

ದಿನದಿಂದ ದಿನಕ್ಕೆ ಮಾಹಿತಿ-ತಂತ್ರಜ್ಞಾನದ ವ್ಯಾಪ್ತಿ ಹೆಚ್ಚುತ್ತಿದ್ದು, ಸಮಾಜದ ಎಲ್ಲ ವಲಯಗಳಿಗೆ ವ್ಯಾಪಿಸಿಕೊಂಡಿದೆ. ತಂತ್ರಜ್ಞಾನ, ಅದನ್ನು ಒದಗಿಸುತ್ತಿರುವ ಮಾಧ್ಯಮಗಳಾದ ಡಿಜಿಟಲ್ ಸಾಧನಗಳನ್ನು ಸರಿಯಾಗಿ ಬಳಸಿಕೊಂಡರೆ ವರ, ಇಲ್ಲವಾದಲ್ಲಿ ಅದುವೇ ದೊಡ್ಡ ಶಾಪವಾಗಿ ಕಾಡುತ್ತದೆ. ಸೈಬರ್ ಅಪರಾಧದ ಹೆಚ್ಚುತ್ತಿರುವ ಪ್ರಮಾಣ ಆತಂಕಕ್ಕೆ ಕಾರಣವಾಗಿದೆ. ಮಕ್ಕಳಿಗೆ ಈಗ ಸುಲಭವಾಗಿ ಮೊಬೈಲ್, ಇಂಟರ್ನೆಟ್ ಲಭ್ಯವಾಗುತ್ತಿದ್ದು, ಇದು ಹೊಸ ಸಮಸ್ಯೆಯನ್ನೂ ಸೃಷ್ಟಿಸಿದೆ. ಇತ್ತೀಚೆಗೆ ಬಿಡುಗಡೆಯಾದ ನ್ಯಾಷನಲ್ ಕ್ರೖೆಮ್್ಸ ರೆಕಾರ್ಡ್ ಬ್ಯೂರೋದ (ಎನ್ಸಿಆರ್ಬಿ) ಅಂಕಿಅಂಶಗಳು ಹಲವು ಆಘಾತಕಾರಿ ಸಂಗತಿಗಳನ್ನು ಹೊರಹಾಕಿವೆ. 2019ಕ್ಕೆ ಹೋಲಿಸಿದರೆ 2020ರಲ್ಲಿ ಮಕ್ಕಳ ವಿರುದ್ಧದ ಸೈಬರ್ ಅಪರಾಧ ಪ್ರಮಾಣ ಶೇಕಡ 400 ಏರಿಕೆಯಾಗಿದೆ. ಈ ಪೈಕಿ ಬಹುತೇಕ ಪ್ರಕರಣ ಮಕ್ಕಳ ಲೈಂಗಿಕ ಶೋಷಣೆಗೆ ಸಂಬಂಧಿಸಿದವು ಎಂಬುದು ಕಳವಳಕಾರಿ ಸಂಗತಿ. ಮಾಹಿತಿ-ತಂತ್ರಜ್ಞಾನ ಕಾಯ್ದೆ ಪ್ರಕಾರ 2020ರಲ್ಲಿ ದಾಖಲಾಗಿರುವ 842 ಆನ್ಲೈನ್ ಅಪರಾಧಗಳ ಪೈಕಿ 738 ಪ್ರಕರಣಗಳು ಮಕ್ಕಳನ್ನು ಲೈಂಗಿಕ ಶೋಷಣೆಗೆ ಗುರಿಪಡಿಸಿರುವಂಥದ್ದಾಗಿವೆ. ಉತ್ತರಪ್ರದೇಶದಲ್ಲಿ ಅತಿ ಹೆಚ್ಚು ಅಂದರೆ 170, ಕರ್ನಾಟಕದಲ್ಲಿ 144, ಮಹಾರಾಷ್ಟ್ರದಲ್ಲಿ 137 ಪ್ರಕರಣಗಳು ದಾಖಲಾಗಿವೆ.
