ಸಂಪಾದಕೀಯ | ಸಾಮಾಜಿಕ ಪಿಡುಗು, ಹೆಚ್ಚುತ್ತಿರುವ ಡ್ರಗ್ಸ್ ಬಳಕೆ

Editorial
Published on

ಮಾದಕವಸ್ತುಗಳ ಬಳಕೆಯಿಂದಾಗುವ ತೊಂದರೆ-ಅನಾಹುತಗಳು ಗೊತ್ತಿದ್ದರೂ ಈ ಜಾಲಕ್ಕೆ ಸಿಲುಕುವವರ ಸಂಖ್ಯೆ ತಗ್ಗುತ್ತಿಲ್ಲವೆಂಬುುದು ಕಳವಳದ ಸಂಗತಿ. ಅದರಲ್ಲೂ ವಿಶೇಷವಾಗಿ ಯುವಜನರು ಈ ಚಟಕ್ಕೆ ಸುಲಭದಲ್ಲಿ ಬೀಳುತ್ತಿದ್ದು, ನಂತರ ಅದರಿಂದ ಹೊರಬರಲಾಗದೆ ಸಮಸ್ಯೆ ಮಡುವಿನಲ್ಲಿ ಸಿಲುಕುತ್ತಾರೆ. ಉಜ್ವಲ ಭವಿಷ್ಯ ಕಾಣಬೇಕಾದ ಯುವಜನರು ಇಂಥ ದುಶ್ಚಟದ ಕಬಂಧಬಾಹುವಿನಲ್ಲಿ ಸಿಲುಕಿದರೆ ಆಯಾ ಕುಟುಂಬಗಳಿಗೆ ಮಾತ್ರವಲ್ಲ, ಸಮಾಜ-ದೇಶಕ್ಕೂ ದೊಡ್ಡ ನಷ್ಟ. ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ ಸುಮಾರು 4 ಸಾವಿರ ಮಂದಿ ಮಾದಕವಸ್ತು ವ್ಯಸನಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಸಮಸ್ಯೆಯ ಗಂಭೀರತೆಗೆ ಸಾಕ್ಷಿ. ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ನಶೆ ಸಹ ಒಂದು ಮುಖ್ಯ ಕಾರಣವಾಗಿದೆ.

ಅಂತಾರಾಷ್ಟ್ರೀಯ ಮಾದಕವಸ್ತು ಕಳ್ಳಸಾಗಣೆದಾರರಿಗೆ ಭಾರತವೂ ಒಂದು ಹುಲುಸಾದ ಜಾಗವಾಗಿದ್ದು, ಕಳೆದ ಮೂರು ವರ್ಷಗಳಲ್ಲಿ 3 ಸಾವಿರ ಕೆಜಿ ಹೆರಾಯಿನ್ ಅನ್ನು ವಿವಿಧ ತನಿಖಾ ಸಂಸ್ಥೆಗಳು ವಶಪಡಿಸಿಕೊಂಡಿರುವುದು ಇದಕ್ಕೆ ಪುರಾವೆಯಾಗಿ ನಿಲ್ಲುತ್ತದೆ. ಇದು ಅಧಿಕೃತ ಲೆಕ್ಕ. ಇನ್ನು ಸರ್ಕಾರಿ ತನಿಖಾ ಸಂಸ್ಥೆಗಳ ಗಮನಕ್ಕೆ ಬರದ ಪ್ರಮಾಣ ಎಷ್ಟಿದೆಯೊ! ಪಂಜಾಬ್​ನಂತಹ ರಾಜ್ಯದಲ್ಲಿ ಪಾಕಿಸ್ತಾನ ‘ಡ್ರಗ್ಸ್ ಭಯೋತ್ಪಾದನೆ’ಯನ್ನೇ ನಡೆಸಿದ ನಿದರ್ಶನ ನಮ್ಮ ಮುಂದಿದೆ. ಕರ್ನಾಟಕದಲ್ಲಿ ಡ್ರಗ್ಸ್ ವಿರುದ್ಧ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಪೊಲಿಸರು ಸಹ ಆಗೀಗ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುತ್ತಾರೆ. ಆದರೂ ಈ ಪಿಡುಗು ಮುಂದುವರಿದಿದೆ. ಕೆಲ ಶಾಲಾಕಾಲೇಜುಗಳ ಹತ್ತಿರ ಸಹ ಡ್ರಗ್ಸ್ ಸಿಗುತ್ತದೆ ಎಂಬುದು ಮತ್ತಷ್ಟು ಕಳವಳಕಾರಿ ಸಂಗತಿ. ಡ್ರಗ್ಸ್ ದಂಧೆಕೋರರು ಈಗಂತೂ ಆನ್​ಲೈನ್ ವೇದಿಕೆ ಹಾಗೂ ಕೊರಿಯರ್ ಅನ್ನೂ ವ್ಯಾಪಕವಾಗಿ ಬಳಸಿಕೊಳ್ಳುತ್ತಿದ್ದಾರೆ. ಹೀಗಾಗಿ ಈ ಜಾಲದ ಜಾಡುಹಿಡಿದು ಪತ್ತೆಹಚ್ಚುವುದು ಕೂಡ ಸವಾಲಾಗಿದೆ. ವ್ಯಸನಿಗಳ ಆತ್ಮಹತ್ಯೆ ಪಟ್ಟಿಯಲ್ಲಿ ದೇಶದಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದರೆ ಕರ್ನಾಟಕ ದ್ವಿತೀಯ ಸ್ಥಾನದಲ್ಲಿದೆ. ಪ್ರತಿ ವರ್ಷ ದೇಶಾದ್ಯಂತ ಸುಮಾರು 8500 ವ್ಯಸನಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಕೇಂದ್ರ ಸರ್ಕಾರದ ಅಂಕಿಅಂಶಗಳು ಹೇಳುತ್ತವೆ. ಈ ಪೈಕಿ ಕರ್ನಾಟಕದಲ್ಲಿ ವಾರ್ಷಿಕ 1200 ವ್ಯಸನಿಗಳು ಸಾವಿಗೆ ಶರಣಾಗುತ್ತಿದ್ದಾರೆ. ಇವರಲ್ಲಿ ಯುವಜನರ ಪ್ರಮಾಣ ದೊಡ್ಡದಾಗಿದೆ.

