿವಾದಗಳೇ ಕಲಾಪ ಎಂಬಂತಾಗಿದೆ. ಹೀಗಾಗಿ ಸದನದ ಅಮೂಲ್ಯ ಸಮಯ ವ್ಯರ್ಥವಾಗುವುದರೊಂದಿಗೆ, ಅಪಾರ ಹಣವೂ ಪೋಲಾಗುತ್ತಿದೆ. ಯಾವ ವಿಷಯದ ಬಗ್ಗೆ ಗಹನ ಚರ್ಚೆ ನಡೆಯಬೇಕಿತ್ತೋ ಅದಾಗುತ್ತಿಲ್ಲ. ‘ಭಾರತದಲ್ಲಿ ಈಗ ಪ್ರಜಾಪ್ರಭುತ್ವ ವ್ಯವಸ್ಥೆ ಕುಸಿದಿದೆ. ಸಾಂವಿಧಾನಿಕ ಸಂಸ್ಥೆಗಳನ್ನು ಮುಚ್ಚಲಾಗುತ್ತಿದೆ. ಪ್ರಜಾಪ್ರಭುತ್ವದ ರಕ್ಷಕರು ಎಂದು ಹೇಳಿಕೊಳ್ಳುವ ಅಮೆರಿಕ ಮತ್ತು ಯುರೋಪಿಯನ್ ಯೂನಿಯನ್ ಇದನ್ನೆಲ್ಲ ನೋಡಿಯೂ ಸುಮ್ಮನೆ ಕುಳಿತಿವೆ’ ಎಂದು ರಾಹುಲ್ ಗಾಂಧಿಯವರು ಲಂಡನ್​ನಲ್ಲಿ ಮಾಡಿದ ಭಾಷಣದಲ್ಲಿ ಹೇಳಿದ್ದರು. ಇದಲ್ಲದೆ, ಕೆಲ ದಿನಗಳ ಹಿಂದೆ ಭಾರತ್ ಜೋಡೋ ಯಾತ್ರೆ ಸಂದರ್ಭದಲ್ಲಿ ಸಹ ಅವರು ಬಿಜೆಪಿ ಸರ್ಕಾರದ ನಡೆನುಡಿಗಳನ್ನು ಕಟುವಾಗಿ ಟೀಕಿಸಿದ್ದರು. ಇದು ಸಹಜವಾಗಿಯೇ ಬಿಜೆಪಿಗರನ್ನು ಕೆಣಕಿದೆ.

‘ದೇಶದ ಆಂತರಿಕ ವಿಷಯದಲ್ಲಿ ವಿದೇಶಿ ಹಸ್ತಕ್ಷೇಪವನ್ನು ರಾಹುಲ್ ಬಯಸಿದ್ದಾರೆ. ಇದು ಅಕ್ಷಮ್ಯ. ಅವರು ಕ್ಷಮೆ ಕೇಳಬೇಕು’ ಎಂದು ಬಿಜೆಪಿ ನಾಯಕರು ಪಟ್ಟುಹಿಡಿದಿದ್ದಾರೆ. ಆದರೆ ರಾಹುಲ್ ಕ್ಷಮೆ ಕೇಳುವುದಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಖಂಡತುಂಡವಾಗಿ ಹೇಳಿದ್ದಾರೆ. ಹೀಗಾಗಿ ಬಿಕ್ಕಟ್ಟು ಪರಿಹಾರದ ದಾರಿ ಕಾಣುತ್ತಿಲ್ಲ. ಹಾಗೆನೋಡಿದರೆ, ರಾಹುಲ್ ಹಾಗೂ ಬಿಜೆಪಿ ಜಗಳ ಹೊಸದೇನಲ್ಲ. ಸಮಯ ಸಿಕ್ಕಾಗಲೆಲ್ಲ ಬಿಜೆಪಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ಸಂಘ ಪರಿವಾರದ ವಿರುದ್ಧ ರಾಹುಲ್ ಕೂರಂಬುಗಳನ್ನು ಬಿಡುತ್ತಲೇ ಇರುತ್ತಾರೆ. ಬಿಜೆಪಿ ಸಹ ರಾಹುಲ್​ರನ್ನು ಟೀಕಿಸುವ ಸಂದರ್ಭಗಳನ್ನು ಬಿಟ್ಟುಕೊಡುವುದಿಲ್ಲ. ಅನೇಕ ಕೇಂದ್ರ ಮಂತ್ರಿಗಳು ರಾಹುಲ್ ಮೇಲೆ ಮುಗಿಬೀಳುತ್ತಾರೆ.