ಇಲ್ಲಿ ಬರೀ ಮಕ್ಕಳನ್ನು ಅಥವಾ ವ್ಯವಸ್ಥೆಯನ್ನು ದೂರುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಬದಲಾಗಿ, ಕರೊನಾದ ನಂತರದ ದಿನಗಳಲ್ಲಿ ಬದಲಾದ ಸ್ಥಿತಿಯಲ್ಲಿ ಮಕ್ಕಳನ್ನು ಭಾವನಾತ್ಮಕವಾಗಿ ಅರ್ಥಮಾಡಿಕೊಳ್ಳಲು ಮತ್ತು ಅವರನ್ನು ಸೃಜನಶೀಲ ಹಾಗೂ ಹೊಸ ಚಟುವಟಿಕೆಗಳಲ್ಲಿ ತೊಡಗಿಸುವ ನಿಟ್ಟಿನಲ್ಲಿ ಮಾರ್ಗದರ್ಶನ ಮಾಡಲು ಬಹುತೇಕ ಪಾಲಕರು, ಶಿಕ್ಷಕರು ಸೋತಿದ್ದಾರೆ ಎಂಬ ವಾಸ್ತವವನ್ನು ಒಪ್ಪಿಕೊಳ್ಳಬೇಕಿದೆ. ಶಾಲೆಗಳು ಇಲ್ಲದ್ದರಿಂದ, ಲಾಕ್ಡೌನ್ ಪರಿಣಾಮ ಸ್ನೇಹಿತರ ಒಡನಾಟ ತಪ್ಪಿದ್ದರಿಂದ ಏಕಾಂತವಾಸ ಅನುಭವಿಸಿದ ಮಕ್ಕಳು ಅನಿವಾರ್ಯವಾಗಿ ಇಂಟರ್ನೆಟ್ ಲೋಕ ಪ್ರವೇಶಿಸಿರಬಹುದು. ಅಲ್ಲಿನ ಒಳಿತು, ಕೆಡುಕುಗಳ ಬಗ್ಗೆ ಯಾವುದೇ ಅರಿವಿಲ್ಲದ ಮಕ್ಕಳು ಸುಲಭವಾಗಿ ಸೈಬರ್ ಅಪರಾಧ, ಅದರಲ್ಲೂ ಲೈಂಗಿಕ ಶೋಷಣೆಗೆ ಗುರಿಯಾಗುತ್ತಿರುವುದು ಬೇಸರದ ಸಂಗತಿ. ಡಿಜಿಟಲ್ ಲೋಕದಲ್ಲಿ ಮಕ್ಕಳ ಡಿಜಿಟಲ್ ಹಕ್ಕುಗಳ ರಕ್ಷಣೆಯಾಗಬೇಕು ಎಂಬ ಚರ್ಚೆ ಗರಿಗೆದರಿದೆ. ಆದರೆ, ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಸ್ಪಷ್ಟ ನೀತಿ ರೂಪಿಸಬೇಕಿದೆ. ಹಾಗಂತ, ಇದು ಬರೀ ಸರ್ಕಾರದ ಜವಾಬ್ದಾರಿ ಅಂತ ಭಾವಿಸಿ ಸುಮ್ಮನಿರುವಂತಿಲ್ಲ. ಈ ವಿಷಯದಲ್ಲಿ ಪಾಲಕರು ಮತ್ತು ಶಿಕ್ಷಕರ ಮೇಲೆಯೂ ಮಹತ್ತರ ಜವಾಬ್ದಾರಿ ಇದೆ. ಮಕ್ಕಳಿಗೆ ಹೊಸ ಕೌಶಲಗಳನ್ನು ಹೇಳಿಕೊಡುವಂತೆ ಇಂಟರ್ನೆಟ್ ಶಿಕ್ಷಣವನ್ನೂ ನೀಡಬೇಕಿದೆ. ಇಂಟರ್ನೆಟ್ ಬಳಕೆ ಹೇಗೆ, ಎಷ್ಟು, ಏಕೆ ಈ ಎಲ್ಲ ವಿಚಾರಗಳ ಬಗ್ಗೆ ಮಕ್ಕಳಿಗೆ ಮಾರ್ಗದರ್ಶನ ನೀಡಬೇಕಾದ ಅವಶ್ಯಕತೆ ಇದೆ. ಇಂಥ ಅರಿವು ಮಕ್ಕಳಿಗೆ ಮನೆಗಳಲ್ಲೂ, ಶಾಲೆಗಳಲ್ಲೂ ನೀಡುವಂಥ ವ್ಯವಸ್ಥೆ ರೂಪುಗೊಳ್ಳಬೇಕು. ಆಗಲೇ ಇಂಥ ಪ್ರಕರಣಗಳನ್ನು ತಡೆಯಲು, ತಂತ್ರಜ್ಞಾನದ ಸಾಧನವನ್ನು ರಚನಾತ್ಮಕವಾಗಿ ಬಳಸಿಕೊಳ್ಳಲು ಸಾಧ್ಯವಾಗಬಲ್ಲದು.