

ಹಸು, ಎತ್ತು, ಎಮ್ಮೆ, ಕುರಿ, ಮೇಕೆ ಮೊದಲಾದ ಜಾನುವಾರುಗಳ ಆರೋಗ್ಯದಲ್ಲಿ ಏರುಪೇರು ಕಂಡುಬಂದಾಗ ತಕ್ಷಣವೇ ಸ್ಪಂದಿಸಿ ದಿನದ 24 ಗಂಟೆ ಕಾಲ ತುರ್ತು ಚಿಕಿತ್ಸೆ ನೀಡುವ ಉದ್ದೇಶದೊಂದಿಗೆ ಇಡೀ ರಾಷ್ಟ್ರದಲ್ಲಿಯೇ ಮೊದಲ ಬಾರಿಗೆ ಜಾರಿಗೊಳಿಸಲಾದ ವಿಶಿಷ್ಟ ಯೋಜನೆ ಎಂಬ ಖ್ಯಾತಿಗೆ ಪಶು ಸಂಜೀವಿನಿ ಯೋಜನೆ ಪಾತ್ರವಾಗಿತ್ತು. ಸ್ವತಃ ಪ್ರಧಾನಿ ನರೇಂದ್ರ ಮೋದಿ ಈ ಯೋಜನೆಯನ್ನು ಶ್ಲಾಘಿಸಿದ್ದರು. ಕೇಂದ್ರ ಸರ್ಕಾರದಿಂದ ಈ ಯೋಜನೆಗೆ ವ್ಯಾಪಕ ಪ್ರಮಾಣದಲ್ಲಿ ನೆರವೂ ದೊರೆತಿತ್ತು. ಆದರೆ, ಹಿಂದಿನ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಪಶು ಸಂಚಾರಿ ಚಿಕಿತ್ಸಾಲಯ ಯೋಜನೆಯು ಚಾಲನೆ ಸಿಕ್ಕು ವರ್ಷ ಕಳೆಯುವಷ್ಟರಲ್ಲಿಯೇ ತನ್ನ ಉದ್ದೇಶಿತ ಗುರಿ ಸಾಧಿಸುವಲ್ಲಿ ವಿಫಲವಾಗಿರುವ ಲಕ್ಷಣಗಳು ಗೋಚರಿಸುತ್ತಿವೆ. ಇದಕ್ಕಾಗಿ ವ್ಯಯಿಸಿದ ಅಪಾರ ಪ್ರಮಾಣದ ಸಂಪನ್ಮೂಲ ಕೂಡ ಸೂಕ್ತವಾಗಿ ಬಳಕೆಯಾಗದೆ ಹಾಳಾಗುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ.
ಹಿಂದಿನ ಸರ್ಕಾರದಲ್ಲಿ ಪ್ರಭು ಚವ್ಹಾಣ ಅವರು ಪಶು ಸಂಗೋಪನಾ ಸಚಿವರಾಗಿದ್ದ ಅವಧಿಯಲ್ಲಿ 2022ರ ಮೇ ತಿಂಗಳಲ್ಲಿ ಪಶು ಸಂಜಿವೀನಿ ಯೋಜನೆಗೆ ರಾಜ್ಯದಲ್ಲಿ ಚಾಲನೆ ನೀಡಲಾಗಿತ್ತು. ಅನಾರೋಗ್ಯದ ತುರ್ತು ಸಂದರ್ಭದಲ್ಲಿ ಜನರು 108ಕ್ಕೆ ಕರೆ ಮಾಡಿದರೆ ಆಂಬ್ಯುಲೆನ್ಸ್ ಮನೆ ಬಾಗಿಲಿಗೆ ಬರುವ ರೀತಿಯಲ್ಲಿ, ಜಾನುವಾರು ಮಾಲೀಕರು ಸಹಾಯವಾಣಿ ಸಂಖ್ಯೆ 1962ಕ್ಕೆ ಕರೆ ಮಾಡಿದರೆ ತಕ್ಷಣ ಆಂಬ್ಯುಲೆನ್ಸ್ ನೆರವಿಗೆ ಧಾವಿಸುವ ಯೋಜನೆ ಇದು. ಆದರೆ, 44 ಕೋಟಿ ರೂಪಾಯಿ ವೆಚ್ಚದಲ್ಲಿ ಖರೀದಿಸಿರುವ 290 ಆಂಬ್ಯುಲೆನ್ಸ್ಗಳು ವರ್ಷ ಕಳೆಯುವಷ್ಟರಲ್ಲಿಯೇ ಮೂಲೆಗುಂಪಾಗಿ ತುಕ್ಕು ಹಿಡಿಯತೊಡಗಿವೆ ಎಂಬುದು ಯೋಜನೆ ವೈಫಲ್ಯದತ್ತ ಸಾಗುತ್ತಿರುವ ಸಂಕೇತವಾಗಿದ್ದು, ಸಾರ್ವಜನಿಕ ಹಣ ಹಾಳಾಗುತ್ತಿರುವ ಸ್ಪಷ್ಟ ನಿದರ್ಶನವಾಗಿದೆ.
