

ಲೋಕಸಭೆ ಕಾರ್ಯಾಲಯವು ಅಸಂಸದೀಯ ಪದಗಳಿಗೆ ಸಂಬಂಧಿಸಿದಂತೆ ರೂಪಿಸಿರುವ ಕಿರುಹೊತ್ತಗೆಗೆ ವಿರೋಧ ಪಕ್ಷಗಳಿಂದ ಪ್ರತಿರೋಧ ವ್ಯಕ್ತವಾಗಿದೆ. ಸೋಮವಾರ ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಈ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಾಸ್ತವಗಳನ್ನು ವಿವರಿಸಲು ಬಳಸಲಾಗುವ ಪದಗಳನ್ನು ಅಸಂಸದೀಯ ಪದಗಳ ನಿರ್ಬಂಧ ಪಟ್ಟಿಗೆ ಸೇರಿಸಲಾಗಿದೆ ಎಂಬುದು ವಿರೋಧ ಪಕ್ಷಗಳ ತಕರಾರು. ಅಸತ್ಯ, ಭ್ರಷ್ಟತೆ, ನಾಚಿಕೆಗೇಡು, ವಂಚನೆ, ದುರುಪಯೋಗ, ಭ್ರಷ್ಟ, ಆಷಾಢಭೂತಿತನ, ಅದಕ್ಷ ಮುಂತಾದ ಪದಗಳನ್ನು ಕೂಡ ನಿರ್ಬಂಧಿಸಲಾಗಿದ್ದು, ಇದು ಪ್ರಜಾಪ್ರಭುತ್ವವಿರೋಧಿ ಕ್ರಮ ಎಂದು ಕಾಂಗ್ರೆಸ್ ನಾಯಕರು ಟೀಕಿಸಿದ್ದಾರೆ. ಯಾವುದೇ ಪದವನ್ನು ನಿಷೇಧಿಸಲಾಗಿಲ್ಲ. ಕಡತದಿಂದ ಅಭಿವ್ಯಕ್ತಿಗಳನ್ನು ಸಂದರ್ಭಾನುಸಾರ ಕಿತ್ತು ಹಾಕಲಾಗುವುದು ಎಂದು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಸ್ಪಷ್ಟೀಕರಣ ಕೊಟ್ಟಿದ್ದಾರೆ. ಸದನದ ಕಾರ್ಯಕಲಾಪಗಳಲ್ಲಿ ಪಾಲ್ಗೊಳ್ಳುವುದು, ಚರ್ಚೆಗಳಲ್ಲಿ ಭಾಗಿಯಾಗುವುದು, ಪ್ರಶ್ನೆಗಳನ್ನು ಕೇಳುವುದು ಸಂಸತ್ ಸದಸ್ಯರ ಹಕ್ಕು ಮತ್ತು ಕರ್ತವ್ಯವೇ ಆಗಿದೆ. ಶಾಸನಗಳನ್ನು ರೂಪಿಸುವ ಸಂಸದರು ಕಲಾಪಗಳಲ್ಲಿ ಯೋಗ್ಯ ರೀತಿಯಲ್ಲಿ ಮಾತನಾಡುವುದು ಅಪೇಕ್ಷಣೀಯ. ಸಂಸದರಿರಲಿ ಅಥವಾ ಶಾಸಕರಿರಲಿ ಅಥವಾ ಬೇರೆ ಜನಪ್ರತಿನಿಧಿಗಳಿರಲಿ, ಹೇಗೆ ಮಾತನಾಡಬೇಕು ಎಂಬ ಅರಿವು, ವಿವೇಚನೆಯನ್ನು ಹೊಂದಿರಬೇಕಾಗುತ್ತದೆ. ಇದನ್ನು ಯಾರೂ ಬಾಹ್ಯವಾಗಿ ತುಂಬಬೇಕು ಎಂದಿಲ್ಲ. ಸದನದ ಕಲಾಪಗಳಲ್ಲಿ ಹೇಗೆ ಮಾತನಾಡಬೇಕು, ಯಾವ ರೀತಿ ವರ್ತಿಸಬೇಕು ಎಂಬುದಕ್ಕೆ ಅಟಲ್ ಬಿಹಾರಿ ವಾಜಪೇಯಿ, ಸೋಮನಾಥ ಚಟರ್ಜಿ, ಪ್ರಣಬ್ ಮುಖರ್ಜಿ, ಲಾಲ್ಕೃಷ್ಣ ಆಡ್ವಾಣಿ ಅವರಂತಹ ದಿಗ್ಗಜ ಸಂಸದರ ನಡವಳಿಕೆಗಳು ಮಾದರಿಯಾಗಿವೆ. ಅತ್ಯುತ್ತಮ ಸಂಸದೀಯ ಪಟು ಪ್ರಶಸ್ತಿಯನ್ನು ನೀಡುವ ಪರಂಪರೆಯೂ ನಮ್ಮಲ್ಲಿದೆ.
