ಉಗ್ರ ನಿಗ್ರಹ ಕ್ರಮ: ನಾರ್ಕೋ ಟೆರರಿಸಂ ನಂಟಿನ ಮೇಲೆ ಪ್ರಹಾರ

Editorial
Published on

ಉತ್ತರ ಭಾರತದ ಅಂದಾಜು 50 ಸ್ಥಳಗಳಲ್ಲಿ ಸಂಘಟಿತ ಭಯೋತ್ಪಾದಕ ಗ್ಯಾಂಗ್​ಗಳ ವಿರುದ್ಧ ದಾಳಿ ನಡೆಸುವ ಮೂಲಕ ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್​ಐಎ) ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವ ಹಾಗೂ ಭಯೋತ್ಪಾದನೆ ಬೆಂಬಲವಾಗಿರುವ ‘ನಾಕೋ-ಭಯೋತ್ಪಾದಕ’ ಗುಂಪುಗಳ ಮೇಲೆ ಗದಾಪ್ರಹಾರ ಮಾಡಿದೆ. ದೆಹಲಿ, ಹರಿಯಾಣ, ಪಂಜಾಬ್ ಸೇರಿದಂತೆ ಉತ್ತರ ಭಾರತದ ಹಲವೆಡೆ ದಾಳಿಗಳನ್ನು ಎನ್​ಐಎ ಕೈಗೊಂಡಿದ್ದು, ಶಸ್ತ್ರಾಸ್ತ್ರ ಕಳ್ಳಸಾಗಣೆ, ಅಂತರ್​ಗ್ಯಾಂಗ್ ಪೈಪೋಟಿ ಮತ್ತು ಇತರ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಈ ಗ್ಯಾಂಗ್​ಗಳು ತೊಡಗಿರುವುದನ್ನು ಪತ್ತೆ ಮಾಡಿದೆ. ಶಸ್ತ್ರಾಸ್ತ್ರ ಕಳ್ಳಸಾಗಣೆ, ಡ್ರಗ್ಸ್ ಮಾರಾಟದಲ್ಲಿ ತೊಡಗಿರುವ ಗುಂಪುಗಳೇ ನಾಕೋ ಭಯೋತ್ಪಾದಕ ಗುಂಪುಗಳಾಗಿದ್ದು, ಉಗ್ರಗಾಮಿ ಸಂಘಟನೆಗಳ ಜತೆಗೂಡಿಯೇ ಇವು ಕಾರ್ಯನಿರ್ವಹಿಸುತ್ತಿರುತ್ತವೆ.

ಹೀಗಾಗಿ, ಪ್ರಸ್ತುತ ದಾಳಿಯು ಬಾಹ್ಯಶಕ್ತಿಗಳ ಬೆಂಬಲಿತ ಭಯೋತ್ಪಾದಕರ ಜತೆ ರಹಸ್ಯವಾಗಿ ಕೈಜೋಡಿಸಿ ಕಾರ್ಯನಿರ್ವಹಿಸುವ ದೇಶದೊಳಗಿನ ದುಷ್ಟಶಕ್ತಿಗಳನ್ನು ಸದೆಬಡಿಯುವ ನಿಟ್ಟಿನಲ್ಲಿ ಪ್ರಮುಖ ಕಾರ್ಯಾಚರಣೆಯೆನ್ನಬಹುದು. ಕಳೆದ ಕೆಲವು ತಿಂಗಳುಗಳಲ್ಲಿ ಗಡಿಭಾಗದಲ್ಲಿ ಡ್ರೋನ್​ಗಳ ಹಾರಾಟ ಹಾಗೂ ಅಂತರಗ್ಯಾಂಗ್ ಪೈಪೋಟಿಗೆ ಸಂಬಂಧಿಸಿದ ಪ್ರಕರಣಗಳು ವರದಿಯಾಗಿವೆ. ಈ ವರ್ಷ ಜಮ್ಮು ಮತ್ತು ಕಾಶ್ಮೀರದಲ್ಲಿ ಎರಡು ಡಜನ್​ಗಿಂತಲೂ ಹೆಚ್ಚು ಪಾಕಿಸ್ತಾನಿ ಡ್ರೋನ್​ಗಳು ಕಾಣಿಸಿಕೊಂಡಿವೆ. ಭಯೋತ್ಪಾದನಾ ದಾಳಿಗಾಗಿ ಶಸ್ತ್ರಾಸ್ತ್ರಗಳು ಮತ್ತು ಸ್ಪೋಟಕಗಳನ್ನು ರವಾನಿಸುವ ಪ್ರಯತ್ನ ಇದಾಗಿದೆ ಎಂದು ಸಂದೇಹಿಸಲಾಗಿದ್ದು, ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಭಯೋತ್ಪಾದಕ ಗುಂಪುಗಳ ಪಾತ್ರದ ಬಗೆಗೆ ಕೂಡ ಎನ್​ಐಎ ಪರಿಶೀಲಿಸುತ್ತಿದೆ.