ಪಶು ಸಂಜೀವಿನಿ ಆಂಬುಲೆನ್ಸ್ಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ 60: 40 ಅನುಪಾತದ ಅನುದಾನದ ಮೂಲಕ ನಿರ್ವಹಿಸಲಾಗುತ್ತದೆ. ಪ್ರತಿ ಒಂದು ಲಕ್ಷ ಜಾನುವಾರುಗಳಿಗೆ ಒಂದು ಸಂಚಾರಿ ಚಿಕಿತ್ಸಾ ವಾಹನವನ್ನು ಒದಗಿಸಲು ಕೇಂದ್ರ ಸರ್ಕಾರ ಉದ್ದೇಶಿಸಿದೆ. ಪ್ರತಿ ವರ್ಷ ವಾಹನ ಹಾಗೂ ಸಿಬ್ಬಂದಿಯ ನಿರ್ವಹಣೆಗೆ ಹೆಚ್ಚುವರಿಯಾಗಿ 50 ಕೋಟಿ ರೂ. ಅನುದಾನವನ್ನು ಕೇಂದ್ರ ಹಾಗೂ ರಾಜ್ಯದ ಪಾಲುದಾರಿಕೆಯಲ್ಲಿ ನೀಡಲಾಗಿದೆ ಎಂದು ಹಿಂದಿನ ಸರ್ಕಾರ ಹೆಮ್ಮೆಯಿಂದಲೇ ಹೇಳಿಕೊಂಡಿತ್ತು.
ಈ ಯೋಜನೆಯಡಿ ಮಹಾರಾಷ್ಟ್ರ ಮೂಲದ ಕಂಪನಿಯೊಂದಕ್ಕೆ ಮೂರು ವರ್ಷ ನಿರ್ವಹಣೆಗೆ 172 ಕೋಟಿ ರೂಪಾಯಿಗಳಿಗೆ ಗುತ್ತಿಗೆ ನೀಡಲಾಗಿದೆ ಎನ್ನಲಾಗಿದೆ. ಈ ಸಂಸ್ಥೆಯು ಈಗಾಗಲೇ ಹೊರಗುತ್ತಿಗೆ ಆಧಾರದಲ್ಲಿ ಪ್ರತಿ ವಾಹನಕ್ಕೆ ಒಬ್ಬ ಪಶು ವೈದ್ಯ, ಒಬ್ಬ ಅಟೆಂಡರ್, ಒಬ್ಬ ಡ್ರೖೆವರ್ ನೇಮಕ ಮಾಡಿದೆ ಎನ್ನಲಾಗಿದ್ದರೂ ನೇಮಕಾತಿ ವಿವರಗಳ ಕುರಿತು ಸ್ಪಷ್ಟತೆ ಇಲ್ಲ. ಸಂಬಳ ನೀಡುವಲ್ಲಿಯೂ ಕೇಂದ್ರ ಸರ್ಕಾರದ ಮಾರ್ಗಸೂಚಿ ಉಲ್ಲಂಘಿಸಲಾಗಿದೆ ಎಂಬ ಆರೋಪವಿದೆ. ಯೋಜನೆಯ ಮೂಲ ಉದ್ದೇಶದಂತೆ ದಿನದ 24 ಗಂಟೆಗಳ ಕಾಲ ಸೇವೆ ಒದಗಿಸಬೇಕಾಗಿದ್ದರೂ ಬೆಳಗ್ಗೆ 9 ರಿಂದ ಸಂಜೆ 5ರವರೆಗೆ ಟೆಂಡರ್ನಲ್ಲಿ ಕಾಲಾವಧಿ ನಿಗದಿಪಡಿಸಲಾಗಿದೆ. ಇವೆಲ್ಲ ಗುರುತರ ಆಪಾದನೆಗಳಾಗಿದ್ದು, ಸೂಕ್ತ ತನಿಖೆಯನ್ನು ನಡೆಸಿ ತಪ್ಪಿತಸ್ಥರ ವಿರುದ್ಧ ಗಂಭೀರ ಕ್ರಮಗಳನ್ನು ನೂತನ ಸರ್ಕಾರ ಕೈಗೊಳ್ಳಬೇಕಿದೆ. 108 ಆಂಬುಲೆನ್ಸ್ ಗಳ ಮಾದರಿಯಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ ಈ ಯೋಜನೆಯನ್ನು ಸೂಕ್ತ ರೀತಿಯಲ್ಲಿ ಅನುಷ್ಠಾನಗೊಳಿಸುವುದು ಅಪೇಕ್ಷಣಿಯವಾಗಿದೆ.