

ಇತ್ತೀಚಿನ ವರ್ಷಗಳಲ್ಲಿ ಅಭಿವೃದ್ಧಿ ಮತ್ತು ಪರಿಸರ ರಕ್ಷಣೆ ಈ ಎರಡರ ಸಮತೋಲನ ಸಾಧಿಸುವುದೇ ಸವಾಲಾಗಿ ಪರಿಣಮಿಸಿದೆ. ಮೂಲಸೌಕರ್ಯ ವಿಸ್ತರಣೆ, ನಾಗರಿಕ ಸೌಲಭ್ಯಗಳನ್ನು ಹೆಚ್ಚಿಸಿದಂತೆಲ್ಲ ಅವು ಪರಿಸರದ ಮೇಲೆ ಪ್ರಹಾರ ಮಾಡುತ್ತವೆ. ಭೌತಿಕ ಅಭಿವೃದ್ಧಿಯೇ ಮೇಲುಗೈ ಸಾಧಿಸಿದರೆ ಅದರಿಂದ ನಮ್ಮ ನಾಳೆಗಳನ್ನೇ ಆತಂಕಕ್ಕೆ ದೂಡಿದಂತಾಗುತ್ತದೆ. ಹಾಗಂತ ಕನಿಷ್ಠ ಸೌಲಭ್ಯಗಳನ್ನೇ ಕಲ್ಪಿಸದಿರುವುದೂ ಸರಿಯಲ್ಲ. ಹಾಗೆಮಾಡಿದಲ್ಲಿ ಪ್ರಭುತ್ವ ಜನವಿರೋಧವನ್ನೂ ಎದುರಿಸಬೇಕಾಗುತ್ತದೆ. ಪಶ್ಚಿಮ ಘಟ್ಟಕ್ಕೆ ಸಂಬಂಧಿಸಿದಂತೆ ಇಂಥದ್ದೇ ಸಂದಿಗ್ಧತೆ ಎದುರಾಗಿದೆ ಮತ್ತು ಕೇಂದ್ರ, ರಾಜ್ಯ ಸರ್ಕಾರಗಳ ನಿಲುವು ಕೂಡ ಭಿನ್ನದನಿಯಲ್ಲಿ ಹೊಮ್ಮುತ್ತಿದೆ. ಪಶ್ಚಿಮ ಘಟ್ಟಗಳ ಸೂಕ್ಷ್ಮ ಪರಿಸರ ಮತ್ತು ಜೀವವೈವಿಧ್ಯ ರಕ್ಷಣೆ ಸಂಬಂಧ ಡಾ.ಕಸ್ತೂರಿ ರಂಗನ್ ವರದಿ ಜಾರಿಗೆ ಕುರಿತಂತೆ ಡಿಸೆಂಬರ್ 31ರೊಳಗೆ ಅಂತಿಮ ತೀರ್ಮಾನ ತೆಗೆದುಕೊಳ್ಳುವಂತೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ. ಹಾಗಾಗಿ, ರಾಜ್ಯ ಸರ್ಕಾರದ ಮೇಲೆ ಕೇಂದ್ರದ ಒತ್ತಡ ಹೆಚ್ಚಿದೆ. ಕಸ್ತೂರಿ ರಂಗನ್ ವರದಿ ಜಾರಿ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳಲು ಆರು ಸಚಿವರನ್ನೊಳಗೊಂಡ ಸಂಪುಟ ಉಪ ಸಮಿತಿಯನ್ನು ಮುಖ್ಯಮಂತ್ರಿಗಳು ರಚಿಸಿರುವುದು ಮಹತ್ವದ ಬೆಳವಣಿಗೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ವರದಿ ಕುರಿತು ಚರ್ಚೆ ನಡೆದು, ಅರಣ್ಯ ಸಚಿವರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆಯಾಗಿದೆ. ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯ ಈಗಾಗಲೇ ಕಸ್ತೂರಿ ರಂಗನ್ ವರದಿಯ 4ನೇ ಕರಡು ಅಧಿಸೂಚನೆ ಹೊರಡಿಸಿದ್ದು, ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಿದೆ. ರಾಜ್ಯದ ಹಲವು ಜಿಲ್ಲೆಗಳ ವಿವಿಧ ಗ್ರಾಮ ಮತ್ತು ಅರಣ್ಯ ಪ್ರದೇಶಗಳನ್ನು ಸೂಕ್ಷ್ಮ ಪರಿಸರ ವಲಯ (ಇಎಸ್ರೆೆಡ್) ಎಂದು ಘೋಷಿಸಲು ಪ್ರಸಕ್ತ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ. ಆದರೆ, 1576 ಗ್ರಾಮಸಭೆಗಳು ವರದಿ ಜಾರಿ ವಿರುದ್ಧ ನಿರ್ಣಯ ಕೈಗೊಂಡಿದ್ದು, ಅದನ್ನು ಕೇಂದ್ರಕ್ಕೂ ರವಾನಿಸಲಾಗಿದೆ. ವರದಿ ಜಾರಿಯಿಂದ ಜನರಿಗೆ ತೊಂದರೆ ಆಗುತ್ತದೆ ಎಂಬ ನಿಲುವನ್ನು ರಾಜ್ಯ ಕೇಂದ್ರಕ್ಕೆ ತಿಳಿಸಿದೆಯಾದರೂ, ಇದು ಸೂಕ್ಷ್ಮ ವಿಷಯವಾಗಿರುವುದರಿಂದ ವಿವೇಚನೆಯ ಹೆಜ್ಜೆ ಇಡಬೇಕಾಗಿದೆ.
ಜನರ ಆಕ್ರೋಶವನ್ನು ಎದುರಿಸಬೇಕಾಗುತ್ತದೆ ಎಂಬ ಕಾರಣಕ್ಕಾಗಿ ಜನಪ್ರತಿನಿಧಿಗಳೂ ವರದಿ ಜಾರಿಯನ್ನು ವಿರೋಧಿಸುತ್ತಿದ್ದಾರೆ. ಅದೇ ಸಂದರ್ಭದಲ್ಲಿ, ಪಶ್ಚಿಮ ಘಟ್ಟ ಮತ್ತು ಅಲ್ಲಿನ ಸೂಕ್ಷ್ಮ ಪರಿಸರ, ಜೀವವೈವಿಧ್ಯದ ಬಗ್ಗೆಯೂ ಯೋಚಿಸಬೇಕಾಗುತ್ತದೆ. ನಾಗರಿಕ ಅಗತ್ಯಗಳಿಗೆ ಅಥವಾ ಅಭಿವೃದ್ಧಿ ಯೋಜನೆಗಳಿಗೆ ಪರಿಸರದ ಸೂಕ್ಷ್ಮ ಪ್ರದೇಶಗಳಿಗೆ ಧಕ್ಕೆಯಾದರೆ ಅದರಿಂದ ಎಲ್ಲರಿಗೂ ಹಾನಿ. ಕೇರಳ ಸರ್ಕಾರ ಉಪಗ್ರಹ ಆಧಾರಿತ ಸಮೀಕ್ಷೆ ನಡೆಸಿ ಕೇಂದ್ರಕ್ಕೆ ವಾಸ್ತವವನ್ನು ಮನದಟ್ಟು ಮಾಡಿಕೊಟ್ಟಿದೆ. ಇಲ್ಲೂ ಪರಿಸರ ತಜ್ಞರು, ನೀತಿ ನಿರೂಪಕರೊಡನೆ ಸಮಿತಿ ಚರ್ಚೆ ನಡೆಸಲಿ. ಸಾಧಕ-ಬಾಧಕಗಳನ್ನು ಸಮಗ್ರವಾಗಿ ಅವಲೋಕಿಸಿ ಸಮತೋಲನದ ಪರಿಹಾರ ಮಾರ್ಗವನ್ನು ಕಂಡುಹಿಡಿಯಲಿ. ಪರಿಸರವೂ ಉಳಿಯಬೇಕು; ಜನಜೀವನವೂ ಸಾಗಬೇಕು ಎಂಬ ಮಧ್ಯಮಮಾರ್ಗದ ಚಿಂತನೆಯ ಅನುಷ್ಠಾನ ಈಗಿನ ಅಗತ್ಯ.