ಡ್ರಗ್ಸ್/ಮದ್ಯ ಸೇವನೆಯಿಂದ ದೈಹಿಕ ಆರೋಗ್ಯದ ಜತೆ ಮಾನಸಿಕ ಆರೋಗ್ಯವೂ ಕೆಡುತ್ತದೆ. ಇದರಿಂದ ಆ ವ್ಯಕ್ತಿ ವಿವೇಚನೆಯ ಶಕ್ತಿಯನ್ನೇ ಕಳೆದುಕೊಂಡು ತಪು್ಪನಿರ್ಣಯಗಳನ್ನು ಕೈಗೊಳ್ಳುತ್ತ ಪತನದ ದಾರಿಯಲ್ಲಿ ಸಾಗುತ್ತಾನೆ. ನಶೆಮುಕ್ತ ಭಾರತ ಅಭಿಯಾನ, ಮಾದಕವಸ್ತು ಬಳಕೆಯ ಅಪಾಯದ ಬಗ್ಗೆ ಯುವಜನರಲ್ಲಿ ಜಾಗೃತಿ, ಮಾದಕವ್ಯಸನಿಗಳ ಕೌನ್ಸೆಲಿಂಗ್ ಹೀಗೆ ವಿವಿಧ ಚಟುವಟಿಕೆಗಳನ್ನು ಸರ್ಕಾರಗಳ ವತಿಯಿಂದ ನಡೆಸಲಾಗುತ್ತಿದೆಯಾದರೂ ಈ ಪಿಡುಗಿಗೆ ಪೂರ್ಣವಿರಾಮ ಬಿದ್ದಿಲ್ಲ. ಶಿಕ್ಷಣ ಸಂಸ್ಥೆಗಳು ಸಹ ಈ ನಿಟ್ಟಿನಲ್ಲಿ ಎಚ್ಚರ ವಹಿಸಬೇಕಿದೆ. ಇದೊಂದು ಸಾಮಾಜಿಕ ಪಿಡುಗಾಗಿ ರೂಪುಗೊಂಡಿದ್ದು, ಸಮಾಜ, ಸರ್ಕಾರ, ಸಮಾಜಶಾಸ್ತ್ರಜ್ಞರು, ಮನೋವೈದ್ಯರು, ಪಾಲಕರು ಹೀಗೆ ಎಲ್ಲರೂ ಸೇರಿ ಈ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ಎದುರಿಸಿ ಮಟ್ಟಹಾಕಲು ಯತ್ನ ನಡೆಸಬೇಕಾದದ್ದು ಈ ಹೊತ್ತಿನ ತುರ್ತ. ಈ ಪಿಡುಗು ಇನ್ನೂ ಬೆಳೆಯುತ್ತ ಹೋದಲ್ಲಿ ಮುಂದೊಂದು ದಿನ ದೇಶದೆದುರು ಇನ್ನೂ ಬೃಹತ್ ಸಮಸ್ಯೆಯನ್ನೇ ಸೃಷ್ಟಿಸುವುದರಲ್ಲಿ ಅನುಮಾನವಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net