

ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಹಲವು ಹೊಸತನಗಳಿಗೆ ತೆರೆದುಕೊಂಡಿದ್ದು, ವಿದ್ಯಾರ್ಥಿಸ್ನೇಹಿಯಾಗಿ ಮುಂದಡಿ ಇರಿಸಿರುವುದು ಸ್ವಾಗತಾರ್ಹ. ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಇನ್ನು ಮುಂದೆ ಮರುಮೌಲ್ಯಮಾಪನ ಹಾಗೂ ಅಂಕಗಳ ಮರುಎಣಿಕೆಗೆ ಅರ್ಜಿ ಸಲ್ಲಿಸಿ ಉತ್ತರಪತ್ರಿಕೆಗಾಗಿ ಹಲವು ದಿನಗಳು ಕಾಯಬೇಕಿಲ್ಲ. ಮೂರು ದಿನಗಳಲ್ಲೇ ಅದೂ ಇಲಾಖೆ ವೆಬ್ಸೈಟ್ನಲ್ಲೇ ಲಭಿಸುವ ವ್ಯವಸ್ಥೆಯನ್ನು ಸಂಬಂಧಿತ ಪರೀಕ್ಷಾ ಮಂಡಳಿ ಮಾಡಿದೆ. ವಿದ್ಯಾರ್ಥಿಗಳ ಇ-ಮೇಲ್ಗೆ ಉತ್ತರಪತ್ರಿಕೆ ಕಳುಹಿಸುವಾಗ ಆಗುತ್ತಿದ್ದ ತಾಂತ್ರಿಕ ದೋಷವೂ ಹೊಸ ವ್ಯವಸ್ಥೆಯಿಂದ ದೂರವಾಗಲಿದೆ.
ಇದರಿಂದ ಸಾವಿರಾರು ವಿದ್ಯಾರ್ಥಿಗಳ ಬವಣೆ ತಪು್ಪತ್ತದೆ. ಕಡಿಮೆ ಸಮಯದಲ್ಲಿ ಉತ್ತರಪತ್ರಿಕೆ ಲಭ್ಯವಾಗುತ್ತದೆ. ಮರುಮೌಲ್ಯಮಾಪನ, ಮರುಎಣಿಕೆಗೆ ಅರ್ಜಿ ಹಾಕಿ, ಉತ್ತರಪತ್ರಿಕೆಗಾಗಿ ಚಾತಕಪಕ್ಷಿಯಂತೆ ಕಾಯಬೇಕಾಗುತ್ತಿತ್ತು. ಕೆಲವೊಮ್ಮೆ ಸಕಾಲದಲ್ಲಿ ಉತ್ತರಪತ್ರಿಕೆ ಸಿಗದೆ ವಿದ್ಯಾರ್ಥಿಗಳು ಮತ್ತು ಅವರ ಪಾಲಕರು ಆತಂಕಕ್ಕೆ ಒಳಗಾದ ನಿದರ್ಶನಗಳಿಗೆ ಕೊರತೆ ಇಲ್ಲ. ಅಷ್ಟೇ ಅಲ್ಲ, ಟಿಸಿ ವರ್ಗಾವಣೆ, ಕಲಿಕಾ ಅವಧಿಯ ಪ್ರಮಾಣಪತ್ರ ನೀಡುವುದು ಸೇರಿದಂತೆ ಹಲವು ಆಯಾಮಗಳಲ್ಲಿ ಇನ್ನಷ್ಟು ದಕ್ಷತೆ ಬೆಳೆಸಿಕೊಂಡು, ಕಾಲಮಿತಿಯಲ್ಲಿ ಇಂಥ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಆದ್ಯತೆ ನೀಡಬೇಕು. ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು ಹೊಸ ಸುಧಾರಣೆಗಳಿಗೆ ಒಡ್ಡಿಕೊಳ್ಳುತ್ತಿರುವುದು ಸರಿಯೇ. ಆದರೆ, ತಂತ್ರಜ್ಞಾನದ ಲಭ್ಯತೆ, ಸೂಕ್ತ ಸಂಪನ್ಮೂಲ, ಸಿಬ್ಬಂದಿ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಸಮರ್ಪಕವಾಗಿ ಹೊಂದಿದ್ದರೂ ನಮ್ಮ ರಾಜ್ಯದ ವಿಶ್ವವಿದ್ಯಾಲಯಗಳು ಮಹತ್ವದ ಬದಲಾವಣೆಗಳಿಗೆ ತೆರೆದುಕೊಳ್ಳುತ್ತಿಲ್ಲ ಎಂಬುದು ಕಹಿಸತ್ಯ. ವಿಳಂಬನೀತಿ, ತಾಂತ್ರಿಕ ದೋಷಗಳು, ಪರೀಕ್ಷೆ ನಡೆಸುವ ವ್ಯವಸ್ಥೆಯಲ್ಲಿ ಲೋಪಗಳು, ಫಲಿತಾಂಶ ಘೋಷಣೆಯಲ್ಲಿ ಅನಗತ್ಯವಾಗಿ ತಡಮಾಡುವುದು, ವಿದ್ಯಾರ್ಥಿಗಳಿಗೆ ಸರಿಯಾಗಿ ಮಾಹಿತಿ ತಲುಪಿಸದಿರುವುದು ಹೀಗೆ ಹಲವು ಸಮಸ್ಯೆಗಳು ಬಹುತೇಕ ವಿಶ್ವವಿದ್ಯಾಲಯಗಳಲ್ಲಿ ಇವೆ. ಇದು ತಂತ್ರಜ್ಞಾನದ ಯುಗ. ಎಲ್ಲ ಕ್ಷೇತ್ರಗಳಲ್ಲೂ ತಂತ್ರಜ್ಞಾನದ ಬಳಕೆ ಹಾಸುಹೊಕ್ಕಾಗಿದೆ. ಕೆಲಸಗಳು ಕ್ಷಿಪ್ರವಾಗಿ ಪೂರ್ಣಗೊಳ್ಳುತ್ತಿದ್ದು, ಗುಣಮಟ್ಟವೂ ಹೆಚ್ಚಿದೆ.
