

ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆ ಸಮಸ್ಯೆ ತುಂಬ ಹಳೆಯದು. ಆದರೂ, ಈ ನಿಟ್ಟಿನಲ್ಲಿ ಸಮರ್ಪಕ ಪರಿಹಾರ ಕಂಡುಕೊಳ್ಳದ್ದರಿಂದ ಸಮಸ್ಯೆಯ ತೀವ್ರತೆ ಇನ್ನಷ್ಟು ಹೆಚ್ಚಿತು. ಪದೇಪದೆ ವರ್ಗಾವಣೆಯಿಂದ ಸಿಬ್ಬಂದಿಯ ಕಾರ್ಯದಕ್ಷತೆ ಮೇಲೂ ವ್ಯತಿರಿಕ್ತ ಪರಿಣಾಮ. ಸಂಬಂಧಿತ ಠಾಣೆಗೆ ನಿಯೋಜನೆಗೊಂಡು, ಆ ಪ್ರದೇಶವನ್ನು, ಆದ್ಯತೆ ಮೇಲೆ ಪರಿಹರಿಸಬೇಕಾದ ಸವಾಲುಗಳನ್ನು ಸರಿಯಾಗಿ ಅರಿತುಕೊಳ್ಳುವಷ್ಟರಲ್ಲಿ ಕನಿಷ್ಠ ನಾಲ್ಕಾರು ತಿಂಗಳು ಕಳೆದಿರುತ್ತವೆ. ಆದರೆ, ಒಂದೇ ವರ್ಷಕ್ಕೆ ಸಿಬ್ಬಂದಿಯನ್ನು ವರ್ಗಾವಣೆ ಮಾಡಿದಾಗ ಕೆಲಸದಲ್ಲಿ ದಕ್ಷತೆ, ಪರಿಪೂರ್ಣತೆ ಅಳವಡಿಸಿಕೊಳ್ಳಲು ಹೇಗೆ ಸಾಧ್ಯ? ಹಾಗಾಗಿ, ಪೊಲೀಸ್ ಅಧಿಕಾರಿಗಳ ವರ್ಗಾವಣೆ ಈ ಹಿಂದಿನಂತೆ ಎರಡು ವರ್ಷಗಳಿಗೆ ನಿಗದಿ ಮಾಡಲು ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸುತ್ತಿರುವುದು ಸೂಕ್ತವಾಗಿದೆ. ಸುಪ್ರೀಂ ಕೋರ್ಟ್ ಆದೇಶದ ಅನ್ವಯ ಪೊಲೀಸ್ ಎಸ್ಟಾಬ್ಲಿಶ್ವೆುಂಟ್ ಬೋರ್ಡ್ ರಚಿಸಲಾಗಿದೆ. ಪ್ರತಿ ಎರಡು ವರ್ಷಗಳಿಗೊಮ್ಮೆ ವರ್ಗಾವಣೆ ಮಾಡಬಹುದು ಎಂದು ಈ ಬೋರ್ಡ್ ನಿಗದಿ ಮಾಡಿತ್ತು. ಹಿಂದಿನ ಸರ್ಕಾರ ಅದನ್ನು ಒಂದು ವರ್ಷಕ್ಕೆ ಇಳಿಸಿತ್ತು. ಹಾಗಾಗಿ, ಗೊಂದಲ ಸೃಷ್ಟಿಯಾಗಿದ್ದು, ಅಧಿಕಾರಿಗಳಲ್ಲಿ ಅಸಮಾಧಾನವೂ ಇದೆ. ಈ ಹಿನ್ನೆಲೆಯಲ್ಲಿ ಎರಡು ವರ್ಷಗಳಿಗೊಮ್ಮೆ ವರ್ಗಾವಣೆ ಮಾಡುವುದು ಸೂಕ್ತ.
