

ಕರ್ನಾಟಕ ಭೂ ಕಬಳಿಕೆ ನಿಷೇಧ (ತಿದ್ದುಪಡಿ) ಅಧಿನಿಯಮ 2022ಕ್ಕೆ ರಾಜ್ಯಪಾಲರು ಅಂಕಿತ ಹಾಕುವುದರೊಂದಿಗೆ ಸಾಕಷ್ಟು ರೈತರು ಸಮಾಧಾನದ ನಿಟ್ಟುಸಿರು ಬಿಡುವಂತಾಗಿದೆ. ಸರ್ಕಾರಿ ಭೂಮಿ ಕಬಳಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ, ಜಮೀನು ಒತ್ತುವರಿ ಮಾಡಿಕೊಂಡವರನ್ನು ಶಿಕ್ಷಿಸಲು ರಾಜ್ಯ ಸರ್ಕಾರ ಈ ಹಿಂದೆ ಕಠಿಣ ಕಾನೂನು ಜಾರಿಗೊಳಿಸಿತ್ತು. ಇದರಿಂದ ರಾಜ್ಯದ ಸಾಕಷ್ಟು ರೈತರು ಸಂಕಷ್ಟಕ್ಕೆ ಸಿಲುಕಿದ್ದರು. ಈಗ ಸರ್ಕಾರ ಕಾನೂನಿಗೆ ತಿದ್ದುಪಡಿ ತಂದಿದ್ದು, ಯಾವ ಪ್ರದೇಶದ ಒತ್ತುವರಿಯು ಕಾನೂನಿನ ಚೌಕಟ್ಟಿನಡಿ ಬರುತ್ತದೆ ಎಂಬುದನ್ನು ಸ್ಪಷ್ಟಪಡಿಸಿದೆ. ಜೀವನೋಪಾಯಕ್ಕೆ ಜಮೀನು ಒತ್ತುವರಿ ಮಾಡಿಕೊಂಡಿದ್ದ ಗ್ರಾಮೀಣ ಭಾಗದ ಅನೇಕ ರೈತರು ಎದುರಿಸುತ್ತಿದ್ದ ಬಂಧನ ಭೀತಿಯನ್ನು ಈ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ದೂರ ಮಾಡುತ್ತಿರುವುದು ಸರ್ಕಾರದ ಬಡ ರೈತರ ಪರ ನಿಲುವನ್ನು ಪ್ರದರ್ಶಿಸುತ್ತದೆ.
ಇದೇ ರೀತಿಯಲ್ಲಿ ಮಲೆನಾಡು, ಕರಾವಳಿ ಪ್ರದೇಶಗಳಲ್ಲಿನ ಬಾಣೆ, ಬೆಟ್ಟ, ಸೊಪ್ಪಿನಬೆಟ್ಟ, ಕುಮ್ಕಿ, ಕಾನು ಜಮೀನುಗಳನ್ನು ಹಲವಾರು ದಶಕಗಳಿಂದ ಸಾಗುವಳಿ ಮಾಡುತ್ತಿರುವ ರೈತರಿಗೆ ಹಕ್ಕುಪತ್ರ ನೀಡಲು ಮುಂದಾಗಿರುವುದು ಕೂಡ ಸ್ವಾಗತಾರ್ಹ ಕ್ರಮವಾಗಿದೆ. ಕರ್ನಾಟಕ ಭೂ ಕಬಳಿಕೆ ನಿಷೇಧ ಕಾಯ್ದೆ 2011ರ ಪ್ರಕಾರ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲು 2015ರ ಆಗಸ್ಟ್ನಲ್ಲಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ 2016ರ ಆಗಸ್ಟ್ 16ರಂದು ಈ ವಿಶೇಷ ನ್ಯಾಯಾಲಯಗಳನ್ನು ಬೆಂಗಳೂರಿನಲ್ಲಿ ಉದ್ಘಾಟಿಸಲಾಗಿತ್ತು. ಈ ಕಾಯ್ದೆಯ ಪ್ರಕಾರ ಭೂ ಒತ್ತುವರಿದಾರರಿಗೆ 5 ವರ್ಷ ಜೈಲು, 50 ಸಾವಿರ ರೂ. ದಂಡ, ನೆರವಾಗುವ ಅಧಿಕಾರಿಗಳಿಗೆ 1 ಲಕ್ಷ ರೂ. ದಂಡ, 5 ವರ್ಷ ಜೈಲು ಶಿಕ್ಷೆ ವಿಧಿಸಲು ಅವಕಾಶ ಕಲ್ಪಿಸಲಾಗಿತ್ತು.
