

ನ್ಯಾಷನಲ್ ಹೆರಾಲ್ಡ್ ಪತ್ರಿಕೆ- ಅಸೋಸಿಯೇಷನ್ ಜರ್ನಲ್ಸ್ಗೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು (ಇಡಿ) ರಾಹುಲ್ ಗಾಂಧಿ ಅವರ ವಿಚಾರಣೆ ನಡೆಸುತ್ತಿದೆ. ಈ ಕಾನೂನು ಪ್ರಕ್ರಿಯೆ ವಿರೋಧಿಸಿ ಕಾಂಗ್ರೆಸ್ ಪಕ್ಷದ ನಾಯಕರು ದೇಶಾದ್ಯಂತ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಸೋಮವಾರ ದೆಹಲಿಯ ಇ.ಡಿ. ಕಚೇರಿ ಮುಂದೆ ಜರುಗಿದ ಪ್ರತಿಭಟನೆಯಲ್ಲಿ ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಅವರ ಪಕ್ಕೆಲುಬು ಮುರಿದಿರುವುದು ಪ್ರತಿಭಟನೆಯ ತೀವ್ರತೆಯನ್ನು ಸೂಚಿಸುತ್ತದೆ. ಕೇಂದ್ರ ಸರ್ಕಾರವು ಇಡಿಯಂತಹ ತನಿಖಾ ಸಂಸ್ಥೆಗಳನ್ನು ರಾಜಕೀಯ ಉದ್ದೇಶಕ್ಕೆ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸುತ್ತಾ ಕಾಂಗ್ರೆಸ್ ಆರೋಪಿಸಿದೆ.
ಜಾರಿ ನಿರ್ದೇಶನಾಲಯವು ಸಂವಿಧಾನಬದ್ಧ, ಕಾನೂನುಬದ್ಧ ಸ್ವಾಯತ್ತ ತನಿಖಾ ಸಂಸ್ಥೆಯಾಗಿದೆ. ಪೊಲೀಸ್ ಇಲಾಖೆ, ಸಿಬಿಐ ಮೊದಲಾದವುಗಳಿಗೆ ಸೇರಿದ ತನಿಖಾಧಿಕಾರಿಗಳ ಮುಂದೆ ನೀಡಲಾದ ಹೇಳಿಕೆಗಳನ್ನು ನ್ಯಾಯಾಲಯಗಳು ಸಾಕ್ಷಿಯಾಗಿ ಪರಿಗಣಿಸುವುದಿಲ್ಲ. ಆದರೆ, ಇಡಿ ತನಿಖಾಧಿಕಾರಿಗಳ ಮುಂದೆ ದಾಖಲಾದ ಹೇಳಿಕೆಯನ್ನು ನ್ಯಾಯಾಲಯದಲ್ಲಿ ಸಾಕ್ಷಿಯಾಗಿ ಸ್ವೀಕರಿಸಲಾಗುತ್ತದೆ. ಇಂತಹ ವಿಶೇಷ ಕಾನೂನಿನ ಮಾನ್ಯತೆ ನೀಡಲಾಗಿರುವ ರಾಷ್ಟ್ರದ ಏಕೈಕ ಸಂಸ್ಥೆ ಇದಾಗಿದ್ದು, ಈ ಸಂಸ್ಥೆಗಿರುವ ಮಹತ್ವವನ್ನು ಸೂಚಿಸುತ್ತದೆ. ಹಣ ಅಕ್ರಮ ವರ್ಗಾವಣೆ ಮತ್ತು ವಿದೇಶಿ ವಿನಿಮಯ ಕಾನೂನು ಉಲ್ಲಂಘನೆ ಪ್ರಕರಣಗಳಲ್ಲಿ ಹಣ ದುರ್ಬಳಕೆ ತಡೆ ಕಾನೂನು ಹಾಗೂ ವಿದೇಶಿ ವಿನಿಮಯ ನಿರ್ವಹಣೆ ಕಾನೂನು ಪ್ರಕಾರವೇ ತನಿಖೆಯನ್ನು ಈ ಸಂಸ್ಥೆ ಕೈಗೊಳ್ಳುತ್ತದೆ. ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಪ್ರಕಾಶನ ಸಂಸ್ಥೆಯನ್ನು ಗಾಂಧಿ ಕುಟುಂಬದವರು ವಂಚನೆಯಿಂದ ಸ್ವಾಧೀನಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು 2012ರಲ್ಲೇ ನ್ಯಾಯಾಲಯದಲ್ಲಿ ದಾಖಲಿಸಿರುವ ಪ್ರಕರಣದ ಕಾನೂನು ಪ್ರಕ್ರಿಯೆಯ ಒಂದು ಭಾಗವಾಗಿ ವಿಚಾರಣೆಗೆ ಹಾಜರಾಗಲು ರಾಹುಲ್ ಗಾಂಧಿ ಅವರಿಗೆ ಇ.ಡಿ. ನೋಟಿಸ್ ಜಾರಿ ಮಾಡಿದೆ. ಕಾಂಗ್ರೆಸ್ ಘಟಾನುಘಟಿ ನಾಯಕರ ಪ್ರತಿಭಟನೆ ಪ್ರಹಸನದ ನಡುವೆಯೇ ರಾಹುಲ್ ಗಾಂಧಿ ಅವರು ವಿಚಾರಣೆಯನ್ನು ಅನಿವಾರ್ಯವಾಗಿ ಎದುರಿಸಿದ್ದಾರೆ.
