

ರಾಜಕೀಯ ಪಕ್ಷಗಳ ಚಿತ್ತ ಈಗಾಗಲೇ ವಿಧಾನಸಭೆ ಚುನಾವಣೆಯತ್ತ ಹರಿದಿದೆ. ಹೆಚ್ಚುಕಡಿಮೆ ಒಂದು ವರ್ಷ ಇರುವಾಗಲೇ ಆಕಾಂಕ್ಷಿಗಳ ಪಟ್ಟಿ ಎಲ್ಲ ಪಕ್ಷಗಳಲ್ಲೂ ಬೆಳೆಯುತ್ತಿದ್ದು, ಚುನಾವಣೆ ಗೆಲ್ಲುವ ಕಾರ್ಯತಂತ್ರಗಳ ಬಗ್ಗೆಯೂ ಲೆಕ್ಕಾಚಾರ ಆರಂಭವಾಗಿದೆ. ಪ್ರತಿಪಕ್ಷಗಳು ಸರ್ಕಾರದ ವೈಫಲ್ಯವನ್ನು ಜನರಿಗೆ ತಿಳಿಸಲು ಯತ್ನಿಸುತ್ತಿದ್ದರೆ, ಸರ್ಕಾರ ಅಭಿವೃದ್ಧಿ ಕೆಲಸಗಳನ್ನು ಬಿಂಬಿಸಲು ಹೊರಟಿದೆ. ಅದರಲ್ಲೂ, ವರ್ಚಸ್ಸು ಹೆಚ್ಚಿಸಿಕೊಳ್ಳದಿದ್ದರೆ ಚುನಾವಣೆ ಎದುರಿಸುವುದು ಸುಲಭವಲ್ಲ ಎಂಬುದನ್ನು ಅರಿತಿರುವ ಆಡಳಿತಾರೂಢ ಬಿಜೆಪಿ ಸರ್ಕಾರ ಹಲವು ಸುಧಾರಣೆಗಳತ್ತ ಗಮನ ಹರಿಸಿದೆ. ಈ ವರ್ಷದ ಬಜೆಟ್ನಲ್ಲಿ ಘೋಷಣೆಯಾಗಿರುವ ಯೋಜನೆ, ಕಾರ್ಯಕ್ರಮಗಳನ್ನು ನಿಗದಿತ ಕಾಲಮಿತಿಯಲ್ಲಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇತ್ತೀಚೆಗೆ ಹಲವು ಇಲಾಖೆಗಳ ಸರಣಿ ಸಭೆ ನಡೆಸಿದ್ದಾರೆ. ಆ ಬಳಿಕ ಮತ್ತಷ್ಟು ಸುಧಾರಣೆಗಳತ್ತ ಸರ್ಕಾರ ಮುಖ ಮಾಡಿರುವುದು ಗಮನಾರ್ಹ. ಜನರ ಮನೆಬಾಗಿಲಿಗೇ ಕೃಷಿ ಭೂಮಿ ದಾಖಲೆ ತಲುಪಿಸುವ ಯೋಜನೆ ಆರಂಭಿಸಿರುವ ಕಂದಾಯ ಇಲಾಖೆ ಇದೀಗ ದೂರವಾಣಿ ಮೂಲಕ ಪಿಂಚಣಿ ಮನವಿ ಕೋರಿಕೆಯನ್ನು ಸ್ವೀಕರಿಸಿ 72 ಗಂಟೆಯಲ್ಲಿ ಮಂಜೂರಾತಿ ನೀಡುವ ‘ಹಲೋ ಕಂದಾಯ ಸಚಿವರೇ’ ಎಂಬ ವಿನೂತನ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ. ಮುಖ್ಯಮಂತ್ರಿಗಳು ಶುಕ್ರವಾರ ವಿಧಾನಸೌಧದಲ್ಲಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಆಸಿಡ್ ದಾಳಿಗೊಳಗಾದ ಫಲಾನುಭವಿಗಳಿಗೆ 3 ಸಾವಿರದಿಂದ 10 ಸಾವಿರ ರೂ.ಗೆ ಹೆಚ್ಚಿಸಿದ ಮಾಸಿಕ ಪಿಂಚಣಿಯನ್ನು ಇದೇ ಸಂದರ್ಭದಲ್ಲಿ ವಿತರಿಸಿದರು.
