ಸಂಪಾದಕೀಯ | ಸಮಾಜದ ಸ್ವಾಸ್ಥ್ಯಕ್ಕೆ ಮಾರಕ; ಹೆಚ್ಚುತ್ತಿರುವ ಆನ್​ಲೈನ್ ಕಿರುಕುಳ ಪ್ರಕರಣಗಳು

Editorial
Published on

ಸೈಬರ್ ಅಪರಾಧದ ಕರಾಳ ಲೋಕ ಸೃಷ್ಟಿಸುತ್ತಿರುವ ತಲ್ಲಣ ಅಷ್ಟಿಷ್ಟಿಲ್ಲ. ಇದನ್ನು ಹತ್ತಿಕ್ಕಲು ಕಾನೂನು, ಪೊಲೀಸ್ ವ್ಯವಸ್ಥೆ ಕೆಲಸ ಮಾಡುತ್ತಿವೆಯಾದರೂ, ಅಪರಾಧದ ಹೆಚ್ಚುತ್ತಿರುವ ಪ್ರಮಾಣ ನೋಡಿದರೆ ಇದರ ವಿರುದ್ಧ ಇನ್ನಷ್ಟು ಪ್ರಬಲ ಅಸ್ತ್ರಗಳನ್ನು ಪ್ರಯೋಗಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿರುವುದಂತೂ ಹೌದು. ಸಮಾಜದ ಸ್ವಾಸ್ಥ್ಯಕ್ಕೆ ಮಾರಕವಾಗಿರುವ ಈ ಬಗೆಯ ಅಪರಾಧದ ನಿಯಂತ್ರಣ ದೊಡ್ಡ ಸವಾಲಾಗಿ ಪರಿಣಮಿಸಿದೆ. ಸೈಬರ್ ಅಪರಾಧದಲ್ಲಿ ಆರ್ಥಿಕ ವಂಚನೆಗಳು ಹೆಚ್ಚಿದ್ದರೆ, ನಂತರದ ಸ್ಥಾನ ಅಶ್ಲೀಲತೆ ಸಂಬಂಧಿತ ಕಿರುಕುಳದ್ದು. ಪಾಸ್​ವರ್ಡ್, ಸಿವಿವಿ ಸಂಖ್ಯೆ ಇಂಥದ್ದನ್ನೆಲ್ಲ ಹಂಚಿಕೊಳ್ಳಬೇಡಿ ಎಂದು ಅರಿವು ಮೂಡಿಸುತ್ತಲೇ ಇದ್ದರೂ, ಜನರು ಯಾವುದೋ ಆಮಿಷಕ್ಕೆ ಬಲಿಯಾಗಿ ವಂಚಕರ ಗಾಳಕ್ಕೆ ಸಿಲುಕುತ್ತಿದ್ದಾರೆ. ಇನ್ನು, ದೇಶಾದ್ಯಂತ ಪ್ರತಿನಿತ್ಯ ಸರಾಸರಿ 15 ಪ್ರಕರಣಗಳು ಆಶ್ಲೀಲತೆಗೆ ಸಂಬಂಧಿಸಿದ್ದು ದಾಖಲಾಗುತ್ತಿವೆ. ಹಣಕ್ಕಾಗಿ ಬ್ಲಾ್ಯಕ್​ವೆುೕಲ್, ಪ್ರೀತಿ-ಪ್ರೇಮ, ಅಕ್ರಮ ಸಂಬಂಧ, ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಇಂತಹ ಅಪರಾಧಗಳು ಹೆಚ್ಚುತ್ತಿವೆ.

