ಸಂಪಾದಕೀಯ | ನೀರಾವರಿಗೆ ಆದ್ಯತೆ; ಆರ್ಥಿಕ ಸಂಕಷ್ಟದ ನಡುವೆಯೂ ಗಮನ ಅಗತ್ಯ

Editorial
Published on

ರಾಜ್ಯ ವಿಧಾನ ಮಂಡಲ ಅಧಿವೇಶನ ಸೋಮವಾರ ಆರಂಭವಾಗಿದ್ದು, ಸಹಜವಾಗಿಯೇ ವಿವಿಧ ವಿಷಯಗಳು ಚರ್ಚೆಯಾಗುತ್ತಿವೆ. ವಿಪಕ್ಷಗಳು ಬೆಲೆಯೇರಿಕೆಯನ್ನು ಪ್ರಮುಖ ಅಸ್ತ್ರವಾಗಿಸಿಕೊಂಡು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿವೆ. ಈ ನಡುವೆ, ಮಂಗಳವಾರ ರಾಜ್ಯದ ಹಲವು ನೀರಾವರಿ ಯೋಜನೆಗಳ ಕುರಿತು ಚರ್ಚೆಯಾಗಿದ್ದು ವಿಶೇಷ. ಎತ್ತಿನಹೊಳೆ ಯೋಜನೆ ವಿಳಂಬ ಆಗುತ್ತಿರುವ ಬಗ್ಗೆ ಪ್ರಸ್ತಾಪವಾಗಿ, ಮಾತಿನ ಚಕಮಕಿಗೂ ಕಾರಣವಾಯಿತು. ಮಾಜಿ ಉಪಮುಖ್ಯಮಂತ್ರಿ ಪರಮೇಶ್ವರ ಅವರು ಎತ್ತಿನಹೊಳೆ ಯೋಜನೆ ಪರಿಷ್ಕರಣೆ ಮತ್ತು ಭೂ ಪರಿಹಾರ ವಿಚಾರದಲ್ಲಿ ಸರ್ಕಾರದ ಮೀನಮೇಷದಿಂದಾಗಿ ಯೋಜನೆ ವೆಚ್ಚ 12 ಸಾವಿರ ಕೋಟಿ ರೂಗಳಿಂದ 23 ಸಾವಿರ ಕೋಟಿ ರೂಪಾಯಿಗೆ ಏರಿದೆ ಎಂದು ಸದನದ ಗಮನಕ್ಕೆ ತಂದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಹ ಚರ್ಚೆಯಲ್ಲಿ ಭಾಗವಹಿಸಿ, ‘ಎತ್ತಿನಹೊಳೆ ಯೋಜನೆಯಿಂದ 4 ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುತ್ತೇವೆ. ಯೋಜನೆ ವಿಳಂಬಕ್ಕೆ ಎಲ್ಲರೂ ಹೊಣೆಗಾರರು’ ಎಂದು ವಿವರಿಸಿದರು.