‘ಆಳುವುದು ಎಂದರೆ ಜನರ ಸಮಸ್ಯೆಗಳನ್ನು ಅರಿತು ಹೃದಯದಿಂದ ಅದಕ್ಕೆ ಪರಿಹಾರ ಕೊಡುವುದು. ಅನುಷ್ಠಾನ ಮಾಡುವುದು ಆಡಳಿತ’ ಎಂದು ಮುಖ್ಯಮಂತ್ರಿಗಳು ಹೇಳಿರುವುದು ಗಮನಾರ್ಹ. ಕಂದಾಯ ಇಲಾಖೆಯ ಸೇವೆಗಳನ್ನು ಮನೆಬಾಗಿಲಿಗೆ ತಲುಪಿಸುವುದರಿಂದ 50 ಲಕ್ಷಕ್ಕೂ ಹೆಚ್ಚು ಜನರಿಗೆ ಅನುಕೂಲವಾಗಲಿದೆ ಎಂಬುದು ಸರ್ಕಾರದ ಅಂದಾಜು. ಮುಖ್ಯವಾಗಿ, ಜನರು ಪಹಣಿ ಸೇರಿದಂತೆ ಕೃಷಿ ಭೂಮಿ ಸಂಬಂಧಿತ ಇತರ ದಾಖಲಾತಿಗಳಿಗಾಗಿ ಪದೇಪದೆ ಸರ್ಕಾರಿ ಕಚೇರಿಗಳಿಗೆ ಎಡತಾಕುವುದು ತಪು್ಪತ್ತದೆ, ಅಲ್ಲದೆ ಇಂಥ ಕ್ರಮಗಳಿಂದ ವ್ಯವಸ್ಥೆಯ ಮೇಲಿನ ನಂಬಿಕೆ ಹೆಚ್ಚಲು ಸಾಧ್ಯವಾಗುತ್ತದೆ. ಸಾಮಾಜಿಕ ಭದ್ರತಾ ಯೋಜನೆಗಳಡಿಯ ಪಿಂಚಣಿಗಳು ಸರಿಯಾದ ಸಮಯಕ್ಕೆ ಫಲಾನುಭವಿಗಳಿಗೆ ತಲುಪುವುದಿಲ್ಲ ಎಂಬ ದೂರು ಇಂದು-ನಿನ್ನೆಯದೇನಲ್ಲ. ಆದರೆ, ಇದಕ್ಕೆ ಅಂತಿಮ ಪರಿಹಾರ ನೀಡಬೇಕಾದ, ಸಮಸ್ಯೆ ಹೊಗಲಾಡಿಸಿ ವ್ಯವಸ್ಥೆ ಸರಿಪಡಿಸಬೇಕಾದ ಅವಶ್ಯಕತೆ ಇತ್ತು. ಪ್ರಸ್ತುತ ಆ ಪ್ರಯತ್ನಗಳು ನಡೆಯುತ್ತಿರುವುದು ಸ್ವಾಗತಾರ್ಹ. ಆದರೆ, ಇವು ಆರಂಭಶೂರತ್ವಕ್ಕೆ ಸೀಮಿತವಾಗಬಾರದು. ದೀರ್ಘಾವಧಿಯಲ್ಲಿ ಕೂಡ ಈ ಸೌಲಭ್ಯಗಳು, ಸೇವೆಗಳು ಪರಿಣಾಮಕಾರಿಯಾಗಿ ತಲುಪಬೇಕೆ ಹೊರತು ಮತ್ತೆ ಅಪಸವ್ಯಗಳನ್ನು ಒಳಗೊಳ್ಳುವಂತೆ ಆಗಬಾರದು. ಕಂದಾಯ ಇಲಾಖೆಯ ಕಾರ್ಯವೈಖರಿ ಚುರುಕುಗೊಳಿಸಿರುವಂತೆಯೇ ಇತರ ಇಲಾಖೆಗಳ ಜಡತ್ವ ಹೊಗಲಾಡಿಸಿ, ಹೊಸ ಸುಧಾರಣೆಗಳನ್ನು ಅಳವಡಿಸಲು ಮುಂದಾಗಬೇಕು. ಆಗಲೇ ಸಾಮಾಜಿಕ ಭದ್ರತಾ ಯೋಜನೆಗಳು ಸೇರಿದಂತೆ ಇತರ ಕಾರ್ಯಕ್ರಮಗಳು ಯಶಸ್ವಿಯಾಗಿ ಅನುಷ್ಠಾನಗೊಂಡು, ಶ್ರೀಸಾಮಾನ್ಯರ ಸ್ಥಿತಿ ಸುಧಾರಿಸಲು ಸಾಧ್ಯ.