ಸಂಪಾದಕೀಯ | ಘನತೆ ಎತ್ತಿಹಿಡಿಯಿರಿ; ಪ್ರಬುದ್ಧತೆ, ವರ್ಚಸ್ಸು ಕಳೆದುಕೊಳ್ಳುತ್ತಿರುವ ಮೇಲ್ಮನೆ

Editorial
Published on

ವಿಧಾನ ಪರಿಷತ್​ನ 25 ಸ್ಥಾನಗಳಿಗೆ ನಡೆದ ಚುನಾವಣೆ ರಾಜ್ಯದಲ್ಲಿ ಭಾರಿ ಕುತೂಹಲ ಮೂಡಿಸಿತ್ತು. ಇದು ಮೇಲ್ಮನೆಯ ಚುನಾವಣೆಯಾಗಿದ್ದರೂ ಜಿದ್ದಾಜಿದ್ದಿಯ ಹೋರಾಟ, ಅಬ್ಬರದ ಪ್ರಚಾರ, ಹಣದ ಪ್ರಭಾವ, ಮತದಾರರಿಗೆ ಆಮಿಷ ಸೇರಿದಂತೆ ಹಲವು ಬೆಳವಣಿಗೆಗಳು ನಡೆದವು ಮತ್ತು ಪರಿಷತ್ ಚುನಾವಣೆ ತನ್ನ ವಿಚಾರಾಧಾರಿತ ಘನತೆ ಕಳೆದುಕೊಂಡು ಸಾಮಾನ್ಯ ಚುನಾವಣೆಗಳಂತೆಯೇ ಮಾರ್ಪಟ್ಟಿರುವುದು ಪ್ರಜ್ಞಾವಂತರ ಕಳವಳಕ್ಕೆ ಕಾರಣವಾಗಿದೆ. ಡಿಸೆಂಬರ್ 14ರಂದು ಫಲಿತಾಂಶ ಪ್ರಕಟಗೊಂಡಿದ್ದು, ಆಡಳಿತ ಪಕ್ಷ ಬಿಜೆಪಿ ಮತ್ತು ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಬಹುತೇಕ ಸಮಬಲ ಸಾಧಿಸಿವೆ. ಜೆಡಿ(ಎಸ್) ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ. ಮತದಾನ, ಫಲಿತಾಂಶ ಘೋಷಣೆ ಈ ಎಲ್ಲ ಪ್ರಕ್ರಿಯೆಗಳು ಪ್ರಜಾತಂತ್ರದ ಮಾರ್ಗದಲ್ಲಿ ನಡೆಯಲೇ ಬೇಕು. ಆದರೆ, ಮುಖ್ಯವಾಗಿ ವಿಧಾನ ಪರಿಷತ್ ಸ್ಥಾಪನೆಯ ಮೂಲಉದ್ದೇಶ, ಆಶಯ ಈಡೇರುತ್ತಿದ್ದೆಯೇ, ಇಲ್ಲಿನ ಸದಸ್ಯರು ಸದನದ ಘನತೆಯನ್ನು ಎತ್ತಿ ಹಿಡಿಯುತ್ತಿದ್ದಾರೆಯೇ, ‘ಚಿಂತಕರ ಚಾವಡಿ’ ಎಂಬ ಆ ವರ್ಚಸ್ಸು ಎಲ್ಲಿ ಹೋಯಿತು ಎಂಬ ಹಲವು ಪ್ರಶ್ನೆಗಳು ಉದ್ಭವವಾಗುತ್ತವೆ. ಮತ್ತು ಇವುಗಳಿಗೆ ಉತ್ತರ ಸಿಗಬೇಕಾದರೆ ಮೇಲ್ಮನೆಯ ಸದಸ್ಯರು ಮತ್ತು ಎಲ್ಲ ರಾಜಕೀಯ ಪಕ್ಷಗಳು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅಗತ್ಯವಿದೆ.

