

ಬಡತನ ರೇಖೆಗಿಂತ ಕೆಳಗಿರುವವರಿಗೆ ಆಹಾರ ಭದ್ರತೆಯನ್ನು ಒದಗಿಸುವ ಸಲುವಾಗಿ ರೂಪಿಸಲಾಗಿರುವ ಪಡಿತರ ಚೀಟಿ ಯೋಜನೆಯಲ್ಲಿ ಆರಂಭದಿಂದಲೂ ಅಪಾರ ಪ್ರಮಾಣದಲ್ಲಿ ಅವ್ಯವಹಾರಗಳು ನಡೆದುಕೊಂಡು ಬಂದಿವೆ. ಅಗ್ಗದ ದರದಲ್ಲಿ ಸರ್ಕಾರದಿಂದ ಒದಗಿಸಲಾಗುವ ಆಹಾರ ಧಾನ್ಯಗಳ ದಾಸ್ತಾನು ಕಾಳಸಂತೆಕೋರರ ಮೂಲಕ ಮುಕ್ತ ಮಾರುಕಟ್ಟೆ ಪ್ರವೇಶಿಸುವ ಅಕ್ರಮ ದಂಧೆ ಈಗಲೂ ವಿವಿಧ ರೀತಿಯಲ್ಲಿ ಮುಂದುವರಿದಿದೆ.
ಬಡವರಿಗೆ ಆಹಾರ ಧಾನ್ಯವನ್ನು ಅಗ್ಗದ ದರದಲ್ಲಿ ಮಾರಾಟ ಮಾಡುವ ನ್ಯಾಯ ಬೆಲೆ ಅಂಗಡಿಗಳಲ್ಲಿಯೇ ಈ ಹಿಂದೆ ನಕಲಿ ಪಡಿತರ ಚೀಟಿಗಳ ಮೂಲಕ ಸಾಕಷ್ಟು ಅನ್ಯಾಯ ನಡೆದುಕೊಂಡು ಬಂದಿತ್ತು. ಪಡಿತರ ವ್ಯವಸ್ಥೆಯನ್ನು ನೋಡಿಕೊಳ್ಳುವ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಿಬ್ಬಂದಿಯೂ ಈ ಅಂಗಡಿಗಳವರೊಂದಿಗೆ ಶಾಮೀಲಾಗಿ ನಕಲಿ ಪಡಿತರ ಚೀಟಿಗಳನ್ನು ಸೃಷ್ಟಿಸುವ ಮೂಲಕ ಧಾನ್ಯವನ್ನು ಲೂಟಿ ಮಾಡುತ್ತಿದ್ದರು. ಆದರೆ, ಕೆಲ ವರ್ಷಗಳಿಂದ ತಂತ್ರಜ್ಞಾನ ಬಳಕೆ ಮೂಲಕ ನಕಲಿ ಪಡಿತರ ಚೀಟಿ ದಂಧೆಗೆ ಸಂಪೂರ್ಣ ಕಡಿವಾಣವನ್ನೇ ಹಾಕಲಾಗಿದೆ. ಆಧಾರ ಲಿಂಕ್ ಇರುವ ಮೊಬೈಲ್ಫೋನ್ ಒಟಿಪಿ ಮೂಲಕ ದೃಢೀಕರಣಗೊಂಡ ನಂತರವೇ ಫಲಾನುಭವಿಗಳಿಗೆ ಪಡಿತರ ಧಾನ್ಯವನ್ನು ಈಗ ನೀಡಲಾಗುತ್ತದೆ. ಮೊಬೈಲ್ಫೋನ್ ಇಲ್ಲದಿದ್ದರೆ ಫಲಾನುಭವಿಗಳ ಥಂಬ್ ಇಂಪ್ರೆಶನ್ (ಹೆಬ್ಬೆಟ್ಟು ಒತ್ತುವುದು) ಪಡೆದುಕೊಳ್ಳಲಾಗುತ್ತದೆ.