ಇನ್ನೊಂದೆಡೆ, ಬೀದರ್ ಜಿಲ್ಲೆಯ ನೀರಾವರಿ ಯೋಜನೆಗಳ ಅನುಷ್ಠಾನ, ರಾಜ್ಯದ ಪಾಲಿನ 2 ಟಿಎಂಸಿ ನೀರು ಬಳಕೆ ವಿಷಯದಲ್ಲಿ ಬೀದರ್ ಜಿಲ್ಲೆಯ ಶಾಸಕರು ಪಕ್ಷಾತೀತವಾಗಿ ದನಿ ಎತ್ತಿದರು. ಅಧಿವೇಶನದಲ್ಲಿ ನೀರಾವರಿ ವಿಷಯ ಚಿಂತನಮಂಥನಕ್ಕೆ ಒಳಗಾಗಿದ್ದು ಸೂಕ್ತವಾಗಿಯೇ ಇದೆ. ಏಕೆಂದರೆ, ಯಾವುದೇ ಪ್ರದೇಶದ ಅಭಿವೃದ್ಧಿಯಲ್ಲಿ ನೀರಾವರಿಗೆ ಪ್ರಮುಖ ಸ್ಥಾನ ಇದೆ. ಆದರೆ, ರಾಜ್ಯ-ರಾಜ್ಯಗಳ ನಡುವೆ ಜಲವಿವಾದ, ವಿಷಯ ಕೋರ್ಟ್ ಮೆಟ್ಟಿಲೇರುವುದು- ಹೀಗೆ ನಾನಾ ಕಾರಣಗಳಿಂದಾಗಿ ನಮ್ಮ ದೇಶದಲ್ಲಿ ನೀರಾವರಿ ಯೋಜನೆಗಳು ವಿಳಂಬವಾಗುವುದು ಹೊಸದೇನಲ್ಲ. ಈಗೇನೋ ಅಂತಾರಾಜ್ಯ ಜಲವಿವಾದ ಪರಿಹಾರಕ್ಕೆ ಏಕ ನ್ಯಾಯಾಧಿಕರಣ ಅಸ್ತಿತ್ವಕ್ಕೆ ಬಂದಿದೆ. ಯೋಜನೆ ತಡವಾದರೆ, ವೆಚ್ಚ ವಿಪರೀತ ಏರುವುದರ ಜತೆಗೆ, ಫಲಾನುಭವಿ ಜನರು ಮತ್ತಷ್ಟು ಕಾಲ ಕಾಯುವಂತೆ ಆಗುತ್ತದೆ. ಇದರಿಂದ ಅಭಿವೃದ್ಧಿಗೂ ಹಿನ್ನಡೆ, ಜನರಿಗೂ ಆರ್ಥಿಕ ನಷ್ಟವಾಗುತ್ತದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಹಿಂದೆ ಜಲಸಂಪನ್ಮೂಲ ಇಲಾಖೆಯನ್ನು ನಿಭಾಯಿಸಿದ್ದು, ರಾಜ್ಯದ ನೀರಾವರಿ ಯೋಜನೆಗಳ ಸ್ಥಿತಿಗತಿ ಮತ್ತು ಒಳಹೊರಗನ್ನು ಚೆನ್ನಾಗಿ ಅರಿತಿದ್ದಾರೆ.

ಅಲ್ಲದೆ, ಜಲವಿವಾದಗಳ ಬಗ್ಗೆಯೂ ಅವರಿಗೆ ತಿಳಿವಳಿಕೆಯಿದೆ. ಕೃಷ್ಣ, ಮಹದಾಯಿ, ಮೇಕೆದಾಟು ಮುಂತಾದ ಅಂತಾರಾಜ್ಯ ಜಲವಿವಾದಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವತ್ತಲೂ ಅವರು ಬದ್ಧತೆ ಪ್ರದರ್ಶಿಸಿದ್ದಾರೆ. ಅಗತ್ಯಬಿದ್ದಲ್ಲಿ ಕಾನೂನು ಹೋರಾಟ, ರಾಜಕೀಯ ಯತ್ನಕ್ಕೂ ಸೈ ಎಂದಿದ್ದಾರೆ. ಎಲ್ಲ ಪಕ್ಷಗಳೂ ನೀರಾವರಿ ಯೋಜನೆಗಳ ಬಗ್ಗೆ ಇಂತಿಷ್ಟು ಹಣ ತೆಗೆದಿರಿಸುವುದಾಗಿ ವಾಗ್ದಾನ ಮಾಡುತ್ತವಾದರೂ ಈಡೇರುವುದು ವಿರಳ. ಈಗ ಕರೊನಾ ಕಾರಣದಿಂದಾಗಿ ಎಲ್ಲ ವಲಯಗಳು ಸಂಕಷ್ಟಕ್ಕೀಡಾಗಿ, ಸರ್ಕಾರಗಳಿಗೆ ಸಹ ಆದಾಯ ತಗ್ಗಿದೆ. ಹೀಗಾಗಿ ಅಂದುಕೊಂಡಷ್ಟು ಹಣವನ್ನು ಯೋಜನೆಗಳಿಗೆ ಬಿಡುಗಡೆ ಮಾಡಲು ಆಗುತ್ತಿಲ್ಲ. ಆಯಾ ಇಲಾಖೆಗಳಿಗೆ ಬಜೆಟ್​ನಲ್ಲಿ ಮೀಸಲಿಟ್ಟ ಹಣದಲ್ಲೇ ಕಡಿತ ಮಾಡುವಂಥ ಸನ್ನಿವೇಶವಿದೆ. ಹೀಗಿದ್ದರೂ, ನೀರಾವರಿಯಂಥ ಆದ್ಯತಾ ವಲಯಕ್ಕೆ ಹಣಕಾಸಿನ ಕೊರತೆ ತುಂಬಾ ಆಗದಂತೆ ನೋಡಿಕೊಳ್ಳುವ ಹೊಣೆಗಾರಿಕೆ ಸಂಬಂಧಪಟ್ಟವರ ಮೇಲಿರುವುದನ್ನು ಮರೆಯಲಾಗದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net