ಸಂಪಾದಕೀಯ | ಆತಂಕಕಾರಿ ಸಂಗತಿ: ಸಾರ್ವಜನಿಕ ಸ್ವಾಮ್ಯದ ಉದ್ದಿಮೆಗಳಿಗೆ ಮತ್ತಷ್ಟು ನಷ್ಟ

Nigama
Published on

ರಾಜ್ಯದಲ್ಲಿನ ಸಾರ್ವಜನಿಕ ಸ್ವಾಮ್ಯದ ಉದ್ದಿಮೆಗಳು ಮತ್ತಷ್ಟು ನಷ್ಟಕ್ಕೆ ಸಿಲುಕಿದ್ದು ಬೊಕ್ಕಸಕ್ಕೆ ಹೊರೆಯಾಗಿ ಪರಿಣಮಿಸಿವೆ. 2022ರ ಮಾರ್ಚ್ 31ಕ್ಕೆ ಅಂತ್ಯಗೊಂಡ ಆರ್ಥಿಕ ವರ್ಷದಲ್ಲಿ ರಾಜ್ಯದಲ್ಲಿನ 54 ಸಾರ್ವಜನಿಕ ಉದ್ದಿಮೆಗಳು 37,893 ಕೋಟಿ ರೂಪಾಯಿಗಳಷ್ಟು ಒಟ್ಟಾರೆ ನಷ್ಟ ಅನುಭವಿಸಿವೆ ಎಂಬ ಆತಂಕಕಾರಿ ಸಂಗತಿಯನ್ನು ಮಹಾಲೇಖಪಾಲರ (ಸಿಎಜಿ) ವರದಿ ಬಹಿರಂಗಪಡಿಸಿದೆ.

ವಿಧಾನಸಭೆಯಲ್ಲಿ ಮಂಡಿಸಲಾದ ಸಿಎಜಿ ವರದಿಯು ಇನ್ನೂ ಅನೇಕ ಕಳವಳಕಾರಿ ವಿಷಯಗಳನ್ನು ಒಳಗೊಂಡಿದೆ. ನಾಲ್ಕು ಸಾರಿಗೆ ನಿಗಮಗಳು, ವಿದ್ಯುತ್ ಕಂಪನಿಗಳಾದ ಬೆಸ್ಕಾಂ ಮತ್ತು ಜೆಸ್ಕಾಂ ಹಾಗೂ ಲಿಡ್ಕರ್, ಮೈಷುಗರ್, ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಸೇರಿ 34 ಸರ್ಕಾರಿ ಸ್ವಾಮ್ಯದ ಉದ್ದಿಮೆಗಳ ಆಸ್ತಿ ಮೌಲ್ಯವು ಶೂನ್ಯ ಅಥವಾ ಅದಕ್ಕಿಂತ ಕಡಿಮೆ ಮಟ್ಟಕ್ಕೆ ಕುಸಿದಿದೆ. 26 ಉದ್ದಿಮೆಗಳ ಬಂಡವಾಳ ಶೂನ್ಯಕ್ಕೆ ಮುಟ್ಟಿದ್ದು, ಸರ್ಕಾರವು ಇವುಗಳ 42,567 ಕೋಟಿ ರೂ. ಸಾಲವನ್ನು ಮಾರುಪಾವತಿ ಮಾಡುವ ಪರಿಸ್ಥಿತಿ ತಲೆದೋರಿದೆ.

ಕರ್ನಾಟಕ ಸರ್ಕಾರದ ಅಧೀನದಲ್ಲಿ 125 ಉದ್ದಿಮೆಗಳಿದ್ದು, ಈ ಪೈಕಿ 6 ನಿಗಮಗಳು, 119 ಸರ್ಕಾರಿ ಕಂಪನಿಗಳು ಇವೆ. ಇದರಲ್ಲಿ 13 ಉದ್ದಿಮೆಗಳು ಈಗಾಗಲೇ ನಿಷ್ಕ್ರಿಯವಾಗಿವೆ. ಇವುಗಳಲ್ಲಿ ಎಲ್ಲ ಉದ್ದಿಮೆಗಳೂ ನಷ್ಟದಲ್ಲಿಲ್ಲ, 55 ಉದ್ದಿಮೆಗಳು ಲಾಭ ಗಳಿಸಿವೆ. ಈ ಪೈಕಿ 50 ಉದ್ದಿಮೆಗಳು ಈ ಹಿಂದೆಯೂ ಲಾಭದಲ್ಲಿದ್ದು, ಮತ್ತೆ ಐದು ಉದ್ದಿಮೆಗಳು ಲಾಭದತ್ತ ಮುಖ ಮಾಡಿರುವುದು ಒಂದಿಷ್ಟು ಸಮಾಧಾನ ತರುವ ಅಂಶವೇ ಆಗಿದೆ. ಆದರೂ ಇಲ್ಲಿಯೂ ಒಂದು ಕಳವಳಕಾರಿ ವಿಷಯವಿದೆ. ಇವುಗಳ ಲಾಭದ ಪ್ರಮಾಣದಲ್ಲಿ ಒಂದಿಷ್ಟು ಕುಸಿತವಾಗಿದೆ. ಈ ಉದ್ದಿಮೆಗಳ ಲಾಭವು 2020-21ರಲ್ಲಿ 2,987 ಕೋಟಿ ರೂ. ಇದ್ದುದು 2021-22ರಲ್ಲಿ 2,608 ಕೋಟಿ ರೂಪಾಯಿಗೆ ಇಳಿಮುಖವಾಗಿದೆ.