ಹೀಗಾಗಿ, ನಕಲಿ ಪಡಿತರ ಚೀಟಿಗಳು ಈಗ ನಾಪತ್ತೆಯಾಗಿವೆ. ಹೀಗಿದ್ದರೂ ಕಳ್ಳವ್ಯವಹಾರವು ಬೇರೆ ಬೇರೆ ಮಾರ್ಗಗಳ ಮೂಲಕ ಮುಂದುವರಿದಿದೆ. ಇದರಲ್ಲಿ ಪ್ರಮುಖವಾದುದು, ಫಲಾನುಭವಿಗಳಿಂದಲೇ ಆಹಾರ ಧಾನ್ಯವನ್ನು ಖರೀದಿಸಿ ಮುಕ್ತ ಮಾರುಕಟ್ಟೆಯಲ್ಲಿ ಮಾರುವುದು. ಉದಾಹರಣೆಗೆ ಪಡಿತರ ಅಕ್ಕಿಯನ್ನು 8-10 ರೂಪಾಯಿಗಳಿಗೆ ಫಲಾನುಭವಿಗಳಿಂದ ಖರೀದಿಸಿ, ನಂತರ ಗುಣಮಟ್ಟದ ಅಕ್ಕಿಯಂತೆ ಕಾಣುವ ರೀತಿಯಲ್ಲಿ ಪಾಲಿಶ್ ಮಾಡಿ ಮಾರಾಟ ಮಾಡಲಾಗುತ್ತದೆ. ಆಯಾ ಪ್ರದೇಶಗಳಲ್ಲಿ ಫಲಾನುಭವಿಗಳು ಬಳಸುವಂತಹ ಧಾನ್ಯಗಳನ್ನೇ ಒದಗಿಸುವ ಮೂಲಕ ಹಾಗೂ ಫಲಾನುಭವಿಗಳಿಗೆ ಧಾನ್ಯಗಳ ಆಯ್ಕೆಗೆ ಅವಕಾಶ ಕಲ್ಪಿಸುವುದರಿಂದ ಇಂತಹ ದಂಧೆಗೆ ಕಡಿವಾಣ ಹಾಕಲು ಸಾಧ್ಯವಿದೆ. ಪಡಿತರ ಚೀಟಿ ಪಡೆಯಲು ನಿಗದಿಪಡಿಸಲಾಗಿರುವ ಮಾನದಂಡಗಳ ಅನುಷ್ಠಾನ ಸರಿಯಾಗಿ ಆಗದಿರುವುದರಿಂದ ಪಡಿತರ ಚೀಟಿ ಫಲಾನುಭವಿಗಳ ಸಂಖ್ಯೆ ಆಪಾರ ಪ್ರಮಾಣದಲ್ಲಿ ಹೆಚ್ಚಾಗಿದೆ.
ಕಳೆದ ಏಳೆಂಟು ವರ್ಷಗಳಲ್ಲಿ ದೇಶದಲ್ಲಿ 18ರಿಂದ 19 ಕೋಟಿ ಫಲಾನುಭವಿಗಳಿಗೆ ಸೇರಿದ 4.7 ಕೋಟಿ ಪಡಿತರ ಚೀಟಿಗಳನ್ನು ವಿವಿಧ ಕಾರಣಗಳಿಂದಾಗಿ ರದ್ದು ಮಾಡಲಾಗಿದೆ. ಈಗ ಇಡೀ ದೇಶದಲ್ಲಿ ಪಡಿತರ ಚೀಟಿ ಫಲಾನುಭವಿಗಳ ಸಂಖ್ಯೆ ಅಂದಾಜು 80 ಸಾವಿರ ಕೋಟಿ ಇದೆ. 140 ಕೋಟಿಗೂ ಅಧಿಕ ಜನಸಂಖ್ಯೆ ಇರುವ ದೇಶದಲ್ಲಿ ಅಂದಾಜು ಶೇ. 60ರಷ್ಟು ಜನರು ಬಡತನ ರೇಖೆಯ ಕೆಳಗೆ ಇದ್ದಾರೆ ಎಂಬುದು ಒಪ್ಪತಕ್ಕ ಸಂಗತಿಯೇ? ನಮ್ಮದು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುತ್ತ ದಾಪುಗಾಲು ಹಾಕುತ್ತಿರುವ ದೇಶವೇ? ಎಂಬ ಪ್ರಶ್ನೆಗಳು ಇದರಿಂದ ಉದ್ಭವಿಸುತ್ತವೆ. ಹೀಗಾಗಿ ಪಡಿತರ ಚೀಟಿ ಅಕ್ರಮ ಹಾಗೂ ಪಡಿತರ ಧಾನ್ಯ ದುರುಪಯೋಗಗಳನ್ನು ತಡೆಗಟ್ಟುವುದು ತುರ್ತು ಅಗತ್ಯ. ಇದರಿಂದ ಬಡವರ ಅನ್ನ ಅನ್ಯರ ಪಾಲಾಗುವುದನ್ನೂ ತಪ್ಪಿಸಿದಂತಾಗುತ್ತದೆ.