

ಮೃತಪಟ್ಟವರು, ಹೊರ ರಾಜ್ಯ ಹಾಗೂ ಹೊರದೇಶಕ್ಕೆ ಹೋಗಿರುವ ಅಸಲಿ ವೈದ್ಯರ ಹೆಸರಲ್ಲಿ ನಕಲಿ ವೈದ್ಯರಿಗೆ ಕ್ಲಿನಿಕ್ ಆರಂಭಿಸಲು ಹಾಗೂ ಚಿಕಿತ್ಸೆ ನೀಡಲು ಕರ್ನಾಟಕ ಆಯುರ್ವೆದಿಕ್ ಮತ್ತು ಯುನಾನಿ ವೈದ್ಯ ಮಂಡಳಿ (ಕೆಎಯುಪಿ) ಅನುಮತಿ ನೀಡಿರುವುದು ಹಾಗೂ ಪ್ರತಿ ನೋಂದಣಿ ಪ್ರಮಾಣಪತ್ರಕ್ಕೆ 4- 5 ಲಕ್ಷ ರೂಪಾಯಿ ಲಂಚ ಪಡೆದು ನೂರಾರು ನಕಲಿ ವೈದ್ಯರಿಗೆ ಮಂಡಳಿಯ ರಿಜಿಸ್ಟ್ರಾರ್ಗಳೇ ಪರವಾನಗಿ ವಿತರಿಸಿರುವುದು ಆಯುಷ್ ಇಲಾಖೆಯ ತಾಂತ್ರಿಕ ಸಮಿತಿಯ ಆಂತರಿಕ ಹಾಗೂ ಸಿಐಡಿ ತನಿಖೆಯಲ್ಲಿ ದೃಢಪಟ್ಟಿದೆ. ಆದರೂ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ವಿಚಾರದಲ್ಲಿ ರಾಜ್ಯ ಸರ್ಕಾರ ಉದಾಸೀನ ಧೋರಣೆ ಅನುಸರಿಸಿಕೊಂಡು ಬಂದಿದೆ. ನಕಲಿ ಕ್ಲಿನಿಕ್ ಮತ್ತು ನಕಲಿ ವೈದ್ಯರ ಮಾಹಿತಿಯನ್ನು ಶೀಘ್ರ ಒದಗಿಸುವಂತೆ ನೀಡುವಂತೆ ಆಯುಷ್ ಇಲಾಖೆಗೆ ಆರೋಗ್ಯ ಇಲಾಖೆ ಈಗ ಪತ್ರ ಬರೆದಿದೆ.
ವೈದ್ಯಕೀಯ ವೃತ್ತಿ ಪವಿತ್ರವಾದುದು. ಮಾನ್ಯತೆ ಹೊಂದಿರುವ ಕಾಲೇಜುಗಳಲ್ಲಿ ಅಧ್ಯಯನ ಕೈಗೊಂಡು ಎಂಬಿಬಿಎಸ್, ಬಿಎಎಂಎಸ್, ಬಿಯುಎಂಎಸ್, ಬಿವೈಎಎಸ್ ಕೋರ್ಸ್ಗಳನ್ನು ಪೂರ್ಣಗೊಳಿಸಿದವರು ಮಾತ್ರ ವೈದ್ಯರಾಗಲು ಅರ್ಹತೆ ಪಡೆಯುತ್ತಾರೆ. ಅಚ್ಚರಿಯ ಸಂಗತಿಯೆಂದರೆ, ವೈದ್ಯ ಪ್ರಮಾಣಪತ್ರ ವಿತರಿಸುವ ಅವ್ಯವಹಾರವು 1998ರಿಂದ 2020ರ ಅವಧಿಯಲ್ಲಿ ನಿರಂತರವಾಗಿ ನಡೆದುಕೊಂಡುಕೊಂಡು ಬಂದಿರುವುದು ಹಾಗೂ ಪ್ರಮಾಣಪತ್ರಗಳನ್ನು ಕಾನೂನುಬಾಹಿರವಾಗಿ ಪಡೆದುಕೊಂಡ ಇಂತಹ ನಕಲಿ ವೈದ್ಯರ ಬಗ್ಗೆ ಸಿಐಡಿ ಹಾಗೂ ತಾಂತ್ರಿಕ ಸಲಹಾ ಸಮಿತಿ ಪ್ರತ್ಯೇಕವಾಗಿ ವರದಿಗಳನ್ನು ಕೊಟ್ಟಿದ್ದರೂ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳದೆ ಇರುವುದು. ಇಂತಹ ಅವ್ಯವಹಾರಕ್ಕೆ ಕಡಿವಾಣ ಹಾಕುವ ಉದ್ದೇಶದಿಂದಲೇ ಬಯೋಮೆಟ್ರಿಕ್ ವ್ಯವಸ್ಥೆ ಜಾರಿಗೆ ತಂದಿದ್ದರೂ, ಅದು ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿಲ್ಲ ಎಂಬುದಂತೂ ಕಳವಳಕಾರಿ ಸಂಗತಿಯಾಗಿದೆ.