ಅಸಂಸದೀಯ ಪದಗಳ ನಿರ್ಬಂಧ ಪಟ್ಟಿಗೆ ಸಂಬಂಧಿಸಿದಂತೆ ಯುಪಿಎ ಸರ್ಕಾರದ ಅವಧಿಯಲ್ಲಿ 2002ರಲ್ಲಿ 900 ಪುಟಗಳ ಪುಸ್ತಕವನ್ನೇ ಸಿದ್ಧಪಡಿಸಿ ಬಿಡುಗಡೆ ಮಾಡಲಾಗಿದೆ. ಈ ಪಟ್ಟಿಗೆ ಈಗ 62 ಹೊಸ ಪದಗಳನ್ನು ಸೇರಿಸಲಾಗಿದೆ ಎಂಬುದು ಕೇಂದ್ರ ಸರ್ಕಾರದ ಸಮಜಾಯಿಷಿ. ಈ ಅಂಕಿ-ಅಂಶಗಳನ್ನು ಇನ್ನೊಂದು ಮಗ್ಗುಲಿನಿಂದ ನೋಡಿದರೆ, ನಮ್ಮಸಂಸದರು ಹೊಸ ಹೊಸ ಅಸಂಸದೀಯ ಪದಗಳ ಬಳಕೆ ಮಾಡುತ್ತಿದ್ದಾರೆಯೇ ಅಥವಾ ಅವರು ಪದ ಬಳಕೆಯಲ್ಲಿ ಇನ್ನಷ್ಟು ಸಂವೇದನಾಶೀಲರಾಗಬೇಕಾದ ಅಗತ್ಯವಿದೆಯೇ ಎಂಬ ಪ್ರಶ್ನೆಯೂ ತಲೆದೋರುತ್ತದೆ. ಲೋಕಸಭೆಯಲ್ಲಿ 2015ರಿಂದ 2019ರ ನಡುವೆ ಪ್ರಶ್ನೋತ್ತರ ವೇಳೆಗೆ ಮೀಸಲಿದ್ದ ಅವಧಿಯಲ್ಲಿ ಶೇ. 40ರಷ್ಟನ್ನು ಮಾತ್ರ ಬಳಕೆ ಮಾಡಿಕೊಳ್ಳಲಾಗಿದ್ದು, ಉಳಿದ ಶೇ. 60ರಷ್ಟು ಗಲಾಟೆ, ಅಡಚಣೆ, ಮುಂದೂಡಿಕೆಗಳಲ್ಲಿ ಕಳೆದುಹೋಗಿದೆ. ಸಂಸತ್ ಕಲಾಪಗಳ ಬಹುಮೂಲ್ಯ ಸಮಯ ಹೇಗೆ ವ್ಯರ್ಥವಾಗುತ್ತಿದೆ ಎಂಬುದನ್ನು ಸೂಚಿಸಲು ಇದೊಂದೇ ಅಂಶ ಸಾಕು. ಆಡಳಿತ ಹಾಗೂ ಪ್ರತಿಪಕ್ಷಗಳ ಸದಸ್ಯರು ಇಂತಹ ಮಹತ್ವದ ಸಂಗತಿಯತ್ತ ಗಮನಹರಿಸಬೇಕು. ಅಸಂಸದೀಯ ಪದ ಪಟ್ಟಿಯ ಬಗ್ಗೆ ವಿವಾದ ಸೃಷ್ಟಿಸುವ ಬದಲು ಸ್ವಯಂ ನಿಯಂತ್ರಣದೊಂದಿಗೆ ಯೋಗ್ಯ ಪದಗಳನ್ನು ಪ್ರಯೋಗಿಸುವತ್ತ ಚಿತ್ತ ಹರಿಸಬೇಕು. ‘ಸಂಸದರು ಅಭಿಪ್ರಾಯ ವ್ಯಕ್ತಪಡಿಸಲು ಸ್ವತಂತ್ರರು. ಆದರೆ, ಆ ಮಾತುಗಳು ಸಂಸತ್ತಿನ ಘನತೆಗೆ ತಕ್ಕಂತಿರಬೇಕು’ ಎಂದು ಸ್ಪೀಕರ್ ಬಿರ್ಲಾ ಹೇಳಿರುವುದು ಪ್ರಸ್ತುತ ಸಂದರ್ಭದಲ್ಲಿ ತರ್ಕಬದ್ಧ ಹಾಗೂ ತೂಕಬದ್ಧ ಮಾತು.