ಕಳೆದ ಮೂರು ವರ್ಷಗಳಲ್ಲೇ ದೇಶದ ವಿವಿಧ ಸೈಬರ್ ಠಾಣೆಗಳಲ್ಲಿ 13,587 ಪ್ರಕರಣ ದಾಖಲಾಗಿದ್ದು, 8,711 ಆರೋಪಿಗಳನ್ನು ಜೈಲಿಗಟ್ಟಲಾಗಿದೆ. ಶೇಕಡ 50 ಪ್ರಕರಣಗಳು ಹಣಕಾಸು ವಂಚನೆಗಳಿಗೆ ಸಂಬಂಧಿಸಿದ್ದಾದರೆ, ಮಹಿಳೆಯರಿಗೆ ಅಶ್ಲೀಲ ಫೋಟೋ, ವಿಡಿಯೋಗಳನ್ನು ಕಳಿಸಿ ಕಿರುಕುಳ ನೀಡುವ ಪ್ರಕರಣಗಳು ಶೇಕಡ 45ರಷ್ಟು. ಖಾಸಗಿ ದೃಶ್ಯಗಳನ್ನು ಸೆರೆಹಿಡಿದು, ಅದನ್ನು ವಾಟ್ಸ್​ಆಪ್ ಮೂಲಕ ಕಳುಹಿಸಿ ಹಣಕ್ಕಾಗಿ ಬೇಡಿಕೆ ಒಡ್ಡುವ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಮಹಿಳೆಯರ ಪಾಲಿಗೆ ಹೊಸ ತಲೆನೋವಾಗಿ ಪರಿಣಮಿಸಿದೆ. ಅದರಲ್ಲೂ, ಹದಿಹರೆಯದವರು ಇಂಥ ಪ್ರಕರಣಗಳ ಸಂತ್ರಸ್ತರಾಗುತ್ತಿದ್ದಾರೆ. ಅತಿಯಾದ ಮತ್ತು ವಿವೇಚನೆ ಇಲ್ಲದೆ ಮೊಬೈಲ್ ಬಳಕೆ, ಸ್ನೇಹದ ಹೆಸರಿನಲ್ಲಿ ನಡೆಯುವ ಮೋಸ ಅರಿಯದಿರುವುದು, ಆಕರ್ಷಣೆಗಳಿಗೆ ಬಲಿಬೀಳುವುದು ಸೇರಿದಂತೆ ಅನೇಕ ದೌರ್ಬಲ್ಯಗಳನ್ನೇ ಬಂಡವಾಳ ಮಾಡಿಕೊಳ್ಳುವ ವಂಚಕರು ಹಣ ಪಡೆಯುವವರೆಗೂ ನಿರಂತರ ಕಿರುಕುಳ ನೀಡುತ್ತಾರೆ. ಈ ಬಗೆಯ ಅಪರಾಧ ಪ್ರಕರಣಗಳು ಪೊಲೀಸ್ ಠಾಣೆ ಮೆಟ್ಟಿಲೇರುವ ಸಂಖ್ಯೆಯೂ ಕಡಿಮೆ. ಎಷ್ಟೋ ಜನರು ಮರ್ಯಾದೆಗೆ ಹೆದರಿ ದುಡ್ಡು ಕೊಟ್ಟೋ ಅಥವಾ ವಂಚಕರ ಇತರ ಬೇಡಿಕೆಯನ್ನು ಈಡೇರಿಸಿ ಸುಮ್ಮನಾಗಿಬಿಡುತ್ತಾರೆ. ಪರಿಣಾಮ, ವಂಚಕರ ಧಾಷ್ಟ್ಯ ಮತ್ತಷ್ಟು ಹೆಚ್ಚುತ್ತಿದೆ.

ಸೈಬರ್ ಅಪರಾಧಗಳನ್ನು ಭೇದಿಸುವ ಹೊಸ ಮಾರ್ಗಗಳತ್ತಲೂ ಪೊಲೀಸ್ ಇಲಾಖೆ ತೆರೆದುಕೊಳ್ಳಬೇಕಿದೆ. ಇಂಥ ಪ್ರಕರಣಗಳಿಗೆ ಕಡಿವಾಣ ಹಾಕುವ ಮತ್ತು ವಂಚಕರ ಪತ್ತೆ ನಿಟ್ಟಿನಲ್ಲಿ ಪ್ರಯತ್ನಗಳು ಹೆಚ್ಚಬೇಕಿವೆ. ಇದು ಬರೀ ಕಾನೂನು-ಸುವ್ಯವಸ್ಥೆಯ ಪ್ರಶ್ನೆ ಎಂದು ನಿರ್ಲಕ್ಷಿಸದೆ ಹದಿಹರೆಯದವರಿಗೆ, ಯುವಕ/ಯುವತಿಯರಿಗೆ ಮನೆಗಳಲ್ಲಿ, ಶಾಲೆ-ಕಾಲೇಜುಗಳಲ್ಲಿ ಸೂಕ್ತ ಅರಿವು ತುಂಬುವ ಜತೆಗೆ ಸರಿ-ತಪು್ಪಗಳ ಮಹತ್ವ ತಿಳಿಸಿಕೊಡಬೇಕಿದೆ. ತಂತ್ರಜ್ಞಾನ ಬದುಕನ್ನು ಸುಗಮಗೊಳಿಸಬೇಕು. ಅದನ್ನು ಬಿಟ್ಟು ತಂತ್ರಜ್ಞಾನದ ದುರ್ಬಳಕೆ ಹೊಸ ಸಮಸ್ಯೆಗಳನ್ನು ಸೃಷ್ಟಿಸುತ್ತಿರುವುದು, ಅಪರಾಧಗಳಿಗೆ ಕಾರಣವಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಹಾಗಾಗಿ, ಸುಧಾರಣೆ ನಿಟ್ಟಿನಲ್ಲಿ ಸಾಮೂಹಿಕ ಪ್ರಯತ್ನ ನಡೆದಾಗ ಅದು ಪರಿಣಾಮಕಾರಿ ಕ್ರಮವಾಗಬಲ್ಲದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net