ರಾಜಕಾರಣದಲ್ಲಿ ಎದುರಾಳಿಗಳನ್ನು ಟೀಕಿಸುವುದು, ಹಂಗಿಸುವುದು ಇವೆಲ್ಲ ಸರ್ವೆಸಾಮಾನ್ಯ. ಆದರೆ ಇದಕ್ಕೊಂದು ಲಕ್ಷ್ಮಣರೇಖೆ ಇರಬೇಕಾಗುತ್ತದೆ ಮತ್ತು ಟೀಕೆ ರಚನಾತ್ಮಕವಾಗಿರಬೇಕಾಗುತ್ತದೆ. ಅದು ಪ್ರಜಾಪ್ರಭುತ್ವ ಒದಗಿಸಿರುವ ಸವಲತ್ತು. ಈ ಮಿತಿಯನ್ನು ಮೀರಿದಾಗ ಅದು ಪ್ರಲಾಪವಾಗಿ ಜನರ ಕಿವಿಗೆ ಬೀಳುತ್ತದೆ. ಸೈದ್ಧಾಂತಿಕ ಮತ್ತು ರಾಜಕೀಯ ಭೇದಗಳ ಸಂದರ್ಭದಲ್ಲಿ ತೋರಿಸುವ ವಾಕ್ಚಾತುರ್ಯ ಹಾಗೂ ಜಾಣ್ಮೆಯನ್ನು ಶಾಸನಗಳನ್ನು ರೂಪಿಸುವಲ್ಲಿ, ಜನಪರ ಆಡಳಿತ ನೀಡುವಲ್ಲಿ ತೋರ್ಪಡಿಸಲಿ ಎಂಬುದು ಜನರ ಅಪೇಕ್ಷೆ. ಸಂಸತ್ ಅಧಿವೇಶನದಲ್ಲಿ ಸಹ ಪಕ್ಷಗಳು ತಂತಮ್ಮ ವಾದ ಮುಂದಿಡಬಾರದು ಎಂದೇನಿಲ್ಲ; ಅದು ಒಂದು ಹಂತ ದಾಟಿ ಅನಿರ್ದಿಷ್ಟವಾಗಬಾರದಷ್ಟೆ.

ಕರೊನಾ ಸಾಂಕ್ರಾಮಿಕ ತಂದ ಸವಾಲುಗಳು, ದೇಶಕ್ಕೆ ಆಂತರಿಕ ಹಾಗೂ ಬಾಹ್ಯ ಬೆದರಿಕೆ, ಬೃಹತ್ ಪ್ರಮಾಣದಲ್ಲಿ ಉದ್ಯೋಗಸೃಷ್ಟಿಯಾಗಬೇಕಾದ ಅಗತ್ಯ- ಈ ಮುಂತಾದ ಸನ್ನಿವೇಶಗಳನ್ನು ದೇಶ ಎದುರಿಸುತ್ತಿರುವಾಗ ಆಡಳಿತಾರೂಢ ಮತ್ತು ವಿಪಕ್ಷಗಳು ಭಿನ್ನಾಭಿಪ್ರಾಯಗಳ ನಡುವೆಯೂ ಸಮನ್ವಯದ ಮೂಲಕ ಕಾರ್ಯನಿರ್ವಹಿಸುವುದು ಅಪೇಕ್ಷಣೀಯ. ಜನರು ಜನಪ್ರತಿನಿಧಿಗಳಿಂದ ಪ್ರಬುದ್ಧ ನಡವಳಿಕೆಯನ್ನು ನಿರೀಕ್ಷಿಸುತ್ತಾರೆ. ಕರೊನಾ ಸಾಂಕ್ರಾಮಿಕವನ್ನು ಭಾರತ ನಿಭಾಯಿಸಿದ ರೀತಿ ಹಾಗೂ ಜಾಗತಿಕ ಆರ್ಥಿಕ ಹಿಂಜರಿತದ ಸಂದರ್ಭದಲ್ಲಿಯೂ ಉಳಿದ ದೇಶಗಳಿಗೆ ಹೋಲಿಸಿದರೆ ಭಾರತದ ನಿರ್ವಹಣೆ ಮೆಚ್ಚುಗೆಗೆ ಪಾತ್ರವಾಗಿದೆ. ಭಾರತವು ಜಾಗತಿಕವಾಗಿ ಔನ್ನತ್ಯಕ್ಕೇರಬೇಕು ಎಂದಾದಲ್ಲಿ ಅದಕ್ಕೆ ಸಾಮೂಹಿಕ ಯತ್ನ ಮತ್ತು ಬದ್ಧತೆ ಅನಿವಾರ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net