ಹೊರರಾಜ್ಯಗಳಿಂದ ವೈದ್ಯ ವಿಶಾರದ, ವೈದ್ಯ ವಿದ್ವಾನ್ ಮತ್ತು ಭಾಷಕ್ ಮುಂತಾದ ಪದವಿ ಮತ್ತು ಪ್ರಮಾಣಪತ್ರ ಪಡೆದವರಿಗೆ ಕೆಎಯುಪಿಯಲ್ಲಿ ನೋಂದಣಿ ಮಾಡಬಾರದೆಂಬ ನಿಯಮವಿದ್ದರೂ ಅಕ್ರಮವಾಗಿ ನೋಂದಣಿ ಮಾಡಿಕೊಟ್ಟು ನಕಲಿ ಪ್ರಮಾಣಪತ್ರಗಳನ್ನು ವಿತರಿಸಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಅಕ್ರಮವಾಗಿ ಪ್ರಮಾಣಪತ್ರ ಪಡೆದುಕೊಂಡ ನಕಲಿ ವೈದ್ಯರ ಕ್ಲಿನಿಕ್ಗಳ ಮೇಲೆ ದಾಳಿ ನಡೆಸದಿರಲು ಮೇಲಧಿಕಾರಿಗಳು ಲಕ್ಷಾಂತರ ರೂ. ಲಂಚ ಪಡೆದಿರುವ ಸಂಗತಿಯೂ ಬೆಳಕಿಗೆ ಬಂದಿದೆ. ಸದ್ಯ ಇರುವ ಕಾನೂನಿನ ಅನುಸಾರ, ಮೊದಲ ಬಾರಿಗೆ ಸಿಕ್ಕಿಬೀಳುವ ನಕಲಿ ವೈದ್ಯರಿಗೆ 25 ಸಾವಿರ ರೂ., 2ನೇ ಬಾರಿ ಸಿಕ್ಕಿಬಿದ್ದರೆ 2.5 ಲಕ್ಷ ರೂ. ಮತ್ತು 1 ವರ್ಷ ಜೈಲು ಶಿಕ್ಷೆ, 3ನೇ ಬಾರಿ ಸಿಕ್ಕಿಬಿದ್ದರೆ 5 ಲಕ್ಷ ರೂ. ದಂಡ, 3 ವರ್ಷ ಜೈಲು ಶಿಕ್ಷೆ ಇದೆ. ಜನರ ಜೀವದೊಂದಿಗೆ ಚೆಲ್ಲಾಟವಾಡುವ ನಕಲಿ ವೈದ್ಯರನ್ನು ಪತ್ತೆಹಚ್ಚಿ ಕಾನೂನು ಕ್ರಮಕ್ಕೆ ಒಳಪಡಿಸುವ ವ್ಯವಸ್ಥೆಯನ್ನು ಬಲಪಡಿಸುವ ಅಗತ್ಯವಿದೆ. ಅಲ್ಲದೆ, ನಕಲಿ ವೈದ್ಯ ಪ್ರಮಾಣಪತ್ರ ಪಡೆದುಕೊಳ್ಳಲು ನೆರವಾಗುವ ಅಧಿಕಾರಿಗಳ ಮೇಲೂ ಕಟ್ಟಿನಿಟ್ಟಿನ ಕ್ರಮವಾಗಬೇಕು. ಜನರ ಆರೋಗ್ಯದ ವಿಷಯದಲ್ಲಿ ನಿಷ್ಕಾಳಜಿ ಅಥವಾ ನಿರ್ಲಕ್ಷ್ಯ ಸಲ್ಲದು.