ಕಾಂಗ್ರೆಸ್ ಸೇರಿ ಯಾವುದೇ ಪಕ್ಷದ ಉನ್ನತ ನಾಯಕರು ಸೇರಿದಂತೆ ಯಾರೊಬ್ಬರೂ ದೇಶದ ಕಾನೂನು, ಕಟ್ಟಳೆಗಳಿಗೆ ಅತೀತರಲ್ಲ. ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿ ಇ.ಡಿ.ಯಿಂದ ವಿಚಾರಣೆ ಎದುರಿಸಿದವರಲ್ಲಿ ಹಾಗೂ ಎದುರಿಸುತ್ತಿರುವವರಲ್ಲಿ ಬೇರೆ ಬೇರೆ ರಾಜಕೀಯ ಪಕ್ಷಗಳಿಗೆ ಸೇರಿದ ನಾಯಕರು ಇದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧವೂ ಅಕ್ರಮ ಹಣ ವರ್ಗಾವಣೆ ಆರೋಪದಡಿ ಇ.ಡಿ. ಪ್ರಕರಣ ದಾಖಲಿಸಿ ವಿಚಾರಣೆ ಕೈಗೊಳ್ಳುತ್ತಿದೆ. ಸೋಹ್ರಾಬುದ್ದೀನ್ ಶೇಖ್ ಹಾಗೂ ತುಳಸಿರಾಮ್ ಪ್ರಜಾಪತಿ ನಕಲಿ ಎನ್ಕೌಂಟರ್ ಪ್ರಕರಣಗಳಲ್ಲಿ ಗೃಹ ಸಚಿವ ಅಮಿತ್ ಷಾ ಅವರು ಈ ಹಿಂದೆ ಸಿಬಿಐನಿಂದ ಪ್ರಕರಣ ಎದುರಿಸಿದ್ದರಲ್ಲದೆ, ಬಂಧನಕ್ಕೂ ಒಳಗಾಗಿದ್ದರು. ಆಗ, ಬಿಜೆಪಿ ಕೂಡ ಕಾಂಗ್ರೆಸ್ ವಿರುದ್ಧ ರಾಜಕೀಯ ಪ್ರತೀಕಾರದ ಆರೋಪವನ್ನೇ ಮಾಡಿತ್ತು. ಕಾನೂನಿನ ಎದುರು ಎಲ್ಲರೂ ಸಮಾನರು ಎಂಬ ಸತ್ಯವನ್ನು ಎಲ್ಲ ಪಕ್ಷಗಳ ರಾಜಕೀಯ ಮುಖಂಡರು ಅರಿತುಕೊಳ್ಳಬೇಕಿದೆ. ತಮ್ಮ ವಿರುದ್ಧದ ಪ್ರಕರಣಗಳನ್ನು ಕಾನೂನು ಹೋರಾಟದ ಮೂಲಕ ಎದುರಿಸುವ ನೈತಿಕ ಸ್ಥೈರ್ಯವನ್ನು ಈ ನಾಯಕರು ತೋರಿದರೆ, ಅವರ ವಿಶ್ವಾಸಾರ್ಹತೆ ಸಾರ್ವಜನಿಕ ವಲಯದಲ್ಲಿ ಹೆಚ್ಚುತ್ತದೆ. ಸೂಕ್ತ ರೀತಿಯಲ್ಲಿ ಆರೋಪಮುಕ್ತರಾಗುವ ಬದಲು ಬೀದಿಗಿಳಿದು ಪ್ರತಿಭಟನೆ ನಡೆಸಿದರೆ ತಪು್ಪ ಸಂದೇಶ ರವಾನೆಯಾಗುತ್ತದೆ.