ಸಂಪಾದಕೀಯ | ಅರ್ಹರಿಗೆ ಟಿಕೆಟ್ ಸಿಗಲಿ: ಪಕ್ಷಗಳಲ್ಲಿ ಚುನಾವಣಾ ಕಸರತ್ತು ಶುರು

Editorial
Published on

ರಾಜ್ಯ ವಿಧಾನಸಭೆಗೆ ಮುಂದಿನ ವರ್ಷ ಚುನಾವಣೆ ನಡೆಯಬೇಕಿದೆ. ಇನ್ನೂ ಆರು ತಿಂಗಳು ಇರುವಂತೆಯೇ ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆ ಬಿರುಸುಗೊಂಡಿದೆ. ಬಹುತೇಕ ಪಕ್ಷಗಳು ಈಗಾಗಲೇ ಆಂತರಿಕ ಸಮೀಕ್ಷೆ ಮಾಡಿಸಿದ್ದು, ಗೆಲುವಿನ ಲೆಕ್ಕಾಚಾರದಲ್ಲಿವೆ; ಜತೆಗೆ ಕೆಲ ಸವಾಲುಗಳೂ ಈ ಸಮೀಕ್ಷೆಯಲ್ಲಿ ಕಂಡುಬಂದಿರುವುದರಿಂದ ಕಾರ್ಯತಂತ್ರಗಳ ಕುರಿತು ತಲೆಬಿಸಿಯನ್ನೂ ಮಾಡಿಕೊಂಡಿವೆ. ಪ್ರಮುಖ ನಾಯಕರು ಕ್ಷೇತ್ರದ ಹುಡುಕಾಟ, ಜಿಜ್ಞಾಸೆಯಲ್ಲಿದ್ದರೆ, ಟಿಕೆಟ್ ಆಕಾಂಕ್ಷಿಗಳು ಈಗಾಗಲೇ ತರಹೇವಾರಿ ಕಸರತ್ತು, ಪ್ರಯತ್ನ ಆರಂಭಿಸಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್​ಗೆ ಅರ್ಜಿ ಹಾಕುವ ಕೊನೆಯ ದಿನಾಂಕ ಸಮೀಪಿಸಿದ್ದು, ನವೆಂಬರ್ 15ರೊಳಗೆ ಮತ್ತಷ್ಟು ಮಂದಿ ಅರ್ಜಿ ಗುಜರಾಯಿಸುವ ಲಕ್ಷಣವಿದೆ.

ಈ ನಡುವೆ, ಹಿರಿಯ ನಾಯಕ ಸಿದ್ದರಾಮಯ್ಯ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆನ್ನುವ ವಿಚಾರ ಕಾಂಗ್ರೆಸ್ ಮಾತ್ರವಲ್ಲ, ಇತರ ಪಕ್ಷಗಳಲ್ಲೂ ಕುತೂಹಲ ಉಂಟುಮಾಡಿದೆ. ಮಹಿಳೆಯರು ಸಹ ಸ್ಪರ್ಧಿಸಲು ಹೆಚ್ಚು ಉತ್ಸುಕರಾಗಿದ್ದು, ಈಗಾಗಲೇ ಕಾಂಗ್ರೆಸ್​ನಿಂದ 100ಕ್ಕೂ ಹೆಚ್ಚು ಮಂದಿ ಅರ್ಜಿ ನಮೂನೆ ಪಡೆದುಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಬಿಜೆಪಿಯಲ್ಲಿ ಸಹ ಸಾಕಷ್ಟು ಮಂದಿ ಉತ್ಸಾಹಿಗಳಿದ್ದಾರೆಂಬ ಮಾಹಿತಿ ಇದೆ. ಇವರಲ್ಲಿ ಎಷ್ಟು ಮಂದಿಗೆ ಟಿಕೆಟ್ ಸಿಗುತ್ತದೆ ಎಂಬುದು ನಂತರವೇ ಗೊತ್ತಾಗಬೇಕಿದೆಯಾದರೂ, ಮಹಿಳೆಯರ ಉತ್ಸಾಹ ಮಾತ್ರ ಗಮನಾರ್ಹ. ಹಾಲಿ ವಿಧಾನಸಭೆಯಲ್ಲಿ ಕಾಂಗ್ರೆಸ್​ನ ಆರು, ಬಿಜೆಪಿಯ ಮೂರು ಹಾಗೂ ಜೆಡಿಎಸ್​ನ ಒಬ್ಬರು ಶಾಸಕಿಯರಿದ್ದಾರೆ. ಹಾಗೆನೋಡಿದರೆ, ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳಾ ಪ್ರಾತಿನಿಧ್ಯ ಸಾಕಷ್ಟಿದೆ. ಪಂಚಾಯಿತಿಯಲ್ಲಂತೂ ಕೆಲವೆಡೆ ಶೇ.50 ದಾಟಿದ್ದೂ ಇದೆ. ಆದರೆ ಇದೇ ಮಾತನ್ನು ಶಾಸನಸಭೆಗಳಿಗೆ ಹೇಳಲಾಗದು. ಲೋಕಸಭೆ ಹಾಗೂ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33 ಮೀಸಲಾತಿ ನೀಡಬೇಕೆಂಬ ವಿಚಾರ ಇನ್ನೂ ಸಂಸತ್ ಅನುಮೋದನೆ ಪಡೆಯುವಲ್ಲಿ ಯಶಸ್ವಿಯಾಗಿಲ್ಲ.