ಸರ್ಕಾರಿ ಉದ್ದಿಮೆಗಳು ಕಂಪನಿ ನಿಯಮಗಳ ಪ್ರಕಾರ ಸೂಕ್ತ ಸಮಯದಲ್ಲಿ ಹಣಕಾಸು ವ್ಯವಹಾರದ ಮಾಹಿತಿಯನ್ನೂ ನೀಡುತ್ತಿಲ್ಲ ಎಂಬ ಅಂಶವನ್ನೂ ಮಹಾಲೇಖಪಾಲರ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಸಾರ್ವಜನಿಕರ ಹಣಕ್ಕೆ ಸಂಬಂಧಿಸಿದಂತೆ ಉತ್ತರದಾಯಿತ್ವವನ್ನು ಸೂಕ್ತವಾಗಿ ನಿಭಾಯಿಸುತ್ತಿಲ್ಲ ಎಂಬ ಸಂದೇಶವನ್ನು ಇದು ಸೂಚಿಸುತ್ತಿದ್ದು, ಚಿಂತಾಜನಕ ವಿಷಯವೇ ಆಗಿದೆ. ಹಣಕಾಸು ವ್ಯವಹಾರವನ್ನು ಕಾಲಕಾಲಕ್ಕೆ ಸೂಕ್ತ ರೀತಿಯಲ್ಲಿ ನಿಭಾಯಿಸಿದರೆ ನಷ್ಟದ ಪ್ರಮಾಣವು ಸಹಜವಾಗಿಯೇ ಕಡಿಮೆಯಾಗಿ ಲಾಭದತ್ತ ಕೊಂಡೊಯ್ಯಲು ಸಾಧ್ಯವಾಗಬಹುದಾಗಿದೆ. ಈ ಹಿಂದೆ ಕೆಲವು ಕ್ಷೇತ್ರಗಳಲ್ಲಿ ಖಾಸಗಿಯವರ ಅನುಪಸ್ಥಿತಿ ಅಥವಾ ಕೊರತೆಯ ಕಾರಣದಿಂದಾಗಿ ಸರ್ಕಾರಿ ಸ್ವಾಮ್ಯದ ಉದ್ಯಮಗಳನ್ನು ಸ್ಥಾಪಿಸಿಕೊಂಡು ಬರಲಾಗಿತ್ತು.

ಇತ್ತೀಚಿನ ವರ್ಷಗಳಲ್ಲಿ ಬಹುತೇಕ ಎಲ್ಲ ವಲಯಗಳನ್ನು ಖಾಸಗಿಯವರಿಗೆ ಮುಕ್ತಗೊಳಿಸಲಾಗಿದ್ದು, ಸರ್ಕಾರಿ ಸಂಸ್ಥೆಗಳು ಖಾಸಗಿಯವರ ಪೈಪೋಟಿಯನ್ನು ಎದುರಿಸುವ ಸ್ಥಿತಿಯಲ್ಲಿಲ್ಲ. ಸೂಕ್ತ ಕ್ರಮಗಳೊಂದಿಗೆ ಈ ಸಂಸ್ಥೆಗಳನ್ನು ಲಾಭದ ಹಳಿಗೆ ತರಬೇಕು ಅಥವಾ ಬಂಡವಾಳ ಹಿಂತೆಗೆಯಲು ಮುಂದಾಗಬೇಕು. ಇಲ್ಲದಿದ್ದರೆ, ಸಾರ್ವಜನಿಕರ ತೆರಿಗೆ ಹಣವು ಈ ಕಂಪನಿಗಳ ನಷ್ಟ ಹಾಗೂ ಸಾಲದ ಹೊರೆಯನ್ನು ಭರಿಸಲು ವೃಥಾ ವ್ಯಯವಾಗುತ್ತದೆ. ಇನ್ನು, ಈಗಾಗಲೇ ನಷ್ದದಲ್ಲಿರುವ ಸಾರಿಗೆ ನಿಗಮಗಳು ಹಾಗೂ ವಿದ್ಯುತ್ ಸರಬರಾಜು ಕಂಪನಿಗಳು ಸರ್ಕಾರದ ಗ್ಯಾರಂಟಿ ಯೋಜನೆಗಳಿಂದಾಗಿ ಇನ್ನಷ್ಟು ನಷ್ಟಕ್ಕೆ ಸಿಲುಕದಂತೆ ನೋಡಿಕೊಳ್ಳುವ ಹೊಣೆಗಾರಿಕೆ ಸರ್ಕಾರದ ಮೇಲಿದೆ. ಮಹಿಳೆಯರ ಉಚಿತ ಬಸ್ ಪ್ರಯಾಣ ಹಾಗೂ ಉಚಿತ ವಿದ್ಯುತ್ ಯೋಜನೆಗಳಿಂದ ಕೊರತೆಯಾಗುವ ಸಂಪನ್ಮೂಲವನ್ನು ಯೋಗ್ಯ ರೀತಿಯಲ್ಲಿ ಸರ್ಕಾರವೇ ಭರಿಸಲು ಕ್ರಮ ಕೈಗೊಳ್ಳುವುದು ಅತ್ಯಗತ್ಯವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net