ದೇಶದ ಎಲ್ಲ ರಾಜ್ಯಗಳಲ್ಲಿ ವಿಧಾನ ಪರಿಷತ್ ಅಸ್ತಿತ್ವದಲ್ಲಿ ಇಲ್ಲ. ಶಾಸನಸಭೆಯ ನಿರೀಕ್ಷೆಗಳಿಗೆ ಅಷ್ಟೊಂದು ಸ್ಪಂದಿಸದ, ಬೊಕ್ಕಸಕ್ಕೂ ಹೊರೆಯಾಗುವ ವಿಧಾನ ಪರಿಷತ್ ಬೇಡವೇ ಬೇಡ ಎಂದು ಹಲವು ರಾಜ್ಯಗಳು ಮೇಲ್ಮನೆಯನ್ನು ರದ್ದುಗೊಳಿಸಿವೆ. ಕರ್ನಾಟಕದಲ್ಲೂ ಈ ಬಗೆಯ ಚರ್ಚೆಗಳು ಗರಿಗೆದರಿದ್ದು ಹೌದಾದರೂ, ಯಾವುದೇ ಅಂತಿಮ ನಿರ್ಧಾರಕ್ಕೆ ಬರಲು ಸಾಧ್ಯವಾಗದೆ, ಪರಿಷತ್ ಅಸ್ತಿತ್ವ ಮುಂದುವರಿದಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಮೇಲ್ಮನೆ ಉಳ್ಳವರ ಆಲಯವಾಗಿ ಬದಲಾಗುತ್ತಿದ್ದು, ದುಡ್ಡು ಇದ್ದವರಷ್ಟೇ ಚುನಾವಣೆ ಸ್ಪರ್ಧಿಸುವಂಥ ಸನ್ನಿವೇಶ ಸೃಷ್ಟಿಯಾಗಿರುವುದು ಕಳವಳಕಾರಿ. ಹಿಂದೆಲ್ಲ ವಿಧಾನ ಪರಿಷತ್​ನಲ್ಲಿ ನಡೆಯುತ್ತಿದ್ದ ಚರ್ಚೆಗಳು ದೇಶದ ಗಮನವನ್ನು ಸೆಳೆಯುತ್ತಿದ್ದವು. ವಿವಿಧ ವಿಷಯಗಳು, ಸಮಸ್ಯೆಗಳ ಬಗ್ಗೆ ಸಮಗ್ರವಾದ, ವಿಶ್ಲೇಷಣಾತ್ಮಕವಾದ ಗುಣಮಟ್ಟದ ಚರ್ಚೆ ನಡೆಯುತ್ತಿದ್ದವು. ಒಂದು ವಿಷಯವನ್ನು ಹಲವು ಆಯಾಮಗಳಿಂದ ಕಂಡು, ಸಮಸ್ಯೆ ಪರಿಹಾರದ ನಿಟ್ಟಿನಲ್ಲಿ ಹೊಸ ಹೊಳಹು ಸಿಗುತ್ತಿದ್ದವು. ಹಾಗಾಗಿಯೇ, ಪಕ್ಷಭೇದ ಮರೆತು ಪ್ರತಿನಿಧಿಗಳು ಇಲ್ಲಿನ ಚರ್ಚೆಗಳಿಗೆ ಕಿವಿಯಾಗುತ್ತಿದ್ದರು, ದನಿಯಾಗುತ್ತಿದ್ದರು.

ವಿಧಾನಸಭೆಯಲ್ಲಿ ಅಂಗೀಕಾರವಾಗುವ ಅನೇಕ ವಿಧೇಯಕಗಳು ಮತ್ತೆ ಚರ್ಚೆಗೆ ಒಳಗಾಗಿ ಇಲ್ಲಿರುವ ಹಿರಿಯರು ಅದರಲ್ಲಿ ಬದಲಾವಣೆಗಳೇನಾದರೂ ಇದ್ದರೆ ಮಾಡುವ ಮೂಲಕ ಇನ್ನಷ್ಟು ಶಕ್ತಿ ತುಂಬಬೇಕು. ಅದಕ್ಕೆ ತಜ್ಞರು, ಸಾಧಕರು ಸಲಹೆಗಳನ್ನು ನೀಡಬೇಕೆಂಬ ಉದ್ದೇಶ ಪರಿಷತ್ ಸ್ಥಾಪನೆಯ ಹಿಂದಿದೆ. ಇತ್ತೀಚಿನ ವರ್ಷಗಳಲ್ಲಿ ಪರಿಷತ್​ನಲ್ಲಿಯೂ ಚರ್ಚೆಯ ಗುಣಮಟ್ಟ ಕುಸಿದಿರುವುದು ಕಹಿಸತ್ಯ. ಈ ಅಪಸವ್ಯಕ್ಕೆ ರಾಜಕೀಯ ಪಕ್ಷಗಳೇ ಕಾರಣ. ವಿಧಾನ ಪರಿಷತ್ ಎಂಬುದು ರಾಜಕೀಯ ಪುನರ್ವಸತಿ ಕೇಂದ್ರವಾಗವಾರದು. ಹಿಂದಿನ ಪ್ರಬುದ್ಧತೆ ಮತ್ತೆ ಸ್ಥಾಪಿಸಬೇಕಾದರೆ ರಾಜಕೀಯ ಪಕ್ಷಗಳು ತಜ್ಞರು, ಸಾಧಕರನ್ನು ಗುರುತಿಸಬೇಕು. ಹೊಸದಾಗಿ ಆಯ್ಕೆಯಾದವರು ಮೇಲ್ಮನೆಯ ಘನತೆಯನ್ನು ಕಾಪಾಡುವ ಸಂಕಲ್ಪ ಮಾಡಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net