ಇನ್ನೊಂದೆಡೆ, ದೇಶದಲ್ಲಿ ಚುನಾವಣಾ ಸುಧಾರಣೆಗಳ ಕುರಿತೂ ಚರ್ಚೆ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಪ್ರಜಾಪ್ರಾತಿನಿಧ್ಯ ಕಾಯ್ದೆಗೆ ಕೆಲ ಬದಲಾವಣೆಗಳನ್ನೂ ತರಲಾಗಿದೆ. ಗಂಭೀರ ಅಪರಾಧ ಪ್ರಕರಣಗಳಲ್ಲಿ ಜನಪ್ರತಿನಿಧಿಗಳು ಎರಡು ಅಥವಾ ಅದಕ್ಕಿಂತ ಹೆಚ್ಚು ಅವಧಿಗೆ ಜೈಲುಶಿಕ್ಷೆಗೆ ಗುರಿಯಾದರೆ, ಸ್ಥಾನದಿಂದ ಅನರ್ಹರಾಗುವ ನಿಯಮ ಜಾರಿಯಲ್ಲಿದೆ. ಇನ್ನಷ್ಟು ಸುಧಾರಣೆಯಾಗಬೇಕೆಂಬ ಆಗ್ರಹ ಇದ್ದೇ ಇದೆ. ಇದೇನೇ ಇದ್ದರೂ, ವ್ಯವಸ್ಥೆಯ ಶುದ್ಧೀಕರಣದಲ್ಲಿ ರಾಜಕೀಯ ಪಕ್ಷಗಳ ಪಾತ್ರ ಪ್ರಮುಖವಾದುದು. ಅಪರಾಧಿಕ ಹಿನ್ನೆಲೆಯವರು, ರಾಜಕೀಯವನ್ನು ವ್ಯವಹಾರವನ್ನಾಗಿಸಿಕೊಳ್ಳಲು ಬರುವವರು ಇಂಥವರಿಗೆ ಸ್ಪರ್ಧೆಗೆ ಅವಕಾಶವೇ ಸಿಗದಿದ್ದರೆ ಅಷ್ಟರಮಟ್ಟಿಗೆ ಅನುಕೂಲವಾಗುತ್ತದೆ. ರಾಜಕೀಯ ರಂಗದ ಇಮೇಜ್ ಬದಲಾಯಿಸುವ ನಿಟ್ಟಿನಲ್ಲಿ ಮತ್ತು ಆಡಳಿತಕ್ಕೆ ಹೊಸತನ ತರುವ ದಿಸೆಯಲ್ಲಿ ಬೇರೆ ಬೇರೆ ರಂಗಗಳವರು ಇಲ್ಲಿಗೆ ಬರಬೇಕೆಂಬ ವಾದ ಕೇಳಿಬರುತ್ತಲೇ ಇದೆ. ಹೀಗೆ ಬಂದ ಕೆಲವರು ಸಾಮರ್ಥ್ಯವನ್ನು ಪ್ರದರ್ಶಿಸಿದ ನಿದರ್ಶನಗಳೂ ಸಾಕಷ್ಟಿವೆ. ಹಾಗಿದ್ದರೂ, ರಾಜಕೀಯ ರಂಗ ಎಂದರೆ ಹಿಂಜರಿಕೆ ತೋರುವ ವಾತಾವರಣ ಈಗಲೂ ಇದೆ. ಈ ಮನೋಭಾವ ಬದಲಾದರೆ ಇನ್ನಷ್ಟು ಸುಧಾರಣೆ ಕಾಣಬಹುದು. ಇದು ಆಗಬೇಕು ಎಂದಾದಲ್ಲಿ, ಪಕ್ಷಗಳು ಸದಸ್ಯತ್ವ ನೀಡುವ ಹಂತದಲ್ಲಿಯೇ ಅವರ ಬಗ್ಗೆ ಜರಡಿ ಹಿಡಿಯಬೇಕು. ಹಾಗೇ, ಟಿಕೆಟ್ ನೀಡುವಾಗ ಶುದ್ಧಹಸ್ತರು, ಕಳಕಳಿಯುಳ್ಳವರು, ಸಮಾಜಸೇವಾಸಕ್ತರನ್ನು ಹುಡುಕಿ ನೀಡಬೇಕು. ಏನಕೇನ ಪ್ರಕಾರೇಣ ಗೆಲುವೇ ಮುಖ್ಯ ಎಂಬ ಸನ್ನಿವೇಶ ಇರುವ ಇಂದಿನ ದಿನಮಾನದಲ್ಲಿ ಪಕ್ಷಗಳು ಕೆಲವಷ್ಟಾದರೂ ನೀತಿಸಂಹಿತೆ ಪಾಲಿಸಬೇಕು ಎಂಬುದು ಜನರ ನಿರೀಕ್ಷೆ. ಹಾಗಿಲ್ಲವಾದಲ್ಲಿ ವ್ಯವಸ್ಥೆಯ ಬಗ್ಗೆ ಜನರ ಭ್ರಮನಿರಸನ ಹೆಚ್ಚುತ್ತಲೇ ಹೋಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net