

ಹವಾಮಾನ ವೈಪರೀತ್ಯ, ಪರಿಸರ ಮಾಲಿನ್ಯದ ದುಷ್ಪರಿಣಾಮಗಳನ್ನು ಈಗಾಗಲೇ ಎದುರಿಸುತ್ತಿದ್ದೇವೆ. ವಾಯು ಮಾಲಿನ್ಯ, ಜಲಮಾಲಿನ್ಯದ ಕಾರಣಕ್ಕೆ ಆರೋಗ್ಯದ ಸಮಸ್ಯೆಗಳು ದಿನೇದಿನೆ ಹೆಚ್ಚುತ್ತಿವೆ. ಪರಿಸರ ಪ್ರೇಮಿಗಳು, ಸಂಘಟನೆಗಳು ಮಾಲಿನ್ಯ ನಿಯಂತ್ರಿಸಲು ಜಾಗೃತಿ ಚಟುವಟಿಕೆಗಳನ್ನು ನಿರಂತರವಾಗಿ ಮಾಡುತ್ತಿವೆ. ಆದರೂ ಸ್ಪಂದನೆ ಸಿಗುತ್ತಿಲ್ಲ. ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ಸರ್ಕಾರಗಳು ಎಷ್ಟೇ ಕಾನೂನು ರೂಪಿಸಿದರೂ ಫಲ ನೀಡುತ್ತಿಲ್ಲ. ಈಗ ರಾಜ್ಯ ಸರ್ಕಾರ ಒಂದು ಹೆಜ್ಜೆ ಮುಂದೆ ಹೋಗಿ ಪ್ಲಾಸ್ಟರ್ ಆಫ್ ಪ್ಯಾರಿಸ್ ವಿಗ್ರಹ ಮಾರಾಟ ಮಾಡುವವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡುವ ಎಚ್ಚರಿಕೆ ನೀಡಿದೆ.
ಪ್ರತಿ ವರ್ಷ ಗಣೇಶೋತ್ಸವ ಸಂದರ್ಭದಲ್ಲಿ ಜಲಮಾಲಿನ್ಯ ನಿಯಂತ್ರಣ ಉದ್ದೇಶದಿಂದ ಮಾಲಿನ್ಯ ನಿಯಂತ್ರಣ ಮಂಡಳಿ ಹಲವು ಸಲಹೆಗಳನ್ನು ನೀಡುತ್ತದೆ. ರಾಸಾಯನಿಕ ಬಳಸಿ ತಯಾರಿಸಿದ ಬಣ್ಣದ ಗಣಪತಿ ವಿಗ್ರಹಗಳು, ಪ್ಲಾಸ್ಟರ್ ಆಫ್ ಪ್ಯಾರಿಸ್ನಿಂದ ತಯಾರಿಸಿದ ಗಣಪತಿ ವಿಗ್ರಹಗಳನ್ನು ಪ್ರತಿಷ್ಠಾಪನೆ ಮಾಡುವ ಬದಲಿಗೆ ಪರಿಸರಸ್ನೇಹಿ ಗಣಪತಿ ಪ್ರತಿಷ್ಠಾಪನೆ ಮಾಡುವುದು ಸೂಕ್ತ ಎಂದು ಹೇಳುತ್ತಿದೆ. ಗಣೇಶೋತ್ಸವ ಆಚರಣೆ ವೇಳೆ ಮಾಲಿನ್ಯ ನಿಯಂತ್ರಣದ ಬಗ್ಗೆ ಗಮನಹರಿಸಿ ಎಂದು ಮಂಗಳವಾರ ಡಿಸಿ ಮತ್ತು ಜಿಪಂ ಅಧಿಕಾರಿಗಳ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ವಿವಿಧ ಕಾರಣಗಳಿಗೆ ಜಲಮಾಲಿನ್ಯ ಹೆಚ್ಚುತ್ತಿದ್ದು, ರಾಸಾಯನಿಕ ಬಳಸಿ ತಯಾರಿಸಿದ ಬಣ್ಣದ ಗಣಪತಿ ವಿಗ್ರಹಗಳು ಮತ್ತು ಪ್ಲಾಸ್ಟರ್ ಆಫ್ ಪ್ಯಾರಿಸ್ ಬಳಕೆ ಮಾಡಿ ತಯಾರಿಸಿದ ಗಣಪತಿ ವಿಗ್ರಹಗಳನ್ನು ನೀರಿನಲ್ಲಿ ವಿಸರ್ಜನೆ ಮಾಡುವುದರಿಂದ ಮಾಲಿನ್ಯ ಪ್ರಮಾಣ ಮತ್ತಷ್ಟು ಹೆಚ್ಚುತ್ತಿದೆ. ಬೆಂಗಳೂರಿನ ಸೆಂಟ್ರಲ್ ಪೊಲ್ಯೂಷನ್ ಕಂಟ್ರೋಲ್ ಬೋರ್ಡ್ ಕೈಗೊಂಡಿರುವ ಸಂಶೋಧನೆಯಲ್ಲಿ ಇಂತಹ ವಿಗ್ರಹಗಳನ್ನು ನೀರಿನಲ್ಲಿ ವಿಸರ್ಜನೆ ಮಾಡಿದಾಗ ಆಸಿಡ್ ಮತ್ತು ಲೋಹದ ಅಂಶ ಹೆಚ್ಚಾಗಲಿದೆ. ಈ ನೀರು ಜಲಚರಗಳ ಮೇಲೂ ಪರಿಣಾಮ ಬೀರಲಿದೆ. ಬಳಕೆಗೂ ಯೋಗ್ಯವಲ್ಲ ಎಂದು ಹೇಳಲಾಗಿದೆ. ಬರಗಾಲದ ಕಾರಣದಿಂದ ಈಗಾಗಲೇ ರಾಜ್ಯದ ಹಲವೆಡೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಲಭ್ಯ ಇರುವ ಜಲಮೂಲಗಳನ್ನೂ ಕಲುಷಿತ ಮಾಡಿದರೆ ಮತ್ತಷ್ಟು ಸಮಸ್ಯೆ ಸೃಷ್ಟಿಯಾಗಲಿದೆ.
ಕೇವಲ ಪ್ಲಾಸ್ಟರ್ ಆಫ್ ಪ್ಯಾರಿಸ್ ವಿಗ್ರಹಗಳಷ್ಟೇ ಅಲ್ಲ, ರಾಸಾಯನಿಕ ಅಂಶ ಇರುವ ಬಣ್ಣದ ಗಣಪತಿಗಳನ್ನೂ ಪ್ರತಿಷ್ಠಾಪನೆ ಮಾಡುವ ಬದಲಿಗೆ ನೈಸರ್ಗಿಕ ಬಣ್ಣ ಬಳಸಿದ ಇಲ್ಲವೇ ಬಣ್ಣ ರಹಿತವಾಗ ಗಣೇಶ ಮೂರ್ತಿಗಳನ್ನೇ ಪ್ರತಿಷ್ಠಾಪನೆ ಮಾಡುವುದು ಸೂಕ್ತ ಎಂಬುದು ನಿರ್ವಿವಾದ. ಸರ್ಕಾರಗಳು ಎಷ್ಟೇ ಕಾಯ್ದೆಗಳನ್ನು ರೂಪಿಸಿದರೂ ಸ್ಪಂದನೆ ಸಿಗದಿದ್ದರೆ ಪ್ರಯತ್ನಗಳೆಲ್ಲವೂ ವ್ಯರ್ಥವಾಗಲಿವೆ. ಆಧುನಿಕತೆ ದೊಡ್ಡ ಪ್ರಮಾಣದಲ್ಲಿ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿದೆ. ಪ್ಲಾಸ್ಟಿಕ್ ಚೀಲಗಳ ಬಳಕೆಯ ದುಷ್ಪರಿಣಾಮಗಳ ಬಗ್ಗೆ ಈಗ ಜಾಗೃತಿ ಮೂಡುತ್ತಿದ್ದು, ಬಟ್ಟೆಯ ಚೀಲಗಳ ಬಳಕೆಗೆ ಉತ್ತೇಜನ ಸಿಗುತ್ತಿದೆ. ಇದೇ ರೀತಿ ಪ್ಲಾಸ್ಟರ್ ಆಫ್ ಪ್ಯಾರಿಸ್ ಹಾಗೂ ರಾಸಾಯನಿಕ ಬಣ್ಣ ಬಳಕೆ ಮಾಡಿದ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡುವ ಬದಲಿಗೆ ನೈಸರ್ಗಿಕ ಬಣ್ಣ ಬಳಕೆ ಮಾಡಿದ ಇಲ್ಲವೇ ಬಣ್ಣರಹಿತ ವಿಗ್ರಹಗಳನ್ನು ಪ್ರತಿಷ್ಠಾಪನೆ ಮಾಡುವುದರಿಂದ ದೊಡ್ಡ ಪ್ರಮಾಣದಲ್ಲಿ ಜಲಮಾಲಿನ್ಯ ನಿಯಂತ್ರಣ ಮಾಡಲು ಸಾಧ್ಯವಿದೆ.