ಶಿಕ್ಷಣ ಕ್ಷೇತ್ರದಲ್ಲಿ ಕೂಡ ತಂತ್ರಜ್ಞಾನದ ಬಳಕೆ ಹೆಚ್ಚಿದೆ. ಕರೊನಾ ಅವಧಿಯಲ್ಲಿ ಶಾಲೆ-ಕಾಲೇಜುಗಳು ದೀರ್ಘಾವಧಿ ಮುಚ್ಚಿದ್ದರೂ, ಆನ್ಲೈನ್ ತರಗತಿಗಳು ಭರವಸೆಯಾಗಿ ಕಂಡುಬಂದವು. ಗ್ರಾಮೀಣ ಭಾಗದ ಕೆಲ ಶಾಲೆಗಳಲ್ಲಿ ಸ್ಮಾರ್ಟ್ಕ್ಲಾಸ್ಗಳು ಆರಂಭಗೊಂಡಿರುವುದರಿಂದ, ವಿದ್ಯಾರ್ಥಿಗಳ ಹಾಜರಾತಿ ಪ್ರಮಾಣ ಹೆಚ್ಚಿದೆ. ಆದರೆ, ವಿಶ್ವವಿದ್ಯಾಲಯಗಳು ಮಾತ್ರ ಇಂದಿಗೂ ಹಳೆಯ ನೀತಿಗಳಿಗೆ, ಅದೇ ಆಡಳಿತ ವ್ಯವಸ್ಥೆಗೆ ಅಂಟಿಕೊಂಡಿದ್ದು, ವಿದ್ಯಾರ್ಥಿಸ್ನೇಹಿ ಕ್ರಮಗಳತ್ತ ಗಮನ ಹರಿಸಿಲ್ಲ. ಇಡೀ ಆಡಳಿತ ನಿರ್ವಹಣೆಯಲ್ಲಿ ವಿವಿಗಳು ಆಮೂಲಾಗ್ರ ಬದಲಾವಣೆ ತಂದುಕೊಳ್ಳಬೇಕಿದ್ದು, ಈ ನಿಟ್ಟಿನಲ್ಲಿ ಮಾಹಿತಿ-ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕಿದೆ. ವಿದ್ಯಾರ್ಥಿಗಳು ವ್ಯಾಸಂಗಕ್ಕೆ ಸಮಯ ಮೀಸಲಿಡುವ ಬದಲು ಪರೀಕ್ಷಾ ಶುಲ್ಕ ತುಂಬಲು, ಮರುಮೌಲ್ಯಮಾಪನ, ಅಂಕಪಟ್ಟಿ ಪಡೆಯಲು ಹಲವು ಬಾರಿ ಎಡತಾಕಬೇಕಿದೆ. ಇಂಥ ಸೇವೆಗಳು ಆನ್ಲೈನ್ನಲ್ಲೇ ಒದಗಿಸುವ ಮೂಲಕ ಪಾರದರ್ಶಕತೆ ಕಾಯ್ದುಕೊಳ್ಳುವ ಜತೆಗೆ ಸಮಯವನ್ನೂ ಉಳಿಸಬಹುದು. ವಿದ್ಯಾರ್ಥಿಗಳಿಗೂ ತುಂಬ ಸಹಕಾರಿ. ಇನ್ನಾದರೂ, ಜಡತ್ವ ಕಳೆದುಕೊಂಡು ವಿವಿಗಳು ತಂತ್ರಜ್ಞಾನದ ಬಲದೊಂದಿಗೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಂತಾಗಲಿ ಎಂಬುದೇ ಆಶಯ.