ಎನ್​ಐಎ ಕಳೆದ ತಿಂಗಳು ಶ್ರೀನಗರ, ಜಮ್ಮು, ಕಥುವಾ, ಸಾಂಬಾ ಮತ್ತು ದೋಡಾದ ಹಲವೆಡೆ ದಾಳಿ ನಡೆಸಿ, ಲಷ್ಕರ್-ಎ-ತೊಯ್ಬಾ ಉಗ್ರಗಾಮಿ ಸಂಘಟನೆಯ ಶಾಖೆಯೊಂದು ಶಸ್ತ್ರಾಸ್ತ್ರ, ಮದ್ದುಗುಂಡು ಮತ್ತು ಸ್ಪೋಟಕಗಳನ್ನು ಸಾಗಿಸುವುದನ್ನು ಪತ್ತೆಮಾಡಿತ್ತು. ಅಲ್ಲದೆ, ಮೇ ತಿಂಗಳಲ್ಲಿ ಪಂಜಾಬ್​ನ ಮಾನ್ಸಾ ಜಿಲ್ಲೆಯಲ್ಲಿ ಗಾಯಕ-ರಾಜಕಾರಣಿ ಸಿಧು ಮೂಸೆವಾಲಾ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ ನಂತರ ಅಂತರ್​ಗ್ಯಾಂಗ್ ಪೈಪೋಟಿ ಬೆಳಕಿಗೆ ಬಂದಿತ್ತು. ಕಳೆದ ಜೂನ್​ನಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್​ಗೆ ಕಳುಹಿಸಿದ ಬೆದರಿಕೆ ಪತ್ರ ಮತ್ತು ಮೂಸೆವಾಲಾ ಕೊಲೆ ಪ್ರಕರಣದ ಆರೋಪಿಯೊಬ್ಬನ ನಡುವಿನ ಸಂಬಂಧವನ್ನು ಪಂಜಾಬ್ ಪೊಲೀಸರು ಬಹಿರಂಗಪಡಿಸಿದ್ದರು.

ಇತ್ತೀಚಿನ ವರ್ಷಗಳಲ್ಲಿ ಭಯೋತ್ಪಾದನೆ ನಿಗ್ರಹಿಸುವಲ್ಲಿ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗಿದೆ. ಜಮ್ಮ ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ 370ನೇ ವಿಧಿ ರದ್ದತಿ ಹಾಗೂ ಆ ರಾಜ್ಯದ ವಿಭಜನೆ ನಂತರ ಪಾಕ್ ಬೆಂಬಲಿತ ಭಯೋತ್ಪಾದನೆಯನ್ನು ಸಾಕಷ್ಟು ಪ್ರಮಾಣದಲ್ಲಿ ನಿಯಂತ್ರಿಸಲಾಗಿದೆ. ಪೂರ್ವಾಂಚಲ ರಾಜ್ಯಗಳಲ್ಲಿ ಚೀನಾ ಪ್ರಾಯೋಜಿತ ಉಗ್ರಗಾಮಿಗಳನ್ನು ಬಹುಮಟ್ಟಿಗೆ ಮಟ್ಟಹಾಕಲಾಗಿದೆ. ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವ ಗುಂಪುಗಳು ರಹಸ್ಯವಾಗಿ ಉಗ್ರರೊಂದಿಗೆ ಕೈಜೋಡಿಸಿರುವುದನ್ನು ಪತ್ತೆ ಮಾಡುವುದು ಈಗ ಸವಾಲಾಗಿದೆ. ವಿವಿಧ ರಾಜ್ಯಗಳ ಪೊಲೀಸರು ಹಾಗೂ ಎನ್​ಐಎ ಪರಸ್ಪರ ಸಹಯೋಗದಿಂದ ಕಾರ್ಯನಿರ್ವಹಿಸಿದರೆ ಹಾಗೂ ಸಾರ್ವಜನಿಕರು ತಮಗೆ ಕಂಡುಬರುವ ಶಂಕಾಸ್ಪದ ಚಟುವಟಿಕೆಗಳ ಮಾಹಿತಿಯನ್ನು ಈ ಸಂಸ್ಥೆಗಳಿಗೆ ರವಾನಿಸಿ ಕೈಜೋಡಿಸಿದರೆ ಆಂತರಿಕ ಭಯೋತ್ಪಾದಕ ಶಕ್ತಿಗಳನ್ನು ನಿಗ್ರಹಿಸಲು ಸಾಧ್ಯವಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net