ಬೆಂಗಳೂರು ಸೇರಿದಂತೆ ಬಹುತೇಕ ಪ್ರಮುಖ ನಗರಗಳಲ್ಲಿ ಬಲಾಢ್ಯರು ಸರ್ಕಾರಿ ಭೂಮಿಗಳನ್ನು ಒತ್ತುವರಿ ಮಾಡುತ್ತಿದ್ದರೂ ಯಾರೊಬ್ಬರಿಗೂ ಶಿಕ್ಷೆಯಾಗುತ್ತಿಲ್ಲ. ಇಂತಹವರಿಗೆಲ್ಲ ರಾಜಕೀಯ ಕೃಪಾಕಟಾಕ್ಷ ದೊರೆಯುತ್ತಿದೆ. ಸಣ್ಣಪುಟ್ಟ ರೈತರು ಮಾತ್ರ ಶಿಕ್ಷೆಗೆ ಒಳಗಾಗುತ್ತಿದ್ದಾರೆ ಎಂಬ ಆರೋಪಗಳು ವ್ಯಾಪಕವಾಗಿ ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಸರ್ಕಾರವು ಗ್ರಾಮೀಣ ಭಾಗದ ರೈತರನ್ನು ಬಿಟ್ಟು ಬಲಾಢ್ಯರಿಂದ ಒತ್ತುವರಿ ತೆರವು ಮಾಡಿಸುವ ಕಾನೂನಿಗೆ ತಿದ್ದುಪಡಿ ತಂದಿದೆ. ಮಳೆಗಾಲದ ಅಧಿವೇಶನದ ವೇಳೆ ಸೆ. 14ರಂದು ಸರ್ಕಾರವು ತಿದ್ದುಪಡಿ ಮಸೂದೆಯನ್ನು ಮಂಡಿಸಿತ್ತು. ಈ ವೇಳೆ, ಪಕ್ಷಾತೀತವಾಗಿ ಬೆಂಬಲ ವ್ಯಕ್ತವಾಗಿತ್ತು. ಹಲವು ಶಾಸಕರು ತಮ್ಮ ಭಾಗದ ರೈತರ ಕೋರ್ಟ್ ಅಲೆದಾಟವನ್ನು ಪ್ರಸ್ತಾಪಿಸಿ, ಸರ್ಕಾರದ ಕ್ರಮವನ್ನು ಸ್ವಾಗತಿಸಿದ್ದರು.
ಆದರೆ, ನಗರ ಪ್ರದೇಶಕ್ಕೆ ಹೊಂದಿಕೊಂಡಂತೆ ಭೂ ಒತ್ತುವರಿ ಮಾಡಿಕೊಂಡವರಿಗೆ ಈ ತೀರ್ವನದಿಂದ ಅನುಕೂಲವಾಗಲಿದೆ ಎಂದು ಹಿರಿಯ ಸದಸ್ಯರು ಕಳವಳ ವ್ಯಕ್ತಪಡಿಸಿದರು. ಬಳಿಕ ಸರ್ಕಾರ ಮಸೂದೆಯನ್ನು ನಗರ, ಪಟ್ಟಣ ಪ್ರದೇಶದ ಹೊರಗಿನ ಮಿತಿಯನ್ನು ಪ್ರಸ್ತಾಪಿಸಿ ವಿಧಾನಸಭೆಯಲ್ಲಿ ಮರು ಮಂಡಿಸಿ ಅನುಮೋದನೆ ಪಡೆದುಕೊಂಡಿತು. ತಿದ್ದುಪಡಿ ಉದ್ದೇಶದ ಆಶಯಕ್ಕೆ ಅನುಗುಣವಾಗಿ ಈ ಕಾಯ್ದೆಯನ್ನು ಸೂಕ್ತ ರೀತಿಯಲ್ಲಿ ಜಾರಿಗೆ ತರುವ ಮೂಲಕ ರೈತರ ಹಿತಾಸಕ್ತಿ ಕಾಪಾಡಬೇಕಿದೆ. ಬಡ ರೈತರಿಗೆ ಕಾಯ್ದೆಯಲ್ಲಿ ನೀಡಿರುವ ವಿನಾಯಿತಿಯನ್ನು ಬಲಾಢ್ಯರು ದುರುಪಯೋಗ ಮಾಡಿಕೊಳ್ಳದಂತೆ ಎಚ್ಚರ ವಹಿಸಬೇಕಾಗಿದೆ.