ಕಾನೂನು ಸುವ್ಯವಸ್ಥೆ ಕಾಪಾಡುವ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ದೈಹಿಕವಾಗಿ ಸದೃಢವಾಗಿರುವುದು ಸಹಜ ಅಪೇಕ್ಷೆ ಮಾತ್ರವಲ್ಲ ಅನಿವಾರ್ಯವೂ ಹೌದು. ಆದರೆ, ಒತ್ತಡ, ಆಹಾರಪದ್ಧತಿಯ ಅಶಿಸ್ತಿನಿಂದಾಗಿ ತೂಕ ಹೆಚ್ಚಾಗಿ, ಬೊಜ್ಜಿನ ಸಮಸ್ಯೆ ಎದುರಿಸುತ್ತಿರುವ ಅಧಿಕಾರಿ, ಸಿಬ್ಬಂದಿ ಸಂಖ್ಯೆ ಕಡಿಮೆಯೇನಿಲ್ಲ. ಪೊಲೀಸರು ಗಂಭಿರ ಅಪರಾಧ ಪ್ರಕರಣಗಳನ್ನು ಭೇದಿಸಬೇಕಾಗುತ್ತದೆ, ಕಳ್ಳರನ್ನು, ಸಮಾಜವಿರೋಧಿ ಶಕ್ತಿಗಳನ್ನು ಹಿಡಿಯಲು ಸಾಹಸ ಪ್ರದರ್ಶಿಸಬೇಕಾಗುತ್ತದೆ. ಆದ್ದರಿಂದ, ತೂಕ ಕಡಿಮೆ ಮಾಡಿಕೊಳ್ಳುವುದು ಮತ್ತು ದೈಹಿಕ ಸದೃಢತೆ ಕಾಪಾಡಿಕೊಳ್ಳುವುದು ಕೆಲಸದ ದೃಷ್ಟಿಯಿಂದಲೂ, ಆರೋಗ್ಯದ ದೃಷ್ಟಿಯಿಂದಲೂ ಮುಖ್ಯ. ಈ ನಿಟ್ಟಿನಲ್ಲಿ ಕಠಿಣ ಕ್ರಮಕ್ಕೆ ಮುಂದಾಗಿರುವ ರಾಜ್ಯ ಪೊಲೀಸ್ ಇಲಾಖೆ ಏಪ್ರಿಲ್ 30ರೊಳಗೆ ತೂಕ ಇಳಿಸಿಕೊಳ್ಳದವರ ಮುಂಬಡ್ತಿ ತಡೆಹಿಡಿಯುವುದಾಗಿ ಹೇಳಿದೆ. ದೈಹಿಕವಾಗಿ ಸದೃಢವಾಗಿರುವ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಮಾತ್ರವೇ ಬಡ್ತಿ ಹಾಗೂ ರಾಷ್ಟ್ರಪತಿ ಪದಕಕ್ಕೆ ಆಯ್ಕೆ ಮಾಡಲಾಗುತ್ತದೆ ಎಂದು ಕೇಂದ್ರ ಗೃಹಸಚಿವಾಲಯ ಆದೇಶ ಹೊರಡಿಸಿ 2 ವರ್ಷಗಳೇ ಸಂದಿವೆ ಎಂಬುದು ಗಮನಾರ್ಹ. ವಯೋಮಾನಕ್ಕೆ ತಕ್ಕಂತೆ ತೂಕ ಇಳಿಸಿಕೊಳ್ಳಲು ತಿಳಿಸಲಾಗಿದ್ದು, ಇದಕ್ಕಾಗಿ 40 ರಿಂದ 50 ವರ್ಷದವರಿಗೆ ಯೋಗ, 50 ವರ್ಷ ಮೇಲ್ಪಟ್ಟವರಿಗೆ ಕಡ್ಡಾಯವಾಗಿ ವಾಕಿಂಗ್ ಸೇರಿ ಹಲವು ನಿಯಮಗಳನ್ನು ರೂಪಿಸಲಾಗಿದೆ. ತೂಕ ಇಳಿಸುವ ಜವಾಬ್ದಾರಿಯನ್ನು ಆಯಾ ಘಟಕದ ಕಮಾಂಡೆಂಟ್ಗೆ ವಹಿಸಲಾಗಿದೆ. ಬೊಜ್ಜಿನ ಸಮಸ್ಯೆಯಿಂದಾಗಿ ಹಲವು ಪೊಲೀಸ್ ಸಿಬ್ಬಂದಿ ಗಂಭೀರ ಕಾಯಿಲೆಗೆ ತುತ್ತಾದ, ಪ್ರಾಣ ಕಳೆದುಕೊಂಡ ನಿದರ್ಶನಗಳೂ ಇವೆ. ಕಾರ್ಯದಕ್ಷತೆ ಮತ್ತು ಆರೋಗ್ಯರಕ್ಷಣೆ ಎರಡೂ ಆಯಾಮದಲ್ಲೂ ಹೊಸ ನಿಯಮ ಪೂರಕವಾಗಿದೆ. ಇಂಥ ಕ್ರಮಗಳು ಪೊಲೀಸರ ಆತ್ಮವಿಶ್ವಾಸವನ್ನೂ ಹೆಚ್ಚಿಸುತ್ತವೆ ಎಂಬುದರಲ್ಲಿ ಅನುಮಾನವಿಲ್ಲ.